7
ಜೀವನ ಕೌಶಲಗಳನ್ನು ಕಲಿಸುವ ಪ್ರಯತ್ನವೇ ಇಲ್ಲದ ಭಾಷಾ ತರಬೇತಿಯಿಂದ ಮಕ್ಕಳಲ್ಲಿ ಸ್ವತಂತ್ರ ಅಭಿವ್ಯಕ್ತಿ ಸಾಮರ್ಥ್ಯ ಬೆಳೆಸುವುದು ಅಸಾಧ್ಯ

ತೆರೆದ ಪುಸ್ತಕ, ತೆರೆಯುವ ಮನಸ್ಸು

Published:
Updated:

ತೆರೆದ ಪುಸ್ತಕ ಪರೀಕ್ಷೆಯ ಕುರಿತು ಈಗಲಾದರೂ ಜಿಜ್ಞಾಸೆ ನಡೆಯುತ್ತಿರುವುದು ಸ್ವಾಗತಾರ್ಹ. ಈ ಹೇಳಿಕೆಯನ್ನೇ ಬಾಲಿಶ ಎಂದು ಕರೆದಿರುವ ಪತ್ತಂಗಿ ಎಸ್. ಮುರಳಿಯವರ ಮಾತಿನಿಂದಲೇ ಆರಂಭಿಸೋಣ. ಇದೊಂದು ಬೀಸು ಹೇಳಿಕೆ. ‘ಇದು ಸ್ಪರ್ಧಾತ್ಮಕ ಯುಗ, ಮುಂದೆ ಮಕ್ಕಳು ಸ್ಪರ್ಧೆಯನ್ನು ಎದುರಿಸಿ ಬಾಳಿ-ಬದುಕಲು ಸಾಧ್ಯವೇ’ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ಆದರೆ ಶಿಕ್ಷಣ ಮತ್ತು ಪರೀಕ್ಷೆಗಳ ಉದ್ದೇಶವೇನು ಎಂದು ಪ್ರಶ್ನೆ ಮಾಡಿಕೊಂಡರೆ ಇದಕ್ಕೆ ಉತ್ತರ ಸಿಗುತ್ತದೆ. ಈಗಿನ ಪದ್ಧತಿಯಲ್ಲಿ ಮಕ್ಕಳು ಪಠ್ಯದಲ್ಲಿರುವ ಹಾಗೆಯೇ ಕಂಠಪಾಠ ಮಾಡಿ, ಪರೀಕ್ಷೆಯಲ್ಲಿ ಯಥಾವತ್ ಬರೆದರೆ ಮಾತ್ರ ಅವರಿಗೆ ಅಂಕ ಸಿಗುವುದು. ಹೆಚ್ಚಿನ ಅಂಕ ಎಂದರೆ ಹೆಚ್ಚು ಚೆನ್ನಾಗಿ ಉರುಹೊಡೆದು ಬರೆಯುವುದು ಎಂದರ್ಥ. ಇದರಲ್ಲಿ ಮಕ್ಕಳ ಸ್ವಂತಿಕೆ, ಸೃಜನಶೀಲತೆ ಸೊನ್ನೆ. ಮುಂದೆ ಬದುಕಿನಲ್ಲಿ ಯಶಸ್ವಿಯಾಗುವವರು ಪರೀಕ್ಷೆಯಲ್ಲಿ ತೋರಿದ ಜಾಣತನದಿಂದ ಅಲ್ಲ, ಬದಲಿಗೆ ಅವರು ಶಾಲೆಯ ಹೊರಗೆ ಪರಿಸರದಿಂದ ರೂಢಿಸಿಕೊಂಡ ಕಲೆ, ಕೌಶಲಗಳಿಂದ. ಅದಕ್ಕೇ ಹಲವು ಬಾರಿ, ಕಡಿಮೆ ಅಂಕ ಪಡೆದ (ದಡ್ಡರಲ್ಲದ) ಯುವಜನರೇ ಜೀವನದಲ್ಲಿ ಸ್ವತಂತ್ರವಾಗಿ ಯಶಸ್ವಿಯಾಗುವುದು.

ಹಾಗೆ ನೋಡಿದರೆ ಅರವಿಂದ ಚೊಕ್ಕಾಡಿಯವರ ಬರಹ (ಚರ್ಚೆ, ಜುಲೈ 2) ಪ್ರಸ್ತಾವಿತ ಪದ್ಧತಿಯ ಪ್ರಯೋಜನಗಳ ಉತ್ತಮ ಚಿತ್ರಣವನ್ನು ನೀಡಿದೆ. ಇವರ ಲೇಖನದಲ್ಲಿ ಕೊನೆಯ ಎರಡು ಪ್ಯಾರಾಗಳಲ್ಲಿ ಬರೆದಿರುವ ಅಂಶದ ಬಗ್ಗೆ ನನ್ನ ಪ್ರತಿಕ್ರಿಯೆಯನ್ನು ಸೇರಿಸುತ್ತೇನೆ. ಅಲ್ಲಿ ಅವರು ಭಾಷಾ ಮಾಧ್ಯಮದ ಪ್ರಸ್ತಾಪವನ್ನು ಮಾಡಿದ್ದಾರೆ. ಈ ಪದ್ಧತಿಯಲ್ಲಿ ಸ್ವಂತ ಆಲೋಚನೆಯಿಂದ, ತರ್ಕವನ್ನು ಬಳಸಿ ಬರೆಯಬೇಕು ಎಂದರೆ ಮಕ್ಕಳ ಭಾಷಾಭಿವ್ಯಕ್ತಿ ಸಾಮರ್ಥ್ಯ ತುಂಬಾ ಚೆನ್ನಾಗಿರಬೇಕಾಗುತ್ತದೆ. ಪರೀಕ್ಷೆ
ಯಲ್ಲಿ ಮೌಲ್ಯಮಾಪನಕ್ಕೆ ಒಳಗಾಗುವುದು ‘ಬರಹ’ ಕೌಶಲ ಮಾತ್ರ. ಯಾವುದೇ ಭಾಷೆಯಲ್ಲಿ ಬರಹ ಕೌಶಲವು ಸಮರ್ಥವಾಗಿ ಬೆಳೆಯಬೇಕು ಎಂದರೆ ಅದಕ್ಕೆ ಬುನಾದಿಯಾಗಿ ಆ ಭಾಷೆಯಲ್ಲಿ ಪರಿಣಾಮಕಾರಿಯಾಗಿ ಆಲಿಸುವ, ಮಾತನಾಡುವ ಮತ್ತು ಬರೆಯುವ ಕೌಶಲಗಳು ಬೆಳೆಯಬೇಕಾಗುತ್ತದೆ. ಶಾಲಾ ವಾತಾವರಣದಲ್ಲಿಯೇ,ಔಪಚಾರಿಕತೆಯಲ್ಲಿಯೂ ಅನೌಪಚಾರಿಕ ಪರಿಶ್ರಮ, ಚಟುವಟಿಕೆ ಇತ್ಯಾದಿಗಳಿಂದ ಇವೆಲ್ಲವನ್ನೂ ರೂಢಿಸಿಕೊಂಡಾಗ ಮಾತ್ರ ಆ ಭಾಷೆಯಲ್ಲಿ ಗ್ರಹಿಕೆ ಮತ್ತು ಅಭಿವ್ಯಕ್ತಿ ಸಬಲಗೊಳ್ಳುತ್ತದೆ. ಹೀಗೆಂದಾಗ ಶಾಲಾ ಶಿಕ್ಷಣಕ್ಕಾಗಿ ಯಾವ ಭಾಷೆಯನ್ನು ಬಳಸುತ್ತೇವೆ?

ಈಗ ಎಲ್ಲರೂ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವನ್ನಾಗಿ ಒಪ್ಪಿಕೊಳ್ಳುವ ಘೋರ ತಪ್ಪನ್ನು ಮಾಡುತ್ತಿದ್ದಾರೆ. ಮನೆಯಲ್ಲಿ ಇಂಗ್ಲಿಷ್ ಭಾಷಾ ವಾತಾವರಣ ಇದ್ದು, ಶಾಲೆಹೊರಗೂ ಇಂಗ್ಲಿಷಿನಲ್ಲಿ ಸರಾಗವಾಗಿ ದೈನಂದಿನ ಅಗತ್ಯಗಳಿಗೂ ಮಾತಾಡುವ ಸಹಜ ಅವಕಾಶವಿದ್ದರೆ, ಶಾಲೆಯಲ್ಲಿಯೂ ಇಂಗ್ಲಿಷ್ ಮಾತನಾಡುವ, ಕಲಿಸುವ ಸತ್ವಯುತ ಸಾಮರ್ಥ್ಯ ಇರುವ ಶಿಕ್ಷಕರು ಇರುವುದಾದರೆ, ಇಂಗ್ಲಿಷ್ ಭಾಷೆಯನ್ನು ಮಾಧ್ಯಮವನ್ನಾಗಿ ಬಳಸಬಹುದು. ರಾಜ್ಯದ ಬಹುತೇಕ ಮಕ್ಕಳಿಗೆ ಈ ಸಹಜ ಅವಕಾಶವಿಲ್ಲ. ಮಾತೃಭಾಷೆ ಅಥವಾ ಕನ್ನಡ ಭಾಷೆಯನ್ನು ಮಾತ್ರ ಕಲಿತಿರುವ ಮಕ್ಕಳು, ಶಾಲೆಯಲ್ಲಿ ಆರಂಭದಲ್ಲಿಯೇ ಇಂಗ್ಲಿಷ್‌ ಅನ್ನು ಕಲಿತು, ಕಲಿಯುತ್ತಿರುವಾಗಲೇ ಇಂಗ್ಲಿಷ್‌ನಲ್ಲಿ ಓದಿ, ಬರೆದು... ಇದು ನಿಜವಾಗಿಯೂ ನಮ್ಮ ಮಕ್ಕಳ ಮೇಲೆ ನಾವು ಮಾಡುತ್ತಿರುವ ಶೈಕ್ಷಣಿಕ ದೌರ್ಜನ್ಯ. ರಾಜ್ಯದ ಹೆಚ್ಚು ಕಡಿಮೆ ಎಲ್ಲ ಮಕ್ಕಳಿಗೆ ಸಾಮಾನ್ಯವಾಗಿ ಆಡುಮಾತಿನಲ್ಲಿ ಅಭ್ಯಾಸವಾಗಿರುವ ಕನ್ನಡವನ್ನು ಶಿಕ್ಷಣದ ಮಾಧ್ಯಮವನ್ನಾಗಿ ಬಳಸುವುದಾದರೆ ಇಂಥ ಬಹುತೇಕ ಅವೈಜ್ಞಾನಿಕ ತೊಡರುಗಳನ್ನು ನಿವಾರಿಸಿ, ಮಕ್ಕಳಲ್ಲಿ ಪರಿಣಾಮಕಾರಿಯಾದ ಭಾಷಾ ಸಾಮರ್ಥ್ಯವನ್ನು ಬೆಳೆಸಬಹುದು. ಈ ಕಾರಣಕ್ಕಾಗಿಯಾದರೂ ಪೋಷಕರು ಮತ್ತು ಸಾಮಾಜಿಕವಾಗಿ ಪ್ರಜ್ಞಾವಂತರು ಇಂಗ್ಲಿಷ್ ಮಾಧ್ಯಮವನ್ನು ಅಲ್ಲಗಳೆದು, ಕನ್ನಡ ಮಾಧ್ಯಮಕ್ಕೆ ಒಲವು ತೋರುವುದು ಅನಿವಾರ್ಯವಾದೀತು. ಇಲ್ಲಿ ನಾನು ‘ಮಾತೃಭಾಷೆ’ಯಲ್ಲಿ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಬಳಸಿಲ್ಲ. ಏಕೆಂದರೆ, ಉರ್ದು, ತುಳು, ತೆಲುಗು, ಬಂಜಾರ, ಕೊಡವ, ಕೊರಗ ಇತ್ಯಾದಿ ಅನೇಕ ಮಾತೃಭಾಷೆಗಳು ರಾಜ್ಯದಲ್ಲಿ ಮನೆಮಾತಾಗಿದ್ದರೂ, ಅವುಗಳು ಈಗಿರುವ ಭಾಷಾಸ್ಥಿತಿಯಲ್ಲಿ ಅವುಗಳನ್ನು ಶಿಕ್ಷಣದ ಮಾಧ್ಯಮವನ್ನಾಗಿ ಬಳಸುವುದು ಕಷ್ಟ ಮತ್ತು ಅನಗತ್ಯ. ಈ ಚರ್ಚೆ ಬೇರೆ.

ಹೀಗಾಗಿ, ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು ಅಳವಡಿಸಿಕೊಂಡರೆ ಮಕ್ಕಳಿಗೆ ಕೃತ್ರಿಮವಾದ ದೊಡ್ಡ ಹೊರೆ ಕಡಿಮೆಯಾಗುತ್ತದೆ ಎನ್ನುವುದು ನಿಜವಾದರೂ ಮನೆಯಲ್ಲಿ, ನೆರೆಹೊರೆಯಲ್ಲಿ ಕಲಿತ ಕನ್ನಡವೇ ಶಿಕ್ಷಣ ಮಾಧ್ಯಮವಾಗುವುದಕ್ಕೆ ಹಾಗೆಹಾಗೆಯೇ ಸಾಕಾಗಿಬಿಡುತ್ತದೆಯೇ ಎಂದು ಪ್ರಶ್ನಿಸಿಕೊಂಡರೆ ನಮ್ಮ ಮುಂದಿರುವ ಇನ್ನೊಂದು ಗಹನವಾದ ಸಮಸ್ಯೆ ಗಮನಕ್ಕೆ ಬರುತ್ತದೆ.

ಈಗಿರುವ ಕನ್ನಡ ಭಾಷಾ ಪಠ್ಯಗಳನ್ನು ಗಮನಿಸಿ ನೋಡಿ. ಅದರಲ್ಲಿ ಮಕ್ಕಳಿಗೆ ಕನ್ನಡ ಭಾಷಾ ಕೌಶಲಗಳನ್ನು ಕಲಿಸುವ ಪ್ರಯತ್ನ ತುಂಬಾ ಗೌಣವಾಗಿದೆ. ಕನ್ನಡಪಠ್ಯಪುಸ್ತಕಗಳಲ್ಲಿಯೂ ಕನ್ನಡದಲ್ಲಿ ನಾಡಿನ ಇತಿಹಾಸ, ಪುಣ್ಯಪುರುಷರು, ಪ್ರೇಕ್ಷಣೀಯ ತಾಣಗಳು, ಸಂಸ್ಕೃತಿ ಮತ್ತು ಸಾಹಿತ್ಯದಲ್ಲಿಯೂ ಪಂಪ– ರನ್ನರಿಂದ ಹಿಡಿದು ವಚನ, ನವೋದಯ, ಬಂಡಾಯ,ಸ್ತ್ರೀವಾದಿ, ಮುಸ್ಲಿಂ, ದಲಿತ ಇತ್ಯಾದಿ ಸಾಹಿತ್ಯ ಶಾಖೆಗಳನ್ನು ಸೇರಿಸಬೇಕಿದೆ. ಅಷ್ಟೇ ಅಲ್ಲ, ಪ್ರತಿಯೊಂದು ಜಿಲ್ಲೆಯಿಂದಲೂ ಜಾತಿಯಿಂದಲೂ ಲೇಖಕರ ಬರಹಗಳು ಪಠ್ಯದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕಾದ ಅನಿವಾರ್ಯ ಇದೆ.ಈ ರೀತಿಯ ಭಾಷಾ ತರಬೇತಿಯಿಂದ ಮಕ್ಕಳಲ್ಲಿ ತರ್ಕ, ಸ್ವತಂತ್ರ ಅಭಿವ್ಯಕ್ತಿ ಬೆಳೆಸುವುದು ಅಸಾಧ್ಯ.

ಇನ್ನೊಂದು ದೊಡ್ಡ ಪ್ರಶ್ನೆ, ಇತರ ವಿಷಯಗಳ ಪುಸ್ತಕಗಳ ರಚನೆಯೂ ತೆರೆದ ಪುಸ್ತಕ ಪರೀಕ್ಷೆಗಳ ಅಗತ್ಯಕ್ಕೆ ತಕ್ಕಂತೆ ಇಲ್ಲ. ಇಲ್ಲಿರುವ ಪಾಠಗಳು ಕೇವಲ ಮಾಹಿತಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತವೆ. ಪ್ರಶ್ನೆ, ಅಭ್ಯಾಸಗಳೂ ಅವುಗಳನ್ನು ಖಚಿತಪಡಿಸಿಕೊಳ್ಳುತ್ತವೆ. ಅದನ್ನು ಬಿಟ್ಟು ಬರೆದರೆ ಮಕ್ಕಳೇನಾದರೂ ಒಂದು ವಾಕ್ಯವನ್ನು ಸ್ವಂತಬರೆದರೆ ಅವರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಭೂಪತಿಗಳು ಉತ್ತರವನ್ನು ತಪ್ಪು ಎಂದು ಗುರುತಿಸುತ್ತಾರೆ. ಆದ್ದರಿಂದ ಒಂದನೇ ತರಗತಿಯಿಂದಲೇ ಪಠ್ಯಪುಸ್ತಕಗಳು ಆಮೂಲಾಗ್ರವಾಗಿ ಬದಲಾಗಬೇಕು.

ಹಾಗೆಯೇ, ಈಗಿನ ಶಿಕ್ಷಕ ತರಬೇತಿ, ಶಿಕ್ಷಕರ ನೇಮಕಾತಿ, ಬೋಧನಾಕ್ರಮ ಎಲ್ಲವೂ ಈಗಿರುವ ಪಠ್ಯ, ಪಠ್ಯಪುಸ್ತಕ, ಪರೀಕ್ಷಾ ಕ್ರಮಕ್ಕೆ ತಕ್ಕ ಹಾಗೆ ಇವೆ. ಮಕ್ಕಳಲ್ಲಿ ಸ್ವತಂತ್ರವಾದ ಜಿಜ್ಞಾಸೆ, ಪ್ರಶ್ನೆ ಕೇಳಿ ಉತ್ತರವನ್ನು ಹುಡುಕಿಕೊಳ್ಳುವ ಕೌಶಲ, ಸ್ವತಂತ್ರ ಭಾಷಾಭಿವ್ಯಕ್ತಿ ಇವುಗಳನ್ನು ಬೆಳೆಸುವ ರೀತಿಯ ಶಿಕ್ಷಣ, ತರಬೇತಿ, ಪ್ರೇರಣೆ, ಮಾರ್ಗದರ್ಶನ ನೀಡುವ ಸಾಮರ್ಥ್ಯ ಸಾಮಾನ್ಯ ಶಿಕ್ಷಕರಲ್ಲಿ ಇಲ್ಲ. ಅಲ್ಲದೇ, ಇಂಥ ಒಂದು ಪ್ರಯತ್ನಕ್ಕಾಗಿ ಶಾಲೆಯಲ್ಲಿರುವ ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಕೇಂದ್ರ, ಆಟದ ಬಯಲು, ಗಿಡಮರ, ನೆಲ, ನೀರು ಹೀಗೆ ಅನೇಕ ಸೌಕರ್ಯಗಳು ಶಾಲಾ ಆವರಣದಲ್ಲಿಯೇ ಇರಬೇಕಾಗುತ್ತವೆ. ಇದು ಬಹುತೇಕ ಶಾಲೆಗಳಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವವರೆಗೆ ಕೇವಲ ಪರೀಕ್ಷಾ ಪದ್ಧತಿಯನ್ನು ಬದಲಾಯಿಸುವುದು ಮಕ್ಕಳ ದೃಷ್ಟಿಯಿಂದ ಪ್ರಯೋಜನಕ್ಕಿಂತ ಹೆಚ್ಚಾಗಿ ಹಾನಿಕಾರಕವೇ ಆಗುವ ಸಾಧ್ಯತೆ ಹೆಚ್ಚು. ಸಮಾನ ಶಿಕ್ಷಣ, ಸಮಾನ ಸೌಕರ್ಯ ಇತ್ಯಾದಿಗಳೂ ಪರೀಕ್ಷಾ ಪದ್ಧತಿಯೊಂದಿಗೇ ಸಾಗಬೇಕಾಗುತ್ತದೆ.
ಸರಿ. ಶಿಕ್ಷಣ ಸಚಿವರು ಒಂದು ಕ್ರಾಂತಿಕಾರಿ ಬದಲಾವಣೆಗೆ ಚಾಲನೆಯನ್ನು ನೀಡಿದ್ದಾರೆ. ಶಿಕ್ಷಣ ತಜ್ಞರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಕ್ಕಳು ಮತ್ತು ಪೋಷಕರಲ್ಲಿ ಈ ಕುರಿತು ವ್ಯಾಪಕ ಚರ್ಚೆ ಆಗುವವರೆಗೆ ಅವಸರದ ಹೆಜ್ಜೆಯನ್ನು ಎತ್ತುವುದು ಸರಿಯಲ್ಲ. ಆದರೂ ತೆರೆದ ಪುಸ್ತಕದ ಪರೀಕ್ಷಾ ಪದ್ಧತಿಗೆ ನನ್ನದೂ ಸ್ವಾಗತವಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !