ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋ ಕ್ಲಿಕ್‌ ಪ್ಲೀಸ್‌...

ಪಕ್ಷಿಗಳನ್ನು ನಾವು ಗಮನಿಸುವ ವಿಧಾನವೇ ಬದಲಾಗಬೇಕಿದೆ
Last Updated 4 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ರಾಜ್ಯಕ್ಕೆ ಬರುವ ವಲಸೆ ಪಕ್ಷಿಗಳ ಸಂಖ್ಯೆ ಗಣನೀಯ ವಾಗಿ ಕುಸಿದಿರುವುದು ವರದಿಯಾಗಿದೆ (ಪ್ರ.ವಾ., ಜ. 30). ಚಳಿಗಾಲ ಬಂತೆಂದರೆ ಪಕ್ಷಿಪ್ರಿಯರಿಗೆ ಮತ್ತು ಅವುಗಳೊಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಬಯಸುವವರಿಗೆ ಹಬ್ಬ. ಕೆಲವರಿಗೆ ದೂರದೂರದಿಂದ ಹಾರಿಬರುವ ವಿವಿಧ ಪಕ್ಷಿಗಳನ್ನು ಕಣ್ತುಂಬಿ
ಕೊಳ್ಳುವ ಮತ್ತು ಇನ್ನು ಕೆಲವರಿಗೆ ಅವುಗಳ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸೈ ಎನಿಸಿಕೊಳ್ಳುವ ತವಕ. ಆದರೆ ಪಕ್ಷಿಗಳಿಗೆ ಹೇಗೆ ಅರ್ಥವಾಗಬೇಕು ಮನುಷ್ಯನ ಈ ಒಣ ವ್ಯವಹಾರ? ಅವುಗಳೋ ಸರಳಜೀವಿಗಳು. ಜಾತಿ-ದೇಶದ ಗಡಿ ಗಳನ್ನು ದಾಟಿ ಬದುಕುತ್ತಿರುವ ಶ್ರೇಷ್ಠ ಜೀವಿಗಳು. ಅವುಗಳಿಗೆ ಬೇಕಿರುವುದು ಋತುಮಾನಕ್ಕೆ ಅನುಗುಣ ವಾಗಿ ಒಂದಿಷ್ಟು ಆಹಾರ, ಮರಿ ಮಾಡಲು ಯೋಗ್ಯ ವಾತಾವರಣ, ಜೊತೆಗಿಷ್ಟು ಖಾಸಗಿತನ ಅಷ್ಟೇ!

ಇಷ್ಟಿದ್ದರೆ ಪಕ್ಷಿಗಳನ್ನು ನೀವು ಆಹ್ವಾನಿಸುವುದೇ ಬೇಕಿಲ್ಲ. ಈ ಮೂಲ ಸೌಕರ್ಯಗಳು ಇರುವಲ್ಲಿ ಪಕ್ಷಿಗಳು ಸ್ವಾಭಾವಿಕವಾಗಿ ಬಂದು ಗುಂಪಾಗಿ ನೆಲೆ ನಿಲ್ಲುತ್ತವೆ. ಇಂತಹ ಪ್ರದೇಶಗಳನ್ನು ಸರ್ಕಾರಗಳು ಪಕ್ಷಿಧಾಮ ಎಂದು ಘೋಷಿಸಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿ
ಕೊಡುತ್ತವೆ. ಇದೇ ಮುಂದಾಗುವ ದುರಂತದ ಮೊದಲ ಅಧ್ಯಾಯ. ಎಲ್ಲರಿಂದಲೂ ಆದಾಯ ನಿರೀಕ್ಷಿಸುವುದು ಮನುಷ್ಯನ ಅದರಲ್ಲೂ ಸರ್ಕಾರದ ಸಹಜ ಗುಣವೇ ಆದರೂ ಇಂತಹ ಪಕ್ಷಿಧಾಮ ಮತ್ತು ವನ್ಯಧಾಮಗಳಲ್ಲಿ ಪ್ರವಾಸಿಗರಿಗೆ ಅನುಮತಿ ನೀಡುವುದು ಉಚಿತವಲ್ಲ. ಏಕೆಂದರೆ ಪಕ್ಷಿಗಳನ್ನು ಹೇಗೆ ನೋಡಬೇಕೆಂಬುದೇ ನಮಗೆ ಇನ್ನೂ ಅರ್ಥವಾಗಿಲ್ಲ.

ಪಕ್ಷಿಗಳನ್ನು ಗಮನಿಸಬೇಕು, ಅವುಗಳ ಬಗ್ಗೆ ಅಧ್ಯಯನ ಮಾಡಬೇಕು ಎಂಬ ಯಾವ ಇರಾದೆಯೂ ಶೇ 98ರಷ್ಟು ಪ್ರವಾಸಿಗರಿಗೆ ಇರುವುದೇ ಇಲ್ಲ. ಪ್ರವಾಸಿಗರು ಬಂದಾಗ ಅವರಿಗೆ ಪಕ್ಷಿಗಳು ಕಾಣಬೇಕು ಮತ್ತು ಅವರು ಫೋಟೊ ತೆಗೆದುಕೊಳ್ಳಲು ಅವು ಒಳ್ಳೆಯ ಪೋಸ್ ಕೊಡಬೇಕು ಅಷ್ಟೇ! ಒಂದೊಮ್ಮೆ ಪಕ್ಷಿಧಾಮಕ್ಕೆ ಬಂದು‌ ಪಕ್ಷಿಗಳು ಕಾಣದೇ ಗೂಡುಗಳಲ್ಲಿ ಮರೆಯಾಗಿ ಕೂತಿದ್ದರೆ, ಗಲಾಟೆ ಮಾಡಿಯಾದರೂ ಅವುಗಳನ್ನು ಎಬ್ಬಿಸಿ ತಮ್ಮ ಫೋಟೊ ಖಯಾಲಿ ತೀರಿಸಿ ಕೊಳ್ಳುವ ಹಲವು ಪ್ರವಾಸಿಗರು ನಮಗೆ ಕಾಣುತ್ತಾರೆ.

ಇದಲ್ಲದೆ, ಪಕ್ಷಿಗಳನ್ನು ನೋಡಲು ಪಕ್ಷಿಧಾಮಕ್ಕೇ ಹೋಗಬೇಕು ಎನ್ನುವುದು ದೇವರನ್ನು ನೋಡಲು ದೇವಸ್ಥಾನಕ್ಕೇ ಹೋಗಬೇಕು ಎನ್ನುವಷ್ಟೇ ತಪ್ಪು ಭಾವನೆ. ಮೊದಲು ನಮ್ಮ ಮನೆಯ ಸುತ್ತಮುತ್ತಲಿನ ಪಕ್ಷಿಗಳನ್ನು ಅವುಗಳ ಖಾಸಗಿತನಕ್ಕೆ ಧಕ್ಕೆ ಬಾರದಂತೆ ಗಮನಿಸುವುದನ್ನು ಕಲಿಯಬೇಕು. ನಂತರ ಪಕ್ಷಿ
ಧಾಮಗಳಿಗೆ ಹೋದಾಗ ಅಲ್ಲಿನ ಪಕ್ಷಿಗಳ ವೈಯಕ್ತಿಕತೆಯನ್ನು ಗೌರವಿಸುವುದನ್ನು ಕಲಿಯಬೇಕು. ನಮ್ಮ ಫೋಟೊ ತೆಗೆಯುವ ತೆವಲಿಗೆ ಪಕ್ಷಿಗಳ ವೈಯಕ್ತಿಕ ಜೀವನದ ಕ್ಷಣಗಳನ್ನು ಹಾಳುಮಾಡಬಾರದು. ಏಕೆಂದರೆ ಪಕ್ಷಿಗಳು ಅತಿಯಾದ ಒತ್ತಡದಲ್ಲಿ ಬದುಕು ಕಟ್ಟಿಕೊಳ್ಳುತ್ತಿವೆ, ನಾವು ಅದನ್ನು ಅರ್ಥಮಾಡಿಕೊಳ್ಳದೆ, ಕಂಡಕಂಡಲ್ಲಿ ಅವು ಕೂತಿದ್ದು, ನಿಂತಿದ್ದು, ಮಲಗಿದ್ದು, ಜೊತೆಗೆ ಮಿಲನ ಕ್ರಿಯೆಯಲ್ಲಿ ತೊಡಗಿದ್ದಾಗಲೂ ಎಡೆಬಿಡದೆ ಫೋಟೊ ಕ್ಲಿಕ್ಕಿಸಿ ಕಾಡುವುದು ತರವೇ?

ಇದರಿಂದ ನಮ್ಮ ರೆಕ್ಕೆಮಿತ್ರರು ಅನುಭವಿಸುವ ಕಿರಿಕಿರಿ ಅವುಗಳಿಗೆ ಮಾತ್ರ ಗೊತ್ತು. ಎಷ್ಟೋ ಬಾರಿ ಗೂಡಿನಲ್ಲಿ ಮರಿಗಳಿಗೆ ಆಹಾರ ನೀಡಬೇಕಿದ್ದ ತಾಯಿ ಹಕ್ಕಿ ಕೊಕ್ಕಿನಲ್ಲಿ ಆಹಾರ ಹಿಡಿದು ಗಂಟೆಗಟ್ಟಲೆ ದೂರದಲ್ಲಿ ಅಸಹಾಯಕವಾಗಿ ಕೂಗುತ್ತಾ ಕೂತಿರುವು ದನ್ನು ಗಮನಿಸಿದ್ದೇನೆ. ಕಾರಣವಿಷ್ಟೇ, ಅದರ ಗೂಡಿನ ಬಳಿ ಫೋಟೊ ತೆಗೆಯಲು ಕೂತಿರುವ ಆಗಂತುಕರು. ಆದ್ದರಿಂದ ಯಾವುದೇ ಪಕ್ಷಿಯನ್ನು ನೋಡುವಾಗ ಮೊದಲು ಅದರ ಖಾಸಗಿತನವನ್ನು ಗೌರವಿಸುವು
ದನ್ನು ಕಲಿಯಬೇಕು. ಗಾಢ ಬಣ್ಣದ ಬಟ್ಟೆ ಧರಿಸುವುದು, ಕಿವಿಗಡಚಿಕ್ಕುವಂತೆ ಶಬ್ದ ಮಾಡುವುದು ಸಲ್ಲದು. ಸಾಧ್ಯವಾದರೆ ಕ್ಯಾಮೆರಾ ಬದಲು ಬೈನಾಕ್ಯುಲರ್‌
ಗಳನ್ನು ಮಾತ್ರ ಬಳಸಲು ನಾವೆಲ್ಲ ಮುಂದಾಗಬೇಕು.

ಇಷ್ಟಕ್ಕೇ ಕೈತೊಳೆದುಕೊಂಡರೆ ಸಾಲದು. ದಿನನಿತ್ಯ ಪಕ್ಷಿಗಳ ಕಳ್ಳಬೇಟೆ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ಜನಸಾಮಾನ್ಯರಾದ ನಾವೆಲ್ಲರೂ‌ ಕಾನೂನಿನ ಚೌಕಟ್ಟಿನಲ್ಲಿ ತಡೆಯಬೇಕು. ಪಕ್ಷಿಗಳ ಆವಾಸವನ್ನು ರಕ್ಷಿಸುವುದು, ಋತುಮಾನದ ಹಣ್ಣಿನ ಸಸಿಗಳನ್ನು ನೆಡುವಂತಹ ಕೆಲಸಗಳನ್ನು ಜನಸಾಮಾನ್ಯರೂ ಮಾಡಬಹುದು. ಭಾರತದ ಕೆಲವು ಬೆರಳೆಣಿಕೆಯಷ್ಟು ಹಳ್ಳಿಗಳಲ್ಲಿ ಇಂದಿಗೂ ಪಟಾಕಿಗಳನ್ನು ಸುಡುವುದು ನಿಷಿದ್ಧ. ಏಕೆಂದರೆ ಆ ಹಳ್ಳಿಗಳ ಪಕ್ಕದಲ್ಲಿರುವ ಪಕ್ಷಿಧಾಮಗಳು! ಇಂತಹ ಉನ್ನತ ಆದರ್ಶಗಳನ್ನು ಎಲ್ಲಾ ಹಳ್ಳಿಗರು ಮೈಗೂಡಿಸಿಕೊಳ್ಳಬೇಕು.

ಪಕ್ಷಿಗಳು ಪರಿಸರ ಆರೋಗ್ಯದ ನೈಸರ್ಗಿಕ ಸೂಚಕಗಳು. ಉತ್ತಮ ಪರಿಸರ ಇರುವೆಡೆ ಅವುಗಳ ಸಂಖ್ಯೆಯೂ ಹೆಚ್ಚು ಇರುತ್ತದೆ. ಯಾವಾಗ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆಯೋ ಅದು ನಮಗೆಲ್ಲಾ ಎಚ್ಚರಿಕೆಯ ಕರೆಗಂಟೆ. ಈ ದಿಸೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಮಾತು ನೆನಪಾಗುತ್ತದೆ: ‘ಪಕ್ಷಿಗಳ ಆವಾಸವನ್ನು ನೀವು ಕಿತ್ತುಕೊಂಡರೆ ಅವು ನಮ್ಮನ್ನು ದೂರದೇ ನಿರ್ಗಮಿಸುತ್ತವೆ. ಆದರೆ ಅವುಗಳ ನಿರ್ಗಮನ ನಮ್ಮ ನಿರ್ಗಮನದ ಮುನ್ನುಡಿ ಅಷ್ಟೇ. ಏಕೆಂದರೆ ಅವು ಬದುಕಲಾಗದ ವಾತಾವರಣದಲ್ಲಿ ನಾವು ಬದುಕಲು ಸಾಧ್ಯವಿಲ್ಲ’.

ಹೀಗಾಗಿ, ಪರಿಸರ ಉಳಿಯದ ವಿನಾ ಪಕ್ಷಿಗಳಿಗೂ ಪಶುಗಳಿಗೂ ಮನುಷ್ಯನಿಗೂ ಉಳಿವಿಲ್ಲ. ಪಕ್ಷಿಗಳು ಮತ್ತು ಪರಿಸರ ಒಂದಕ್ಕೊಂದು ಬೆಸೆದುಕೊಂಡಿವೆ. ಈ ಕೊಂಡಿಗಳಲ್ಲಿಯೇ ಮನುಷ್ಯನ ಭವಿಷ್ಯ ಅಡಗಿದೆ ಎಂಬುದನ್ನು ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT