ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠುವಾ ಅತ್ಯಾಚಾರ ಸಂತ್ರಸ್ತೆಯ ಮೃತದೇಹವನ್ನು ದಫನ ಮಾಡಲು ಗ್ರಾಮಸ್ಥರ ವಿರೋಧ; ಗ್ರಾಮದಿಂದ 8 ಕಿಮೀ ದೂರದಲ್ಲಿ ನಡೆಯಿತು ಅಂತ್ಯಕ್ರಿಯೆ

Last Updated 16 ಏಪ್ರಿಲ್ 2018, 6:50 IST
ಅಕ್ಷರ ಗಾತ್ರ

ಶ್ರೀನಗರ:  ಕಠುವಾದಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಎಂಟರ ಹರೆಯದ ಬಾಲಕಿಯ ಮೃತದೇಹವನ್ನು ಹೂಳಲು ಅಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತ ಪಡಿಸಿದ್ದರಿಂದ ಮೃತದೇಹವನ್ನು ಗ್ರಾಮದಿಂದ 8 ಕಿಮೀ ದೂರದ ಸ್ಥಳದಲ್ಲಿ ದಫನ ಮಾಡಲಾಗಿದೆ.

ಕಠುವಾಗ ರಸಾನ ಗ್ರಾಮದಿಂದ 8 ಕಿಮೀ ದೂರದಲ್ಲಿರುವ ಗುಡ್ಡಗಾಡು ಪ್ರದೇಶವೊಂದರಲ್ಲಿ ಅತ್ಯಾಚಾರ ಸಂತ್ರಸ್ತೆ ಬಾಲಕಿಯ ಅಂತ್ಯಸಂಸ್ಕಾರ ನಡೆದಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ನಮ್ಮ ಸಂಪ್ರದಾಯದ ಪ್ರಕಾರ ದಫನ ಮಾಡಿದ ಜಾಗದಲ್ಲಿ ತಕ್ಷಣವೇ ಗೋರಿ ನಿರ್ಮಿಸುವುದಿಲ್ಲ. ಆಕೆಯ ಹೆತ್ತವರು ವಾಪಸ್ ಆದ ನಂತರವೇ ಇನ್ನುಳಿದ ಕಾರ್ಯಗಳನ್ನು ಮಾಡಲಾಗುವುದು ಎಂದು ಬಾಲಕಿಯ ದೂರದ ಸಂಬಂಧಿಯೊಬ್ಬರು ಹೇಳಿದ್ದಾರೆ.

ಇದೇ ವರ್ಷದ ಜನವರಿಯಲ್ಲಿ ಎಂಟು ವರ್ಷದ ಬಾಲೆಯೊಬ್ಬಳನ್ನು ಅಪಹರಿಸಿ, ಅತ್ಯಾಚಾರ ಎಸಗಿ, ದೈಹಿಕವಾಗಿ ಹಿಂಸಿಸಿ, ಕೊಂದುಹಾಕಿದ ಘಟನೆ ಕಠುವಾ ಜಿಲ್ಲೆಯಲ್ಲಿ ನಡೆದಿತ್ತು. ಸಂತ್ರಸ್ಥೆಯು ಮುಸ್ಲಿಂ ಬುಡಕಟ್ಟು ಸಮುದಾಯಕ್ಕೆ ಸೇರಿದವಳು. ಬಾಲಕಿ ಕಾಣೆಯಾದ ಒಂದು ವಾರದ ಬಳಿಕ ಜನವರಿ 17ರಂದು ಆಕೆಯ ಶವ ಪತ್ತೆಯಾಗಿತ್ತು.

ಬಾಲಕಿಯ ಸಾಕು ತಂದೆ ಆಕೆಯ ಮೃತದೇಹವನ್ನು ರಸಾನದಲ್ಲಿರುವ ಭೂಮಿಯಲ್ಲಿ ದಫನ ಮಾಡಲು ಬಯಸಿದ್ದರು. ಆದರೆ ಬಾಲಕಿಯ ಕುಟುಂಬ ಬಕರ್ವಾಲಾ ಮುಸ್ಲಿಂ ಜನಾಂಗಕ್ಕೆ ಸೇರಿದ್ದು ಅಲ್ಲ ಎಂಬ ಕಾರಣವೊಡ್ಡಿ ಮೃತದೇಹವನ್ನು ರಸಾನದಲ್ಲಿ ದಫನ ಮಾಡಲು ಅಲ್ಲಿನ ಗ್ರಾಮದವರು ವಿರೋಧ ವ್ಯಕ್ತಪಡಿಸಿದ್ದರು. 

ಸಂಜೆ 6 ಗಂಟೆಯ ವೇಳೆ ನಾವು ಮೃತದೇಹವನ್ನು ದಫನ ಮಾಡಲು ಗುಂಡಿ ತೋಡುತ್ತಿದ್ದಾಗ ಗ್ರಾಮಸ್ಥರು ಬಂದು ತಡೆಯೊಡ್ಡಿದ್ದಾರೆ. ಆ ಜಮೀನು ನಮಗೆ ಸೇರಿದ್ದಲ್ಲ ಎಂದು ಅವರು ದಾಖಲೆ ಪತ್ರಗಳನ್ನು ತೋರಿಸಿದ್ದರು ಎಂದು ಬಾಲಕಿಯ ಸಾಕು ತಾಯಿ ಹೇಳಿದ್ದಾರೆ.
ಬಾಲಕಿಯ ಸಾಕು ತಂದೆ ದಶಕಗಳ ಹಿಂದೆ ಹಿಂದೂ ಕುಟಂಬವೊಂದರಿಂದ ಜಮೀನು ಖರೀದಿಸಿದ್ದರು. ಆದರೆ ದಾಖಲೆ ಪತ್ರಗಳಲ್ಲಿ ಈ ವಹಿವಾಟಿನ ಬಗ್ಗೆ ಮಾಹಿತಿ ಇರಲಿಲ್ಲ. ಹಾಗಾಗಿ ಗ್ರಾಮಸ್ಥರು ಇದನ್ನೇ ನೆಪವಾಗಿರಿಸಿ, ಬಾಲಕಿಯ ಅಂತ್ಯಕ್ರಿಯೆಗೆ ತಡೆಯೊಡ್ಡಿದ್ದಾರೆ ಎಂದು ಬಾಲಕಿಯ ಸಂಬಂಧಿಕರು ಹೇಳಿದ್ದಾರೆ.

ಬಕರ್ವಾಲಾಗಳು ನಮ್ಮ ಜಮೀನನ್ನು ಸ್ವಾಧೀನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ನಾವು ಒಪ್ಪಲ್ಲ, ಬಾಲಕಿಯ ಮೃತದೇಹವನ್ನು ದಫನ ಮಾಡಲು ನಾವು ಬೇರೆ ಸ್ಥಳವನ್ನು ಸೂಚಿಸಿದ್ದೇವೆ ಎಂದು ಅಲ್ಲಿನ ಗ್ರಾಮದವರಾದ ರೋಹಿತ್ ಖಜುರಿಯಾ ಹೇಳಿದ್ದಾರೆ.

ಜನವರಿಯ ನಡುಗುವ ಚಳಿಯಲ್ಲಿ ಬಾಲಕಿಯ ಮೃತದೇಹವನ್ನು ಆಕೆಯ ಕುಟುಂಬ ಕನಾಹ್ ಗ್ರಾಮಕ್ಕೆ ಕೊಂಡೊಯ್ದು ಅಲ್ಲಿನ ಗುಡ್ಡಪ್ರದೇಶವೊಂದರಲ್ಲಿ ದಫನ ಮಾಡಿತ್ತು.

ಒಂದು ಮಗುವಿನ ಮೃತದೇಹವನ್ನು ದಫನ ಮಾಡಲು ಅದೆಷ್ಟು ಜಮೀನು ಬೇಕು? ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಮಗುವಿನ ಮೃತದೇಹ ನಮ್ಮ ಕೈಯಲ್ಲಿತ್ತು. ಇಂಥಾ ಸಮಯದಲ್ಲಿಯಾದರೂ ಗ್ರಾಮಸ್ಥರು ಕರುಣೆ ತೋರಬಹುದಿತ್ತು ಎಂದು ಬಾಲಕಿಯ ಸಾಕು ತಂದೆ ಕಣ್ಣೀರು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT