ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನ ಹೆಚ್ಚಿಸುವ ಮಾರಿ ಹಬ್ಬ!

ಸಂಸ್ಕೃತಿ, ಸಂಪ್ರದಾಯದ ಹೆಸರಿನಲ್ಲಿ ದುಂದುವೆಚ್ಚ ತರವೇ?
Last Updated 17 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಶ್ರಾವಣ ಮಾಸದ ಆಸುಪಾಸಿನ ದಿನಗಳಲ್ಲಿ ಮಾರಿ ಹಬ್ಬದ ಸಂಭ್ರಮ ತುಸು ಜೋರಾಗಿಯೇ ಇರುತ್ತದೆ. ಇತ್ತೀಚೆಗೆ ತನ್ನ ಲವಲವಿಕೆಯನ್ನು ಕಳೆದುಕೊಂಡು ಬಿಕೋ ಎನ್ನುತ್ತಿರುವ ಗ್ರಾಮಗಳಲ್ಲಿ, ಮಾರಿ ಹಬ್ಬದ ಸಂಜೆಯ ದಿನಗಳಲ್ಲಿ ಕಾಲಿಡಲಾಗದಷ್ಟು ಜನಜಂಗುಳಿ ಇರುತ್ತದೆ. ವರ್ಷಕ್ಕೊಮ್ಮೆ ಅಥವಾ ಎರಡು ಮೂರು ವರ್ಷಗಳಿಗೊಮ್ಮೆ ನಡೆಯುವ ಉತ್ಸವದಲ್ಲಿ ಜನಪದೀಯ ಆಚರಣೆಗಳ ಜೊತೆಗೆ ಮದ್ಯ, ಮಾಂಸದ ಸಮಾರಾಧನೆ ಎಗ್ಗಿಲ್ಲದೆ ನಡೆಯುತ್ತದೆ.

ಇಂತಿಪ್ಪ ಮಾರಿ ಹಬ್ಬದ ಹಿನ್ನೆಲೆಯನ್ನು ಗಮನಿಸಿದಾಗ, ಮಾನವ ಮೊದಮೊದಲಿಗೆ, ಪ್ರಕೃತಿದೇವಿಯನ್ನು ಪೂಜಿಸುವ ಮೂಲಕ ಆಕೆಯ ಆರಾಧಕನಾಗಿದ್ದ.ಇದು ಆತನ ಬದುಕಿಗೆ ಸ್ಫೂರ್ತಿ, ಉಲ್ಲಾಸ, ನೆಮ್ಮದಿ ನೀಡುವ ಆರಾಧನೆಯಾಗಿತ್ತು ಎಂಬುದು ತಿಳಿಯುತ್ತದೆ. ನಂತರದ ದಿನಗಳಲ್ಲಿ ಇದು ನಡೆದುಬಂದ ಹಾದಿಯನ್ನು ಗಮನಿಸಿದರೆ, ಬಹುತೇಕ ಕಥೆಗಳು ವರ್ಣಾಶ್ರಮ ವ್ಯವಸ್ಥೆಯ ಹಿನ್ನೆಲೆಯನ್ನು ಹಾಸಿಹೊದ್ದಿರುವುದು ತಿಳಿಯುತ್ತದೆ. ಅಲ್ಲಿ ಮತ್ತದೇ ಸಾಮಾಜಿಕ ಶ್ರೇಣೀಕರಣದ ಮೇಲ್ಪಂಕ್ತಿಯೇ ಮುನ್ನೆಲೆಗೆ ಬರುತ್ತದೆ.

ಬ್ರಾಹ್ಮಣತಿಯೊಬ್ಬಳನ್ನು ಶೂದ್ರ ಹುಡುಗನೊಬ್ಬ ತನ್ನ ಹಿನ್ನೆಲೆ ತಿಳಿಸದೇ ವಿವಾಹವಾಗುತ್ತಾನೆ. ತದನಂತರ ಆತನ ಹಿನ್ನೆಲೆಯು ಹೆಂಡತಿಯ ಅರಿವಿಗೆ ಬರುತ್ತದೆ. ಆಗ ಆಕೆ ಪುನರ್ಜನ್ಮವೆತ್ತಿ ಮಾರಿಯಾಗಿ, ಕೋಣ ರೂಪದ ಶೂದ್ರ ಗಂಡನನ್ನು ಬಲಿ ತೆಗೆದುಕೊಳ್ಳುವುದರೊಂದಿಗೆ ಅಂತ್ಯ ಹಾಡಲಾಗಿದೆ. ವಿಚಿತ್ರವೆಂದರೆ, ಮೇಲ್ವರ್ಗದ ಗಂಡು ಶೂದ್ರ ಹುಡುಗಿಯನ್ನು ವಿವಾಹವಾದರೆ ಅಪರಾಧವೆಂದು ಬಿಂಬಿಸದೆ, ಇತಿಹಾಸದ ಪುಟಗಳಲ್ಲಿ ವಿನಾಯಿತಿಯನ್ನೂ ಕೊಡಲಾಗಿದೆ.

ಮಾರಿ ಹಬ್ಬಕ್ಕೆ ಸಂಬಂಧಿಸಿದಂತೆ ಇನ್ನೂ ಒಂದು ಕಥೆ ಚಾಲ್ತಿಯಲ್ಲಿದೆ. ಒಂದು ಪ್ರಾಂತ್ಯದಲ್ಲಿನ ಶ್ರೀಮಂತ
ಮಂದಿ ನೂರಾರು ಎಕರೆ ಭೂಮಿಯನ್ನು ಹೊಂದಿದ್ದರೆ, ಕೆಳವರ್ಗದ ಮಂದಿಯೂ ಅಗತ್ಯವಿರುವಷ್ಟು ಭೂಮಿಯಲ್ಲಿ ಸ್ವಾವಲಂಬಿ ಜೀವನವನ್ನು ಕಂಡುಕೊಂಡಿರುತ್ತಾರೆ. ಹೆಚ್ಚು ಭೂಮಿ ಹೊಂದಿದ ಮೇಲ್ವರ್ಗಕ್ಕೆ ಕೃಷಿಕ ಆಳುಗಳು ಸಿಗುವುದೇ ದುಸ್ತರವಾಗಿರುತ್ತದೆ. ತಾವು ಶ್ರಮರಹಿತ ಆಡಂಬರದ ಜೀವನ ಕಂಡುಕೊಳ್ಳಬೇಕು ಎಂದರೆ, ಹೇಗಾದರೂ ಸರಿ ಇವರನ್ನು ಮಟ್ಟ ಹಾಕಬೇಕು ಎಂಬ ಆಲೋಚನೆ ಅವರದ್ದು. ಹೀಗಿರಲಾಗಿ, ಊರಿಗೆ ಒಮ್ಮೆ ಭಯಾನಕ ಸೋಂಕು ತಗುಲಿ, ಊರಿಗೂರೇ ಸಾವಿನ ಮನೆಯಾಗುತ್ತದೆ. ಇದೇ ಅವಕಾಶ
ಬಳಸಿಕೊಂಡ ಶ್ರೀಮಂತರು ಮತ್ತು ಪೂಜಾರಿ ‘ಊರ ದೇವತೆ ನಮ್ಮ ಮೇಲೆ ಮುನಿದಿದ್ದಾಳೆ. ಪ್ರಾಣಿಗಳ ಬಲಿ ಕೊಟ್ಟು ಪ್ರತಿವರ್ಷವೂ ಮಾರಿ ಹಬ್ಬ ಮಾಡಿದರೆ ಶಾಂತಳಾಗುತ್ತಾಳೆ’ ಎಂದು ಜನರನ್ನು ನಂಬಿಸುತ್ತಾರೆ. ಕಡೆಗೆ, ಮಾರಿ ಹಬ್ಬ ಮಾಡುವ ಬಗ್ಗೆ ಒಕ್ಕೊರಲ ತೀರ್ಮಾನವಾಗುತ್ತದೆ. ಮಾರಿ ಹಬ್ಬ ಮಾಡುವವರಾರು...? ಮತ್ತದೇ ಮಂದಿ.

ನೆಂಟರಿಷ್ಟರನ್ನು ಕಲೆಹಾಕಿ ಹಬ್ಬದ ನೆಪದಲ್ಲಿ ಪ್ರಾಣಿ ಬಲಿಯೊಂದಿಗೆ ಮದ್ಯ, ಮಾಂಸದ ಭರ್ಜರಿ ರಸದೌತಣ ನಡೆಯುತ್ತದೆ. ಹೀಗೆ ಇತ್ತ ಹಬ್ಬವೇನೋ ವಿಜೃಂಭಣೆಯಿಂದ ನಡೆಯುತ್ತದೆ. ಆದರೆ ಅತ್ತ ಮನೆಯಲ್ಲಿ ನಿಧಾನವಾಗಿ ಅಶಾಂತಿ ಭುಗಿಲೇಳುತ್ತದೆ. ಕಾರಣವಿಷ್ಟೇ, ಮಾರಿಗೆ ಔತಣ ನೀಡಲು ಕೂಡಿಟ್ಟ ಹಣ ಸಾಲದಾಗಿ, ಕೆಳವರ್ಗದ ಮಂದಿಯೆಲ್ಲಾ ಶ್ರೀಮಂತರ ಮನೆಬಾಗಿಲಿಗೆ ಎಡತಾಕಿ ಬೊಗಸೆ ತುಂಬಾ ಹಣ ತಂದಿರು
ತ್ತಾರೆ. ಈ ಸಮಯಕ್ಕಾಗಿಯೇ ಕಾದು ಕುಳಿತವರು ಕೆಲವು ದಿನಗಳ ನಂತರ ಹಣ ಮರುಪಾವತಿಗೆ ಪೀಡಿಸುತ್ತಾರೆ. ಸಾಲ ತೀರಿಸಲು ಆದಾಯದ ಮೂಲಗಳೇ ಇಲ್ಲದವರು ಶ್ರೀಮಂತರ ಮನೆಗಳಲ್ಲಿ ಜೀತದಾಳುಗಳಾಗುತ್ತಾರೆ. ಅವರ ದುಡಿಮೆಯ ಹಣ ಬಡ್ಡಿ ಚುಕ್ತಾಗಷ್ಟೇ ಸೀಮಿತವಾಗುತ್ತದೆ. ಅಸಲಿನ ಬಾಬತ್ತು ಮಕ್ಕಳು, ಮೊಮ್ಮಕ್ಕಳ ಕಾಲಕ್ಕೂ ವರ್ಗಾವಣೆಯಾಗಿ, ಅದು ತೀರದ ಸಾಲವಾಗಿಬಿಡುತ್ತದೆ.

ಗುಪ್ತ ಕಾರ್ಯಸೂಚಿಗಳೇ ಹೀಗೆ. ಅಲ್ಲಿ ಬಲಿಯಾಗುವವರು ಅಮಾಯಕರೇ ಆಗಿರುತ್ತಾರೆ. ಇಂದಿಗೂ ಹಳ್ಳಿ ಹಳ್ಳಿಗಳಲ್ಲಿ ಆಚರಿಸುವ ಮಾರಿ ಹಬ್ಬದ ಸಂಭ್ರಮವು ಜನಪದೀಯತೆಯನ್ನು ಕಳೆದುಕೊಂಡು, ಉಂಡು ತಿಂದು ತೇಗುವುದಕ್ಕಷ್ಟೇ ಸೀಮಿತವಾಗಿದೆ. ಸ್ಪರ್ಧೆಗಿಳಿದವರಂತೆ ಹಬ್ಬ ಮಾಡುವ ಹಳ್ಳಿಗರು ಮಾಡುವ ವೆಚ್ಚವು ಎಷ್ಟೋ ಬಾರಿ, ಅವರ ಒಣಭೂಮಿಯಲ್ಲಿ ಬೆಳೆಯುವ ಬೆಳೆಯ ವರ್ಷದ ಆದಾಯಕ್ಕಿಂತಲೂ ಹೆಚ್ಚು! ಹಬ್ಬದ ನೆಪದಲ್ಲಿ ನಡೆಯುವ ಅತಿಥಿ ಸತ್ಕಾರಕ್ಕೆ ಸಂತಸಪಡಬೇಕೋ, ಆರ್ಥಿಕ ಜಂಜಾಟಗಳ ನಡುವೆಯೂ ಮಾಡುವ ಹಬ್ಬಕ್ಕೆ ಸಂಭ್ರಮಿಸಬೇಕೋ ತಿಳಿಯದು.

ಇಲ್ಲಿ ಸಂಪ್ರದಾಯ, ನಂಬಿಕೆ, ಆಚರಣೆ, ಸಂಸ್ಕೃತಿ ಮತ್ತು ಆಹಾರದ ಹಕ್ಕುಗಳು ಪ್ರಶ್ನಾತೀತ. ಆದರೆ ಅವುಗಳ ಹೆಸರಿನಲ್ಲಿ ನಡೆಯುವ ದುಂದುವೆಚ್ಚ, ಹುನ್ನಾರ, ಗುಪ್ತ ಸಿದ್ಧಾಂತಗಳು ಬಡವರನ್ನು ಇನ್ನಷ್ಟು ಬಡವರನ್ನಾಗಿಸುತ್ತಿವೆ. ಇಲ್ಲಿ ಬಂಡವಾಳವಾಗುತ್ತಿರುವುದು ಅಮಾಯಕರ ಭಾವನೆಗಳೇ. ಬೇರೆಲ್ಲಾ ದಿನಗಳಲ್ಲಿ ಅತಿ ಸರಳವಾಗಿ ಬದುಕುವ ಜನ, ಹಬ್ಬ, ಜಾತ್ರೆ, ಉತ್ಸವಗಳಲ್ಲಿ ವರ್ಷದ ವರಮಾನವನ್ನೆಲ್ಲ ವೆಚ್ಚ ಮಾಡಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸೊರಗಿ ಹೋಗುತ್ತಿರುವುದು ದುರಂತವೇ ಸರಿ.ಜನ ಬದಲಾದಂತೆಲ್ಲಾ ಆಳುವವರ ಗುಪ್ತ ಕಾರ್ಯಸೂಚಿಗಳ ಸ್ವರೂಪವೂ ಬದಲಾಗುತ್ತಾ ಹೋಗುತ್ತದೆ. ತಮ್ಮ ಅಸ್ತಿತ್ವಕ್ಕಾಗಿ ಜನರ ಭಾವನೆಗಳನ್ನು ಅವರು ಬಳಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT