ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನವೋಲ್ಲಾಸದಿಂದ ನವೋದ್ಯಮ

ಉದ್ದಿಮೆ ಕಟ್ಟುವುದಕ್ಕೆ ಹಣವೊಂದೇ ಮುಖ್ಯವಲ್ಲ...
Last Updated 13 ಜನವರಿ 2022, 19:31 IST
ಅಕ್ಷರ ಗಾತ್ರ

ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರಕ್ಕೆ ಉಪನ್ಯಾಸ ನೀಡಲು ಹೋಗಿದ್ದೆ. ‘ಕೈಗಾರಿಕೆಗಳನ್ನು ಕಟ್ಟುವುದು, ವ್ಯವಸ್ಥಿತವಾಗಿ ನಡೆಸುವುದು ಒಂದು ಕಲೆ. ಅದನ್ನು ಸ್ವಪ್ರಯತ್ನದಿಂದ ಸಾಧಿಸಬಹುದು. ಯುವಕರು ನೌಕರಿಗೆ ಅಲೆಯದೇ ಸ್ವಂತ ಉದ್ಯೋಗ ಆರಂಭಿಸಬೇಕು. ಕಾರ್ಖಾನೆಗಳನ್ನು ಕಟ್ಟಬೇಕು. ಹೊಸ ಉದ್ಯೋಗಗಳನ್ನು ಸೃಷ್ಟಿಸಬೇಕು’ ಎಂದು ಹೇಳುತ್ತಿದ್ದಾಗ ಯುವಕನೊಬ್ಬ ಥಟ್ಟನೇ ಎದ್ದು ನಿಂತು ‘ಸರ್, ಉದ್ಯಮಿಯಾಗಿರಿ, ಕಾರ್ಖಾನೆ ಕಟ್ಟಿರಿ ಎಂದು ಹೇಳುತ್ತಿದ್ದೀರಿ. ನಾವು ಬಡವರು, ನಮಗೆ ಬಂಡವಾಳ ಬೇಕಲ್ಲ?’ ಎಂದು ಕೇಳಿದ. ಅವನ ಧ್ವನಿಯಲ್ಲಿ ಸಿಟ್ಟು ಕಾಣಿಸಿತು.

‘ಗೆಳೆಯನೆ, ದುಡ್ಡು ಇಲ್ಲದವ ಬಡವನಲ್ಲ, ಕನಸು ಇಲ್ಲದವ ಬಡವ ಎಂಬ ಮೌಲಿಕ ಮಾತೊಂದಿದೆ. ಉತ್ಸಾಹ ಕೂಡ ದೊಡ್ಡ ಬಂಡವಾಳ. ಜಗತ್ತಿನ ಎಲ್ಲ ಸಾಧನೆಗಳು ಕನಸು ಮತ್ತು ಉತ್ಸಾಹದಿಂದ ಸಾಧ್ಯವಾಗಿವೆ. ತಾರುಣ್ಯ ಎಂಬುದು ಒಂದು ಮಂತ್ರದಂಡ. ಅದರೊಂದಿಗೆ ದೊಡ್ಡ ಕನಸು ಮೇಳೈಸಿದರೆ ಇನ್ನೊಂದು ವಿಶ್ವವನ್ನೇ ಕಟ್ಟಬಹುದು’ ಎಂದು ಹೇಳಿದಾಗ ಅಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟಿದರು.

‘ಕೈಗಾರಿಕೋದ್ಯಮಿಯಾಗಿ ಬೆಳೆಯಲು ಬಹಳಷ್ಟು ಬಂಡವಾಳ ಬೇಕು. ತಂತ್ರಜ್ಞಾನದ ಅರಿವಿರಬೇಕು. ಕುಟುಂಬದವರ ಪ್ರೋತ್ಸಾಹ ಬೇಕು. ರಾಜಕೀಯ ಬೆಂಬಲ ಬೇಕು, ಅವಕ್ಕೆಲ್ಲ ಏನು ಮಾಡುವುದು’ ಎಂಬ ಚಿಂತೆ ಯುವಕರನ್ನು ಕಾಡುತ್ತಿದೆ. ಉದ್ಯಮಿಯಾಗುವುದು ತಮಗೆ ನಿಲುಕದ ಗುರಿ ಎಂಬ ಹಿಂಜರಿಕೆ ಬಹಳಷ್ಟು ಜನರಲ್ಲಿ ಇದೆ.

ಸ್ಟೀಲ್ ಉದ್ಯಮಿ ಲಕ್ಷ್ಮಿನಿವಾಸ ಮಿತ್ತಲ್ ಅವರು ಓದಿದ್ದು ಬಿ.ಕಾಂ. ರಾಜಸ್ಥಾನದ ಸದಲ್ಪುರ ಅವರು ಹುಟ್ಟಿದ ಹಳ್ಳಿ. ಮೊದಲಿಗೆ ಅವರು ಸ್ಥಗಿತಗೊಂಡಿದ್ದ ಸ್ಟೀಲ್ ಕಾರ್ಖಾನೆಯೊಂದನ್ನು ಕಂತುಗಳಲ್ಲಿ ಹಣ ಪಾವತಿಸುವ ಕರಾರಿನಲ್ಲಿ ಖರೀದಿಸಿ ಧೈರ್ಯದಿಂದ ನಡೆಸಿದರು. ಇಂದು ಅವರು 3 ಲಕ್ಷ ಜನರಿಗೆ ಉದ್ಯೋಗ ನೀಡಿರುವ ವಿಶ್ವದ ಪ್ರಮುಖ ಸ್ಟೀಲ್ ಉದ್ಯಮಿ.

ಮೋಹನ್‌ ಸಿಂಗ್‌ ಓಬೆರಾಯ್ ತಮ್ಮ ಆರಂಭಿಕ ದಿನಗಳಲ್ಲಿ ಹೋಟೆಲ್ ವ್ಯವಸ್ಥಾಪಕ ಆಗಿದ್ದರು. ಆ ಹೋಟೆಲ್‌ ವಿದ್ಯುತ್ ಅವಘಡದಿಂದ ಬಾಗಿಲು ಮುಚ್ಚಿತು. ಓಬೆರಾಯ್ ಭೋಗ್ಯದ ಮೇಲೆ ಹೋಟೆಲ್‌ ಪಡೆದು ನಡೆಸತೊಡಗಿದರು. ಈಗ ಓಬೆರಾಯ್ ಹೋಟೆಲ್‌ ಉದ್ಯಮ ಜಗತ್ತಿನ ತುಂಬ ಬೆಳೆದಿದೆ.

ಬಹಳಷ್ಟು ಯುವಕರು ಹೊಸ ಸಾಹಸಕ್ಕೆ ಹೆದರುತ್ತಾರೆ. ಉದ್ದಿಮೆ ಕಟ್ಟುವುದಕ್ಕೆ ಹಣವೊಂದೇ ಮುಖ್ಯವಲ್ಲ. ಸಾಹಸ ಮನೋಭಾವ, ಹುಮ್ಮಸ್ಸು, ಮುಖ್ಯವಾಗಿ ಕನಸನ್ನು ಸಾಕಾರಗೊಳಿಸುವ ಇಚ್ಛಾಶಕ್ತಿ ಬೇಕು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗಾರಿಕೆ ಸ್ಥಾಪನೆಯ ವಿಧಾನಗಳನ್ನು ಬಹಳ ಸರಳಗೊಳಿಸಿವೆ. 2020- 25ನೇ ಸಾಲಿನ ಕೈಗಾರಿಕಾ ನೀತಿಯ ಪ್ರಕಾರ, ಹೊಸ ಕಂಪನಿಯ ನೋಂದಣಿ ಒಂದೇ ದಿನದಲ್ಲಿ ಆಗುತ್ತದೆ. ಹಿಂದೆ ಮೂರು ತಿಂಗಳು ಕಾಲಾವಕಾಶ ಬೇಕಾಗುತ್ತಿತ್ತು. ಗ್ರಾಮ ಪಂಚಾಯಿತಿ, ಆರೋಗ್ಯ, ಪೊಲೀಸ್, ಪರಿಸರ, ಕಂದಾಯ ಇಲಾಖೆಗಳ ನಿರಾಕ್ಷೇಪಣಾ (ನೋ ಅಬ್ಜೆಕ್ಷನ್‌ ಸರ್ಟಿಫಿಕೇಟ್) ಪ್ರಮಾಣಪತ್ರ ಪಡೆಯಲು ಐದಾರು ತಿಂಗಳು ಅಲೆಯಬೇಕಾಗುತ್ತಿತ್ತು. ಏಕಗವಾಕ್ಷ ಯೋಜನೆ ಜಾರಿಗೊಳಿಸಲಾಗಿದೆ. ಒಂದೇ ಕಡೆ ಎಲ್ಲ ಅವಶ್ಯಕ ಒಪ್ಪಿಗೆ ಪತ್ರಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.

ಕಂಪನಿ ನೋಂದಣಿಯಾಗುತ್ತಿದ್ದಂತೆ ನೌಕರರ ಪ್ರಾವಿಡೆಂಟ್ ಫಂಡ್, ಇಎಸ್‌ಐ, ಪಾವತಿಗೆ ಕೋಡ್ ನಂಬರ್ ರೂಪುಗೊಳ್ಳುತ್ತವೆ. ಬ್ಯಾಂಕರ್‌ಗಳು ಸಾಲ ನೀಡಲು ಭೇಟಿಯಾಗ ತೊಡಗುತ್ತಾರೆ. ಇದು ನಿಜಕ್ಕೂ ಒಂದು ವರದಾನ.

ಉದ್ಯಮಿ ಕಿರಣ್‌ ಮಜುಮ್‍ದಾರ್‌ ಶಾ ತಮ್ಮ ತಂದೆಯ ಗ್ಯಾರೇಜಿನಲ್ಲಿ ಉದ್ದಿಮೆ ಆರಂಭಿಸಿದರು. ಆಗ ಅವರು ತೊಡಗಿಸಿದ್ದು ಕೇವಲ ₹ 7 ಸಾವಿರ ಬಂಡವಾಳ. ಅವರು ಮಹಿಳಾ ಉದ್ದಿಮೆದಾರರಿಗೆ ಮಾದರಿಯಾಗಿ ನಿಂತಿದ್ದಾರೆ.

ಜಮಖಂಡಿಯ ಜಗದೀಶ ಗುಡಗುಂಟಿ, ಸಕ್ಕರೆ ಕಾರ್ಖಾನೆಯೊಂದರಲ್ಲಿ ಸಾಮಾನ್ಯ ಉದ್ಯೋಗಿಯಾಗಿದ್ದರು. ಡಿಪ್ಲೊಮಾ ಮಾತ್ರ ಓದಿದವರು. ಆದರೆ ಕಣ್ಣುಗಳಲ್ಲಿ ಕನಸು ತುಂಬಿಕೊಂಡಿದ್ದರು. ಒಂದು ಸ್ವಂತದ ಬೃಹತ್ ಸಕ್ಕರೆ ಕಾರ್ಖಾನೆಯನ್ನು ಕಟ್ಟಿದ್ದಾರೆ ಮಾತ್ರವಲ್ಲ, ದೇಶ-ವಿದೇಶಗಳಲ್ಲಿ 60ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿಗೆ ತಂತ್ರಜ್ಞಾನ ಒದಗಿಸಿದ್ದಾರೆ.

ಏಷ್ಯಾದ ನಂಬರ್‌ 1 ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಉದ್ಯಮಿ ಗೌತಮ್‌ ಅದಾನಿ ಅರ್ಧಕ್ಕೇ ಕಾಲೇಜು ಓದು ನಿಲ್ಲಿಸಿ, ವಜ್ರದ ವ್ಯಾಪಾರಿ ಬಳಿ ನೌಕರರಾಗಿ ಸೇರಿಕೊಂಡಿದ್ದರು. ತಾವೇ ವಜ್ರ ವ್ಯಾಪಾರಿಯಾಗಿ ಬೆಳೆದು ಗುಜರಾತಿನ ಮುಂದ್ರ ಎಂಬಲ್ಲಿ ಜಗತ್ತಿನ ಅತಿ ದೊಡ್ಡ ಖಾಸಗಿ ಬಂದರು ಕಟ್ಟಿದ್ದಾರೆ.

ನಿರ್ವಹಣೆ (ಮ್ಯಾನೇಜ್‌ಮೆಂಟ್‌) ಬಹಳ ಮುಖ್ಯ. ನಿರ್ವಹಣಾ ಕೌಶಲ ಪ್ರತಿಯೊಬ್ಬರ ವೈಯಕ್ತಿಕ ಬೆಳವಣಿಗೆಗೂ ದೇಶದ ಸಮಗ್ರ ಬೆಳವಣಿಗೆಗೂ ಅತ್ಯಂತ ಅವಶ್ಯ. ದೂರದೃಷ್ಟಿ, ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಸಂಪತ್ತಾಗಿ ಪರಿವರ್ತಿಸುವುದರಲ್ಲಿಯೇ ದೇಶದ ಭವಿಷ್ಯ ಅಡಗಿದೆ. ಉತ್ಸಾಹಕ್ಕಿಂತ ಮಿಗಿಲಾದ ಬಲವಿಲ್ಲ. ಉದ್ದಿಮೆ ಕಟ್ಟಿ ಆರ್ಥಿಕವಾಗಿ ಬೆಳೆದ ಮೇಲೆ ಹಣದ ಝೇಂಕಾರದಲ್ಲಿ ಕಳೆದುಹೋಗದೇ ಸಮಾಜಕ್ಕೆ ಒಳಿತನ್ನು ಮಾಡಬೇಕು.

ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಆರ್ಥಿಕವಾಗಿ ಪೊರೆದವರಲ್ಲಿ ಉದ್ಯಮಿ ಜೆ.ಡಿ.ಬಿರ್ಲಾ ಪ್ರಮುಖರು. ಬಿರ್ಲಾ ಅವರನ್ನು ಗಾಂಧೀಜಿ ತಮ್ಮ ಕ್ಯಾಪಿಟಲಿಸ್ಟ್‌ ಫ್ರೆಂಡ್ (ಧನಿಕ ದೋಸ್ತ್‌) ಎಂದು ಕರೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT