ಕಳೆದ ಎರಡು ವಾರಗಳ ಅವಧಿಯಲ್ಲಿ ಸಂಭವಿಸಿರುವ ಕೆಲವು ಘಟನೆಗಳು ಭಾರತೀಯ ಸಮಾಜದ ನೈತಿಕ ಅಧಃಪತನ ಮತ್ತು ಮೌಲ್ಯಗಳ ಕುಸಿತಕ್ಕೆ ಕನ್ನಡಿ ಹಿಡಿದಂತಿದ್ದು, ಇವು ಮಾಧ್ಯಮ ವರದಿಗಳಲ್ಲೇ ಅಡಗಿಹೋಗುತ್ತಿವೆ. ಈ ಘಟನೆ ಗಳು ನಮ್ಮ ಸಾಮಾಜಿಕ ಸಂಕಥನದಲ್ಲಿ ಪ್ರಥಮ ಆದ್ಯತೆ ಪಡೆಯಬೇಕಿತ್ತು ಮತ್ತು ಸಮಾಜದ ಆತ್ಮಸಾಕ್ಷಿಯನ್ನು ಕಲಕ ಬೇಕಿತ್ತು. ಏಕೆಂದರೆ, ಇಲ್ಲಿ ಮಾನವ ಸಮಾಜವನ್ನು ತಲ್ಲಣ ಗೊಳಿಸುವ ಒಳಸೂಕ್ಷ್ಮಗಳು ಅಡಗಿವೆ.

ಮೊದಲನೆಯ ಘಟನೆ, ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ವರದಿಯಾಗಿದೆ. ಜಿಲ್ಲಾ ಕೇಂದ್ರದಿಂದ 55 ಕಿಲೋಮೀಟರ್ ದೂರದಲ್ಲಿರುವ ಹಳ್ಳಿಯೊಂದರಲ್ಲಿ ತನ್ನ
ಹೊಲದಲ್ಲಿ ಕೆಲಸ ಮಾಡುತ್ತಿದ್ದ 90 ವರ್ಷದ ವೃದ್ಧ ಮಹಿಳೆಯ ಮೇಲೆ ನಾಲ್ವರು ಮುಸುಕುಧಾರಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸರ್ಕಾರ ಎಸ್ಐಟಿ ತನಿಖೆ ಆರಂಭಿಸಿದೆ. ಅತ್ಯಾಚಾರಕ್ಕೊಳಗಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡನೆಯ ಘಟನೆ, ರಾಜಸ್ಥಾನದಿಂದ ವರದಿಯಾಗಿದೆ. ಉದಯಪುರ ಸಮೀಪದ ಹಳ್ಳಿಯೊಂದರಲ್ಲಿ ಇಟ್ಟಿಗೆ ಬಟ್ಟಿಯಲ್ಲಿ ದುಡಿಮೆ ಮಾಡುತ್ತಿದ್ದ ಉತ್ತರ ಪ್ರದೇಶದ ರಾಜ್ ಜಟಾವ್ ಮತ್ತು ಸೀಮಾ ದಂಪತಿ ತಮಗೆ ಆಶ್ವಾಸನೆ ನೀಡಿದಷ್ಟು ಕೂಲಿ ನೀಡದೆ ಹೋದರೂ ಕೆಲಸ ಮಾಡಿದ್ದಾರೆ. ಈ ನಡುವೆ ಸೀಮಾ ಜನ್ಮ ನೀಡಿದ ಮಗು ನ್ಯುಮೋನಿಯಾ ಸೋಂಕಿನಿಂದ ಮೃತಪಟ್ಟಿದೆ. ದೂರದಲ್ಲಿರುವ ಆಸ್ಪತ್ರೆಗೆ ಕರೆದೊಯ್ದರೆ ಕೂಲಿಕಾರರು ಓಡಿಹೋಗಬಹುದು ಎಂಬ ಶಂಕೆಯಿಂದ ಚಿಕಿತ್ಸೆಗೂ ಅವಕಾಶ ಕೊಡದ ಕಾರಣದಿಂದಾಗಿ ಮಗು ಸಾವನ್ನಪ್ಪಿದೆ. ತದನಂತರ ಮಗುವಿನ ಶವವನ್ನು ತಮ್ಮ ಸ್ವಂತ ಊರಿಗೆ ಕೊಂಡೊಯ್ಯಲೂ ಅನುಮತಿ ಸಿಗದೆ, ಮಾಲೀಕರ ಅಪ್ಪಣೆಯಂತೆ ಬಟ್ಟಿಯ ಸಮೀಪದಲ್ಲೇ ಹೂತುಹಾಕಲಾಗಿದೆ.

ಮೂರನೆಯ ಘಟನೆ, ಕರ್ನಾಟಕದ ಬಳ್ಳಾರಿಯ ಬ್ರೂಸ್ ಪೇಟೆಯ ವಿದ್ಯಾರ್ಥಿಗಳ ವಸತಿನಿಲಯವೊಂದರಲ್ಲಿ ನಡೆದಿದೆ. ಒಂದೇ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳ ನಡುವಿನ ಕಲಹ ಒಬ್ಬ ಬಾಲಕನ ಸಾವಿನಲ್ಲಿ ಕೊನೆಗೊಂಡಿದೆ. 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಉಳಿದ ಐವರು ಸಹಪಾಠಿಗಳು ಮತ್ತು ವಾರ್ಡನ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, 15 ವರ್ಷದ ಹೇಮಂತ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಉಳಿದವರಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಮೂರೂ ಘಟನೆಗಳನ್ನು ಭಿನ್ನ ಆಯಾಮಗಳಲ್ಲಿ ನೋಡಿದಾಗ, ಮಹಿಳಾ ದೌರ್ಜನ್ಯ, ಜಾತಿ ದ್ವೇಷ ಮತ್ತು ತಾರತಮ್ಯ ಹಾಗೂ ಯುವಪೀಳಿಗೆಯಲ್ಲಿ ಹೆಚ್ಚಾಗುತ್ತಿರುವ ಹಿಂಸಾತ್ಮಕ ಮನೋಭಾವ ಪ್ರಧಾನವಾಗಿ ಕಾಣುತ್ತವೆ. ಒಟ್ಟಾರೆಯಾಗಿ ನೋಡಿದಾಗ, ಸಾಮಾಜಿಕ ವ್ಯಾಧಿಯ ಲಕ್ಷಣವಾಗಿ ಕಾಣುತ್ತವೆ. ಈ ಪ್ರಕರಣಗಳನ್ನು ಆಯಾ ಸರ್ಕಾರಗಳು ಕಾನೂನು ವ್ಯವಸ್ಥೆಯ ಲೋಪ ಅಥವಾ ಸಾಮಾಜಿಕ ಅಪರಾಧದ ಹಿನ್ನೆಲೆಯಲ್ಲಿ ಮಾತ್ರ ನೋಡುತ್ತವೆ. ಸಾಮಾಜಿಕ ಸಂಘಟನೆಗಳಿಗೆ ಜಾತಿ–ಧಾರ್ಮಿಕ ಅಸ್ಮಿತೆ ಅಥವಾ ಪ್ರಾದೇಶಿಕ ಅಸ್ಮಿತೆಗಳು ಪ್ರಧಾನವಾಗಿ ಕಾಣುತ್ತವೆ. ಅಂತಿಮವಾಗಿ ಇದು ಮೈಸೂರಿನಲ್ಲಿ ಅತ್ಯಾಚಾರ ಹಾಗೂ ಕೊಲೆಗೀಡಾದ 9 ವರ್ಷದ ಅಲೆಮಾರಿ ಬಾಲಕಿಯ ಘಟನೆಯಂತೆ ವಿಸ್ಮೃತಿಗೆ ಜಾರಿಬಿಡುತ್ತದೆ.

ರಾಜಕೀಯ ಪಕ್ಷಗಳಿಗೆ ಈ ರೀತಿಯ ಘಟನೆಗಳು ಮುಖ್ಯ ಎನಿಸುವುದೇ ಇಲ್ಲ. ಆದರೆ, ವಿಶಾಲ ಸಮಾಜ ಹೀಗೆ ಸಮೀಪದೃಷ್ಟಿಯಿಂದ (ಮಯೋಪಿಕ್ ವ್ಯೂ) ನೋಡುವುದು ಸಾಧ್ಯವಿಲ್ಲ. ಸಮಾಜಶಾಸ್ತ್ರೀಯ ನೆಲೆಯಲ್ಲಿ, ಮನೋವೈಜ್ಞಾನಿಕ ಆಯಾಮದಲ್ಲಿ ಇಂತಹ ಘಟನೆಗಳನ್ನು ವಿಶ್ಲೇಷಿಸಬೇಕಿದೆ. ಇದೇ ರೀತಿಯ ಘಟನೆಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಅತ್ಯಾಚಾರಕ್ಕೂ, ಕೊಲೆಗಡುಕತನಕ್ಕೂ, ದೌರ್ಜನ್ಯಗಳಿಗೂ ವಯೋಮಿತಿ ಇಲ್ಲದಂತಹ ಒಂದು ವಿಷಮ ಪರಿಸ್ಥಿತಿಯಲ್ಲಿ ಭಾರತೀಯ ಸಮಾಜ ವೇಗದ ಗತಿಯಲ್ಲಿ ಸಾಗುತ್ತಿರುವುದಕ್ಕೆ ಈ ಮೂರು ಘಟನೆಗಳು ಒಂದು ನಿದರ್ಶನವಷ್ಟೆ.

ಇದು ಏಕಾಏಕಿ ಪ್ರಯೋಗಶಾಲೆಯಲ್ಲಿ ಉಗಮಿಸುವ ಲಕ್ಷಣಗಳಲ್ಲ. ಅಥವಾ ಬರೀ ಒಂದು ಸಮಾಜ ಅಥವಾ ಸಮುದಾಯದ ಒಳಗೆ ಹುಟ್ಟಿಕೊಳ್ಳುವ ಅವಲಕ್ಷಣಗಳೂ
ಅಲ್ಲ. ನಮ್ಮ ಸಮಾಜ ಎಲ್ಲೋ ಎಡವುತ್ತಿದೆ, ತನ್ನ ಮಾನವೀಯ ಮೌಲ್ಯ ಒತ್ತಟ್ಟಿಗಿರಲಿ, ಮಾನವೀಯ ಸ್ಪರ್ಶ ವನ್ನೇ ಕಳೆದುಕೊಳ್ಳುತ್ತಿದೆ. ಇದು ಭವಿಷ್ಯದಲ್ಲಿ ಸಾಮಾಜಿಕ ಅಧಃಪತನಕ್ಕೆ ಕಾರಣವಾಗುತ್ತದೆ. ಈ ಅಪಾಯವನ್ನು ನೋಡುವವರಾರು? ಸಾಂಸ್ಥಿಕವಾಗಿ ಅಂತಹ ಒಂದು ಭೂಮಿಕೆಯನ್ನೇ ನಾವು ಸಿದ್ಧಪಡಿಸಿಲ್ಲ. ಆದರೆ, ಸಮಾಜ ಕುರುಡಾಗುವುದು ಸರಿಯಲ್ಲ. ಈ ಮನೋವೈಕಲ್ಯ, ದೌರ್ಜನ್ಯ, ಕ್ರೌರ್ಯಗಳಿಗೆ ಕಾರಣಗಳನ್ನು ಮನೋವೈಜ್ಞಾನಿಕ ಚೌಕಟ್ಟಿನಲ್ಲಿ ಪರಿಶೋಧಿಸಿ, ವಿಶ್ಲೇಷಿಸಿ, ವ್ಯಾಖ್ಯಾನಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಬೇಕಿದೆ.

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದು ಸಿನಿಕ ರಾಗದೆ, ಈ ಜವಾಬ್ದಾರಿ ಯಾರದು ಎಂಬ ಆತ್ಮಾವಲೋಕನಕ್ಕೆ ಮುಂದಾಗುವುದು ಅನಿವಾರ್ಯ. ನಾಗರಿಕತೆಯ ಪ್ರತಿನಿಧಿಗಳಾಗಿ ಇದು ನಮ್ಮ ಕರ್ತವ್ಯ.

ಅಮೆರಿಕ ಮತ್ತು ಇಸ್ರೇಲ್ ಮೈತ್ರಿಕೂಟ ಇರಾನ್ ವಿರುದ್ಧ ಆರಂಭಿಸಿರುವ ಯುದ್ಧ ಇಡೀ ಜಗತ್ತನ್ನು ಆತಂಕಕ್ಕೆ ಸಿಲುಕಿಸಿದೆ. ಅದು ಸಹಜ. ಯುದ್ಧ ದೂರದಲ್ಲಿ ನಡೆದರೂ ಅದರ ಬಿಸಿ ನಮಗೂ ತಟ್ಟುತ್ತದೆ. ಆಂತರಿಕ ರಾಜಕೀಯ ಸಂಕಥನಗಳು ದಿಕ್ಕುತಪ್ಪಿರುವುದನ್ನೂ ಯುದ್ಧಕ್ಕೆ ಸಂಬಂಧಿಸಿದಷ್ಟೇ ಎಚ್ಚರ ಹಾಗೂ ಆತಂಕದಿಂದ ಗಮನಿಸಬೇಕು. ನೈತಿಕತೆಯ ಕಟ್ಟಡ ಒಳಗಿಂದೊಳಗೇ ಶಿಥಿಲಗೊಳ್ಳುವುದು ವ್ಯಕ್ತಿ ಹಾಗೂ ಸಮಷ್ಟಿಯ ಆರೋಗ್ಯಕ್ಕೆ ಒಳ್ಳೆಯದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.