ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕೋವಿಡ್ ಅಲೆಯಲ್ಲಿ ಆನ್‌ಲೈನ್ ತರಂಗ

ಕೋವಿಡ್‍ಪೂರ್ವ ಯುಗದಲ್ಲಿ ಸೀಮಿತವಾಗಿ ಬಳಕೆಯಲ್ಲಿದ್ದ ಆನ್‌ಲೈನ್‌ ವೈದ್ಯಕೀಯ ಸಲಹೆ, ಈಗ ಅದರ ಬಗ್ಗೆ ಅಧ್ಯಯನಗಳು ನಡೆಯುವಷ್ಟು ಬೆಳೆದುನಿಂತಿದೆ
Last Updated 18 ಮೇ 2021, 19:30 IST
ಅಕ್ಷರ ಗಾತ್ರ

ಕೋವಿಡ್ ಎರಡನೇ ಅಲೆ ಜೋರಾಗಿರುವ ಈ ಸಮಯದಲ್ಲಿ ‘ನಿಮಗೆ ಆಸ್ಪತ್ರೆಗೆ ಹೋಗಲಿಷ್ಟವೇ’ ಎಂಬ ಪ್ರಶ್ನೆ ಯಾರಿಗಾದರೂ ಎದುರಾದರೆ?! ಉತ್ತರ ನಿಸ್ಸಂದೇಹವಾಗಿ ‘ಇಲ್ಲ’ ಎಂದೇ ಆಗಿರುತ್ತದೆ. ಇದು ಈಗ ಮಾತ್ರವಲ್ಲ, ಯಾವಾಗಲೂ ಎಂಬುದು ಸತ್ಯದ ಮಾತೇ.

ಆಸ್ಪತ್ರೆಗಳನ್ನು ಸಾಮಾನ್ಯವಾಗಿ ನಾವ್ಯಾರೂ ಇಷ್ಟಪಡುವುದಿಲ್ಲ. ದುಡ್ಡು ಖರ್ಚಾಗಬಹುದು ಎಂಬ ಒಂದೇ ಕಾರಣಕ್ಕಲ್ಲ. ಆಸ್ಪತ್ರೆಯಲ್ಲಿನ ‘ವಾಸನೆ’, ಕಾಯಬೇಕಾದ ಸಮಯ, ವೈದ್ಯರು ಏನು ಹೇಳುತ್ತಾರೋ, ಪರೀಕ್ಷೆಗಳು ಏನು ಕಂಡುಹಿಡಿಯುತ್ತವೋ ಎಂಬ ಅವ್ಯಕ್ತ ಭಯ ಎಲ್ಲವೂ ನಮ್ಮನ್ನು ಕಾಡುತ್ತವೆ. ಇವಲ್ಲದೆ ಔಷಧಿಗಳು- ಅವುಗಳ ಖರ್ಚು- ಅವುಗಳಿಂದ ಅಡ್ಡಪರಿಣಾಮದ ಭಯ, ಮನೋವೈದ್ಯಕೀಯ- ಏಡ್ಸ್- ಕ್ಯಾನ್ಸರ್‌ನಂತಹ ಕಾಯಿಲೆಗಳಲ್ಲಿ ಸಮಾಜ ತಗುಲಿಸಬಹುದಾದ ಹಣೆಪಟ್ಟಿಯ ಹೆದರಿಕೆ ಕೂಡ ಆಸ್ಪತ್ರೆಗಳಿಗೆ ಜನರು ಬರಲು ಹಿಂಜರಿಯುವುದಕ್ಕೆ ಇರುವ ಕಾರಣಗಳು. ಈಗ ಕೋವಿಡ್ ಸಮಯದಲ್ಲಂತೂ ಆಸ್ಪತ್ರೆಯಿಂದಲೇ ಸೋಂಕು ತಗುಲುವ ಬೆದರಿಕೆ ಬೇರೆ.

ಕೋವಿಡ್ ಸಮಯದಲ್ಲಿ ಇತರ ಕಾಯಿಲೆಗಳು ನಿರ್ಲಕ್ಷ್ಯಕ್ಕೀಡಾಗುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಿವೆ. ಸಾರಿಗೆ ಮುಷ್ಕರ, ನಂತರ ಲಾಕ್‍ಡೌನ್‍ಗಳು ದೂರದ ಹಳ್ಳಿಗಳಿಂದ ಪಟ್ಟಣಗಳಿಗೆ ವೈದ್ಯಕೀಯ ಸಲಹೆಗೆಂದು ಬರುವ ಅಸಂಖ್ಯಾತ ಜನರಿಗೆ ಚಿಕಿತ್ಸೆಯನ್ನು ಮತ್ತಷ್ಟು ದುರ್ಲಭವಾಗಿಸಿವೆ. ಹಾಗಿದ್ದರೆ ಇಂತಹ ಪರಿಸ್ಥಿತಿಯನ್ನು ಬದಲಿಸಲು ಸಾಧ್ಯವಿಲ್ಲವೇ?

ಇಂಥ ಸಂದರ್ಭದಲ್ಲಿಯೇ, ವೈದ್ಯಕೀಯ ಕ್ಷೇತ್ರದ ಇನ್ನೊಂದು ಶಾಖೆಯಾಗಿ ಆನ್‍ಲೈನ್ ಸಲಹೆ-ಚಿಕಿತ್ಸೆಗಳು ಬೆಳೆದು ನಿಂತಿರುವುದು. ಕೋವಿಡ್‍ಪೂರ್ವ ಯುಗದಲ್ಲಿ ತುಂಬ ಸೀಮಿತವಾಗಿ ಬಳಕೆಯಲ್ಲಿದ್ದ ಈ ಬಗೆಯ ಸಲಹೆ, ಕಳೆದ ಒಂದು ವರ್ಷದಲ್ಲಿ ಅದರ ಬಗ್ಗೆ ಅಧ್ಯಯನಗಳು ನಡೆಯುವಷ್ಟು ಬೆಳೆದುನಿಂತಿದೆ. ವೈದ್ಯಕೀಯ ವಿದ್ಯಾರ್ಥಿ ಈವರೆಗೆ ಕಲಿಯಬೇಕಾಗಿದ್ದ
‘ಬೆಡ್‍ಸೈಡ್ ಮ್ಯಾನರ್ಸ್’ ಬದಲು ‘ವೆಬ್‌ಸೈಡ್ ಮ್ಯಾನರ್ಸ್’ ಕಲಿಯಬೇಕಾಗಿದೆ!

ಈಗಿರುವ ಆಸ್ಪತ್ರೆ ವ್ಯವಸ್ಥೆಯನ್ನು ಕ್ರಾಂತಿಕಾರಕವಾಗಿ ಬದಲಿಸುವ ಎಲ್ಲ ಸಾಧ್ಯತೆಗಳತ್ತ ಆನ್‍ಲೈನ್ ಸಲಹೆ ದಾಪುಗಾಲಿಕ್ಕಿದೆ. ಆದರೆ ಅದರ ಉಪಯುಕ್ತತೆ-ಸವಾಲು-ಮಿತಿಗಳನ್ನು ಜನರು ಮತ್ತು ವೈದ್ಯಕೀಯ ಕ್ಷೇತ್ರ ಅರ್ಥಮಾಡಿಕೊಳ್ಳುವುದು ಈ ಹೊತ್ತಿನ ತುರ್ತು ಎಂಬುದನ್ನು ನಾವು ಮರೆಯುವಂತಿಲ್ಲ.

ಕಳೆದ ಹತ್ತು ವರ್ಷಗಳಲ್ಲಿ ದೇಶದ ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯದ ಖರ್ಚೂ ಹೆಚ್ಚುತ್ತಿದೆ. 90ರ ದಶಕದಲ್ಲಿ ಶೇ 50ರಷ್ಟು ಸಾವುಗಳು ಸೋಂಕು ರೋಗಗಳು, ಅಪೌಷ್ಟಿಕತೆಯ ಸಮಸ್ಯೆ ಮತ್ತು ಮಾತೃ-ಶಿಶು ಮರಣದಿಂದ ನಡೆಯುತ್ತಿದ್ದವು. ಈಗ ಭಾರತದ ಜನಸಂಖ್ಯೆ ಹೆಚ್ಚು ಅಪಾಯ ಎದುರಿಸುತ್ತಿರುವುದು ದೀರ್ಘಕಾಲಿಕ ಕಾಯಿಲೆಗಳಾದ ಹೃದಯ ಸಂಬಂಧಿ ಸಮಸ್ಯೆಗಳು, ಬೊಜ್ಜು, ಕ್ಯಾನ್ಸರ್, ಮಧುಮೇಹಗಳಿಂದ. ಸೋಂಕು ರೋಗಗಳ ಚಿಕಿತ್ಸೆ ಒಂದು ಬಾರಿಯ ವೆಚ್ಚವಾದರೆ ಈ ದೀರ್ಘಕಾಲಿಕ ಕಾಯಿಲೆಗಳಿಗೆ ಬೇಕಾದ ಚಿಕಿತ್ಸೆ-ಸಲಹೆ ನಿರಂತರ. ರಕ್ತದೊತ್ತಡ, ಮಧುಮೇಹ, ಖಿನ್ನತೆಯು ದೀರ್ಘಾವಧಿಯ ಫಾಲೊ ಅಪ್‌ ಬೇಕಾದ ಕಾಯಿಲೆಗಳು. ಇವು ಸಾರಿಗೆ ಖರ್ಚು, ಕಾಯಿಲೆಯ ರಜೆಯಂತಹವುಗಳಿಗೆ ಕಾರಣವಾಗಿ ದೇಶದ ಆರ್ಥಿಕತೆಯನ್ನು ನರಳಿಸುತ್ತವೆ. ಇನ್ನೊಂದೆಡೆ, ಈಗಾಗಲೇ ಕಡಿಮೆ ಪ್ರಮಾಣದಲ್ಲಿರುವ ವೈದ್ಯಕೀಯ ಮಾನವ ಸಂಪನ್ಮೂಲವನ್ನು ಕಬಳಿಸುತ್ತವೆ.

ಶೇ 46ರಷ್ಟು ಆಸ್ಪತ್ರೆ ಆರೈಕೆಯು ರೋಗಿಯ ಮನೆಯಲ್ಲಿಯೇ ನಡೆಯಲು ಸಾಧ್ಯ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಎಂತಹವರಿಗೆ ಆನ್‍ಲೈನ್ ಸಲಹೆ ಬಹು ಉಪಯುಕ್ತ? ವೃದ್ಧರು, ಆಸ್ಪತ್ರೆಗೆ ತೆರಳಲು ಇನ್ನೊಬ್ಬರ ಸಹಾಯ ಬೇಕಾದ ಹಿರಿಯರು, ಮರಣಶಯ್ಯೆಯಲ್ಲಿರುವ ರೋಗಿಗಳು ಮನೆಯಲ್ಲಿಯೇ ತೆರೆಯ ಮೇಲೆ ವೈದ್ಯರಿಂದ ಸಲಹೆ ಪಡೆಯುವಂತಾದರೆ ಅದು ಜೀವನದ ಗುಣಮಟ್ಟವನ್ನು ಏರಿಸಬಲ್ಲದು.

ಸಾಮಾನ್ಯವಾಗಿ ಆನ್‍ಲೈನ್ ಸಲಹೆಯನ್ನು ಬಳಸಲು ವೈದ್ಯರಿಗಾಗಲೀ ರೋಗಿಗಳಿಗಾಗಲೀ ಇರುವ ಬಹು ದೊಡ್ಡ ಅಡ್ಡಿಯೆಂದರೆ ಮಾನವ ಸ್ಪರ್ಶದ ಕೊರತೆ. ಕೋವಿಡ್‍ನಂತಹ ಸೋಂಕಿನ ಸಮಯ ಇದು ಹೇಗೂ ಸಾಧ್ಯವಾಗದ ಪರಿಸ್ಥಿತಿ ಸೃಷ್ಟಿಸಿದೆ. ಹಾಗಾಗಿ ಆನ್‍ಲೈನ್ ಸಲಹೆಯನ್ನು ಪ್ರಯೋಗಕ್ಕೆ ಒಡ್ಡಲು ಇದೊಂದು ಅವಕಾಶವೇ ಆಗಬಹುದು. ಆದರೆ ದೈಹಿಕ ಪರೀಕ್ಷೆ ಅಗತ್ಯವಿರುವ ಸಂದರ್ಭಗಳಲ್ಲಿ ಆನ್‍ಲೈನ್ ಮುಖಾಂತರ ಹೇಗಾದರೂ ಮುಗಿಸಿಬಿಡುವ, ಮುಖತಃ ಭೇಟಿಯನ್ನು ಮುಂದೆ ತಳ್ಳಿಬಿಡುವ ಪ್ರವೃತ್ತಿ
ಯನ್ನು ವೈದ್ಯ-ರೋಗಿ ಇಬ್ಬರೂ ತಡೆಯುವ ಧೈರ್ಯ ಮಾಡುವುದು ಅತ್ಯವಶ್ಯ.

ಆನ್‌ಲೈನ್‌ ಸಲಹೆಯು ಬಹಳಷ್ಟು ಪರಿಣಾಮಕಾರಿಯಾಗಿದ್ದು, ಸಾಂಕ್ರಾಮಿಕದ ನಂತರವೂ ಮುಂದುವರಿಯುತ್ತದೆ ಎಂದು ಶೇ 94ರಷ್ಟು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ‘ದ ಡಾಕ್ಟರ್‌ ವಿಲ್‌ ಝೂಮ್‌ ಯು ನೌ’ ಎಂಬ ಪ್ರಮುಖ ಸಮೀಕ್ಷೆಯ ಪ್ರಕಾರ, ರೋಗಿಗಳಲ್ಲಿ ಕನಿಷ್ಠಪಕ್ಷ ವೈದ್ಯರನ್ನು ನೋಡಿದ ತೃಪ್ತಿ, ಟೆಲಿಫೋನ್‌ಗಿಂತ ವಿಡಿಯೊ ಕಾಲ್‍ಗೆ ಹೆಚ್ಚು ಆದ್ಯತೆ, ತಂತ್ರಜ್ಞಾನದ ಅಡೆತಡೆಗಳ ಬಗ್ಗೆ ಹತಾಶೆ ಎಲ್ಲವೂ ಕಂಡುಬಂದಿವೆ.

ಆನ್‍ಲೈನ್ ವೈದ್ಯಕೀಯ ಸಲಹೆಯ ಮೂಲಕ ಮನೆಯನ್ನೇ ಶುಶ್ರೂಷಾಲಯವಾಗಿಸುವ ಕಾಲವಂತೂ ನಮಗಿಷ್ಟವಿರಲಿ ಬಿಡಲಿ ಬಂದಿದೆ. ಅದನ್ನು ಯಾವಾಗ, ಎಷ್ಟು, ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವು, ಅದು ಆರೋಗ್ಯಕ್ಕೆ ಪೂರಕವೇ ಅಲ್ಲವೇ ಎಂಬುದನ್ನು ನಿರ್ಧರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT