ಮಂಗಳವಾರ, ಆಗಸ್ಟ್ 3, 2021
27 °C
ಹಲವು ಕ್ಷೇತ್ರಗಳಲ್ಲಿ ಏಕರೂಪದ ವ್ಯವಸ್ಥೆ ಜಾರಿಗೆ ತರುವ ಪ್ರಯತ್ನಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ಏಕರೂಪದ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯವಾಗಿದೆ

ಸಂಗತ | ‘ಒಂದು ದೇಶ, ಒಂದು ಶಿಕ್ಷಣ ಪದ್ಧತಿ’

ಬಿ.ಎಸ್.ಶಿವಣ್ಣ ಮಳವಳ್ಳಿ Updated:

ಅಕ್ಷರ ಗಾತ್ರ : | |

prajavani

ಕೊರೊನಾ ಕಾಲದಲ್ಲಿ ನಮ್ಮ ಜೀವನ ವ್ಯವಸ್ಥೆ ಬಹಳಷ್ಟು ಬದಲಾಗುತ್ತಿದೆ. ದೇಶದ ಅರ್ಥ ವ್ಯವಸ್ಥೆ ವಿಷಣ್ಣ ಸ್ಥಿತಿಯ ಲ್ಲಿರುವಾಗ ಅನ್ನ, ಅಕ್ಷರ ಹಾಗೂ ಆರೋಗ್ಯ ಕ್ಷೇತ್ರದ ಆಮೂಲಾಗ್ರ ಬದಲಾವಣೆ ಅಗತ್ಯ ಎಂಬ ಮಾತುಗಳೂ ಕೇಳಿಬರುತ್ತಿವೆ. ಇಂತಹ ಸಂದರ್ಭದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಬಗ್ಗೆಯೂ ಆಲೋಚಿಸಬೇಕಾಗಿದೆ.

ಈಗಾಗಲೇ ನಮ್ಮ ದೇಶದಲ್ಲಿ ಆಧಾರ್‌ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಪಡಿತರ ವಿತರಣೆಗೆ ‘ಒಂದು ದೇಶ ಒಂದು ಕಾರ್ಡ್’ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇನ್ನೂ ಹಲವಾರು ಕ್ಷೇತ್ರ ಗಳಲ್ಲಿ ಏಕರೂಪದ ವ್ಯವಸ್ಥೆ ಜಾರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಎಲ್ಲವೂ ಏಕೀಕೃತ ವ್ಯವಸ್ಥೆಯಲ್ಲಿ ಬರಬೇಕು ಎನ್ನುವ ವಾದ ಕಾಣುತ್ತಿದೆ.

ಬಡವರು, ರೈತರು, ಕೂಲಿಕಾರ್ಮಿಕರು, ಅಸಂಘಟಿತ ವಲಯದ ನೌಕರರ ಪಾಲಿಗೆ ತುರ್ತಾಗಿ ಬೇಕಿರುವುದು ‘ಒನ್ ನೇಷನ್ ಒನ್ ಎಜುಕೇಷನ್’, ಅಂದರೆ ಶಿಕ್ಷಣ ವ್ಯವಸ್ಥೆಯ ರಾಷ್ಟ್ರೀಕರಣ ಅಥವಾ ಏಕರೂಪದ ಶಿಕ್ಷಣ ವ್ಯವಸ್ಥೆ. ಜೊತೆಗೆ ವ್ಯಾಪಾರದ ಸರಕಾಗಿರುವ ಆರೋಗ್ಯ ವ್ಯವಸ್ಥೆಯ ಸುಧಾರಣೆ. ಏಕರೂಪದ ಶಿಕ್ಷಣ ವ್ಯವಸ್ಥೆ ಎಂದ ತಕ್ಷಣ ಕೇಂದ್ರ ಸರ್ಕಾರ ನೀತಿ ರೂಪಿಸುವುದು, ರಾಜ್ಯ ಸರ್ಕಾರಗಳು ಅದನ್ನು ಅನುಸರಿಸುವುದು ಎಂದರ್ಥವಲ್ಲ. ಏಕರೂಪದ ಪಠ್ಯವೂ ಅಲ್ಲ. ಶಿಕ್ಷಣದಲ್ಲಿ ಪ್ರಾದೇಶಿಕತೆಗೆ ಅವಕಾಶ ಇರಲೇಬೇಕು. ಏಕರೂಪ ಎಂದರೆ ಸರ್ಕಾರವೇ ಶಿಕ್ಷಣವನ್ನು ನೀಡಬೇಕು ಹಾಗೂ ಈಗ ಇರುವ ರಾಜ್ಯ, ಕೇಂದ್ರ, ಸಿಬಿಎಸ್‌ಇ, ಐಸಿಎಸ್‌ಇ, ಕೇಂದ್ರೀಯ ವಿದ್ಯಾಲಯ ಮುಂತಾದ ಶಿಕ್ಷಣ ವ್ಯವಸ್ಥೆ ಯನ್ನು ರದ್ದು ಮಾಡಿ, ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ಸಿಗುವಂತೆ ಮಾಡಬೇಕು. ಎಲ್‌ಕೆಜಿಯಿಂದ ಪದವಿ, ಸ್ನಾತಕೋತ್ತರ, ವೈದ್ಯಕೀಯ, ತಾಂತ್ರಿಕ ಎಲ್ಲ ಶಿಕ್ಷಣವನ್ನೂ ಸರ್ಕಾರವೇ ನೀಡುವಂತಾಗಬೇಕು.

ಹೌದು, ಇಂತಹ ಮಾತುಗಳನ್ನು ಕೇಳಿದ ತಕ್ಷಣವೇ ಕೆಲವರ ಕಣ್ಣು ಕೆಂಪಾಗುತ್ತದೆ. ಯಾಕೆಂದರೆ ಈಗ ಅಕ್ಷರ ಮತ್ತು ಆರೋಗ್ಯ ಬಹುತೇಕ ಖಾಸಗಿಯವರ ಸ್ವತ್ತಾಗಿದೆ. ಪಕ್ಷಭೇದವಿಲ್ಲದೆ ಪ್ರಭಾವಿಗಳ ಕೂಟವು ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದೆ. ಈ ಎರಡೂ ಕ್ಷೇತ್ರ ಗಳಲ್ಲಿ ಬಡವರ ಮಕ್ಕಳಿಗೆ ಅವಕಾಶವೇ ಸಿಗದಂತಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಗೇಟಿನ ಸಮೀಪಕ್ಕೆ ಸುಳಿಯುವುದಕ್ಕೂ ಬಡವರ ಮಕ್ಕಳಿಗೆ ಅವಕಾಶ ಇಲ್ಲದಂತಾಗಿದೆ. ಇಂತಹ ಮಕ್ಕಳಿಗೆ ಅವಕಾಶ ಕಲ್ಪಿಸು ವುದಕ್ಕಾಗಿಯೇ ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಆರ್‌ಟಿಇ ಕಾಯ್ದೆಯು ಉದ್ದೇಶಿತ ಗುರಿ ಸಾಧನೆಯಲ್ಲಿ ಯಶ ಗಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಶಿಕ್ಷಣದ ರಾಷ್ಟ್ರೀಕರಣ ಅತ್ಯಂತ ತುರ್ತಾಗಿ ಆಗಬೇಕಿದೆ. ಇದಕ್ಕೆ ಬೇಕಾಗಿರುವ ಇಚ್ಛಾಶಕ್ತಿಯನ್ನು ಕೇಂದ್ರ ಸರ್ಕಾರ ತೋರಬೇಕಾಗಿದೆ.

ಬ್ಯಾಂಕ್ ರಾಷ್ಟ್ರೀಕರಣಕ್ಕೂ ಮುನ್ನ ಹಣಕಾಸು ಸಂಸ್ಥೆಗಳು ಕೇವಲ ಉಳ್ಳವರ ಆಡುಂಬೊಲವಾಗಿದ್ದವು. ಕೈಗಾರಿಕೋದ್ಯಮಿಗಳ ಆದ್ಯತೆಗಳಿಗೆ ಸೀಮಿತ ವಾಗಿದ್ದವು. ಬಡವರು, ರೈತರು, ಕೂಲಿಕಾರ್ಮಿಕ ರಿಗೆ ಬ್ಯಾಂಕುಗಳ ಬಾಗಿಲುಗಳು ಮುಚ್ಚಿದ್ದವು. ಇದರ ಅಪಾಯವನ್ನು ಮನಗಂಡ ಇಂದಿರಾ ಗಾಂಧಿ ಒಂದೇ ಒಂದು ಆದೇಶದ ಮೂಲಕ ಬ್ಯಾಂಕ್‌ಗಳನ್ನು ಸರ್ಕಾರದ ತೆಕ್ಕೆಗೆ ತೆಗೆದುಕೊಂಡರು. ಇಂದು ದೇಶದ ಕೋಟ್ಯಂತರ ಜನರು ‘ಜನ್ ಧನ್’ ಖಾತೆ ತೆರೆಯಲು ಸಾಧ್ಯವಾಗಿದ್ದರೆ, ಅದಕ್ಕೆ ಪೂರಕವಾಗಿ ಒದಗಿ ಬಂದಿರುವುದು ಬ್ಯಾಂಕ್ ರಾಷ್ಟ್ರೀಕರಣದ ಬಲ.

ದೇಶ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಇಂತಹ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರದ ವಶಕ್ಕೆ ಪಡೆಯಬೇಕು. ಬಡವರ ಮಕ್ಕಳು ಸರ್ಕಾರದಿಂದ ತುರ್ತಾಗಿ ಬಯಸುತ್ತಿರುವುದು ಅಕ್ಷರ, ಅನ್ನ ಹಾಗೂ ಆರೋಗ್ಯವನ್ನು ಮಾತ್ರ. ಇನ್ನಿತರ ಉದ್ದೇಶಗಳಿಗೆ ಅವರು ಸರ್ಕಾರವನ್ನು ಅಷ್ಟಾಗಿ ಅವಲಂಬಿಸಿಲ್ಲ.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸುವ ಆರ್ಥಿಕ ಚೈತನ್ಯ ಬಡವರಿಗೆ ಇಲ್ಲ. ಗ್ರಾಮೀಣ ಪ್ರತಿಭೆಗಳ ಅನಾವರಣವಾಗಬೇಕು ಮತ್ತು ಎಲ್ಲರಿಗೂ ಸಮಾನ ಶಿಕ್ಷಣ ಲಭ್ಯವಾಗಬೇಕಿದ್ದರೆ ಕೇಂದ್ರ ಸರ್ಕಾರ ತಕ್ಷಣವೇ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು. ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯ ಶಿಕ್ಷಣ ಪದ್ಧತಿ ಎಲ್ಲವನ್ನೂ ರದ್ದು ಮಾಡಬೇಕು. ಇಡೀ ದೇಶಕ್ಕೆ ಅನ್ವಯ
ವಾಗುವಂತಹ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಬೇಕು. ಇಂತಹ ಕಠಿಣ ನಿರ್ಧಾರವನ್ನು ಕೈಗೊಳ್ಳಲು ಬೇಕಾದ ಸಂಖ್ಯಾಬಲ, ಜನಬಲ ಎಲ್ಲವೂ ಕೇಂದ್ರ ಸರ್ಕಾರಕ್ಕೆ ಇದೆ. ಸರ್ವ ಜನರಿಗೂ ಅನುಕೂಲವಾಗುವ ಇಂತಹ ವ್ಯವಸ್ಥೆಯನ್ನು ವಿರೋಧ ಪಕ್ಷಗಳೂ ಬೆಂಬಲಿಸುತ್ತವೆ.

ಒನ್ ನೇಷನ್, ಒನ್ ಎಜುಕೇಷನ್ ಎಂಬುದು ರಾಷ್ಟ್ರದ ಪ್ರಗತಿ ಹಾಗೂ ಸಂವಿಧಾನದ ಆಶಯದ ಈಡೇರಿಕೆಗೆ ತೀರಾ ಅನಿವಾರ್ಯವಾಗಿದೆ. ಮಕ್ಕಳನ್ನು ನಾವು ದೇವರು ಎಂದು ಭಾವಿಸುತ್ತೇವೆ. ಅಂತಹ ದೇವರಿಗೆ ನೀಡುವ ಶಿಕ್ಷಣದಲ್ಲಿ ತಾರತಮ್ಯ ಮಾಡುವುದು ನಾಗರಿಕ ಸಮಾಜದ ಲಕ್ಷಣ ಅಲ್ಲ. ಭಾರತ ವಿಶ್ವಗುರು ಆಗಬೇಕಿದ್ದರೆ ಶಿಕ್ಷಣ ಕ್ಷೇತ್ರದಲ್ಲಿನ ತಾರತಮ್ಯ ಹೋಗಲಾಡಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು