ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಮತ್ತು ತಾತ್ವಿಕ ನೆಲೆ

ಪಂಚಾಯತ್‌ ರಾಜ್‌ ವ್ಯವಸ್ಥೆಯ ತಾತ್ವಿಕ ನೆಲೆಗೆ ಸರ್ಕಾರದ ಸಹಮತವಿದ್ದರೆ, ಬರುವ ಚುನಾವಣೆಯವರೆಗೆ ಹಾಲಿ ಸದಸ್ಯರನ್ನು ಮುಂದುವರಿಸಲು ಅಡಚಣೆಗಳೇನು?
ಅಕ್ಷರ ಗಾತ್ರ

ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಐದು ವರ್ಷಗಳ ಅವಧಿ ಮುಗಿದಿದೆ. ಅವುಗಳಿಗೆ ಆಯಾ ಜಿಲ್ಲಾಧಿಕಾರಿ ಮೂಲಕ ಆಡಳಿತಾಧಿಕಾರಿಯನ್ನು ನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಭಾರತದ ರಾಜ್ಯಾಂಗವು 1993ರ ಏಪ್ರಿಲ್‌ವರೆಗೂ ಸಂಸತ್ತು ಮತ್ತು ರಾಜ್ಯ ಮಟ್ಟದ ವಿಧಾನಮಂಡಲದಿಂದ ರಚಿತವಾದ ಸರ್ಕಾರಗಳ ಎರಡು ಹಂತದ ಆಡಳಿತ ವ್ಯವಸ್ಥೆಯಾಗಿತ್ತು. ನಂತರ ಮೂರನೇ ಹಂತದ ಆಳ್ವಿಕೆಯಾಗಿ ಪಂಚಾಯತ್‌ ರಾಜ್‌ ಅಸ್ತಿತ್ವಕ್ಕೆ ಬಂದಿತು. ಅದನ್ನು ‘ಸ್ಥಳೀಯ ಸ್ವಯಂ ಸರ್ಕಾರ’ದ ಘಟಕವೆಂದು ಸಂವಿಧಾನದಲ್ಲೇ ಘೋಷಿಸಲಾಗಿದೆ. ಆಡಳಿತಾಧಿಕಾರಿಯನ್ನು ನೇಮಿಸುವುದು ಇದಕ್ಕೆ ಪೂರಕವಲ್ಲ.

ರಾಮಕೃಷ್ಣ ಹೆಗಡೆಯವರ ಕನಸಿನ 1983ರ ಪಂಚಾಯತ್‌ ರಾಜ್‌ ಕಾಯ್ದೆಯ ಸಲುವಾಗಿ ನಡೆಸಿದ ಸಂಶೋಧನೆ, ಅಬ್ದುಲ್ ನಜೀರ್ ಸಾಬ್, ಎಸ್.ಆರ್.ಬೊಮ್ಮಾಯಿ ಇವರೆಲ್ಲರೊಡನೆ ಮಾಡಿದ ವಿಚಾರ ವಿನಿಮಯ, ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಸಂವಿಧಾನಾತ್ಮಕ ಸ್ಥಾನ ನೀಡುವ ವಿಚಾರದಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ದೃಢ ನಿಷ್ಠೆಯ ಫಲವಾಗಿ ಜಾರಿಯಾದ ಸಂವಿಧಾನದ 64ನೇ ತಿದ್ದುಪಡಿ– ಇವುಗಳ ಪೂರ್ವಚರ್ಚೆ ಹಾಗೂ ವಿಚಾರ ವಿನಿಮಯದಲ್ಲಿ ನಾನೂ ಸಕ್ರಿಯವಾಗಿ ಭಾಗಿಯಾಗಿದ್ದೆ. ‘ಪ್ರಾತಿನಿಧಿತ್ವ’ ಮತ್ತು ‘ಉತ್ತರ ದಾಯಿತ್ವ’ದ ಅಂಶಗಳೇ ಈ ಚರ್ಚೆಗಳ ಕೇಂದ್ರಬಿಂದುಗಳಾಗಿದ್ದವು. ಸಂವಿಧಾನದ ತಿದ್ದುಪಡಿಯ ಭಾಗ(IX)ದಲ್ಲೇ ಪಂಚಾಯಿತಿಗಳ ಕಾರ್ಯವ್ಯಾಪ್ತಿ, ಅನುಗುಣವಾದ ಸಂಪನ್ಮೂಲ ಹಾಗೂ ಕಾರ್ಯನಿರ್ವಹಣೆಗೆ ಅಧಿಕಾರಿಗಳನ್ನು ವರ್ಗಾಯಿಸುವ ಕುರಿತು ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಡಲಾಯಿತು.

ಮತದಾರರಿಂದ ಆಯ್ಕೆಯಾದ ಪ್ರತಿನಿಧಿಯು ಅಧಿಕಾರದ ನಿರ್ವಹಣೆ ಕುರಿತ ಪ್ರಶ್ನೆಗಳಿಗೆ ಸ್ಪಂದಿಸು ವುದೇ ಉತ್ತರದಾಯಿತ್ವದ ಅರ್ಥ ಹಾಗೂ ಪ್ರಜಾ ಪ್ರಭುತ್ವದ ಅಂತಃಸತ್ವ. ಆದರೆ ಪಂಚಾಯತ್‌ ರಾಜ್‌ ಕಾಯ್ದೆಯ ತತ್ವ, ರಚನೆ ಮತ್ತು ವಿನ್ಯಾಸದಲ್ಲಿ ‘ಪ್ರಾತಿನಿಧಿತ್ವ’ದ ಕಲ್ಪನೆಗೆ ಅಗತ್ಯವಾದಷ್ಟು ಗಮನ ಕೊಟ್ಟಿಲ್ಲ. ಸುಮಾರು 18 ವರ್ಷಗಳ ಹಿಂದೆ ಬೆಂಗಳೂರಿನ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಸಂಸ್ಥೆಯ ಸಂಶೋಧಕರು ಕೈಗೊಂಡಿದ್ದ ಅಧ್ಯಯನದಲ್ಲಿ, ರಾಜ್ಯದ ಪಂಚಾಯಿತಿ ವ್ಯವಸ್ಥೆಯ ಮೂರೂ ಹಂತಗಳಲ್ಲಿ ಜನರಿಂದ ಆಯ್ಕೆಯಾದ ಕೆಲವರು, ತಾವು ಕಾರ್ಯನಿರ್ವಹಣೆ ವಿಚಾರದಲ್ಲಿ ಅಧಿಕಾರಶಾಹಿಗೆ ಹೊಣೆಗಾರರೆಂದು ನಂಬಿದ್ದರು.

ಇಂದಿನ ರಾಜಕಾರಣದಲ್ಲಿ ಒಬ್ಬ ಆಡಳಿತಾಧಿ ಕಾರಿಗೆ ಸರ್ಕಾರ ಮುಖ್ಯವೇ ಹೊರತು ಹಳ್ಳಿಯ ಜನ ಗೌಣ. ಸರ್ಕಾರಗಳ ನಿಯಂತ್ರಣದಲ್ಲಿ ಸೇವೆ ಸಲ್ಲಿಸುವ ಅಸಂಖ್ಯ ಇಲಾಖೆಗಳ ಅಧಿಕಾರಿವರ್ಗ, ಉದಾ ಹರಣೆಗೆ, ಪೊಲೀಸ್ ಹಾಗೂ ನಾಗರಿಕ ಸೇವೆಯ ಹೊಣೆಗಾರಿಕೆಯು ಪ್ರಭುತ್ವ- ನೌಕರರ ಸಂಬಂಧದ ಹೊಣೆಗಾರಿಕೆಯ ಅಡಿಯಲ್ಲೇ ಸಂವಿಧಾನದಲ್ಲಿ ಗುರುತಿಸಲ್ಪಟ್ಟಿದೆ. ಪಂಚಾಯಿತಿ ಸಂಸ್ಥೆಗಳಲ್ಲಿನ ಹೊಣೆಗಾರಿಕೆಯು ವಿಭಿನ್ನವಾಗಿದ್ದು, ಈಗ ಉಲ್ಲೇಖಿಸಿದ ಸಂಬಂಧಗಳಿಗಿಂತ ಗುಣಾತ್ಮಕವಾಗಿ ವಿಭಿನ್ನವಾಗಿದೆ. ಆದರೆ ಆಡಳಿತಾಧಿಕಾರಿ ನೇಮಕದಿಂದ ಗ್ರಾಮೀಣ ಹಾಗೂ ಸ್ಥಳೀಯ ನಾಯಕತ್ವದ ಚಿಗುರುಗಳು ಹೊರ ಹೊಮ್ಮುವುದು ಅಸಂಭವ.

ಪಂಚಾಯಿತಿಯಲ್ಲಿ ಚುನಾಯಿತ ಸದಸ್ಯರ ಪ್ರಾತಿನಿಧಿತ್ವಕ್ಕೂ ವಿಧಾನಮಂಡಲ ಮತ್ತು ಸಂಸತ್ತಿನ ಪ್ರಾತಿನಿಧಿತ್ವಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಜಿಲ್ಲಾ ಮಟ್ಟದಲ್ಲಿ 40 ಸಾವಿರ ಜನಸಂಖ್ಯೆಗೆ ಒಬ್ಬ, ತಾಲ್ಲೂಕು ಹಂತದಲ್ಲಿ 10 ಸಾವಿರ ಜನರಿಗೆ ಒಬ್ಬ ಮತ್ತು ಗ್ರಾಮ ಪಂಚಾಯಿತಿಗೆ ಕೇವಲ 400 ಜನರಿಗೆ ಒಬ್ಬ ಸದಸ್ಯನ ಆಯ್ಕೆಯಾಗುವುದರಿಂದ, ಇದು ಒಂದು ರೀತಿ ಶತಮಾನಗಳ ಹಿಂದೆ ಗ್ರೀಸ್ ದೇಶದಲ್ಲಿದ್ದ ‘ನೇರ ಪ್ರಜಾಪ್ರಭುತ್ವ’ದಂತಿದೆ. ಕಡಿಮೆ ಸಂಖ್ಯೆಯ ಮತದಾರರಿಂದಾಗಿ, ಭೌಗೋಳಿಕವಾಗಿಯೂ ಪಂಚಾಯಿತಿ ಸದಸ್ಯರೊಡನೆ ಮುಖಾಮುಖಿಯಾಗುವುದು ಸುಲಭಸಾಧ್ಯ.

ಗ್ರಾಮ ಪಂಚಾಯಿತಿಗೆ ಸಾರ್ವಜನಿಕ ಆರೋಗ್ಯ ರಕ್ಷಣೆ, ಪ್ರಕೃತಿ ವಿಕೋಪಗಳಿಗೆ ಪರಿಹಾರ, ಸಾಂಕ್ರಾಮಿಕ ರೋಗ ತಡೆ ಮತ್ತು ಪರಿಹಾರ ಕ್ರಮಗಳು, ಸಾಂಪ್ರದಾಯಿಕವಲ್ಲದ ವಿದ್ಯುತ್ ಯೋಜನೆಗಳ ಉತ್ತೇಜನ ಮತ್ತು ಅಭಿವೃದ್ಧಿ ಒಳಗೊಂಡಂತೆ ಜನಜೀವನದ ಎಲ್ಲ ಅಗತ್ಯಗಳನ್ನೂ ಪೂರೈಸುವ ನಿರ್ದಿಷ್ಟ ಅಧಿಕಾರ- ಜವಾಬ್ದಾರಿಯನ್ನು ವಹಿಸಲಾಗಿದೆ. ಆದ್ದರಿಂದಲೇ ಸದಸ್ಯರ ಉತ್ತರದಾಯಿತ್ವ, ಅದಕ್ಕೆ ಪೂರಕವಾದ ಆಡಳಿತದ ಪಾರದರ್ಶಕತೆಯನ್ನು ಕಾರ್ಯಗತಗೊಳಿಸಲು ಬಹುಪಾಲು ಸಾಧ್ಯವಾಗಿದೆ. ಅದರಲ್ಲೂ ಮೀಸಲಾತಿ ಮೂಲಕ ಸ್ಪರ್ಧಿಸಿ ಗೆಲ್ಲುವ ಬಡವರ್ಗಗಳ, ಕೆಳಜಾತಿಯ ಅಭ್ಯರ್ಥಿಗಳ ಆತ್ಮವಿಶ್ವಾಸ ವೃದ್ಧಿಯ ಸಾಧ್ಯತೆಯನ್ನು ಕಲ್ಪಿಸಿದ್ದು, ಈ ವರ್ಗಗಳ ಆಕಾಂಕ್ಷಿಗಳು ಅದನ್ನು ಪ್ರತ್ಯಕ್ಷೀಕರಿಸಿದ್ದಾರೆ. ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ರೂಪಿಸಲಾಯಿತು. ಪಂಚಾಯಿತಿಗಳ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಗ್ರಾಮೀಣ ಯುವಜನ ಅದನ್ನು ಬಳಸುತ್ತಿದ್ದು, ಪ್ರಾತಿನಿಧಿತ್ವಕ್ಕೆ ಮಹತ್ವ ಸಿಕ್ಕಿದೆ.

ಕೊನೆಗೊಂದು ಮಾತು: ಮೇಲೆ ಉಲ್ಲೇಖಿಸಿರುವ ತಾತ್ವಿಕ ನೆಲೆಗೆ ಸರ್ಕಾರದ ಸಹಮತವಿದ್ದರೆ, ಹಾಲಿ ಸದಸ್ಯರನ್ನು ಬರುವ ಚುನಾವಣೆಯವರೆಗೆ ಮುಂದು ವರಿಸಲು ಅಡಚಣೆಗಳೇನು? ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೂ ಸರ್ಕಾರಕ್ಕೆ ಬರೆದ ಪತ್ರದಲ್ಲಿ ವಿಕೇಂದ್ರೀಕರಣದ ವೈಚಾರಿಕತೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಹೊರತುಪಡಿಸಿ ಸರ್ಕಾರ ಸ್ಪಂದಿಸಿದರೆ ಪಕ್ಷಾತೀತ ಸಂವಾದ ಈಗಲೂ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT