ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆಯ ಪೇಟೆಂಟ್‌!

Last Updated 30 ನವೆಂಬರ್ 2018, 20:25 IST
ಅಕ್ಷರ ಗಾತ್ರ

ಬಾಗಿಲ ಹೊರಗ್‌ ‘ಶರಣು, ಶರಣು’ ಅಂತ ಧ್ವನಿ ಕೇಳಿ ಬಂದಿದ್ದರಿಂದ, ‘ಈ ಮನ್ಯಾಗ್‌ ಶರಣಪ್ಪ ಅನ್ನೋರು ಯಾರೂ ಇಲ್ರಿ’ ಎಂದು ಕೂಗು ಹಾಕಿದೆ. ‘ಸ್ವಾಮಿಯೇ...’ ಎಂದು ಮತ್ತೆ ಕಿವಿಗೆ ಬಿದ್ದಿದ್ದರಿಂದ, ‘ಏಯ್‌, ಮುಂದಿನ ಮನಿಗೆ ಹೋಗ್‌, ಭಿಕ್ಷೆ ಗಿಕ್ಷೆ ಹಾಕುದಿಲ್ಲ’ ಎಂದೆ.

‘ನಾನು ಗುರುಸ್ವಾಮಿ ಅಂತ. ಭಿಕ್ಷೆ ಕೇಳಾಕ್‌ ಬಂದಿಲ್ಲ. ವೋಟ್‌ ಕೇಳಾಕ್‌ ಬಂದೀನಿ’ ಎಂದ.

ಇದೇನಿದು ಆಸಾಮಿ, ಹಿಂಗ್ಯಾಕ್‌ ಮಾತಾಡಾಕತ್ತಾನ್‌ ಅಂತ ಬಾಗ್ಲು ತೆಗೆದು ಹೊರಹೋದೆ.

ಬೀಜಿಂಗ್‌ಗೆ ಸಾಲಾ ಕೇಳಾಕ್‌ ಹೋಗಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಬಗ್ಗೆ ಬ್ರೇಕಿಂಗ್‌ ನ್ಯೂಸ್‌ ನೀಡೊ ಭರದಾಗ್‌, ಅಲ್ಲಿನ ಟಿ.ವಿ. ಚಾನೆಲ್‌ವೊಂದು ‘ಇಮ್ರಾನ್‌ ಇನ್‌ ಬೆಗ್ಗಿಂಗ್‌’ ಅಂತ ಪ್ರಸಾರ ಮಾಡಿತ್ತು. ಅದು ನೆನಪಾಗಿ ನಾನು, ‘ಗುರುಸ್ವಾಮಿ ಇನ್‌ ಬೆಗ್ಗಿಂಗಾ’ ಅಂತ ಜೋರಾಗಿ ಪ್ರಶ್ನಿಸುತ್ತಲೇ ಬಾಗಿಲು ತೆಗೆದೆ.

ನನ್ನ ಮಾತ್ ಕಿವಿಗೆ ಬೀಳುತ್ತಿದ್ದಂಗೆ, ‘ಏಯ್‌, ಕಣ್ಣಾಗ್‌ ಎಣ್ಣಿ ಹಾಕ್ಕೊಂಡಿ ಏನ್‌.ದಿಟ್ಟಿಸಿ ನೋಡ್ ಸ್ವಲ್ಪ. ನಾ ಪ್ರಭ್ಯಾ. ಅಯ್ಯಪ್ಪಸ್ವಾಮಿಯ ವ್ರತಾ ಹಿಡಿದೀನಿ. ನಾ ಏನ್‌ ಭವತಿ ಭಿಕ್ಷಾಂದೇಹಿ ಅಂತ ರೊಕ್ಕಾ ಅಥ್ವಾ ತಂಗಳನ್ನ ಕೇಳಾಕ್‌ ಬಂದಿಲ್ಲಪಾ. ಲೋಕಸಭೆ ಚುನಾವಣೆ ಸಲುವಾಗಿ ಭಾಜಪದ ಪರವಾಗಿ ಭಜನೆ ಮಾಡುವ ಅಯ್ಯಪ್ಪ ಭಕ್ತರನ್ನು ಸಂಘಟಿಸಲು ಬಂದಿರುವ ಗುರುಸ್ವಾಮಿ ನಾನು’ ಎಂದ.

‘ಅರೆ, ಇದೇನೋ ಕರಿ ವಸ್ತ್ರ, ಕೊಳ್ಳಾಗ್‌ ಮಾಲೆ ಧರಿಸಿ ಹೊಸ ವೇಷದಾಗ್‌ ಅದಿಯಲ್ಲ’ ಅಂತ ಕೇಳೋದಕ್ಕೂ, ‘ಯಾವನ್‌ ಕೂಡ ಮಾತಾಡಾಕತ್ತೀರಿ ಮಾವಾ, ಇಂಥವರ ನೆಳ್ಳ ಬೀಳಿಸ್ಕೊಂಡ್ರ ಮನಿ ಅನ್ನೋದು ಅಯೋಧ್ಯೆ ಹೋಗಿ ಶಬರಿಮಲೆ ಆಗ್ತೈತಿ, ಹೆಂಡ್ತಿ ತವರ್‌ ಮನಿಗೆ ಹೋಗ್ತೈತಿ’ ಅಂತ ವಟಗುಟ್ಟುತ್ತಲೇ ಪ್ರಭ್ಯಾನ ಹೆಂಡ್ತಿ ನಮ್ಮ ಹತ್ರ ಬರೋದಕ್ಕೂ ಸರಿಹೋಯ್ತು.

‘ದಕ್ಷಿಣ ಭಾರತದಾಗ್‌ ಭಾಜಪದ ಬೇರ್‌ ಗಟ್ಟಿಗೊಳ್ಸಾಕ್‌ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಗಾಳ ಹಾಕಾಕ್‌ ಗುರುಸ್ವಾಮಿಗಳ ಸಂಘಟನೆಗೆ ಅಮಿತ್‌ ಶಾ ಕರೆ ಕೊಟ್ಟಾರಂತ. ಅದ್ಕ ಈ ವೇಷಾ ಧರಿಸ್ಯಾರ್‌. ಚಳಿಗಾಲ್ದಾಗ್‌ ಬ್ಯಾರೆ ಇಂವಾ ಮಾಲೆ ಧರಿಸ್ಯಾನ. ಇಂಥವಕ್ಕ ಸಂಸಾರ್‌ ಯಾಕ್‌ ಬೇಕ್‌’ ಅಂತ ಮೂಗು ಮುರಿದು ಹೊಟ್ಯಾನ್‌ ಸಿಟ್‌ ಕಾರಿಕೊಂಡಳು.

‘ಪಾರೂತಿ ಹೇಳೋದು ಖರೆ ಐತಿಲೇ. ಇಲ್ಯಾಕ್‌ ನಿಂತಿ, ಸಂಸಾರವಂದಿಗರ ಮನಿ ಮುಂದ್‌ ನಿಂಗ್ ಏನ್‌ ಕೆಲ್ಸ. ವೋಟ್‌ ನಿಮಿತ್ತಂ ಬಹುಕೃತವೇಷಂ ಏನ್‌’ ಎಂದು ಛೇಡಿಸಿದೆ.

‘ಮಲ್ಲಿಕಾ ಘಂಟಿ ಅವರ ಭಾಷ್ಣಾ ಕೇಳಿ ಇಲ್ಲ ಮಗನ. ಶಬರಿಮಲೆ ದೇವಸ್ಥಾನದ ಒಳಗ್‌ 10 ರಿಂದ 50 ವರ್ಷದವರಿಗೆ ಪ್ರವೇಶ ನೀಡಿದ್ರ ಮೈಲಿಗಿ ಆಗ್ತದ ಅಂತ ಗಲಾಟೆ ಮಾಡುವ ಪಕ್ಷಕ್ಕೆ ಸೇರಿದ ನೀನು, 50 ವರ್ಷ ಮೀರಿದವರನ್ನs ಮದ್ವಿ ಆಗ್ಬೇಕಿತ್ತು. ಆವಾಗ್‌ ನಿನಗ್‌s, ನಿನ್ನ ಪಕ್ಷಕ್ಕ ಮತ್ ಆ ನಿನ್ನ ದೇವ್ರಿಗೂ ಮೈಲಿಗಿ ಆಗ್ತಿರ್‌ಲಿಲ್ಲ ನೋಡ್‌’ ಎಂದು ದಬಾಯಿಸಿದೆ.

‘ಅಯ್ಯಪ್ಪ ಭಕ್ತರನ್ನು ಸಂಘಟಿಸುವ ಮುನ್ನ ಅವರಿಗೆ ದೀಕ್ಷೆ ನೀಡಿ ಮುನ್ನಡೆಸುವ ‘ಗುರುಸ್ವಾಮಿ’ಗಳನ್ನು ಸಂಘಟಿಸಿದರೆ ದಕ್ಷಿಣ ಭಾರತ್‌ದಾಗ್‌ ಪಕ್ಷಕ್ಕೆ ಶಾಶ್ವತವಾಗಿ ಭದ್ರ ನೆಲೆ ಸಿಗ್ತದ ಅಂತ ಇವ್ನ ತಲ್ಯಾಗ್‌ ತುಂಬ್ಯಾರಿ. ಅದ್ಕ ಇಂವಾ ಸಂಸಾರ್‌ ಬಿಟ್ಟು, ಅಯ್ಯಪ್ಪ ಭಕ್ತರನ್ನ ಸಂಘಟಿಸೊ ಕೆಲ್ಸಾ ಮಾಡಾಕತ್ತಾನ್ರಿ. ಹೆಣ್ಮಕ್ಕಳಿಗೆ ದೇವಸ್ಥಾನ ಪ್ರವೇಶ ನೀಡಬಾರದು ಎಂದು ಬಾಯಿ ಬಡ್ಕೊತಿರೋ ಪಕ್ಷಕ್ಕ ಬ್ರಹ್ಮಚಾರಿ ಪ್ರಧಾನಿ... ಮನ್‌ಕಿ ಬಾತ್‌ನ್ಯಾಗ್ ಒಂದ್‌ ಬಾರಿನೂ ಶಬರಿಮಲೆಗೆ ಹೋಗಲು ಹಟ ಮಾಡುವ ಹೆಣ್ಮಕ್ಕಳ ಬಗ್ಗೆ ಮಾತಾಡಿಲ್ಲ...’ ಎಂದು ಪಾರೂತಿ ಹೀಯಾಳಿಸಿದಳು.

ವ್ರತಾಚರಣೆಯಲ್ಲಿದ್ದ ಪ್ರಭ್ಯಾ,ಮಾತಾ (ಹೆಂಡ್ತಿ), ಮಾತನ್ಯಾಗ್‌ ತನ್ನ ಮಾನಾ ಕಳ್ಯಾಕತ್ತಿದ್ರೂ, ಬಾಯಿ ತುದಿಗೆ ಬೈಗುಳ ಬಂದಿದ್ರೂ ಹೊರ ಹಾಕಲಿಲ್ಲ. ಹಲವು ಅರ್ಥ ಹೊರಡಿಸುವ ರೀತಿಯಲ್ಲಿ ‘ಅಯ್ಯಪ್ಪ’ ಅಂತಲೇ ಹೇಳುತ್ತಿದ್ದ.

‘ತೆಲಂಗಾಣದ ಭಾವಿ ಜನಪ್ರತಿನಿಧಿಗಳು ಮತದಾರರ ಮುಖ ಕ್ಷೌರ, ಬಟ್ಟೆ ಇಸ್ತ್ರಿ, ದೋಸೆ ಹೊಯ್ಯುವ, ಸಣ್ಣ ಹುಡುಗರ ಕುಂಡಿ ತೊಳೆಯುವ ಸಮಾಜ ಸೇವೆ ಮಾಡುತ್ತಲೇ ವೋಟ್ ಕೇಳಾಕತ್ತಾರಂತ. ನೀನೂ ಅಂಥದನ್ನೆಲ್ಲ ಮಾಡಿದ್ರ ರಾಜಕೀಯದಾಗ್‌ ಉದ್ಧಾರ್‌ ಆಗ್ತಿ. ಇಲ್ಲಂದ್ರ ಕಾವಿ ಬಟ್ಟೆ ತೊಟ್ಕೊಂಡ್‌ ಹಿಮಾಲಯಕ್ಕ ಹೋಗಬೇಕಾಗ್ತೈತಿ ನೋಡ್‌’ ಎಂದು ಎಚ್ಚರಿಸಿದೆ.

ನನ್ನ ಮಾತನ್ನ ಪ್ರಭ್ಯಾ ಕಮಕ್‌ ಕಿಮಕ್‌ ಅನ್ನದೇ ಕೇಳೋದನ್ನ ನೋಡಿ ನಂಗ್‌ ಇನ್ನಷ್ಟು ಹುರುಪು ಬಂದಿತ್ತು.

‘ಅಯೋಧ್ಯೆದಾಗಂತೂ ಒಂದ್‌ ಇಟ್ಟಂಗಿಯನ್ನೂ ಅತ್ತಿತ್ತ ಸರ್ಸಾಕ್‌ ಆಗಿಲ್ಲ. ಶಬರಿಮಲೆ ಒಳಗ್‌ ಹೆಂಗಸರಿಗೆ ಪ್ರವೇಶ ಮಾಡಿಕೊಡದ ಪಕ್ಷ, ಅವ್ರಿಗೆ ಶೇ 33ರಷ್ಟು ಮೀಸಲು ನೀಡುವುದು ಕನಸಿನ ಮಾತೇ ಬಿಡು’ ಎಂದು ಹಂಗಿಸಿದೆ.

‘ರಾಮಮಂದಿರ ಬಿಜೆಪಿಯ ಪೇಟೆಂಟ್‌ ಅಲ್ಲ ಅಂತ ಉಮಕ್ಕನ ಹೇಳ್ಕೊಂಡಾಳ್‌. ಹಂಗ್‌ ಇದ್ದ ಮ್ಯಾಲೆ, ಶಬರಿಮಲೆಗೆ ಹೊಸದಾಗಿ ಪೇಟೆಂಟ್‌ ಪಡ್ಯಾಕ್‌ ಹೊಂಟಿರಲ್ಲ, ಅದು ಸಿಗ್ತದ್‌ ಅಂತ್‌ ಏನ್‌ ಗ್ಯಾರಂಟಿ ಅದಲೇ’ ಎಂದೆ.

ನನ್ನ ಮಾತಿಗೆ ಏನುತ್ತರ ಕೊಡಬೇಕೆಂದು ತೋಚದೆ, ‘ಸ್ವಾಮಿಯೇ ಶರಣಂ ಅಯ್ಯಪ್ಪ...’ ಅಂತ ಹೇಳ್ತಾ ಪ್ರಭ್ಯಾ ಜಾಗಾ ಖಾಲಿ ಮಾಡ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT