ಸೋಮವಾರ, ಡಿಸೆಂಬರ್ 16, 2019
17 °C
ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಪರಿಹಾರ ಅರಸುವವರು ತ್ಯಾಜ್ಯ ಉತ್ಪಾದನೆ ತಡೆಯಲು ಇರುವ ದಾರಿಗಳತ್ತ ಗಮನ ಕೇಂದ್ರೀಕರಿಸಬೇಕಾಗಿದೆ

ಸಂಕುಚಿತ ಪರಿಸರ ಪ್ರಜ್ಞೆ

ಎಚ್.ಕೆ.ಶರತ್ Updated:

ಅಕ್ಷರ ಗಾತ್ರ : | |

Prajavani

ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಪ್ಲಾಸ್ಟಿಕ್‌ಮುಕ್ತ ಭಾರತ’ ವಿಷಯ ಕುರಿತ ಪ್ರಬಂಧ ಸ್ಪರ್ಧೆಗೆ ಬಂದಿದ್ದ ಪ್ರಬಂಧಗಳನ್ನು ಓದುವ ಅವಕಾಶ ಕೆಲ ದಿನಗಳ ಹಿಂದೆ ಒದಗಿತ್ತು. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಸಮಸ್ಯೆಯನ್ನು ವಿದ್ಯಾರ್ಥಿಗಳು ಹೇಗೆಲ್ಲ ಗ್ರಹಿಸಿರಬಹುದು ಎನ್ನುವ ಕುತೂಹಲದೊಂದಿಗೆ, ಸುಮಾರು ಮೂವತ್ತು ಪ್ರಬಂಧಗಳನ್ನು ಒಂದೊಂದಾಗಿ ಓದತೊಡಗಿದಂತೆ ನಿರಾಶೆ ಕವಿಯುವುದರ ಜೊತೆಗೆ, ಕೆಲ ವಿದ್ಯಾರ್ಥಿಗಳು ಸೂಚಿಸಿದ್ದ ಸಲಹೆಗಳನ್ನು ಓದಿ ಆಘಾತವೂ ಆಯಿತು.

ಬಹುಪಾಲು ವಿದ್ಯಾರ್ಥಿಗಳು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಸಮಸ್ಯೆಯನ್ನು ಇಡೀ ವ್ಯವಸ್ಥೆಯ ವೈಫಲ್ಯವಾಗಿ ಪರಿಭಾವಿಸದೆ, ಇದೊಂದು ವ್ಯಕ್ತಿಗತ ಸಮಸ್ಯೆ ಎಂಬ ನೆಲೆಗಟ್ಟಿನಲ್ಲೇ ವಿಶ್ಲೇಷಿಸಿದ್ದರು. ‘ಬಳಸಿದ ನಂತರ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡುವುದೇ ಸಮಸ್ಯೆಗೆ ಮೂಲ ಕಾರಣ. ಎಲ್ಲರೂ ತಪ್ಪದೇ ಕಸದಬುಟ್ಟಿಗೆ ಹಾಕಬೇಕು’ ಎನ್ನುವ ಆಗ್ರಹ ಹಲವು ಪ್ರಬಂಧಗಳಲ್ಲಿ ಹೊಮ್ಮಿತ್ತು. ಸ್ವಚ್ಛ ಭಾರತ ಅಭಿಯಾನ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತೋರಿಸುತ್ತಿರುವ ಕಾಳಜಿ ಕುರಿತು ವಿದ್ಯಾರ್ಥಿಗಳಲ್ಲಿ ಮೆಚ್ಚುಗೆ ಇರುವುದು ಹಲವಾರು ಪ್ರಬಂಧಗಳಲ್ಲಿ ವ್ಯಕ್ತವಾಗಿತ್ತು. ‘ಪ್ಲಾಸ್ಟಿಕ್ ನಿಷೇಧಿಸಿದರಷ್ಟೇ ಸಾಲದು, ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಸುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎನ್ನುವ ಸಲಹೆಯನ್ನು ವಿದ್ಯಾರ್ಥಿಯೊಬ್ಬ ತನ್ನ ಪ್ರಬಂಧದಲ್ಲಿ ಮಂಡಿಸಿದ್ದ.

ತ್ಯಾಜ್ಯ ನಿರ್ವಹಣೆ ಎಂಬ ಬಹು ಆಯಾಮದ ಸಮಸ್ಯೆಯನ್ನು ತೀರಾ ಸಂಕುಚಿತಗೊಳಿಸಿ, ಈ ಮಕ್ಕಳನ್ನು ಸಮಸ್ಯೆಯ ಬೇರುಗಳತ್ತ ಸುಳಿಯಗೊಡದಂತೆ ನೋಡಿಕೊಳ್ಳುತ್ತಿರುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಜರೂರತ್ತು ಇದೆ. ತ್ಯಾಜ್ಯ ನಿರ್ವಹಣೆ ಸಮಸ್ಯೆಯನ್ನು ಈ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಗ್ರಹಿಸಿರುವಂತೆಯೇ ಸಮಾಜವೂ ಅರ್ಥೈಸಿ
ಕೊಂಡಿರುವುದನ್ನು ಅಲ್ಲಗಳೆಯುವುದಕ್ಕೆ ಬಲವಾದ ಕಾರಣಗಳೂ ಇಲ್ಲ.

ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಪರಿಹಾರ ಅರಸುವವರು ಮೊದಲು ಗಮನ ಕೇಂದ್ರೀಕರಿಸಬೇಕಿರುವುದು ತ್ಯಾಜ್ಯ ಉತ್ಪಾದನೆ ತಡೆಯಲು ಇರುವ ದಾರಿಗಳತ್ತ. ನಮ್ಮ ಆರ್ಥಿಕತೆಯ ಚಾಲಕಶಕ್ತಿಯಾಗಿರುವ ಕೊಳ್ಳುಬಾಕ ಮನಃಸ್ಥಿತಿಯನ್ನು ಕಿತ್ತೊಗೆಯಲು ಸಾಧ್ಯವೇ? ಕೊಳ್ಳುಬಾಕ ಸಂಸ್ಕೃತಿಯ ಕೊಡುಗೆಯಾದ ಸರಕುಪ್ರಧಾನ ಜೀವನಶೈಲಿಯನ್ನು ಬದಲಿಸಿಕೊಳ್ಳಲು ನಾವು ಸಿದ್ಧರಿದ್ದೇವೆಯೇ? ಸರಕುಗಳ ಉತ್ಪಾದನೆ, ಖರೀದಿ ಮತ್ತು ಬಳಕೆ ಹೆಚ್ಚಿದಂತೆಲ್ಲ ತ್ಯಾಜ್ಯ ಉತ್ಪಾದನೆಯೂ ಏರುವುದು ಸಹಜವಲ್ಲವೇ? ಸರಳತೆಗೆ ನಮ್ಮ ಬದುಕಿನಲ್ಲಿ ಇರಬೇಕಾದ ಸ್ಥಾನಮಾನ ನಗಣ್ಯವಾಗಿರುವಾಗ, ತ್ಯಾಜ್ಯ ಉತ್ಪಾದನೆಗೆ ಕಡಿವಾಣ ಹಾಕುವ ದಾರಿಗಳು ತೆರೆದುಕೊಳ್ಳಲು ಹೇಗೆ ಸಾಧ್ಯ?

ಮರುಬಳಕೆ ಸಾಧ್ಯವಿಲ್ಲದ, ಮಣ್ಣಿನಲ್ಲಿ ಬೇಗ ಕರಗದ ತ್ಯಾಜ್ಯಗಳ ಉತ್ಪತ್ತಿ ಪ್ರಮಾಣ ಕಡಿಮೆಗೊಳಿಸುವುದು ನಂತರದ ಆದ್ಯತೆಯಾಗಬಹುದು. ತ್ಯಾಜ್ಯದ ಮರುಬಳಕೆ ಮತ್ತು ಸಮರ್ಪಕ ವಿಲೇವಾರಿಗೆ ಅಗತ್ಯವಿರುವ ನಿರ್ವಹಣಾ ವ್ಯವಸ್ಥೆ ನಮ್ಮಲ್ಲಿ ಇದೆಯೇ? ಅಂತಹದ್ದೊಂದು ವ್ಯವಸ್ಥೆ ನಿರ್ಮಿಸುವ ಇಚ್ಛಾಶಕ್ತಿಯನ್ನುನಮ್ಮನ್ನು ಆಳುವವರು ಪ್ರದರ್ಶಿಸುತ್ತಿದ್ದಾರೆಯೇ? ಅದಕ್ಕೆ ನಾವಾದರೂ ಆಗ್ರಹಿಸುತ್ತಿದ್ದೇವೆಯೇ? ಈ ನಿಟ್ಟಿನಲ್ಲಿ ಕೆಲವೊಮ್ಮೆ ಸ್ಥಳೀಯ ಸಂಸ್ಥೆಗಳು ಕಾರ್ಯೋನ್ಮುಖವಾದರೆ ನಮ್ಮ ಸ್ಪಂದನೆ ಸಂವೇದನಾಶೀಲವಾಗಿರುವುದೇ? ತ್ಯಾಜ್ಯ ನಿರ್ವಹಣೆಗೆ ಬೇಕಿರುವ ವ್ಯವಸ್ಥಿತ ಜಾಲದ ಅನುಪಸ್ಥಿತಿ ಎದ್ದು ಕಾಣುತ್ತಿದ್ದರೂ, ಕಸವನ್ನು ಡಸ್ಟ್‌ಬಿನ್‌ಗೆ ಎಸೆದರೆ ಅಲ್ಲಿಗೆ ಎಲ್ಲವೂ ಮುಗಿಯಿತೆಂಬ ಧೋರಣೆ ತಳೆಯುವುದು ಏನನ್ನು ಪ್ರತಿನಿಧಿಸುತ್ತದೆ?

ತಮ್ಮ ಉತ್ಪನ್ನಗಳಿಂದ ರೂಪುಗೊಳ್ಳುವ ತ್ಯಾಜ್ಯವನ್ನು ನಿರ್ವಹಿಸುವ ಹೊಣೆಯನ್ನು ಆಯಾ ಉತ್ಪನ್ನ ತಯಾರಿಕಾ ಸಂಸ್ಥೆಗಳಿಗೇ ಸರ್ಕಾರ ವಹಿಸಬಾರದೇಕೆ? ತಮ್ಮ ಉತ್ಪನ್ನ ಮಾರಾಟ ಜಾಲದ ಮೂಲಕವೇ ತಾವು ಉತ್ಪಾದಿಸುವ ತ್ಯಾಜ್ಯ ಸಂಗ್ರಹಿಸಿ ಮರುಬಳಕೆ ಮಾಡಲು ಆಯಾ ಸಂಸ್ಥೆಗಳು ಮುಂದಾದರೆ, ಅಷ್ಟರಮಟ್ಟಿಗೆ ಸಮುದಾಯ ಹಂತದ ತ್ಯಾಜ್ಯ ನಿರ್ವಹಣೆ ಪ್ರಕ್ರಿಯೆ ಸರಳವಾಗುವುದಿಲ್ಲವೇ?

ಶುದ್ಧ ಕುಡಿಯುವ ನೀರು, ಶುದ್ಧ ಗಾಳಿಯನ್ನು ಪಡೆಯುವ ನಿಟ್ಟಿನಲ್ಲಿ ಸುಸ್ಥಿರ ಬದುಕಿನ ಮಾದರಿಗಳತ್ತ ಚಿತ್ತ ಹರಿಸಬೇಕಿದ್ದ ನಮ್ಮ ಆದ್ಯತೆಗಳು ಬದಲಾಗಿಲ್ಲ. ಅಂಥ ಲಕ್ಷಣಗಳೂ ಗೋಚರಿಸದಿರುವುದು ವರ್ತಮಾನದ ದುರಂತವೂ ಹೌದು. ಸಂಪತ್ತಿನ ಕ್ರೋಡೀಕರಣದಲ್ಲೇ ಬದುಕಿನ ಯಶಸ್ಸನ್ನು ಅರಸುತ್ತಿರುವ ನಮ್ಮಲ್ಲಿ, ಪರಿಸರದ ಹಿತದಲ್ಲಿ ನಮ್ಮ ಒಳಿತೂ ಅಡಗಿದೆ ಎಂಬ ಪ್ರಜ್ಞೆ ಮೂಡುವ ಹೊತ್ತಿಗೆ ಎಲ್ಲವೂ ನಮ್ಮ ಕೈಮೀರಿ ಹೋಗುವ ಸಾಧ್ಯತೆ ನಿಚ್ಚಳವಾಗುತ್ತಿದೆ.

ಪರಿಸರವನ್ನು ಮಕ್ಕಳು ವಿಶಾಲ ಅರ್ಥದಲ್ಲಿ ಗ್ರಹಿಸಲು ಬೇಕಿರುವ ತಿಳಿವಳಿಕೆ ಬಿತ್ತುವ ಜರೂರತ್ತು ಖಂಡಿತ ಇದೆ. ಕಸ ಗುಡಿಸುವುದು, ಗಿಡ ನೆಡುವುದರಲ್ಲೇ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯಯಿಸುತ್ತಿರುವ ಜನನಾಯಕರು, ಪರಿಸರದ ಹಿತ ಕಾಯಲು ಅಗತ್ಯವಿರುವ ನೀತಿ-ನಿಯಮಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಿ. ಜನಸಮೂಹದಿಂದಲೂ ಇಂತಹದ್ದೊಂದು ಆಗ್ರಹ ಹೊರ
ಹೊಮ್ಮಲಿ. ಇದು ಸಾಧ್ಯವಾಗದೇ ಹೋದಲ್ಲಿ, ವಿನಾಶದೆಡೆಗಿನ ನಮ್ಮ ಪಯಣಕ್ಕೆ ಮತ್ತಷ್ಟು ತೀವ್ರತೆ ದಕ್ಕುವುದೇ ಹೊರತು, ಬದುಕು ಸಹನೀಯವಾಗಲಾರದು.

ಪ್ರತಿಕ್ರಿಯಿಸಿ (+)