ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಕ್ಕಳು ಹಾದಿ ತಪ್ಪಿ ನಡೆಯದಿರಲು ಪೋಷಕರ ಹೊಣೆ ಹೆಚ್ಚು

ಕೆಲವು ಮಕ್ಕಳು ಯಾವುದೋ ಮೋಡಿಗೆ ಒಳಗಾದವರಂತೆ ಹಾದಿ ತಪ್ಪಿ ನಡೆಯುತ್ತಿದ್ದಾರೆ. ನಾವು ನಾಟಕ ನೋಡುವಂತೆ ನೋಡುತ್ತಾ
Last Updated 5 ಡಿಸೆಂಬರ್ 2022, 19:59 IST
ಅಕ್ಷರ ಗಾತ್ರ

ಇದು ನನ್ನ ಶಿಕ್ಷಕ ಮಿತ್ರರು ಹೇಳಿದ ಅವರದೇ ಅನುಭವ.‌ ಅವರು ಪಾಠ ಮಾಡುವಾಗ ಕೊನೆಯ ಬೆಂಚಿನಲ್ಲಿ ಕೂತ ವಿದ್ಯಾರ್ಥಿಯೊಬ್ಬ ಚಿತ್ರವೊಂದನ್ನು ಬಿಡಿಸುತ್ತಿದ್ದನಂತೆ. ಹುಡುಗನ ಗಮನ ಪಾಠದ ಕಡೆ ಇಲ್ಲದಿರುವುದನ್ನು ಗಮನಿಸಿದ ಶಿಕ್ಷಕರು ಹೋಗಿ ನೋಡಿ, ಬೆಚ್ಚಿಬಿದ್ದಿದ್ದಾರೆ. ಅಲ್ಲಿಯೇ ಏನನ್ನೂ ಹೇಳದೆ ಅವನನ್ನು ಪ್ರತ್ಯೇಕವಾಗಿ ಕರೆದು, ಮುಖ್ಯ ಶಿಕ್ಷಕರ ಬಳಿ ಕೂರಿಸಿಕೊಂಡು ಆತ್ಮೀಯವಾಗಿ ಮಾತಾಡಿದ್ದಾರೆ. ಮಗು ಹೇಳಿದ ಸುದ್ದಿ ಕೇಳಿ ಆತಂಕಗೊಂಡಿದ್ದಾರೆ.

ಹುಡುಗನ ತಂದೆಗೆ ಮೊಬೈಲ್‌ನಲ್ಲಿ ಅಶ್ಲೀಲ ಸಿನಿಮಾ ನೋಡುವ ಖಯಾಲಿ. ನೋಡಿದ ಬಳಿಕ ‘ಬ್ರೌಸರ್ ಹಿಸ್ಟರಿ’ ಅಳಿಸದೆ ಬಿಟ್ಟಿದ್ದಾರೆ. ಹೋಂವರ್ಕ್ ಬರೆಯಲು ಮಗುವಿಗೆ ಮೊಬೈಲ್ ಸಿಕ್ಕಿದೆ, ಅದರ ಜೊತೆಗೆ ಅಚಾನಕ್ಕಾಗಿ ವಿಡಿಯೊಗಳು ಸಿಕ್ಕಿವೆ. ಹೋಂವರ್ಕ್ ನೆವದಲ್ಲಿ ಹುಡುಗ ನಿತ್ಯ ಅಶ್ಲೀಲ ಸಿನಿಮಾ ನೋಡಿದ್ದಾನೆ. ತರಗತಿಯಲ್ಲಿ ಕೂತು ಅಶ್ಲೀಲ ಚಿತ್ರ ಬರೆದಿದ್ದಾನೆ. ಸಮಾಜ ಮಗುವನ್ನು ದೂರುತ್ತದೆ. ಆದರೆ ದೂರಬೇಕಿರುವುದು ಇಂತಹ ಜವಾಬ್ದಾರಿಹೀನ ಹೆತ್ತವರನ್ನು.

ನನ್ನ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯ ಬ್ಯಾಗಿನಲ್ಲಿ ಸಿಗರೇಟು ತುಂಡುಗಳು, ಗುಟಕಾ ಪ್ಯಾಕ್ ಅಚಾನಕ್ಕಾಗಿ ಸಿಕ್ಕಿದ್ದವು. ಪೋಷಕರು ಮಗನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಯಾರೋ ತಮ್ಮ ಮಗುವಿನ ಬ್ಯಾಗಿನಲ್ಲಿ ಬಚ್ಚಿಟ್ಟು ಇವನನ್ನು ಸಿಲುಕಿಸಿರಬಹುದೆಂದು ವಾದಿಸಿದರು. ನಾವು ಮತ್ತೆ ಮಾತಾಡಲಿಲ್ಲ.

ವಿದ್ಯಾರ್ಥಿಯನ್ನು ತರಗತಿಯಲ್ಲಿ ನಿಲ್ಲಿಸಿ ಹೋಂವರ್ಕ್ ಕೇಳಿದ್ದಕ್ಕೆ ಮರುದಿನ ಅವಳು ಅವರ ತಂದೆಯೊಂದಿಗೆ ಬಂದಿದ್ದಳು. ತರಗತಿಯ ಎಲ್ಲಾ ಮಕ್ಕಳ ಮುಂದೆ ನನಗೆ ಹೋಂವರ್ಕ್ ಕೇಳಿದರು ಎಂಬುದು ಅವಳ ದೂರು. ವಿಚಾರವೆಂದರೆ, ಅವಳು ಹೋಂವರ್ಕ್ ಬರೆದಿರಲಿಲ್ಲ. ಪೋಷಕರು ತಮ್ಮ ಮಗುವಿನ ಪರ ವಹಿಸಿಕೊಂಡು ಮಾತನಾಡಿ ಎದ್ದು ಹೋದರು. ಮಕ್ಕಳ ಮೇಲಿನ ಅತೀ ವ್ಯಾಮೋಹ ಇನ್ನೇನು ಮಾಡಿಸೀತು?

ಪ್ರೌಢದೇವರಾಯನ ಮಂತ್ರಿ ಲಕ್ಷ್ಮೀಧರನ ತಾಯಿ ತನ್ನ ಮಗುವಿಗೆ ಮೊಲೆಯುಣಿಸುವಾಗ ‘ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಂ ಮಾಡಿಸು...’ ಎನ್ನುತ್ತಿದ್ದಳು ಎಂದು ಶಾಸನ ಹೇಳುತ್ತದೆ. ಕನ್ನಡ ಜನಪದ ತಾಯಂದಿರು ‘ಆಚಾರಕ್ಕರಸಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು- ನನಕಂದ, ಜ್ಯೋತಿಯೇ ಆಗು ಜಗಕೆಲ್ಲ’ ಎಂದು ಮಕ್ಕಳಿಗೆ ಹೇಳುತ್ತಿದ್ದರು. ಈಗ ಪೋಷಕರು ಮಕ್ಕಳಿಗೆ ಹೇಳುವುದು ಒಂದೇ ಮಾತು ‘ಎಷ್ಟು ಮಾರ್ಕ್ಸ್ ಬಂದಿದೆ?’ ಶಾಲೆಗೆ ಬರುವ ಪ್ರತೀ ಪೋಷಕರದು ಏಕೈಕ ವಿಚಾರಣೆ ‘ನಮ್ಮ ಮಗು ಹೇಗೆ ಓದ್ತಾ ಇದೆ?’ ಅಷ್ಟೆ. ಅವನ ವರ್ತನೆ ಹೇಗಿರುತ್ತದೆ ಎಂಬುದನ್ನು ಕೇಳುವವರೇ ಇಲ್ಲ!

ಬಹುತೇಕ ಪೋಷಕರು ಮಕ್ಕಳನ್ನು ತಮ್ಮ ನಾಳೆಗಳಿಗೆ ಹೂಡಿಕೊಂಡಿರುವ ಬಂಡವಾಳದಂತೆ ನೋಡುತ್ತಿದ್ದಾರೆ. ನಾಳೆ ಏನಾದರೂ ಆಗು ಆದರೆ ಮನುಷ್ಯನಾಗು ಎಂದು ಹೇಳುವ ಪೋಷಕರನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಿದೆ. ‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುತ್ತದೆ’ ಎನ್ನುತ್ತಾರೆ. ಕೆಲವು ಮಕ್ಕಳ ವರ್ತನೆಗಳನ್ನು ನೋಡಿದರೆ ನಾವು ಅವರ ಎದೆಯೊಳಗೆ ಎಂತಹ ಬೀಜ ಹಾಕಿದ್ದೇವೆ ಎಂದು ಯೋಚಿಸಬೇಕಾಗುತ್ತದೆ.

ಕೌಟುಂಬಿಕ ಮೌಲ್ಯಗಳು ಸಂಪೂರ್ಣ ಕುಸಿದಿವೆ. ಅಮ್ಮ ಧಾರಾವಾಹಿ ನೋಡುತ್ತಾ ಹೋಂವರ್ಕ್ ಬರೆಸುತ್ತಾಳೆ. ಅಪ್ಪ ಬ್ರೇಕಿಂಗ್ ನ್ಯೂಸ್ ನೋಡುತ್ತಾ ಮೈಮರೆಯುತ್ತಾನೆ. ಅದನ್ನು ನೋಡಿದ ಮಗುವಿನ ತಲೆಯೊಳಗೆ ಯುದ್ಧಗಳೇಳುತ್ತವೆ. ಅಪ್ಪ, ಅಮ್ಮ, ಮಕ್ಕಳೊಟ್ಟಿಗೆ ಊಟಕ್ಕೆ ಕೂತು ಅವರ ಮಾತುಗಳಿಗೆ ಕಿವಿಯಾದ ಉದಾಹರಣೆಗಳೆಷ್ಟು?

ಮಕ್ಕಳಿಗೆ ಪಾಲಕರು ಮಾನಸಿಕವಾಗಿ ಅಲಭ್ಯರಾಗುತ್ತಿದ್ದಾರೆ. ಆ ಕೊರತೆಯ ಒಂಟಿತನವನ್ನು ಈಗ ಮೊಬೈಲ್, ಟಿ.ವಿ, ಸಿನಿಮಾಗಳು ಆವರಿಸಿವೆ. ದೃಶ್ಯಮಾಧ್ಯಮಗಳಲ್ಲಿ ವಿಜೃಂಭಿಸುವ ಹಿಂಸೆ-ಕ್ರೌರ್ಯ- ಅಶ್ಲೀಲತೆ ಸುಲಭವಾಗಿ ಮಕ್ಕಳನ್ನು ಆಕರ್ಷಿಸಿವೆ. ಮಗು ತಮಗೇ ಗೊತ್ತಿಲ್ಲದಂತೆ ತಪ್ಪುಹಾದಿ ಹಿಡಿಯುತ್ತದೆ. ಅಂತಹ ಸಂದರ್ಭದಲ್ಲಿ ಒದಗುವ ಸ್ನೇಹಿತರ ಒಡನಾಟ, ಪ್ರೀತಿ ಪ್ರೇಮದ ಕಪಟಗಳನ್ನು ಅರಿಯದೆ ತಾತ್ಕಾಲಿಕವಾಗಿ ಭಾವೋದ್ರೇಕಗೊಳಿಸುವ, ಮನರಂಜನೆ ನೀಡಬಹುದಾದ ಮಾದಕ ವ್ಯಸನಗಳ ಸೆಳೆತಕ್ಕೆ ಬಿದ್ದು ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತ್ತದೆ.‌ ಕೆಲವು ಶಿಕ್ಷಕರ ವಿಚಿತ್ರ ವರ್ತನೆಗಳು ಮತ್ತು ಶಾಲೆಯ ವಾತಾವರಣ ಮಗುವನ್ನು ಪ್ರಭಾವಿಸಿದ ಉದಾಹರಣೆಗಳು ಕೂಡ ಇವೆ. ಇಷ್ಟೊಂದು ವ್ಯತಿರಿಕ್ತವಾದ ಕಾಲದಲ್ಲೂ ಕೆಲವು ಪೋಷಕರು, ಶಿಕ್ಷಕರು ಮಕ್ಕಳನ್ನು ಅಷ್ಟೇ ಜತನವಾಗಿ ಕಾಪಾಡುತ್ತಿದ್ದಾರೆ. ಅದು ಆ ಮಕ್ಕಳ ಅದೃಷ್ಟ. ಕೆಲವು ಮಕ್ಕಳು ಯಾವುದೋ ಮೋಡಿಗೆ ಒಳಗಾದವರಂತೆ ಹಾದಿ ತಪ್ಪಿ ನಡೆಯುತ್ತಿದ್ದಾರೆ. ನಾವು ನಾಟಕ ನೋಡುವಂತೆ ನೋಡುತ್ತಾ ಕೂತಿದ್ದೇವೆ.

ಇಷ್ಟಪಟ್ಟ ಬಟ್ಟೆ, ರುಚಿಯಾದ ಊಟ, ವಸತಿ, ಬೇಕಾದ ವಸ್ತುಗಳನ್ನು ಕೊಟ್ಟು ಒಳ್ಳೆಯ ಶಾಲೆಗೆ ಕಳುಹಿಸುವುದರಿಂದ ಮಾತ್ರ ಮಕ್ಕಳು ಉತ್ತಮವಾಗಿ ಬೆಳೆಯುವುದಿಲ್ಲ. ಬರೀ ಉತ್ತಮ ‘ಸಂಸ್ಕೃತಿ-ಸಂಸ್ಕಾರ’ ಕಲಿಸಿದೆ ಅನ್ನುವುದೂ ಮಗುವಿಗೆ ಕೊಟ್ಟ ದೊಡ್ಡ ಕಾಣಿಕೆಯಲ್ಲ. ಒಂದು ಮಗುವಿನ ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ, ಲೈಂಗಿಕ ಬದಲಾವಣೆಗಳನ್ನು ಪೋಷಕರು ತಿಳಿದುಕೊಂಡು ಅದರಂತೆ ಮಕ್ಕಳನ್ನು ನಡೆಸಿಕೊಳ್ಳಬೇಕು. ಅದು ಮಗುವನ್ನು ಬೆಳೆಸುವ ಪರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT