ಸೋಮವಾರ, ಫೆಬ್ರವರಿ 24, 2020
19 °C

ಸಂಗತ | ಆತ್ಮಹತ್ಯೆಗೆ ಜಾರುವ ಸ್ವನಂಬಿಕೆ ಇಲ್ಲದ ಅಂಕಪ್ರವೀಣರು

ದೀಪಾ ಹಿರೇಗುತ್ತಿ Updated:

ಅಕ್ಷರ ಗಾತ್ರ : | |

Prajavani

ಕಷ್ಟಗಳನ್ನು ಛಲದಿಂದ ಎದುರಿಸಿ, ಸವಾಲುಗಳಿಗೆ ಸಡ್ಡು ಹೊಡೆದು ನಿಲ್ಲಬೇಕಾದ ಯುವಜನ, ಸಣ್ಣ ಪುಟ್ಟ ಸಂಗತಿಗಳಿಗೂ ಆತ್ಮಹತ್ಯೆಗೆ ಶರಣಾಗುತ್ತಿರುವುದು ಆತಂಕಕಾರಿ.

ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗ ಫೋನ್ ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಹುಡುಗಿ ಮತ್ತು ಅವಳ ಸಾವಿಗೆ ನೊಂದು ತಾನೂ ಜೀವ ತೆಗೆದುಕೊಂಡ ಹುಡುಗನ ಸುದ್ದಿಯನ್ನು ಇತ್ತೀಚೆಗೆ ಓದಿ ವಿಷಾದವಾಯಿತು.

ನಮ್ಮ ಪತ್ರಿಕೆಗಳಲ್ಲಿ ಪ್ರಕಟವಾಗುವ ಅಪರಾಧ ಸುದ್ದಿಗಳಲ್ಲಿ ಬಹುಪಾಲು ಆತ್ಮಹತ್ಯೆಯವು. ಮೊದಲೆಲ್ಲ, ಎಲ್ಲೋ ಹೀಗಾಯಿತಂತೆ ಎಂದು ಕೇಳುತ್ತಿದ್ದ, ಪತ್ರಿಕೆಗಳಲ್ಲಿ ಮಾತ್ರ ಓದುತ್ತಿದ್ದ ಸುದ್ದಿಗಳು ಈಗ ದಿನವೂ ಹತ್ತಿರದಲ್ಲೇ ಕೇಳುತ್ತಿವೆ! ದೃಶ್ಯ ಮಾಧ್ಯಮಗಳಲ್ಲಂತೂ ಆತ್ಮಹತ್ಯೆಯ ಸುದ್ದಿಗಳು ನಿರಂತರವಾಗಿ ಪ್ರಸಾರವಾಗುತ್ತಲೇ ಇರುತ್ತವೆ. ಇನ್ನೂ ನೋವಿನ ವಿಚಾರವೆಂದರೆ, ಇವುಗಳಲ್ಲಿ ಹೆಚ್ಚಿನವು ಯುವಜನರಿಗೆ ಸಂಬಂಧಿಸಿದವು. ಮತ್ತೂ ವಿಷಾದದ ಸಂಗತಿಯೆಂದರೆ, ಈ ಯುವಕ, ಯುವತಿಯರಲ್ಲಿ ಹೆಚ್ಚಿನವರು ಪದವೀಧರರು, ಉತ್ತಮ ವಿದ್ಯಾಭ್ಯಾಸ ಮಾಡಿದವರು! ಪ್ರೀತಿಸಿದವರನ್ನು ಮನೆಯವರು ಒಪ್ಪಲಿಲ್ಲವೆಂದೋ ಅಂಕಗಳು ಕಡಿಮೆ ಇವೆಯೆಂದೋ ಕೆಲಸ ಸಿಗಲಿಲ್ಲವೆಂದೋ ಇರುವ ಕೆಲಸ ಹೋಯಿತೆಂದೋ ಅಥವಾ ಈ ರೀತಿ ಏನಾದರೂ ಆಗಿಬಿಡಬಹುದೆಂದೋ ಅಂಜಿ, ಬದುಕುವ ಧೈರ್ಯವನ್ನೇ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಯುವಜನರ ಸಂಖ್ಯೆ ಹೆಚ್ಚಾಗಿದೆ.

ಕಳೆದ ಜುಲೈನಲ್ಲಿ ಹೈದರಾಬಾದ್ ಐಐಟಿಯ ವಿದ್ಯಾರ್ಥಿ ಮಾರ್ಕ್ ಆತ್ಮಹತ್ಯೆ ಮಾಡಿಕೊಂಡ. ಅದಕ್ಕೂ ಮುನ್ನ ಬರೆದ ಪತ್ರದಲ್ಲಿ ತಂದೆ– ತಾಯಿ ಹತ್ತಿರ ಕ್ಷಮೆ ಕೋರುತ್ತ ‘ನೀವು ನನಗಾಗಿ ಬಹಳ ಹಣ ಖರ್ಚು ಮಾಡಿದ್ದೀರಿ. ಆದರೆ ನನ್ನ ಅಂಕಗಳು ಬಹಳ ಕಡಿಮೆ ಇವೆ. ನನಗೆ ಯಾರೂ ಕೆಲಸ ಕೊಡುವುದಿಲ್ಲ. ನಾನೊಬ್ಬ ಸೋತ ವ್ಯಕ್ತಿ’ ಎಂದು ಬರೆದಿಟ್ಟಿದ್ದ. ಇದೇ ಕ್ಯಾಂಪಸ್‍ನಲ್ಲಿ ಅದೇ ವರ್ಷದ ಫೆಬ್ರುವರಿಯಲ್ಲಿ ಅನಿರುಧ್ಯ ಎಂಬ ಹುಡುಗ ಹಾಸ್ಟೆಲ್ ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದ. ಈತನೂ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದ. ಇತ್ತೀಚೆಗಷ್ಟೇ ನೇಣು ಬಿಗಿದುಕೊಂಡು ಮೃತನಾದ ಐಐಎಸ್‍ಸಿಯ ವಿದ್ಯಾರ್ಥಿ ಪವನ್ ಕುಮಾರ್, ಭೌತಶಾಸ್ತ್ರದಲ್ಲಿ ಪಿಎಚ್‍.ಡಿ ಮಾಡುತ್ತಿದ್ದ. ಇನ್ನು ಮುಂಬೈನ ಐಐಟಿ ಕ್ಯಾಂಪಸ್‍ನಲ್ಲಿ ಅಲ್ಲಿನ ಪ್ರೊಫೆಸರ್‌ಗಳ ಮಕ್ಕಳೇ ಆತ್ಮಹತ್ಯೆ ಮಾಡಿಕೊಂಡಿದ್ದು ಎರಡು ವರ್ಷದ ಹಿಂದೆ ದೊಡ್ಡ ಸುದ್ದಿಯಾಗಿತ್ತು.

ಈ ಉದಾಹರಣೆಗಳು ಐಸ್‍ಬರ್ಗಿನ ತುದಿಯಷ್ಟೇ. ಜಗತ್ತಿನಲ್ಲಿ ಪ್ರತೀ ವರ್ಷ ಸುಮಾರು ಎಂಟು ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಶೇ 17ರಷ್ಟು ಭಾರತದ ಪಾಲು. ಅಂದರೆ ನಮ್ಮ ದೇಶದಲ್ಲಿ ವರ್ಷಕ್ಕೆ ಹತ್ತಿರ ಹತ್ತಿರ ಒಂದೂವರೆ ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ! ಅದರಲ್ಲೂ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿರುವ ರಾಜ್ಯಗಳಾದ ಪುದುಚೇರಿ, ಸಿಕ್ಕಿಂ, ಕೇರಳ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡಿನಲ್ಲಿ ಇದು ಹೆಚ್ಚು! ಆತ್ಮಹತ್ಯೆ ಮಾಡಿಕೊಳ್ಳುವವರ ಪೈಕಿ ಬಹಳಷ್ಟು ಮಂದಿ ಅತ್ಯುನ್ನತ ಶಿಕ್ಷಣ ಪಡೆದವರು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವವರು ಎಂಬ ಸಂಗತಿ, ನಮ್ಮ ಶಿಕ್ಷಣದ ಫಲಾನುಭವಿಗಳ ಬಗ್ಗೆ ನಿರಾಸೆ ಮೂಡಿಸುತ್ತದೆ. 15ರಿಂದ 40ರ ವಯಸ್ಸಿನವರಲ್ಲಿ ಆತ್ಮಹತ್ಯೆಯು ಸಾವಿನ ಅತ್ಯಂತ ಸಾಮಾನ್ಯ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಕಷ್ಟಗಳನ್ನು ಛಲದಿಂದ ಎದುರಿಸಿ, ಸವಾಲುಗಳಿಗೆ ಸಡ್ಡು ಹೊಡೆದು ನಿಲ್ಲಬೇಕಾದ ಯುವಜನ, ಸಣ್ಣ ಪುಟ್ಟ ಸಂಗತಿಗಳಿಗೂ ಆತ್ಮಹತ್ಯೆಗೆ ಶರಣಾಗುತ್ತಿರುವುದು ಆತಂಕಕಾರಿ. ಇದಕ್ಕೆ, ಆಳುವವರ ಆರ್ಥಿಕ ನೀತಿಗಳೂ ಕೊಡುಗೆ ಸಲ್ಲಿಸಿವೆ. ಆದರೆ ಸಮಸ್ಯೆಯ ಮೂಲವನ್ನು ಕಂಡುಕೊಂಡು ಸಂಘಟಿತವಾಗಿ ಹೋರಾಡಬೇಕಾದ ಯುವಜನ, ಫೇಸ್‍ಬುಕ್ ಮತ್ತು ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳ ವಿಧೇಯ ವಿದ್ಯಾರ್ಥಿಗಳಾಗಿ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಸಮಸ್ಯೆಯ ಬಗ್ಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಬೇಕಾದವರು ಅನವಶ್ಯಕ ವಿಚಾರಗಳಿಗಾಗಿ ಸಮಾಜದಲ್ಲಿ ಒಡಕಿಗೆ ಕಾರಣರಾಗುತ್ತಿದ್ದಾರೆ. ಎರಡು– ಮೂರು ಪದವಿಗಳನ್ನು ಇಟ್ಟುಕೊಂಡರೂ ತಮ್ಮ ಕಾಲ ಮೇಲೆ ನಿಲ್ಲುವ ಆತ್ಮವಿಶ್ವಾಸವಿಲ್ಲದೇ ದುಡುಕುತ್ತಿದ್ದಾರೆ.

ಕ್ಷಣಕ್ಷಣಕ್ಕೂ ಹೊಸ ಹೊಸ ಸವಾಲುಗಳು ಎದುರಾಗುವ ಸಮಯವಿದು. ನೂರಕ್ಕೆ ತೊಂಬತ್ತೂ ಚಿಲ್ಲರೆ ಅಂಕ ಗಳಿಸಿದರೂ ಶೇ 10ರಷ್ಟೂ ಸ್ವನಂಬಿಕೆ ಇಲ್ಲದಿರುವ ಯುವಜನರನ್ನು ನೋಡಿದರೆ ವಿಷಾದವೆನಿಸುತ್ತದೆ. ಸಕಾರಾತ್ಮಕವಾಗಿ ಯೋಚಿಸುವ ವ್ಯಕ್ತಿಗಳ ಜತೆ ಇರುವುದು, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು, ಉತ್ತೇಜಕ ನುಡಿಗಳನ್ನು ಆಡುವ ಹಿರಿಯರ ಸಾಂಗತ್ಯ, ಜಗತ್ತಿನಲ್ಲಿ ಒಳ್ಳೆಯ ಸಂಗತಿಗಳೇ ಹೆಚ್ಚಾಗಿವೆ ಎಂಬ ಅರಿವು, ಸಮಾಧಾನಪಡಿಸಿ
ಭರವಸೆ ಹುಟ್ಟಿಸುವ, ಮನಸ್ಸನ್ನು ಸಂತೈಸುವ ಆತ್ಮೀಯತೆಯು ಮುಳುಗುತ್ತಿರುವವರಿಗೆ ಆಸರೆಯಾಗಬಲ್ಲದು. ಸಂಕಷ್ಟದಲ್ಲಿದ್ದರೂ ಯಾರಿಗೂ ಹೇಳಿಕೊಳ್ಳದೇ ತೊಳಲುವ ಜೀವಗಳು ನಮ್ಮ ಕಣ್ಣಿಗೆ ಬಿದ್ದರೆ ಮಾಡುವ ಕಿಂಚಿತ್ ಹಣ ಸಹಾಯ ಅಥವಾ ಒಂದು ಧೈರ್ಯದ ಮಾತು, ಒಂದು ಸಂಸಾರದ ಕಣ್ಣೀರನ್ನು ತೊಡೆಯಬಲ್ಲದು. ಧ್ಯಾನ, ಪ್ರಾರ್ಥನೆಗಳೂ ಸಕಾರಾತ್ಮಕ ಶಕ್ತಿಯನ್ನು ಗಳಿಸಿಕೊಳ್ಳುವ ಮಾರ್ಗಗಳೇ! ನೆನಪಿರಲಿ, ಸ್ಪರ್ಧಾತ್ಮಕತೆಯ ರೇಸ್ ಅನ್ನೇ ಮಾನದಂಡವಾಗಿ ಇರಿಸಿಕೊಂಡ ನಮ್ಮ ಶಿಕ್ಷಣ ವ್ಯವಸ್ಥೆ ಹಾಗೂ ಸಮಾಜ ತಮ್ಮ ದೃಷ್ಟಿಕೋನವನ್ನು
ಬದಲಿಸಿಕೊಳ್ಳದಿದ್ದರೆ ನಾಳೆಗಳು ಮತ್ತಷ್ಟು ಕರಾಳವಾಗಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)