ಗುರುವಾರ , ಜನವರಿ 21, 2021
17 °C
ಈಗಿನ ಡಿಜಿಟಲ್‌ ಯುಗದಲ್ಲಿ, ತಂತ್ರಜ್ಞಾನ ವಂಚಿತರ ಕಥೆಯನ್ನು ಕೇಳುವವರಾರು?

ಸಂಗತ: ಈಗ ಎಲ್ಲರದೂ ಜೂಮ್ ಕಥೆ

ವೆಂಕಿ ರಾಘವೇಂದ್ರ, ಭಾರತಿ ಮಣೂರ್ Updated:

ಅಕ್ಷರ ಗಾತ್ರ : | |

Prajavani

ಕಥೆ ಹೇಳುವಿಕೆಯು ವ್ಯಕ್ತಿಯ ಏಕಾಗ್ರತೆಯನ್ನು ಹಿಡಿದಿಟ್ಟುಕೊಳ್ಳುವ ಒಂದು ಶಕ್ತಿಶಾಲಿ ತಂತ್ರ. ಕಲೆ, ಭಾವನೆಗಳನ್ನು ವ್ಯಕ್ತಪಡಿಸುವ ಸರಳವಾದ ರೀತಿ. ಉಹುಂ, ವ್ಯಾಖ್ಯೆ ಪೂರ್ಣವಾಗಲಿಲ್ಲ. ಪೂರ್ಣ ಅರ್ಥವೆಂದರೆ, ಕಥೆ ಹೇಳುವುದು ಮನುಷ್ಯನ ಅಸ್ತಿತ್ವ. ಇಂದಿನ ಸನ್ನಿವೇಶಗಳನ್ನು ಮುಂದಿನ ಜನಾಂಗಕ್ಕೆ ರವಾನಿಸುವ ಕುತೂಹಲಕಾರಿ ಮಾರ್ಗ.

ಈಗ, ಶಿಕ್ಷಕಿಯ ತರಗತಿಯ ಕಥೆ, ಕಾರ್ಪೊರೇಟ್ ಬೋರ್ಡ್‌ರೂಮ್ ಕಥೆ, ರಾಜಕಾರಣಿಯ ಸೇವೆಯ ಕಥೆ, ಅಜ್ಜಿ–ತಾತ ಮೊಮ್ಮಕ್ಕಳಿಗೆ ಹೇಳುವ ಕಥೆ ಎಲ್ಲವೂ ಆನ್‌ಲೈನ್‌ಮಯವಾಗಿವೆ. ಕೊರೊನಾ ಎಂಬ ವೈರಸ್‌ನ ಕಥೆ, ಈಗ ಕಥೆ ಹೇಳುವ ನಮ್ಮೆಲ್ಲರ ಮಾಧ್ಯಮವನ್ನು ತಲೆಕೆಳಗಾಗಿಸಿದೆ.

ಮಹಾಭಾರತವೆಂಬ ಕಾವ್ಯವು 18 ಲಕ್ಷ ಪದಗಳನ್ನು ಬಳಸಿ ಕಥೆ ಹೇಳಿದರೆ, ‘ಟ್ವಿಟರ್’ ಎಂಬ ಸಾಮಾಜಿಕ ಜಾಲತಾಣವು 280 ಅಕ್ಷರಗಳಲ್ಲಿ ಕಥೆ ಹೇಳುವವರ ನೆಚ್ಚಿನ ವೇದಿಕೆಯಾಗಿದೆ.

ಕಥೆ ಹೇಳುವ ಕಲೆ ಬಹಳ ಪುರಾತನವಾದದ್ದು. ಅಧಿಕೃತವಾಗಿ ಇದರ ಜನನ ಕ್ರಿ.ಪೂ. 700ರಲ್ಲಿ ಹೋಮರ್ ಕವಿಯ ಇಲಿಯಡ್‌ನಂತಹ ಮಹಾಕಾವ್ಯಗಳಿಂದ ಎಂದು ದಾಖಲಾಗಿದ್ದರೂ ಭಾಷೆಯ ಅಭಿವೃದ್ಧಿಯೊಂದಿಗೇ ಕಥೆ ಹೇಳುವಿಕೆ ಬೆಳೆದುಬಂದಿದೆ ಎಂದರೂ ತಪ್ಪಾಗಲಾರದು.

ಇಂದಿನ ಮಾರುಕಟ್ಟೆ ಜಗತ್ತಿನಲ್ಲಿ, ಕಥೆ ಹೇಳುವಿಕೆ ವ್ಯಾಪಾರದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ. ನೈಕಿ ಶೂ ತಯಾರಿಕಾ ಕಂಪನಿ ತನ್ನ ಕಥೆಯನ್ನು ಗ್ರಾಹಕರ ಕಥೆಯೊಂದಿಗೆ ಜೋಡಿಸುವಲ್ಲಿ ಜಾಣ್ಮೆ ತೋರಿಸುತ್ತದೆ. ತನ್ನ ಸರಕಿನ ವೈಶಿಷ್ಟ್ಯದ ಬದಲಾಗಿ, ತನ್ನ ಕಂಪನಿಯ ಶೂ ಬಳಸಿ ಹೇಗೆ ಒಬ್ಬ ಯಶಸ್ವಿ ಕ್ರೀಡಾಪಟುವಾಗಬಹುದು, ಮ್ಯಾರಥಾನ್‌ನಲ್ಲಿ ಓಡಬಹುದು ಎಂಬ ಗುರಿ ಸಾಧನೆಯ ಕಥೆಯ ಬೀಜ ಬಿತ್ತಿದ್ದೇ ಅದರ ಯಶಸ್ಸಿನ ರಹಸ್ಯ.

ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿರದ ಮೂವರು ರಾಜಕುಮಾರರನ್ನು ಓದಿನೆಡೆಗೆ ಸೆಳೆಯಲು ವಿಷ್ಣುಶರ್ಮ ಎಂಬ ಪಂಡಿತರಿಂದ ರಚಿತವಾದ ಪಂಚತಂತ್ರವೆಂಬ ಕಥಾಗುಚ್ಛ ಇಂದಿಗೂ ಪ್ರಸ್ತುತವಾಗಿದೆ. ಪಂಚತಂತ್ರ ಎಂದರೆ ಐದು ತಂತ್ರಗಳು, ಇದು 72 ಕಥೆಗಳ ಸಂಕಲನ. ಕೇವಲ ಆರು ತಿಂಗಳಲ್ಲಿ ರಾಜಕೀಯ, ಸಾರ್ವಜನಿಕ ಆಡಳಿತ, ನೀತಿಶಾಸ್ತ್ರಗಳನ್ನು ರಾಜಕುಮಾರರಿಗೆ ವಿಷ್ಣುಶರ್ಮ ಕಲಿಸುತ್ತಾನೆಂದರೆ ಇದರ ಸಾಧ್ಯತೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲೇಬೇಕು. ವಿಷ್ಣುಶರ್ಮ ಕಥೆಯನ್ನು ಹೇಳುವಾಗ, ಆ ರಾಜಕುಮಾರರು ಕಥೆಯಲ್ಲಿ ಬರುವ ಪಾತ್ರಗಳ ನಿರ್ಧಾರಗಳನ್ನು ಚಿಂತಿಸಿ ಒಪ್ಪಿಕೊಳ್ಳಬೇಕಾಗುತ್ತದೆ. ಹಾಗೆ ಮಾಡಿದಾಗ ಮೆದುಳಿಗೆ ತನ್ನ ನಿಲುವಿನ ದೃಢತೆಯ ಬಗ್ಗೆ ಒಂದು ಸಂದೇಶ ರವಾನೆಯಾಗುತ್ತದೆ.

ಆ ಸಂದೇಶವು ಶಾಶ್ವತ ಕಲಿಕೆಯಾಗಿ ಬದಲಾವಣೆಯಾಗುತ್ತದೆ. ಇಲ್ಲಿ ರಾಜಕುಮಾರರ ಕಲಿಕೆಗೆ ಬಳಸಿದ ಸಾಧನ ವೈಜ್ಞಾನಿಕವಾಗಿ ಶಕ್ತಿಶಾಲಿಯಾಗಿದೆ. ಏಕೆಂದರೆ ರಾಜಕುಮಾರರಿಗೆ ಪ್ರತಿಸಲ ಹೊಸ ಕಥೆಯನ್ನು ವಿವರಿಸುವಾಗ ಮೆದುಳಿನಲ್ಲಿ ಈಗಾಗಲೇ ಶೇಖರಣೆಯಾಗಿರುವ ಹವ್ಯಾಸ ಮತ್ತು ನಡವಳಿಕೆಗಳ ನರಮಾರ್ಗಗಳು ಹೊಸ ಪರಿಕಲ್ಪನೆಗಳಿಂದ ರವಾನಿಸಲ್ಪಟ್ಟ ಸಂದೇಶಗಳೊಂದಿಗೆ ಜೋಡಣೆಯಾಗಿ, ಮೆದುಳಿನ ನಮ್ಯತೆಯ ಕಾರಣದಿಂದ ಹೊಸ ನರಮಾರ್ಗಗಳು ಸೃಷ್ಟಿಯಾಗುತ್ತವೆ. ಇದರಿಂದ ಅನಾಯಾಸವಾಗಿ ಹೊಸ ಕಲಿಕೆ ಸಾಧ್ಯವಾಗುತ್ತದೆ. ಇದೇ ವಿಷ್ಣುಶರ್ಮನ ಕಲಿಕಾತಂತ್ರದ ಗುಟ್ಟು.

ಏಕಾಗ್ರತೆಯ ಕೊರತೆ ಮತ್ತು ತ್ವರಿತ ತೃಪ್ತಿ ಹೊಂದುವವರನ್ನು ಬಡಿದೆಬ್ಬಿಸಲು ಕಥೆ ಒಂದು ಉತ್ತಮ ಸಾಧನವಾಗಿದೆ. ಒಂದು ಕಥೆಯನ್ನು ತಲ್ಲೀನತೆಯಿಂದ ಆಲಿಸಿದಾಗ, ಅದರಲ್ಲಿ ಬರುವ ಪರಿಣಾಮಕಾರಿಯಾದ ಪಾತ್ರದೊಂದಿಗೆ ನಮ್ಮನ್ನು ನಾವು ಮಾನಸಿಕವಾಗಿ ಗುರುತಿಸಿಕೊಳ್ಳುತ್ತೇವೆ. ಆಗ ಆ ಪಾತ್ರದ ನೋವು-ನಲಿವುಗಳು ನಮ್ಮದಾಗುತ್ತವೆ.

ಟೆಲಿವಿಷನ್‌ ಎಂಬುದು ಪ್ರಪಂಚಕ್ಕೆ ಇನ್ನೂ ಹೊಸದಾಗಿದ್ದ ಕಾಲದಲ್ಲಿ ಒಬ್ಬ ಯುವಕ ಒಂದು ಹಳ್ಳಿಯ ಜನರಿಗೆ ಟಿ.ವಿ ಮಾರಲು ಯೋಚಿಸಿ ಅಲ್ಲಿಗೆ ಹೋಗುತ್ತಾನೆ. ಕಥೆಯಲ್ಲಿ ಮಗ್ನರಾಗಿದ್ದ ಗುಂಪನ್ನು ಓಲೈಸಿ ಹೀಗೆ ಹೇಳುತ್ತಾನೆ ‘ಈ ಡಬ್ಬ ಕೂಡ ನಿಮಗೆ ಕಥೆ ಹೇಳುತ್ತದೆ’ ಎಂದು. ಜೊತೆಗೆ ಎಲ್ಲರಿಗೂ ಸಂತೋಷದಿಂದ ಟೆಲಿವಿಷನ್ ಮಾರಿ ಮನೆಗೆ ಮರಳುತ್ತಾನೆ. ಮುಂದೊಂದು ದಿನ ಆ ಹಳ್ಳಿಯ ಜನ ತನ್ನಿಂದ ಕೊಂಡ ಟಿ.ವಿಗಳನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಯಲು ಅಲ್ಲಿಗೆ ಹೋಗುತ್ತಾನೆ. ಆದರೆ ಯಾರೂ ಟಿ.ವಿಯನ್ನು ಉಪಯೋಗಿಸದೇ ಇದ್ದುದನ್ನು ಕಂಡು ಬಹಳ ಆಶ್ಚರ್ಯದಿಂದ ಆ ಹಳ್ಳಿಯ ಮುಖಂಡನಿಗೆ ಕಾರಣ ಕೇಳುತ್ತಾನೆ. ಅದಕ್ಕೆ ಆ ಹಿರಿಯ ವ್ಯಕ್ತಿ ಬಹಳ ಮುಗ್ಧತೆಯಿಂದ ಹೀಗೆ ಉತ್ತರಿಸುತ್ತಾನೆ ‘ಈ ಡಬ್ಬ ಬಹಳ ಚೆನ್ನಾಗಿ ಕಥೆ ಹೇಳುತ್ತದೆ, ಆದರೆ ನಮ್ಮ ಕಥೆಯನ್ನು ಮಾತ್ರ ಕೇಳುವುದೇ ಇಲ್ಲ’. ಒಳ್ಳೆಯ ಕಥೆಗಾರ ಮೊದಲು ಕಥೆ ಕೇಳುವವನಾಗಬೇಕು ಎಂದು ಲೂಯಿ ಫಿಲಿಪ್ ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಅಮೀನ್ ಹಕ್ ಹೇಳುತ್ತಾರೆ.

ಆದರೆ, ಈಗಿನ ಈ ಡಿಜಿಟಲ್‌ ಯುಗದಲ್ಲಿ, ತಂತ್ರಜ್ಞಾನ ವಂಚಿತರ ಕಥೆಯನ್ನು ಕೇಳುವವರಾರು ಮತ್ತು ಅವರಿಗೆ ಹೊಸ ಗಾಳಿಯ ಕಥೆ ಹೇಳುವ ವರಾರು? ಬದಲಾವಣೆಯೊಂದೇ ಶಾಶ್ವತ ಎಂದು ಸಾರಿ ಹೇಳುತ್ತಿರುವ ಕೊರೊನಾದೊಂದಿಗೆ ಭವಿಷ್ಯದ ಕಥೆ ಹೆಣೆಯುವುದು ಹೇಗೆ ಎಂಬುದೇ ಈಗ ಎಲ್ಲರ ಕಥೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು