ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರು ರಾಮಚಂದ್ರಪ್ಪ ಬರಹ | ಮಾದರಿ ಪಠ್ಯಕ್ರಮ: ವ್ಯತ್ಯಾಸ ಸ್ಪಷ್ಟವಾಗಲಿ

ಉನ್ನತ ಶಿಕ್ಷಣದಲ್ಲಿ ಏಕರೂಪ ಪಠ್ಯಕ್ರಮ ಜಾರಿಗೆ ತರುವ ಉದ್ದೇಶವಿಲ್ಲ ಎಂದಾದರೆ, ಈ ಕುರಿತು ಸ್ಪಷ್ಟ ಸೂಚನಾ ಪತ್ರ ಹೊರಡಿಸಲಿ
ಅಕ್ಷರ ಗಾತ್ರ

ಉನ್ನತ ಶಿಕ್ಷಣದಲ್ಲಿ ಏಕರೂಪ ಪಠ್ಯಕ್ರಮ ಜಾರಿ ಕುರಿತು ನಡೆದ ಚರ್ಚೆಗೆ ಉತ್ತರವೆಂಬಂತೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕರು ಬರೆದಿರುವ ಲೇಖನದಲ್ಲಿ (ಸಂಗತ, ಜೂನ್‌ 23) ‘ಏಕರೂಪಿ ಪಠ್ಯವಲ್ಲ’ ಎಂದು ಸ್ಪಷ್ಟಪಡಿಸಿರುವುದಕ್ಕೆ ಧನ್ಯವಾದ. ಏಕರೂಪಿ ಪಠ್ಯಕ್ರಮ ರಚನೆ ಕುರಿತು ಮೇ 5ರಂದು ಹೊರಟ ಸುತ್ತೋಲೆಯು ಇವರ ಹೆಸರಿನಲ್ಲೇ ಇದ್ದದ್ದರಿಂದ, ಇವರ ಸ್ಪಷ್ಟನೆಯನ್ನು ಅಧಿಕೃತ ಎಂದು ತಿಳಿಯಬಹುದಾಗಿದೆ. ಆದರೂ ಇವರ ಸ್ಪಷ್ಟನೆಯು ಕೆಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಮೊದಲನೆಯದಾಗಿ, ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರನ್ನು ‘ಸಾಧಕಗಳ ಬಗ್ಗೆ ಕಿಂಚಿತ್ತೂ ವಿವೇಚಿಸದೆ’ ಇರುವವರೆಂದು ಟೀಕಿಸಿದ್ದಾರೆ. ವಿಶ್ರಾಂತ ಕುಲಪತಿಗಳು ಸಹ ಈ ಚರ್ಚೆಯಲ್ಲಿ ತೊಡಗಿದ್ದರು ಎಂಬುದನ್ನು ಅವರು ಗೌರವಪೂರ್ವಕವಾಗಿ ಗಮನಿಸಬೇಕಿತ್ತು.

ಪಠ್ಯ ಮತ್ತು ಪಠ್ಯಕ್ರಮ ಎಂಬ ಪದಗಳನ್ನು ಅವರು ಒಂದೇ ಅರ್ಥದಲ್ಲಿ ಬಳಸಿರುವುದು ಸೂಕ್ತವೇ ಎಂಬ ಪ್ರಶ್ನೆ ಎದುರಾಗುತ್ತದೆ. ಪಠ್ಯಕ್ರಮ ಎಂದರೆ ‘ಕರಿಕ್ಯುಲಂ’, ಪಠ್ಯ ಎಂದರೆ ‘ಸಿಲೆಬಸ್‌’, ‘ಟೆಕ್ಸ್ಟ್‌’ ಎಂದು ಪ್ರತ್ಯೇಕ ಅರ್ಥಗಳಿವೆಯಲ್ಲವೇ? ಸೂಚನಾ ಪತ್ರದಲ್ಲಿ ಪ್ರಸ್ತಾಪವಾಗಿರುವುದು ‘ಕರಿಕ್ಯುಲಂ’ ವಿಷಯ. ಇದು ಕೂಡ ಏಕರೂಪಿ ಹೇರಿಕೆ ಆಗಬಾರದು ಎಂಬ ಅಭಿಪ್ರಾಯಕ್ಕೆ ವಿಶ್ವವಿದ್ಯಾಲಯಗಳ ಸ್ವಾಯತ್ತೆ, ವೈವಿಧ್ಯ ಮುಂತಾದ ತಾತ್ವಿಕ ಕಾರಣಗಳೇ ಆಧಾರ. ಆಯಾ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಗಳು, ಅಕಡೆಮಿಕ್‌ ಕೌನ್ಸಿಲ್‌ಗಳು ಈ ದಿಸೆಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿ ಎಂಬುದು ‘ಏಕರೂಪಿ ಪಠ್ಯಕ್ರಮ ಬೇಡ’ ಎನ್ನುವವರ ವಾದದ ಸಾರ.

ಒಂದು ವೇಳೆ ಪಠ್ಯಕ್ರಮ ಕುರಿತು ‘ಮಾದರಿ ಮಾರ್ಗಸೂಚಿ’ಗಳನ್ನು ರೂಪಿಸಬೇಕಿದ್ದರೆ, ಹತ್ತನೇ ತರಗತಿಯವರೆಗಿನ ಪಠ್ಯಕ್ರಮಕ್ಕಾಗಿ 2005ರಲ್ಲಿ ಅಂದಿನ ಕೇಂದ್ರ ಸರ್ಕಾರ ಅನುಸರಿಸಿದ ಮಾರ್ಗವನ್ನು ಅನುಸರಿಸಬಹುದಿತ್ತು. ಅಂದು ಪ್ರೊ. ಯಶ್‌ಪಾಲ್‌ ನೇತೃತ್ವದಲ್ಲಿ ರಚಿತಗೊಂಡ ಪಠ್ಯಕ್ರಮ ಚೌಕಟ್ಟಿನ ಸಮಿತಿಯಲ್ಲಿ ವಿವಿಧ ವಲಯದ 21 ತಜ್ಞರ ಪ್ರಾತಿನಿಧ್ಯ
ಇತ್ತು. ಅದು ‘ಏಕರೂಪಿ ಪಠ್ಯಕ್ರಮ ಚೌಕಟ್ಟು’ ಆಗಿರಲಿಲ್ಲ. ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು’ (ಎನ್‌.ಸಿ.ಎಫ್‌) ಎಂಬ ಹೆಸರಿನ ಈ ಅಧ್ಯಯನಾತ್ಮಕ ದಾಖಲೆಯನ್ನು 2005ರಲ್ಲಿ ಅಂಗೀಕರಿಸಿ, ಇದರ ಆಧಾರದ ಮೇಲೆ ರಾಜ್ಯಗಳು ಪಠ್ಯಕ್ರಮ ರೂಪಿಸುವ ಅವಕಾಶ ನೀಡಲಾಯಿತು. ಕರ್ನಾಟಕದಲ್ಲಿ ಸುಮಾರು 30 ಕಾರ್ಯಾಗಾರಗಳನ್ನು ನಡೆಸಿ ರಾಜ್ಯದ ಪಠ್ಯಕ್ರಮ ಚೌಕಟ್ಟನ್ನು ರಚಿಸಲಾಯಿತು. ಇದನ್ನು ಮಾರ್ಗಸೂಚಿಯಂತೆ ಗಮನಿಸಿ ಪಠ್ಯವಸ್ತು ಮತ್ತು ಪಠ್ಯಪುಸ್ತಕಗಳು ಸಿದ್ಧವಾಗುತ್ತಾ ಬಂದಿವೆ.

ಯಶ್‌ಪಾಲ್‌ ಸಮಿತಿಯು ಭಾಷೆ, ವಿಜ್ಞಾನ, ಗಣಿತ, ಸಮಾಜವಿಜ್ಞಾನ– ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ಅಧ್ಯಯನ ಮಾಡಿ, ಕೆಲವು ಮಾದರಿಗಳನ್ನು ಸೂಚಿಸಿತ್ತು. ಉನ್ನತ ಶಿಕ್ಷಣ ಪಠ್ಯಕ್ರಮಕ್ಕೆ ಇಂಥದ್ದೊಂದು ಅಧ್ಯಯನ ನಡೆಸಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬಹುದು. ಈ ಅಧ್ಯಯನವು ಸಲಹಾರೂಪದ ವರದಿಯಾಗಿದ್ದು ಆನಂತರ ಸಂಬಂಧಪಟ್ಟವರ ಜೊತೆ ಚರ್ಚಿಸಿದ ನಂತರವೇ ‘ಮಾರ್ಗಸೂಚಿ ಮಾದರಿ’ಯಲ್ಲಿದ್ದರೆ ವಿಶ್ವವಿದ್ಯಾಲಯಗಳ ಸ್ವಾಯತ್ತೆಗೆ ಧಕ್ಕೆ ಆಗಲಾರದು. ಆದರೆ ಈಗ ಒಂದೊಂದು ವಿಶ್ವವಿದ್ಯಾಲಯಕ್ಕೆ ಒಂದೊಂದು ವಿಷಯದ ಪಠ್ಯಕ್ರಮ ರೂಪಿಸಲು ಸೂಚಿಸಲಾಗಿದೆ. ಮಾದರಿ ಪಠ್ಯ ಮತ್ತು ಪಠ್ಯಕ್ರಮದ ವ್ಯತ್ಯಾಸವನ್ನೇ ಸ್ಪಷ್ಟಪಡಿಸದಿದ್ದರೆ ಮುಂದೆ ಏನಾಗಬಹುದೆಂದು ಊಹಿಸಿ!

ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರಿಹೊಂದುವ ಪಠ್ಯಕ್ರಮವನ್ನು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಜಾರಿಗೆ ತರಬೇಕಾದ ಅಗತ್ಯವನ್ನು ಕಾರ್ಯನಿರ್ವಾಹಕ ನಿರ್ದೇಶಕರು ಪ್ರತಿಪಾದಿಸಿದ್ದಾರೆ. ಹಾಗಾದರೆ ಉನ್ನತ ಶಿಕ್ಷಣದ ಆದ್ಯತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದೇ? ವಿಶ್ವವಿದ್ಯಾಲಯಗಳು ತರಬೇತಿ ಕೇಂದ್ರಗಳೇ? ಅದಕ್ಕೆ ಪ್ರತ್ಯೇಕ ವ್ಯವಸ್ಥೆ ಬೇಕಲ್ಲವೇ?

ನಮ್ಮ ವಿಶ್ವವಿದ್ಯಾಲಯಗಳ ಗುಣಮಟ್ಟದ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಗುಣಮಟ್ಟ ಖಂಡಿತ ಬೇಕು. ಆದರೆ, ಗುಣಮಟ್ಟವೆನ್ನುವುದು ಒಂದು ಸಾಪೇಕ್ಷ ಪರಿಕಲ್ಪನೆ. ವಿಶ್ವಕ್ಕೆಲ್ಲಾ ಏಕರೂಪಿ ಮಾನದಂಡ ಇರುವುದು ಸಾಧುವಲ್ಲ. ಬರಹದ ಆರಂಭದಲ್ಲಿ, ಐ.ಟಿ–ಬಿ.ಟಿಯು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಛಾಪು ಮೂಡಿಸಿ ಜಾಗತಿಕವಾಗಿ ಗಮನ ಸೆಳೆದಿದೆಯೆಂದು ಹೇಳಿ ಕೊನೆಯಲ್ಲಿ, ರಾಜ್ಯದ ಯಾವ ವಿಶ್ವವಿದ್ಯಾಲಯವೂ ವಿಶ್ವ ರ್‍ಯಾಂಕಿಂಗ್‌ನ 1,000 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಇಲ್ಲ ಎಂದು ವಿಷಾದಿಸಿರುವುದು ವಿಪರ್ಯಾಸ!

ಜೊತೆಗೆ ‘ಉದ್ದೇಶಿತ ಮಾದರಿ ಪಠ್ಯಕ್ರಮ’ದಿಂದ ಗುಣಮಟ್ಟದ ಸುಧಾರಣೆ ಆಗುತ್ತದೆ ಎಂದು ಪ್ರತಿಪಾದಿಸುತ್ತಾರೆ. ಪಠ್ಯಕ್ರಮವೊಂದೇ ಗುಣಮಟ್ಟವನ್ನು ಸುಧಾರಿಸುತ್ತದೆಯೇ ಎಂದು ಕೇಳಿಕೊಳ್ಳಬೇಕಾಗಿದೆ. ಗುಣಮಟ್ಟ ಸುಧಾರಣೆಗೆ ಪಠ್ಯಕ್ರಮ ಒಂದು ಸಾಧನ ಮಾತ್ರವಾಗಿದ್ದು, ಇನ್ನೂ ಅನೇಕ ಅಂಶಗಳ ಅಗತ್ಯವಿದೆ. ಈ ದಿಕ್ಕಿನಲ್ಲಿ ಆದ್ಯತೆಯ ಮೇಲೆ ಸಮಗ್ರ ಅಧ್ಯಯನಕ್ಕೆ ಮುಂದಾಗಬೇಕಾಗಿದೆ.

ವಿಶ್ವ ಬಂಡವಾಳಶಾಹಿ ರ್‍ಯಾಂಕಿಂಗ್‌ಗಳಿಗೆ ಆತಂಕಪಡದೆ ನಮ್ಮ ದೇಶ, ರಾಜ್ಯ ಹಾಗೂ ಸ್ಥಳೀಯತೆಗಳ ಆಧಾರದಲ್ಲಿ ಸ್ವತಂತ್ರ ಪದ್ಧತಿಗಳ ಮೂಲಕ ಉನ್ನತವಾಗಲು ಆದ್ಯತೆ ನೀಡಬೇಕಾಗಿದೆ. ಅದೇನೇ ಇರಲಿ, ನಿರ್ದೇಶಕರು ಪಠ್ಯ(ಕ್ರಮ) ಏಕರೂಪಿ ಅಲ್ಲ ಎಂದದ್ದು ಸ್ವಾಗತಾರ್ಹ. ಆದರೂ ಮತ್ತೊಮ್ಮೆ ಗೊಂದಲಗಳಿಗೆ ಅವಕಾಶವಾಗದಂತೆ, ಇದೊಂದು ಮಾರ್ಗಸೂಚಿಯ ಮಾದರಿ ಎಂಬ ಸ್ಪಷ್ಟ ಸೂಚನಾ ಪತ್ರ ಹೊರಡಿಸಲಿ ಎಂದು ಆಶಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT