ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ: ಕಾಡಬೇಕೇ ಪಾಪಪ್ರಜ್ಞೆ?

Last Updated 8 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

‘ಮತದಾನ ಮರೆತು ಪ್ರವಾಸ ಹೋದರೆ ಎಚ್ಚರ...!’ –ಹೀಗೊಂದು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಜಾಪ್ರಭುತ್ವದ ಪವಿತ್ರ ಕಾರ್ಯಕ್ಕಾಗಿ ನೀಡುವ ರಜೆ ಬಳಸಿ ಪ್ರವಾಸ, ಮೋಜು, ಮಸ್ತಿ ಎಂದು ಮಜಾ ಉಡಾಯಿಸುವವರನ್ನು ಉದ್ದೇಶಿಸಿ ರವಾನಿಸಿರುವ ಈ ಸಂದೇಶ ಕೆಲವರ ಎದೆ ಬಡಿತ ಹೆಚ್ಚಿಸಿದೆ! ಮತದಾನದ ದಿನ ರೆಸಾರ್ಟ್, ಪ್ರವಾಸಿ ತಾಣಗಳಲ್ಲಿ ವಿಹರಿಸುವವರ ವಾಹನಗಳಿಗೆ ಹಾನಿ ಮಾಡಲಾಗುವುದು, ಚಕ್ರ ಪಂಚರ್ ಮಾಡಲಾಗುವುದು ಎಂಬ ಈ ಬೆದರಿಕೆ ಕಾನೂನಿಗೆ ವಿರುದ್ಧವಾದರೂ ಈ ಭಯದಿಂದಲಾದರೂ ಜನ ಮತ ಹಾಕಲಿ ಎಂಬ ಕಾಳಜಿ ಇದರ ಹಿಂದಿರುವುದು ನಿಜ.

ಹೌದು, ಅತಿ ವಿದ್ಯಾವಂತರೆನಿಸಿಕೊಂಡವರು, ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದು ಮತದಾನದ ಬಗ್ಗೆ ನಿರ್ಲಕ್ಷ್ಯ ತೋರುವವರ ಬಗ್ಗೆ ಅಸಮಾಧಾನದ ಹೊಗೆ ದಟ್ಟವಾಗುತ್ತಿದೆ. ಎಲ್ಲಾ ಅನುಕೂಲಗಳ ನಡುವೆಯೂ ಮತ ಚಲಾಯಿಸದೆ ಪ್ರಜಾಪ್ರಭುತ್ವದ ಹಿನ್ನಡೆಗೆ ಕಾರಣರಾಗುತ್ತಿರುವವರ ವಿರುದ್ಧ ಈಗ ಎಲ್ಲೆಡೆ ಆಕ್ರೋಶದ ದನಿ ಕೇಳಿಬರುತ್ತಿದೆ. ಜನ ತಮ್ಮ ಹಕ್ಕು, ಕರ್ತವ್ಯ ಪಾಲಿಸದಿದ್ದಾಗ ಹೀಗೆ ದನಿಯೇರಿಸಿ ಕೇಳುವುದು, ಅಂಥವರ ವಿರುದ್ಧ ಅಭಿಯಾನ ಹುಟ್ಟು ಹಾಕುವುದು ಪ್ರಜಾಪ್ರಭುತ್ವದ ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ ಪ್ರಶ್ನಿಸುವ ವಿಧಾನ, ಮಾರ್ಗ ನ್ಯಾಯಸಮ್ಮತವಾಗಿರಬೇಕಷ್ಟೆ.

ವಿಶ್ವದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರವೆಂಬ ಕೋಡು ನಮಗಿದೆ. ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ
ಮಾಡಿ ಆ ಮೂಲಕ ಸರ್ಕಾರವೆಂಬ ಆಡಳಿತ ವ್ಯವಸ್ಥೆಸ್ಥಾಪಿಸಲು ಚುನಾವಣೆಯೇ ಮೂಲಾಧಾರ. ಐದು
ವರ್ಷಗಳಿಗೊಮ್ಮೆ ಸಿಗುವ ಈ ಹಕ್ಕನ್ನು ವಿವೇಚನೆಯಿಂದ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗುವುದು. ಜನತಂತ್ರದ ದೊಡ್ಡ ಹಬ್ಬದ ಈ ಸಂಭ್ರಮದಲ್ಲಿ ಒಂದಿಷ್ಟು ಮಂದಿ ಮಾತ್ರ ಪಾಲ್ಗೊಂಡರೆ ಸಾಲದು. ಹಳ್ಳಿ, ನಗರವೆನ್ನದೆ, ಜಾತಿ, ಕುಲ, ಧರ್ಮಗಳ ಭೇದವಿಲ್ಲದೆ, ಬಡವ ಬಲ್ಲಿದನೆಂಬ ತಾರತಮ್ಯವಿಲ್ಲದೆ ಸರ್ವರೂ ಇದರಲ್ಲಿ ಸೇರಿ ಸಂಭ್ರಮಿಸಬೇಕು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವು ಚಲಾಯಿಸುವ ಮತ ನಮ್ಮ ಪ್ರಬಲ ಧ್ವನಿಯಷ್ಟೇ ಅಲ್ಲದೆ ಅಸ್ತ್ರವೂ ಹೌದು. ನಾವು ಆರಿಸುವ ವ್ಯಕ್ತಿ ಮುಂದಿನ ಐದು ವರ್ಷಗಳ ಕಾಲ ನಾಡಿನ ಅಭಿವೃದ್ಧಿಗಾಗಿ ದುಡಿಯಬೇಕು. ಹಾಗಾಗಿ ಯಾವುದೇ ಆಸೆ, ಆಮಿಷ, ಪ್ರಲೋಭನೆಗಳಿಗೆ ಒಳಗಾಗದೆ ವಿವೇಚನೆಯಿಂದ ಮತದಾನ ಮಾಡಬೇಕು. ಅನ್ನದಾನ, ರಕ್ತದಾನಗಳಂತೆ ಮತದಾನವೂ ಶ್ರೇಷ್ಠ ದಾನ. ಇದು ದಾನವಾಗಿರಬೇಕೇ ಹೊರತು ಮಾರಾಟದ ಸರಕಾಗಬಾರದು. ಇದನ್ನೇ ನೈತಿಕ ಮತದಾನವೆನ್ನುವುದು. ನಾಳೆ ನಮ್ಮ ಪ್ರತಿನಿಧಿ ಅಥವಾ ಸರ್ಕಾರ ತಪ್ಪು ಮಾಡಿದರೆ ಪ್ರಶ್ನಿಸುವ, ಟೀಕಿಸುವ, ಪ್ರತಿಭಟಿಸುವ, ಸಲಹೆ ನೀಡುವ ಮನೋಬಲ, ಆತ್ಮಸ್ಥೈರ್ಯ ದೊರೆಯುವುದು ನಾವು ಪ್ರಾಮಾಣಿಕವಾಗಿ ಮತ ಚಲಾಯಿಸಿದಾಗ ಮಾತ್ರ. ಹಾಗಾಗಿ ಮತದಾನ ಮಾಡದಿದ್ದರೆ ಅಪರಾಧ ಎಸಗಿದಂತಾಗುತ್ತದೆ. ಈ ಲೋಪ ಪಾಪಪ್ರಜ್ಞೆಯಾಗಿ ನಮ್ಮನ್ನು ಸದಾ ಕಾಡಬೇಕು!

ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡುವುದು ನಿಜಕ್ಕೂ ದೊಡ್ಡ ಹೊಣೆಗಾರಿಕೆ. ಮತದಾನ ಮಾಡುವುದು ಕಡ್ಡಾಯ ಎಂಬಂತೆ ಎಲ್ಲರೂ ಕ್ರಿಯಾಶೀಲರಾದಾಗ ಅಭ್ಯರ್ಥಿಗಳಲ್ಲಿ ಯೋಗ್ಯನಾದವನು ಆರಿಸಿ ಬರುತ್ತಾನೆ. ಮತದಾನ ಪ್ರಮಾಣ ಕಡಿಮೆಯಿದ್ದಲ್ಲಿ ಮತದಾರರನ್ನು ಭ್ರಷ್ಟರನ್ನಾಗಿಸುವುದು ಸುಲಭ. ಅತ್ಯಧಿಕ ಮತದಾನ ಆಗುವುದಾದರೆ ಎಲ್ಲರಿಗೂ ಹಣ, ಹೆಂಡ, ವಸ್ತುಗಳ ರೂಪದಲ್ಲಿ ಆಮಿಷ ಒಡ್ಡುವುದು ಕಷ್ಟವಾಗುತ್ತದೆ. ಆಗ ಮತ ಖರೀದಿಸುವ ಕೆಟ್ಟ ಚಾಳಿಗೆ ಕಡಿವಾಣ ಬೀಳುವುದು ನಿಶ್ಚಿತ. ಮತದಾರರನ್ನು ಕೊಳ್ಳಲು ಕೋಟಿ ಕೋಟಿ ಸುರಿಯುವ ಅಭ್ಯರ್ಥಿ, ತಾನು ಖರ್ಚು ಮಾಡಿದ ಹತ್ತಾರು ಪಟ್ಟು ಹೆಚ್ಚು ಹಣ ಕೊಳ್ಳೆ ಹೊಡೆಯಲು ಗೆದ್ದ ನಂತರ ಪ್ರಯತ್ನಿಸದಿರುವನೇ?! ಆತ ಕೊಳ್ಳೆ ಹೊಡೆಯುವುದು ನಮ್ಮ ತೆರಿಗೆ ಹಣವನ್ನೇ ಅಲ್ಲವೇ?

ಹಾಗಾಗಿ ನೈತಿಕ ಮತದಾನದ ಜೊತೆಯಲ್ಲಿ ಮತದಾನದ ಪ್ರಮಾಣ ಗರಿಷ್ಠವಾಗಿರುವಂತೆ ನೋಡಿ
ಕೊಳ್ಳುವ ಜವಾಬ್ದಾರಿ ನಮ್ಮದೇ. ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ಕಳೆದರೂ ಸಾರ್ವತ್ರಿಕ ಚುನಾವಣೆಗಳಲ್ಲಿ
ನಮ್ಮ ಮತದಾನದ ಮಟ್ಟ ಇನ್ನೂ ಶೇಕಡ ಎಪ್ಪತ್ತರ ಆಸುಪಾಸಿನಲ್ಲಿರುವುದು ನಾಚಿಕೆಗೇಡು! ಚುನಾವಣೆಯ ದಿನ ಪ್ರವಾಸ ಹೋಗುವುದು, ನಾನ್ಯಾಕೆ ಸರದಿಯಲ್ಲಿ ನಿಂತು ಮತ ಚಲಾಯಿಸಬೇಕು ಎಂಬ ಸೋಮಾರಿತನ, ಯಾವುದೋ ಪಟ್ಟಣದಲ್ಲಿ ಉದ್ಯೋಗದಲ್ಲಿದ್ದು ಒಂದು ಮತ ಹಾಕಲು ದೂರದ ಊರಿಗೆ ಹೋಗುವುದು ಯಾಕೆ ಎಂಬ ಮನೋಭಾವ, ನನ್ನ ಒಂದು ವೋಟಿನಿಂದ ಏನು ಬದಲಾವಣೆ ಸಾಧ್ಯವೆಂಬ ನಕಾರಾತ್ಮಕ ಯೋಚನೆ... ಹೀಗೆ ಮತದಾನದಿಂದ ದೂರವುಳಿಯಲು ಕಾರಣಗಳು ಹತ್ತಾರು.

ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನವನ್ನು ಕಾನೂನಿನ ಮೂಲಕ ಕಡ್ಡಾಯಗೊಳಿಸುವುದು ಕಷ್ಟ. ಮತದಾರರಲ್ಲಿ ತಮ್ಮ ಮತದ ಮಹತ್ವದ ಬಗ್ಗೆ ಜಾಗೃತಿ ಮೂಡಿ ಸ್ವಯಂಪ್ರೇರಿತರಾಗಿ ಅವರು ಈ ಹಕ್ಕಿನ ಚಲಾವಣೆ ಮಾಡಿದಾಗ ಮತದಾನವೂ ಗರಿಷ್ಠ ಪ್ರಮಾಣದಲ್ಲಾಗಿ ಅರ್ಹರ ಆಯ್ಕೆಯ ಜೊತೆಗೆ ಗಟ್ಟಿ ಸರ್ಕಾರದ ಸ್ಥಾಪನೆ ಸಾಧ್ಯ. ಕಾಯಿಲೆಯಂತಹ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿದವರನ್ನು ಹೊರತುಪಡಿಸಿ, ಇನ್ನುಳಿದವರೆಲ್ಲ ಬಂದು ಮತದಾನದ ಪ್ರಮಾಣ ಶೇಕಡ 90ರಷ್ಟಾಗುವಂತೆ ಮಾಡಿದರೆ ಸಾಕು, ನಮ್ಮ ವ್ಯವಸ್ಥೆಯ ಚಿತ್ರಣವೇ ಬದಲಾಗಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT