ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಭಾಗಿತ್ವದ ಉಜ್ವಲ ಮಾದರಿ

ಸರ್ಕಾರಿ ಶಾಲೆಗಳು ಉಜ್ವಲವಾಗಿ ಬೆಳಗಬೇಕಾದರೆ ಶಿಕ್ಷಕರ ಇಚ್ಛಾಶಕ್ತಿಯ ಜೊತೆ ಸಾರ್ವಜನಿಕರು, ಸ್ವಯಂಸೇವಾ ಸಂಸ್ಥೆಗಳ ಸಕ್ರಿಯ ಸಹಭಾಗಿತ್ವ ಅಗತ್ಯ
Last Updated 27 ನವೆಂಬರ್ 2019, 19:53 IST
ಅಕ್ಷರ ಗಾತ್ರ

ತಾನು ಯಶಸ್ವಿಯಾಗಿ ಕೆಲಸ ನಿರ್ವಹಣೆ ಮಾಡದಿರಲು ವ್ಯವಸ್ಥೆಯ ಲೋಪ, ಹುಳುಕುಗಳ ನೆಪ ಹುಡುಕುವ ಒಂದು ವರ್ಗ ಸಮಾಜದಲ್ಲಿ ಇರುತ್ತದೆ. ಅದೇ ರೀತಿ ತಮ್ಮ ಇತಿಮಿತಿಯಲ್ಲಿ ಉಪಯುಕ್ತ ಕೆಲಸಗಳನ್ನು ಮಾಡುತ್ತಾ ಇತರರನ್ನು ಪ್ರಭಾವಿಸಿ, ಪ್ರೇರೇಪಿಸುವ ಇನ್ನೊಂದು ವರ್ಗವೂ ಸಮಾಜದಲ್ಲಿ ಸಕ್ರಿಯ
ವಾಗಿ ಇರುತ್ತದೆ.

ಮೊದಲ ವರ್ಗಕ್ಕೆ ಸೇರಿದವರು ಎಲ್ಲ ವಿಷಯಗಳಿಗೂ ಭಾವುಕ ನೆಲೆಯಲ್ಲಿ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಎರಡನೇ ವರ್ಗಕ್ಕೆ ಸೇರಿದವರು ಪರಿಸರದಲ್ಲಿನ ಅಂಶಗಳಿಗೆ ಮಾತು, ವರ್ತನೆಗಳಲ್ಲಷ್ಟೇ ಪ್ರತಿಕ್ರಿಯಿಸದೆ, ಅದಕ್ಕೆ ತಾವು ಏನು ಮಾಡಬಹುದು ಎಂಬುದರ ಕಡೆ ಗಮನಹರಿಸಿ, ಸಮಾಜದಲ್ಲಿ ಬದಲಾವಣೆಗಳಿಗೆ ಕಾರಣರಾಗುತ್ತಾರೆ. ಸ್ವಯಂಸ್ಫೂರ್ತಿಯಿಂದ ಸಮಸ್ಯೆಗಳಿಗೆ ಸ್ಪಂದಿಸಿ, ಅವುಗಳ ನಿವಾರಣೆಗೆ ಮುಂದಡಿ ಇಡುವ ಅಭ್ಯಾಸ ಹೊಂದಿರುತ್ತಾರೆ. ಇಂತಹವರು ಪ್ರಶಸ್ತಿ, ಪುರಸ್ಕಾರ, ಪ್ರಚಾರಗಳ ಗೊಡವೆಗೆ ಹೋಗದೆ ಕಾರ್ಯಗಳ ಮೂಲಕ ತಣ್ಣಗೆ ತಮ್ಮ ಪ್ರಭಾವಲಯವನ್ನು ಹಂತ ಹಂತವಾಗಿ ಹಿಗ್ಗಿಸಿ
ಕೊಳ್ಳುತ್ತಾ ಸಾಗುತ್ತಾರೆ. ನಮ್ಮ ನಡುವೆ ತಮ್ಮ ಸೀಮಿತ ಕಾರ್ಯಕ್ಷೇತ್ರದಲ್ಲಿ ಸ್ವಯಂಸ್ಫೂರ್ತಿಯಿಂದ ನಿಸ್ವಾರ್ಥವಾಗಿ ಗಣನೀಯ ಕಾರ್ಯಗಳನ್ನು ಮಾಡಿ, ಇತರರಿಗೆ ಪ್ರೇರಣೆಯಾದ ಉದಾಹರಣೆಗಳನ್ನು ಗಮನಿಸಬಹುದಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಿಂದ 20 ಕಿ.ಮೀ. ದೂರದಲ್ಲಿ ಗೊಣ್ಣಿಗನೂರು ಎಂಬ ಗ್ರಾಮವಿದೆ. ಈ ಗ್ರಾಮದಲ್ಲಿ ಇರುವುದು ಕೇವಲ 92 ಮನೆಗಳು. ಈಗ್ಗೆ ಐದಾರು ವರ್ಷಗಳ ಕೆಳಗೆ ಈ ಗ್ರಾಮವನ್ನು ಸಿಂಧನೂರು ಪಟ್ಟಣದ ನೇತ್ರ ವೈದ್ಯ ಚನ್ನನಗೌಡ ಪಾಟೀಲರು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಮುಂದಾಗುತ್ತಾರೆ. ಸ್ವಂತ ಹಣದ ಜೊತೆಗೆ ಇತರರ ನೆರವಿನಿಂದ ಊರಿನಲ್ಲಿನ ಎಲ್ಲಾ ಮನೆಗಳಲ್ಲಿ ಶೌಚಾಲಯ ನಿರ್ಮಿಸುವುದಲ್ಲದೆ, ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನೂ ಅಭಿವೃದ್ಧಿಪಡಿಸುವ ಕೆಲಸಕ್ಕೆ ಕೈಹಾಕುತ್ತಾರೆ. ಶಾಲೆಯ ಮಾಸ್ತರರಾದ ಕೊಟ್ರೇಶ ಹಿರೇಮಠರು ತಮ್ಮ ಶಾಲಾ ಕೆಲಸದ ಜೊತೆಗೆ ಗ್ರಾಮದ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಇವರಿಗೆ ನೆರವಾಗುತ್ತಾರೆ. ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣಕ್ಕೆ ಗ್ರಾಮಸ್ಥರಲ್ಲಿ ಸ್ಫೂರ್ತಿ ತುಂಬುತ್ತಾ ನಿರಂತರ ಮೇಲ್ವಿಚಾರಣೆ ಮೂಲಕ ಎಲ್ಲಾ ಮನೆಗಳಲ್ಲಿ ಶೌಚಾಲಯ ನಿರ್ಮಾಣಗೊಳ್ಳುವಲ್ಲಿ ಯಶಸ್ಸು ಸಾಧಿಸುತ್ತಾರೆ. ಜೊತೆಗೆ ಶಾಲೆಯನ್ನೂ ಅಭಿವೃದ್ಧಿಪಡಿಸುತ್ತಾರೆ.

ಪ್ರಾಮಾಣಿಕತೆ, ವಿಶ್ವಾಸ, ನಂಬಿಕೆಯ ಕೈಗಳಿಗೆ ಹಣ, ವಸ್ತುಗಳನ್ನು ನೀಡಿ ಬೆಂಬಲಿಸಲು ಅನೇಕ ದಾನಿಗಳು ಸಿದ್ಧರಿರುತ್ತಾರೆ. ಕೊಟ್ರೇಶ ಹಿರೇಮಠ ಅವರ ಈ ಪ್ರಯತ್ನದ ಕುರಿತು 2016ರ ಮಾರ್ಚ್‌ನಲ್ಲಿ ಖಾಸಗಿ ಟಿ.ವಿ. ವಾಹಿನಿಯೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮದ ನಂತರ ಕೊಡಗಿನ ದಾನಿಯೊಬ್ಬರು ₹ 20 ಸಾವಿರ, ಬೆಂಗಳೂರಿನ ಸಹೃದಯರೊಬ್ಬರು ಜೆರಾಕ್ಸ್ ಯಂತ್ರವನ್ನು ಕೊಡುಗೆ ನೀಡುತ್ತಾರೆ. ಬೆಂಗಳೂರಿನ ಇನ್ನೊಬ್ಬರು ₹ 70 ಸಾವಿರವನ್ನು ನೀಡಿ ಶೌಚಾಲಯ ನಿರ್ಮಾಣಕ್ಕೆ ಕಾರಣರಾಗುತ್ತಾರೆ. ಅಮೆರಿಕದಲ್ಲಿ ನೆಲೆಸಿರುವ ಜಿಲ್ಲೆಯ ಶಿಕ್ಷಣ ಪ್ರೇಮಿಯೊಬ್ಬರು ಶಾಲೆಗೆ ಕಂಪ್ಯೂಟರ್ ನೀಡಿದ್ದೂ ಅಲ್ಲದೆ ಅಲ್ಲಿಂದಲೇ ಸ್ಕೈಪ್ ಮೂಲಕ ಕಂಪ್ಯೂಟರ್ ಬಳಕೆ ಕುರಿತು ಅನೇಕ ದಿನಗಳ ಕಾಲ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು. ಇನ್ನು ಕೆಲವರು ಮಕ್ಕಳಿಗೆ ಟೈ, ಬೆಲ್ಟ್, ನೋಟ್‍ಪುಸ್ತಕ, ತಟ್ಟೆ, ಲೋಟ ಇತ್ಯಾದಿಗಳನ್ನು ನೀಡಿದ್ದಾರೆ. ಹೀಗೆ ದಾನಿಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.

ಹತ್ತು ವರ್ಷಗಳಿಗೂ ಅಧಿಕ ಕಾಲ ಇಡೀ ಶಾಲೆಗೆ ಒಬ್ಬರೇ ಶಿಕ್ಷಕರಾಗಿ ದುಡಿದ ಕೊಟ್ರೇಶ ಅವರು ಶಾಲೆಯಲ್ಲಿ ಹಸಿರು ನೆಲೆಸುವಂತೆ ಮಾಡಿದ್ದೂ ಅಲ್ಲದೆ ಶಾಲೆಯ ಮಕ್ಕಳು ಕಲಿಕೆಯಲ್ಲಿ ಮುಂದಿರುವುದನ್ನು ಖಾತರಿಪಡಿಸಿಕೊಳ್ಳುತ್ತಿದ್ದಾರೆ.

ಸುತ್ತಮುತ್ತಲ ಅನೇಕ ಗ್ರಾಮಗಳ ಜನರಿಗೆ ಗೊಣ್ಣಿಗನೂರಿನ ಶಾಲೆಯ ಬಗ್ಗೆ ಅಪರಿಮಿತ ನಂಬಿಕೆ, ವಿಶ್ವಾಸ ಮೂಡಿದೆ. ಈ ಕಾರಣದಿಂದ, 1ರಿಂದ 5ನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ 2015-16ರಲ್ಲಿ ಒಟ್ಟು ಮಕ್ಕಳ ದಾಖಲಾತಿ 45 ಇದ್ದದ್ದು ಈ ವರ್ಷ 203 ಆಗಿದೆ. ಈ ಮಕ್ಕಳ ಪೈಕಿ 23 ಮಕ್ಕಳು ಮಾತ್ರ ಗೊಣ್ಣಿಗನೂರು ಗ್ರಾಮದವರಾಗಿದ್ದರೆ, 180 ಮಕ್ಕಳು ಸುತ್ತಲ 5ರಿಂದ 10 ಕಿ.ಮೀ. ದೂರದ 8 ಹಳ್ಳಿಗಳಿಂದ ಸ್ವಂತ ಹಣ ವ್ಯಯಿಸಿ ಐದು ವಾಹನಗಳಲ್ಲಿ ಗೊಣ್ಣಿಗನೂರು ಶಾಲೆಗೆ ಬರುತ್ತಿದ್ದಾರೆ.

ಎಸ್.ವಿ.ವೈ.ಎಂ. ಸಂಸ್ಥೆಯವರು ರಾಯಚೂರು ಜಿಲ್ಲೆಯ ಇತರ ಶಾಲೆಗಳ ಶಿಕ್ಷಕರಿಗೆ ಗೊಣ್ಣಿಗನೂರು ಶಾಲೆಗೆ ಕ್ಷೇತ್ರ ಭೇಟಿ ಏರ್ಪಡಿಸಿದ್ದರು. ಇದರ ಫಲವಾಗಿ ಪ್ರೇರಣೆ ಪಡೆದ ಜಿಲ್ಲೆಯ ಅನೇಕ ಶಾಲೆಗಳಲ್ಲಿ ಸಾಧನೆಯ ಬೀಜಗಳು ಸದ್ದಿಲ್ಲದೇ ಟಿಸಿಲೊಡೆಯುತ್ತಿವೆ. ಕೆಲವೆಡೆ ಗಿಡಗಳಾಗಿ, ಇನ್ನು ಹಲವೆಡೆ ಮರಗಳಾಗಿ ಬೆಳೆಯುತ್ತಿವೆ.

ಶಿಕ್ಷಕರ ವೈಯಕ್ತಿಕ ಇಚ್ಛಾಶಕ್ತಿಯ ಜೊತೆ ಸಾರ್ವಜನಿಕರು, ಸ್ವಯಂಸೇವಾ ಸಂಸ್ಥೆಗಳ ಸಕ್ರಿಯ ಸಹಭಾಗಿತ್ವವು ಸರ್ಕಾರಿ ಶಾಲೆಗಳು ಉಜ್ವಲವಾಗುವಂತೆ ಖಾತರಿಪಡಿಸಬಲ್ಲವು.

ಲೇಖಕ: ಹಿರಿಯ ಸಹಾಯಕ ನಿರ್ದೇಶಕ ಡಿಎಸ್ಇಆರ್‌ಟಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT