ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಒಡಲಾಗದಿರಲಿ ನಂಜುಬಟ್ಟಲು

ನಮ್ಮ ಆರೋಗ್ಯದ ಹಿತದೃಷ್ಟಿಯಿಂದ, ಕೀಟನಾಶಕಗಳ ಮಾರಾಟ, ಬಳಕೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಕಾಯ್ದುಕೊಳ್ಳಬೇಕಾದುದು ಅತ್ಯಗತ್ಯ
Last Updated 11 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ತಿಳಿವಳಿಕೆಯ ಕೊರತೆಯಿಂದಾಗಿ ತನ್ನ ಎರಡು ಹಸುಗಳನ್ನು ಕಳೆದುಕೊಂಡಿದ್ದ ಆ ರೈತ. ತೀವ್ರ ಹೊಟ್ಟೆ ಯುಬ್ಬರದಿಂದ ಬಳಲುತ್ತಿದ್ದ ಈ ಆಕಳುಗಳು ಚಿಕಿತ್ಸೆಗೆ ಸ್ಪಂದಿಸದೆ ಒಂದೇ ದಿನದಲ್ಲಿ ಅಸುನೀಗಿದ್ದವು. ಅಲ್ಲಿ ಆಗಿದ್ದಿಷ್ಟೆ. ತನ್ನ ಅಡಿಕೆ ತೋಟದಲ್ಲಿ ಬೆಳೆದಿದ್ದ ಕಳೆಯನ್ನು ನಿರ್ನಾಮ ಮಾಡಲು ಧಾರಾಳವಾಗಿ ಕಳೆನಾಶಕ ಸಿಂಪಡಿಸಿದ್ದ. ಫಲಿತಾಂಶವೂ ಅದ್ಭುತ! ಒಂದೇ ವಾರದಲ್ಲಿ ಅಲ್ಲಿದ್ದ ಕಳೆಗಿಡಗಳು, ಹುಲ್ಲು ಸಂಪೂರ್ಣ ನಾಮಾವಶೇಷವಾಗಿದ್ದವು.

ಆರು ತಿಂಗಳ ನಂತರ ಮತ್ತೆ ಅಲ್ಲಿ ಚಿಗುರಿದ್ದ ಹುಲ್ಲನ್ನು ಮೇಯಿಸಲು ದನಗಳನ್ನು ತೋಟದಲ್ಲಿ ಕಟ್ಟಿದ್ದ. ಚೆನ್ನಾಗಿ ಮೇಯ್ದ ಅವು ರಾತ್ರಿಯಿಂದಲೇ ಅಸ್ವಸ್ಥಗೊಂಡವು. ಔಷಧೋಪಚಾರಕ್ಕೆ ಬಗ್ಗಲಿಲ್ಲ. ಮಣ್ಣಿಗೆ ಸೇರಿದ ಆ ರಾಸಾಯನಿಕಗಳು ಇನ್ನೂ ಪೂರ್ಣವಾಗಿ ಕಳೆಗುಂದಿರಲಿಲ್ಲ. ಹುಲ್ಲು ಜೊತೆಗೆ ಮಣ್ಣು ಹಸುಗಳ ದೇಹಕ್ಕೂ ವಿಷ ಉಣಿಸಿದ್ದವು. ಪಾಪ ರೈತನಿಗೆ ಕಳೆನಾಶಕದ ಈ ಅಪಾಯಕಾರಿ ಗುಣದ ಅರಿವಿರಲಿಲ್ಲ.

ಇದು ಮತ್ತೊಬ್ಬ ಕೃಷಿಕನ ಕತೆ. ಆರ್ಥಿಕವಾಗಿ ಅನುಕೂಲವಂತನಾತ. ಮನೆ, ತೋಟದ ಕಾವಲಿ ಗೆಂದು ಮೂರು ನಾಯಿಗಳನ್ನು ಸಾಕಿಕೊಂಡಿದ್ದ. ಮೊದ ಮೊದಲು ಆರೋಗ್ಯದಿಂದಲೇ ಇದ್ದ ಅವು ದಿನೇ ದಿನೇ ಸೊರಗುತ್ತಾ, ಆಗಾಗ್ಗೆ ಜೊಲ್ಲು ಸುರಿಸುತ್ತಾ ತಿನ್ನುವುದನ್ನು ಕಮ್ಮಿ ಮಾಡಿದವು. ಪತ್ತೆ ಹಚ್ಚಲಾಗದ ಅನಾರೋಗ್ಯದಿಂದ ಬಳಲುತ್ತಿದ್ದ ಆ ನಾಯಿಗಳ ಚಿಕಿತ್ಸೆ ನಿಜಕ್ಕೂ ಸವಾಲಾಗಿತ್ತು. ಒಂದೆರಡು ತಿಂಗಳು ಹೀಗೆಯೇ ನರಳಿ ಮರಣ ಹೊಂದಿದವು. ಏನಾದರೂ ವಿಷಪ್ರಾಶನ ಆಗಿರಬಹುದೇ ಎಂಬ ಸಂಶಯದ ಜಾಡಿನಲ್ಲಿ ತನಿಖೆ ನಡೆಸಿದಾಗಲೇ ಕಾರಣ ಬಹಿರಂಗವಾಗಿದ್ದು.

ಆತ ಮನೆಯ ಹಿತ್ತಲಿನಲ್ಲಿ ಐದಾರು ಸಾಲು ಶುಂಠಿ ಬೆಳೆಯುತ್ತಿದ್ದ. ವಾಡಿಕೆಯಂತೆ ಕಳೆನಾಶಕ, ಕ್ರಿಮಿನಾಶಕವೆಂದು ವಿಷ ಸುರಿದಿದ್ದ. ಆ ಜಾಗದಲ್ಲಿ ಸತ್ತು ಬೀಳುತ್ತಿದ್ದ ಹುಳ, ಹುಪ್ಪಟೆಗಳನ್ನು ತಿನ್ನುವ ಅಭ್ಯಾಸವುಳ್ಳ ನಾಯಿಗಳ ಶರೀರಕ್ಕೂ ನಂಜು ಸೇರುತ್ತಿದ್ದುದು ಅರಿವಿಗೆ ಬರುವಾಗ ತುಂಬಾ ತಡವಾಗಿತ್ತು. ಸುತ್ತೆಲ್ಲಾ ಮತ್ತಷ್ಟು ಅವಲೋಕಿಸಿದಾಗ, ಮಳೆಯ ನೀರು ನಿಂತ ಹೊಂಡಗಳಲ್ಲಿ ಕಪ್ಪೆಗಳು ಸತ್ತು ತೇಲಾಡುತ್ತಿದ್ದುದು ಆಘಾತ ತಂದಿತ್ತು. ಇನ್ನು ಇಂತಹ ನಂಜಿನ ಮಣ್ಣಲ್ಲಿ ಬೆಳೆದ ಬೆಳೆ, ತ್ಯಾಜ್ಯವನ್ನು ಬಳಸುವ ಜನ, ಜಾನುವಾರುಗಳ ಕತೆ ಏನಾದೀತು? ಅಪಾಯಕಾರಿ ವೈರಸ್, ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ, ರೋಗ ಪ್ರತಿರೋಧ ಸಾಮರ್ಥ್ಯ ಹೆಚ್ಚಿಸುವ ಬಹೂಪಯೋಗಿ ಶುಂಠಿ, ಅರಿಸಿನಗಳೇ ಒಡಲಲ್ಲಿ ವಿಷ ಹೊತ್ತಿರುವಾಗ ಆರೋಗ್ಯ ಕಾಪಾಡುವ ಗುಣವಾದರೂ ಎಲ್ಲಿಂದ?

ಅಮೆರಿಕದ ಸಂಸ್ಥೆ ‘ಪರಿಸರ ಕಾರ್ಯನಿರತ ತಂಡ’ (ಇಡಬ್ಲ್ಯುಜಿ) ಪ್ರತಿವರ್ಷ ಅತಿ ಹೆಚ್ಚು ಕೀಟನಾಶಕ ಹೊಂದಿರುವ 12 ಹಣ್ಣು, ತರಕಾರಿಗಳ ‘ಡರ್ಟಿ ಡಜನ್’ ಪಟ್ಟಿಯನ್ನು ಪ್ರಕಟಿಸುತ್ತದೆ. ಸ್ವಾಸ್ಥ್ಯದ ಬಗ್ಗೆ ಕಾಳಜಿ ಹೊಂದಿರುವವರು ಇಲ್ಲಿ ಹೆಸರಿಸಲಾದ ಪದಾರ್ಥಗಳ ಖರೀದಿಯಿಂದ ದೂರ ಉಳಿಯುತ್ತಾರೆ. ನಮ್ಮಲ್ಲೂ ಹೀಗೊಂದು ವರದಿ ಬಿಡುಗಡೆಯಾಗು ವುದಾದರೆ ಸ್ಥಾನ ಪಡೆಯಲು ತೀವ್ರ ಪೈಪೋಟಿಯೇ ಏರ್ಪಡಬಹುದು!

ಹೌದು, ಅರಿವಿನ ಕೊರತೆ, ಸಮರ್ಪಕ ನಿಯಂತ್ರಣ ವ್ಯವಸ್ಥೆಯಿಲ್ಲದ ಕಾರಣ ಆಹಾರೋತ್ಪಾದನೆ
ಯಲ್ಲಿ ವಿಷಕಾರಿ ಕಳೆನಾಶಕ, ಕೀಟನಾಶಕಗಳನ್ನು ಮನಬಂದಂತೆ ಬಳಸಲಾಗುತ್ತಿದೆ. ಪರಿಣಾಮ, ಕೆಲವು ಆಹಾರ ಪದಾರ್ಥಗಳಲ್ಲಿ ಈ ರಾಸಾಯನಿಕಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದೆ. ಹಳ್ಳಿಯದ್ದು, ಸಾವಯವ, ರಾಸಾಯನಿಕಮುಕ್ತ ಎಂಬ ಲೇಬಲ್ಲು ಗಳನ್ನು ಅಂಟಿಸಿಕೊಂಡ ಆಹಾರ ಪದಾರ್ಥಗಳನ್ನೂ ಖರೀದಿಸಲು ಹೆದರುವಷ್ಟು ಮಟ್ಟಿಗೆ ಕಾಲ ಕೆಟ್ಟಿದೆ.

ಪೀಡೆನಾಶಕ ರಾಸಾಯನಿಕಗಳ ದುಷ್ಪರಿಣಾಮ ಆಗುವುದು ಮೊದಲು ಕೇಂದ್ರ ನರಮಂಡಲದ ಮೇಲೆ. ತತ್ಪರಿಣಾಮ ಹಾರ್ಮೋನುಗಳ ಸ್ರವಿಕೆಯಲ್ಲಿ ವ್ಯತ್ಯಯ ವಾಗುತ್ತದೆ. ಈಗೆಲ್ಲಾ ಅಲರ್ಜಿ, ನಿಶ್ಶಕ್ತಿ, ನರದೌರ್ಬಲ್ಯ, ಗಂಟು ನೋವು, ಥೈರಾಯಿಡ್ ಸಮಸ್ಯೆ, ಸಂಧಿವಾತ, ಕ್ಯಾನ್ಸರ್ ಎಂದೆಲ್ಲಾ ಹತ್ತಾರು ತೊಂದರೆಗಳ ಬಾಧೆ. ಸಾಮಾನ್ಯ ಸ್ವಾಸ್ಥ್ಯವೇ ಹಳಿತಪ್ಪಿರುವ ಈ ಕಾಲಘಟ್ಟದಲ್ಲಿ ವಿಷ ಬೆರೆತ ಆಹಾರ, ಕೊಳಕು ನೀರು, ಕಲುಷಿತ ಗಾಳಿಯೇ ಸಮಸ್ಯೆಗಳ ಮೂಲ. ಇತ್ತೀಚೆಗೆ ಬಿಡುಗಡೆಯಾದ 180 ದೇಶಗಳ ‘ಪರಿಸರ ನಿರ್ವಹಣಾ ಸೂಚ್ಯಂಕ’ದಲ್ಲಿ ನಮ್ಮ ದೇಶದ್ದು ಕೊನೆಯ ಸ್ಥಾನ!

ಬೇರೆ ದೇಶಗಳಲ್ಲಿ ಪೂರ್ಣ ನಿಷೇಧಕ್ಕೊಳಪಟ್ಟ ಹಲವು ಪೀಡೆನಾಶಕಗಳು ನಮ್ಮಲ್ಲಿ ಮಾತ್ರ ಎಗ್ಗಿಲ್ಲದೆ ಬಳಕೆಯಲ್ಲಿವೆ. ದರವೂ ಅಂತಹ ದುಬಾರಿಯೇನಲ್ಲ. ಎಲ್ಲೆಡೆ ಸುಲಭವಾಗಿ ಲಭ್ಯವಿರುವುದರಿಂದ ಖರೀದಿ, ಬಳಕೆ ಸಲೀಸು. ಇವು ವರ್ಷ ವರ್ಷ ದಾಖಲಿಸುತ್ತಿರುವ ವಹಿವಾಟುಗಳ ಎತ್ತರ ಗಮನಿಸುತ್ತಿದ್ದರೆ ದಿಗಿಲಾಗುತ್ತದೆ.

ಹೌದು, ಫಸಲು ಉಳಿಸಿಕೊಳ್ಳಲು ಹಾಲಾಹಲ ಸುರಿಯುವುದರ ವಿರುದ್ಧ ಬೆಳೆಗಾರನಲ್ಲಿ ಎಚ್ಚರ ಮೂಡಿಸಬೇಕಿದೆ. ಉತ್ಪಾದಕ ಕಂಪನಿಗಳ ಸೂಚನೆ ತಿಳಿದು ಬಳಸಿದಾಗ ಆಗುವ ಹಾನಿ ಕನಿಷ್ಠ ಮಟ್ಟದ್ದು. ಬಳಕೆದಾರನ ಸ್ವಾಸ್ಥ್ಯ ಉತ್ಪಾದಕನ ನೈತಿಕ ಜವಾಬ್ದಾರಿ ಕೂಡ.

ಇಲ್ಲಿ ಸರ್ಕಾರದ ಹೊಣೆಗಾರಿಕೆಯೂ ದೊಡ್ಡದು. ಕೀಟನಾಶಕಗಳ ಮಾರಾಟ, ಬಳಕೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣದ ಜೊತೆಗೆ ಪರಿಸರ, ಪಶುಪಕ್ಷಿಗಳಿಗೆ ಘೋರ ವಿಷಕಾರಿಯಾಗುವ ರಾಸಾಯನಿಕಗಳನ್ನು ಯಾವುದೇ ಮುಲಾಜಿಲ್ಲದೆ ನಿಷೇಧಿಸಬೇಕು. ಬೆಳೆಗಳ ರಕ್ಷಣೆಗೆ ಗ್ರಾಹಕಸ್ನೇಹಿ, ಪರಿಸರಪೂರಕ ಸಾವಯವ ವಿಧಾನಗಳ ಅನ್ವೇಷಣೆ, ಬಳಕೆಗೆ ಒತ್ತು ನೀಡಬೇಕು. ಇಲ್ಲದಿದ್ದರೆ ಭವಿಷ್ಯ ಮತ್ತಷ್ಟು ಕರಾಳವಾದೀತು.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ,ಸರ್ಕಾರಿ ಪಶು ಆಸ್ಪತ್ರೆ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT