ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಸಸಿಗಳಿಗೆ ಹೆಚ್ಚಿದ ಬೇಡಿಕೆ

ಚನ್ನಗಿರಿ: ಆರಿದ್ರಾ ಮಳೆಯಲ್ಲಿ ಗಿಡ ನೆಡಲು ಬೆಳೆಗಾರರ ಸಿದ್ಧತೆ
Last Updated 16 ಜೂನ್ 2018, 7:14 IST
ಅಕ್ಷರ ಗಾತ್ರ

ಚನ್ನಗಿರಿ: ಅಡಿಕೆ ನಾಡಿನಲ್ಲಿ ಹೊಸದಾಗಿ ತೋಟಗಳನ್ನು ಮಾಡಲು ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಆರಿದ್ರಾ ಮಳೆಗೆ ಗಿಡಗಳನ್ನು ನೆಡುವುದಕ್ಕಾಗಿ ಗುಣಮಟ್ಟದ ಸಸಿಗಳನ್ನು ಖರೀದಿಸಿಕೊಂಡು ಗ್ರಾಮಗಳಿಗೆ ಒಯ್ಯುವ ದೃಶ್ಯ ಈಗ ತಾಲ್ಲೂಕಿನ ಎಲ್ಲೆಡೆ ಕಂಡುಬರುತ್ತಿದೆ.

ದರ ಕುಸಿತ, ಮಳೆ ಕೊರತೆ, ರೋಗಗಳ ಬಾಧೆ... ಹೀಗೆ ಹತ್ತಾರು ಸಮಸ್ಯೆಗಳನ್ನು ಹಲವು ವರ್ಷಗಳಿಂದ ರೈತರು ಎದುರಿಸುತ್ತಿದ್ದಾರೆ. ಹೀಗಿದ್ದರೂ ಹೊಸದಾಗಿ ಅಡಿಕೆ ತೋಟ ಮಾಡುವ ರೈತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದರಿಂದಾಗಿ ಈಗ ಅಡಿಕೆ ಗಿಡಗಳಿಗೆ ಎಲ್ಲಿಲ್ಲದ ಬೇಡಿಕೆ. ಅಡಿಕೆ ಸಸಿಗಳ ದರ ₹ 50ಕ್ಕೆ ಜಿಗಿದಿದೆ.

ಅಡಿಕೆ ಬೆಳೆಯುವುದೇ ಪ್ರತಿಷ್ಠೆ ಎಂಬ ಭಾವನೆ ತಾಲ್ಲೂಕಿನ ರೈತರಲ್ಲಿದೆ. ಹೀಗಾಗಿ, ಏನೆಲ್ಲಾ ಕಷ್ಟ ಅನುಭವಿಸಿದರೂ ಪ್ರತಿ ವರ್ಷ ಹೊಸದಾಗಿ ಅಡಿಕೆ ತೋಟ ಮಾಡುವ ರೈತರ ಸಂಖ್ಯೆ ಕಡಿಮೆಯಾಗಿಲ್ಲ. ಕನಿಷ್ಠ ಎಂದರೂ ಪ್ರತಿವರ್ಷ ತಾಲ್ಲೂಕಿನಲ್ಲಿ
4 ಸಾವಿರದಿಂದ 5 ಸಾವಿರ ಎಕರೆ ಪ್ರದೇಶದಲ್ಲಿ ಹೊಸದಾಗಿ ಅಡಿಕೆ ನೆಡಲಾಗುತ್ತಿದೆ.

ತಾಲ್ಲೂಕಿನ ಕಗತೂರು, ಹಿರೇಉಡ, ಕಾಕನೂರು, ದೊಡ್ಡೇರಿಕಟ್ಟೆ, ಅಕಳಕಟ್ಟೆ, ಹಿರೇಮಳಲಿ, ಅಜ್ಜಿಹಳ್ಳಿ, ಸುಣಿಗೆರೆ, ಚಿಕ್ಕೂಲಿಕೆರೆ, ಹೊನ್ನೇಮರದಹಳ್ಳಿ, ನೀತಿಗೆರೆ, ನುಗ್ಗಿಹಳ್ಳಿ, ದೇವರಹಳ್ಳಿ, ಬೆಂಕಿಕೆರೆ, ಗರಗ, ಗುಳ್ಳೇಹಳ್ಳಿ ಗ್ರಾಮಗಳಲ್ಲಿ ಅಡಿಕೆ ಸಸಿಗಳನ್ನು ನೆಡುವ ಕಾರ್ಯ ಭರದಿಂದ ಸಾಗುತ್ತಿದೆ.

ಕಳೆದ ಮೂರು ವರ್ಷಗಳಲ್ಲಿ ಮಳೆ ಕೊರತೆಯಿಂದಾಗಿ ಅಂತರ್ಜಲ ಮಟ್ಟ ತೀವ್ರ ಕುಸಿದಿತ್ತು. ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಬೆಳೆಗಾರರು ಟ್ಯಾಂಕರ್‌ಗಳ ಮೊರೆಹೋಗಿದ್ದರು. ಭದ್ರಾ ಕಾಲುವೆ, ಸೂಳೆಕೆರೆಯ ನೀರನ್ನು ತಂದು ತೋಟಗಳನ್ನು ಉಳಿಸಿಕೊಂಡರು. ಆರಿದ್ರಾ ಮಳೆ ಜಿಟಿಜಿಟಿ ಎಂದು ಬೀಳುವುದರಿಂದ ಅಡಿಕೆ ಸಸಿಗಳು ಉತ್ತಮವಾಗಿ ಬೆಳೆಯುತ್ತವೆ ಎಂಬ ನಂಬಿಕೆ ರೈತರದ್ದು. ಹೀಗಾಗಿ ಆರಿದ್ರಾ ಮಳೆಯಲ್ಲೇ ಅಡಿಕೆ ಸಸಿ ನೆಡುವ ಸಂಪ್ರದಾಯವನ್ನು ರೈತರು ರೂಢಿಸಿಕೊಂಡು ಬಂದಿದ್ದಾರೆ. ಈಗ ಮಳೆ ಚೆನ್ನಾಗಿ ಆಗುತ್ತಿದ್ದು,
ಗಿಡಗಳನ್ನು ನೆಡಲು ಉತ್ತಮ ವಾತಾವರಣವಿದೆ. ಆದ್ದರಿಂದ ಎಲ್ಲಾ ಹಳ್ಳಿಗಳಲ್ಲಿ ಅಡಿಕೆ ನೆಡುವ ಚಟುವಟಿಕೆ ಚುರುಕು ಪಡೆದಿದೆ.

‘ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಿಂದ ಅಡಿಕೆ ಸಸಿಗಳನ್ನು ಖರೀದಿಸಿ ತಂದಿದ್ದೇವೆ. ಒಂದು ಅಡಿಕೆ ಸಸಿಗೆ ₹ 40–50 ಬೆಲೆ ಇದೆ. ಕಳೆದ ವರ್ಷ ₹ 25–30 ದರ ಇತ್ತು. ಈಗ ಅಡಿಕೆ ನೆಡಲು ಉತ್ತಮ ವಾತಾವರಣ ಇರುವುದರಿಂದ ದರ ಹೆಚ್ಚಿದ್ದರೂ ಅನಿವಾರ್ಯವಾಗಿ ಸಸಿಗಳನ್ನು ತಂದಿದ್ದೇವೆ’ ಎಂದು ಮಾವಿನಕಟ್ಟೆ ಗ್ರಾಮದ ರೈತ ಪುನೀತ್ ತಿಳಿಸಿದರು.

–ಎಚ್.ವಿ. ನಟರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT