ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮಗುವಿನ ಹೆಸರೇ ‘ಇಂದು’!

Last Updated 7 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯ ಡಾ.ತೇಜಸ್ವಿ ಕಟ್ಟೀಮನಿ ಅವರು ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ‘ಶಿಕ್ಷಕರಿಂದಲೇ ಶಿಕ್ಷಣ ವ್ಯವಸ್ಥೆ ಹಾಳಾಗಿದೆ’ ಎಂದು ಹೇಳಿದ್ದಾರೆ. ಇಂತಹದ್ದೊಂದು ಶೀರ್ಷಿಕೆ ಪಡೆದ ಈ ವರದಿಯು ಅವರು ಹೇಳಿದ ಇತರ ಅಂಶಗಳನ್ನು ಗೌಣವಾಗಿಸಿ ಬಿಟ್ಟಿತು. ಮುಂದೆ ಅವರು, ‘ಶಿಕ್ಷಕರ ಅರ್ಪಣೆ ಮತ್ತು ತ್ಯಾಗ ಮನೋಭಾವದ ಕೊರತೆಯಿಂದ ನಿರೀಕ್ಷೆಗೆ ತಕ್ಕಷ್ಟು ಯಶಸ್ಸು ಸಾಧಿಸಲಾಗಿಲ್ಲ’ ಎನ್ನುತ್ತಾ, ‘ಶಿಕ್ಷಕರು ಮನಸ್ಸು ಮಾಡಿದರೆ ಹಣಕಾಸಿನ ನೆರವಿಲ್ಲದೆಯೂ ಶೈಕ್ಷಣಿಕ ಕ್ರಾಂತಿ ಸಾಧ್ಯ’ ಎಂದು ಆಶಿಸಿದ್ದಾರೆ.

ಕೇಂದ್ರ ಸಚಿವ ಸಂಪುಟದ ಅನುಮೋದನೆಯನ್ನು ಪಡೆದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಕರ ಬಗ್ಗೆ, ‘ಶಿಕ್ಷಕರು ನಿಜವಾಗಿಯೂ ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುತ್ತಾರೆ. ಆದ್ದರಿಂದ ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತಾರೆ... ಆದರೆ ಇವತ್ತು ಶಿಕ್ಷಕರ ತರಬೇತಿ, ನೇಮಕಾತಿ, ಅಭಿವೃದ್ಧಿ, ಸೇವಾ ಸ್ಥಿತಿ ಮತ್ತು ಸಬಲೀಕರಣವು ಅಪೇಕ್ಷಿತ ಮಟ್ಟದಲ್ಲಿ ಇಲ್ಲ. ಇದರಿಂದಾಗಿ, ಶಿಕ್ಷಕರ ಗುಣಮಟ್ಟ ಮತ್ತು ಪ್ರೇರಣೆ ನಿರೀಕ್ಷಿತ ಮಟ್ಟವನ್ನು ಮುಟ್ಟುತ್ತಿಲ್ಲ....’ ಎಂದು ಹೇಳಿದೆ. ಯಾವ ಸ್ಥಿತಿಗಳಿಂದಾಗಿ ಶಿಕ್ಷಕರ ಗುಣಮಟ್ಟ ಕುಸಿದಿದೆಯೋ ಅವುಗಳನ್ನು ಸುಧಾರಿಸುವ ಶಿಫಾರಸುಗಳೂ ಹೊಸ ಶಿಕ್ಷಣ ನೀತಿಯಲ್ಲಿವೆ.

ಶಿಕ್ಷಕರ ಶಿಕ್ಷಣ, ತರಬೇತಿ, ನೇಮಕಾತಿಯ ಗುಣಮಟ್ಟವನ್ನು ಹೆಚ್ಚಿಸುವ ಇತರ ಸಲಹೆಗಳೊಂದಿಗೆ ಇಲ್ಲಿರುವ ಬಹುಮುಖ್ಯವಾದ ಶಿಫಾರಸು ಎಂದರೆ, ‘ಈಗಿನ ಹಾಗೆ ಬೋಧನೆಯಲ್ಲದ ಚಟುವಟಿಕೆಗಳ ಮೇಲೆ ಶಿಕ್ಷಕರು ಸಮಯ ಕಳೆಯುವುದನ್ನು ತಪ್ಪಿಸಲು, ಅವರನ್ನು ಅಂಥ ಕೆಲಸಗಳಿಗೆ ನೇಮಿಸಲಾಗುವುದಿಲ್ಲ. ಮುಖ್ಯವಾಗಿ ಚುನಾವಣಾ ಕಾರ್ಯ, ಬಿಸಿಯೂಟ ತಯಾರಿಕೆ, ಇತರ ಕಠಿಣವಾದ ಆಡಳಿತಾತ್ಮಕ ಕಾರ್ಯಗಳಿಂದ ಅವರನ್ನು ಮುಕ್ತಗೊಳಿಸಲಾಗುವುದು...’ ಎಂಬುದು. ಇದನ್ನು ಶಿಕ್ಷಕರು ಸ್ವಾಗತಿಸಬೇಕು, ಇದರ ಅನುಷ್ಠಾನಕ್ಕಾಗಿ ಹಟ ಹಿಡಿಯಬೇಕು.

ಯಾವುದೇ ಕಾಲದಲ್ಲಿ ಯಾವುದೇ ಕ್ಷೇತ್ರದಲ್ಲಿ ಎಲ್ಲರೂ ಒಳ್ಳೆಯವರೇ ಇರುವುದಿಲ್ಲ, ಎಲ್ಲರೂ ಅಯೋಗ್ಯರೇ ಇರುವುದಿಲ್ಲ. ಶಿಕ್ಷಕ ವಲಯ ಇದಕ್ಕೆ ಹೊರತಲ್ಲ. ಇಡೀ ಶಿಕ್ಷಕ ಸಮುದಾಯಕ್ಕೆ ಅವಮಾನವಾಗುವಂಥ ಹೇಳಿಕೆಯನ್ನು ಕೊಟ್ಟಾಗ ಶಿಕ್ಷಕರ ಸಂಘಟನೆಗಳು ಪ್ರತಿಭಟಿಸುವುದು ನ್ಯಾಯವೇ. ಆದರೂ ಎಲ್ಲ ಶಿಕ್ಷಕರು ತಮ್ಮ ಕರ್ತವ್ಯದ ಪೂರ್ಣ ಹೊಣೆ ಹೊರುತ್ತಿಲ್ಲ ಎಂಬುದು ಬೇರೆಯವರಿಗಿಂತ ಶಿಕ್ಷಕ ಸಮುದಾಯಕ್ಕೇ ಹೆಚ್ಚು ಗೊತ್ತಿದೆ. ಶಿಕ್ಷಕರ ಪ್ರತಿನಿಧಿಗಳು ಅವರ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಆದರೆ ಶಿಕ್ಷಕರು ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಅವರು ಸುಧಾರಣೆಗಾಗಿ ಹೋರಾಡುತ್ತಿರುವಾಗ, ತಾವು ಮಾತ್ರ ತಮ್ಮ ಕರ್ತವ್ಯವನ್ನು ಕುಂದುಕೊರತೆಗಳ ನಡುವೆಯೂ ಪರಿಪೂರ್ಣವಾಗಿ ನಿಭಾಯಿಸುತ್ತಿರಬೇಕು. ತಾವೂ ಹೋರಾಟಗಾರರಾಗಿದ್ದರೆ ಎರಡೂ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಹೋರಾಟದ ಕಾರಣಕ್ಕಾಗಿ ತಮ್ಮ ಕರ್ತವ್ಯವನ್ನು ಉಪೇಕ್ಷಿಸಬಾರದು. ಶಿಕ್ಷಕರ ಹೋರಾಟಗಳಲ್ಲಿ ಶಿಕ್ಷಕರ ಸವಲತ್ತಿನ ವಿಚಾರವೇ ಹೆಚ್ಚಾಗಿರುತ್ತದೆ. ಶಿಕ್ಷಣ ಸುಧಾರಣೆಯ ಬೇಡಿಕೆ ಗೌಣವಾಗಿರುತ್ತದೆ. ಇದನ್ನು ಶಿಕ್ಷಕರು ಪ್ರಾಮಾಣಿಕವಾಗಿ ಮನಗಾಣಬೇಕು.

ಶಿಕ್ಷಕಿ ಮತ್ತು ಮತ್ತು ಆಕೆಯ ವಿದ್ಯಾರ್ಥಿಗಳ ನಡುವಿನ ಪ್ರೀತಿಯ, ಕಾಳಜಿಯ, ಫಲಕಾರಿ ಶೈಕ್ಷಣಿಕ ಸಂಬಂಧದ ಬಗ್ಗೆ ‘ಚಂದನ ಚಿಗುರು’ (2001) ಎಂಬ ಪೂರ್ಣಾವಧಿಯ ಚಲನಚಿತ್ರವೊಂದನ್ನು ನಾನು ಬರೆದು, ನಿರ್ದೇಶಿಸಿದ್ದೆ. ಈ ಚಿತ್ರದಲ್ಲಿ, ಭಾರತಿ ಎಂಬ ಶಿಕ್ಷಕಿ ಪರೀಕ್ಷೆಗಳು ಘೋಷಣೆಯಾದಾಗ ಗಾಬರಿಗೊಳ್ಳುವುದನ್ನು ನೋಡಿ ಪ್ರಾಂಶುಪಾಲರು, ‘ಯಾಕಮ್ಮ ಅಷ್ಟು ಭಯ, ಪರೀಕ್ಷೆಗೆ ಕೂತುಕೊಳ್ಳೋದು ನೀನೋ ನಿನ್ನ ವಿದ್ಯಾರ್ಥಿಗಳೋ’ ಎಂದು ಕೇಳಿದ್ದಕ್ಕೆ ಭಾರತಿ, ‘ನಾನು ಪರೀಕ್ಷೆ ಬರೆಯುವಾಗ ಭಯ ಪಟ್ಟುಕೊಳ್ಳುತ್ತಲೇ ಇರಲಿಲ್ಲ. ಆದರೆ ಈಗ ಪೋಷಕರು ನಮ್ಮ ಮೇಲೆ ವಿಶ್ವಾಸವಿಟ್ಟು ತಮ್ಮ ಮಕ್ಕಳ ಭವಿಷ್ಯವನ್ನು ನಮಗೆ ಒಪ್ಪಿಸಿದ್ದಾರಲ್ಲ, ಅದಕ್ಕೆ ಸ್ವಲ್ಪ ಭಯ’ ಎನ್ನುತ್ತಾಳೆ.

ಗಾಂಧೀಜಿ, ನೆಹರೂ, ಪಟೇಲ್, ಯು.ಆರ್.ರಾವ್, ಅಬ್ದುಲ್ ಕಲಾಂ, ಕುವೆಂಪು ಎಲ್ಲರನ್ನೂ ಮೂಲಭೂತವಾಗಿ ರೂಪಿಸಿದ್ದು ಪ್ರಾಥಮಿಕ ಶಾಲೆಯ ಶಿಕ್ಷಕರೇ ಎನ್ನುವುದನ್ನು ಮರೆಯಬಾರದು. ಪ್ರಾಥಮಿಕ ಶಾಲೆಯಲ್ಲಿ ನಿಮ್ಮೆದುರಿಗೆ ಕುಳಿತಿರುವ ವಿದ್ಯಾರ್ಥಿಗಳಲ್ಲಿ ಮುಂದೆ ಯಾರು ಏನಾಗುತ್ತಾರೆ ಎಂಬುದು ತಿಳಿದಿರುವುದಿಲ್ಲ. ಹೀಗಾಗಿ, ಎಲ್ಲರ ಭವಿಷ್ಯವನ್ನು ಉತ್ತಮಗೊಳಿಸುವುದಷ್ಟೇ ಶಿಕ್ಷಕರ ಕೆಲಸವಾಗಬೇಕು.

ಸರ್ಕಾರಗಳು, ಅಧಿಕಾರಶಾಹಿ, ವ್ಯವಸ್ಥೆ ಯಾವುದೂ ನೂರಕ್ಕೆ ನೂರು ಸಾಚಾ ಆಗಲು ಸಾಧ್ಯವೇ ಇಲ್ಲ. ಯಾವುದೇ ಪಕ್ಷದ ನೇತೃತ್ವದ ಸರ್ಕಾರವಿರಲಿ ಒಂದಿಲ್ಲೊಂದು ಐಬು ಇದ್ದೇ ಇರುತ್ತದೆ. ಹೊಸ ರಾಷ್ಟ್ರೀಯ ನೀತಿಯನ್ನು ಎಲ್ಲರೂ ಅಧ್ಯಯನ ಮಾಡಬೇಕು. ಅದರಲ್ಲಿರುವ ಗುಣಾತ್ಮಕ ಅಂಶಗಳ ಶೀಘ್ರ ಅನುಷ್ಠಾನಕ್ಕಾಗಿ ಹೋರಾಡಬೇಕು. ಆದರೆ, ಇದೆಲ್ಲಾ ಸರಿಹೋದ ನಂತರ ನಾವು ಮಕ್ಕಳ ಭವಿಷ್ಯವನ್ನು ರೂಪಿಸುತ್ತೇವೆ ಎಂದರೆ ಆದೀತೇ?

ಲ್ಯಾಟಿನ್ ಅಮೆರಿಕದ ಪ್ರತಿಭಾವಂತ ಶಿಕ್ಷಣ ತಜ್ಞೆ ಗಾಬ್ರಿಯಲಾ ಮೀಸ್ತ್ರಲ್‌ ಹೀಗೆ ಹೇಳುತ್ತಾರೆ: ‘ಯಾವುದೇ ಸಂಗತಿಗಳು ಕಾಯಬಹುದು, ಆದರೆ ಮಗು ಕಾಯುವುದಿಲ್ಲ. ಮಗುವಿನ ಭವಿಷ್ಯವನ್ನು ರೂಪಿಸಬೇಕಾಗಿರುವುದು ಇಂದು. ಹೀಗಾಗಿ, ನಾಳೆ ಎಂದು ಹೇಳುವ ಹಾಗಿಲ್ಲ. ಮಗುವಿನ ಹೆಸರೇ ಇಂದು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT