ಪ್ಲಾಸ್ಟಿಕ್ ಎಂಬ ಮಹಾಮಾರಿ ಹಾಗೂ ಪರಿಸರ

7
ಪ್ಲಾಸ್ಟಿಕ್ ಇಲ್ಲದ ಬದುಕು ಉಂಟೇ ಎನ್ನುವ ಸ್ಥಿತಿಗೆ ಮುಟ್ಟಿರುವ ಜಗತ್ತು, ಅದರ ಕೋರೆಹಲ್ಲುಗಳ ನುರಿತದಿಂದ ತಪ್ಪಿಸಿಕೊಳ್ಳುವ ಬಗೆ ಎಂತು!?

ಪ್ಲಾಸ್ಟಿಕ್ ಎಂಬ ಮಹಾಮಾರಿ ಹಾಗೂ ಪರಿಸರ

Published:
Updated:

ವಿಜ್ಞಾನವು ಪ್ಲಾಸ್ಟಿಕ್ ಎಂಬ ಮಹಾಮಾರಿಯನ್ನು ಜತ್ತಿನ ಮಹಾಮನೆಗೆ ಬರಮಾಡಿಕೊಂಡಿದೆ. ಈ ಮಾರಿಗೆ ವಯಸ್ಸು ಕೇವಲ ಎರಡು ಶತಮಾನ. ಆಗಲೇ ಏಳು ಸಮುದ್ರದ ಮೇಲೆ ಕೀಳು ಸಮುದ್ರ ಮಾಡಿ ವಿಸ್ತೀರ್ಣದಲ್ಲಿ ಯುರೋಪ್ ಖಂಡದಷ್ಟು ತೇಲುತ್ತಿದೆ. ಅದು ಎಂದೂ ಕರಗದ ತಿಪ್ಪೆ. ಇದರೊಂದಿಗೆ ದಿನವೊಂದಕ್ಕೆ 80 ಲಕ್ಷ ಟನ್ ಬಂದು ಸೇರುತ್ತಿದೆ. ಮಕ್ಕಳ ಕೈ ಗಿಲಿಕೆಯಿಂದ ಹಿಡಿದು ನಭೋಮಂಡಲದಲ್ಲಿ ತೇಲುವ ನೌಕೆಯವರೆಗೆ ಈ ಮಹಾಮಾರಿಯ ಮುಖವಾಡವಿದೆ.

ಪ್ಲಾಸ್ಟಿಕ್‌ನಿಂದ ವಾರ್ಷಿಕ ಸರಾಸರಿ 10 ಲಕ್ಷ ಸಮುದ್ರ ಪಕ್ಷಿಗಳು, ಲಕ್ಷಕ್ಕೂ ಮೀರಿ ಸಸ್ತನಿಗಳು ಜೀವ ಬಿಡುತ್ತಿವೆ. ಇದೊಂದು ವಿಷವರ್ತುಲ. ಮನುಷ್ಯನೂ ಸಾವಿನ ಕಡೆ ನಿಧಾನಕ್ಕೆ ಸಾಗುವ ಸವಾರಿ. ಜಗದಲ್ಲಿ ಸೂರ್ಯ ಮುಳುಗದ ಸಾಮ್ರಾಜ್ಯದೊಡೆಯರು ಥೇಮ್ಸ್ ನದಿಯನ್ನು ಕುಡಿಯಲಾರದ ಕಲ್ಮಶ ಮಾಡಿಕೊಂಡಿದ್ದರು.

1865ರ ನಂತರ ಸಮರೋಪಾದಿಯಲ್ಲಿ ಎಚ್ಚೆತ್ತು ಶುದ್ಧಿ ಮಾಡಿಕೊಂಡು ಈಗದು ವಿಶ್ವದ ಶುದ್ಧ ಜಲನದಿ. ಆದರೀಗ ಮ್ಯಾನ್‌ಚೆಸ್ಟರ್ ನದಿಯನ್ನು ಪ್ಲಾಸ್ಟಿಕ್ ಮಲಿನದಲ್ಲಿ ವಿಶ್ವದ ಮೊದಲಂಕಿಗೆ ನೂಕಿದ್ದಾರೆ. ನಮ್ಮ ದೇಶದ ಗಂಗಾಮಾತೆಗೆ ವಿಶ್ವದ ಎರಡನೇ ಸ್ಥಾನ. ಹಾಗಾಗಿಯೇ ಗಂಗಾ ಸ್ವಚ್ಛತೆ ಆಗುತ್ತಿಲ್ಲವೆಂದು ಉಡುಪಿಯ ಪೇಜಾವರ ಶ್ರೀಗಳು ಕನಲಿ ಹೇಳುತ್ತಿರುವುದರಲ್ಲಿ ಸತ್ಯವಿದೆ. ಗಂಗೆ ವರ್ಷಕ್ಕೆ 1.15 ಲಕ್ಷ ಟನ್ ಪ್ಲಾಸ್ಟಿಕ್‌ ಅನ್ನು ಸಮುದ್ರ ರಾಜನ ಗಂಟಲಿಗೆ ಕುತ್ತಿಗೆ ಹಿಡಿದು ನೂಕುತ್ತಿದ್ದಾಳೆ. ಗಂಗಮ್ಮನೀಗ ಅಕಾಲ ಮುಪ್ಪಿನ ಮುದುಕಿ.

ನಿಸರ್ಗ ಕೊಡುಗೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಪ್ರಥಮ ಕರ್ತವ್ಯ. ‘ಟನ್‌ಗಟ್ಟಳೆ ಬೋಧನೆಗಿಂತ ಔನ್ಸ್ ಆಚರಣೆಯೇ ಅಮೂಲ್ಯ’ ಎಂಬುದು ಗಾಂಧೀಜಿ ಹೇಳಿಕೊಟ್ಟ ಪಾಠ. ಮೊನ್ನೆ ಪತ್ರಿಕೆಯೊಂದರಲ್ಲಿ ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯ ನಾಗರಿಕರ ಸಂಘವೊಂದು ಪ್ಲಾಸ್ಟಿಕ್‌ಮುಕ್ತ ಲೇಔಟ್ ಮಾಡಿಕೊಳ್ಳಲು ಪಣತೊಟ್ಟು ಸುದ್ದಿಯಿತ್ತು. ಜನರು ಬೋಧನೆ ಬಿಟ್ಟು ಹೀಗೆ ಆಚರಣೆ ಪ್ರಾರಂಭಿಸಿಬೇಕು.

ಅಘನಾಶಿನಿ ನದಿ ಉತ್ತರ ಕನ್ನಡದ ಅಡವಿಯಲ್ಲಿ ನೆಲ– ಜಲ ಸೋಸುತ್ತಾ 60 ಕಿ.ಮೀ. ಹರಿಯುವ ಶುದ್ಧ ನದಿ. ಅದನ್ನು ಅಲ್ಲಿನ ನಾಗರಿಕರು ಕಾಪಾಡಿಕೊಳ್ಳುತ್ತಿರುವ ರೀತಿ ಶ್ಲಾಘನೀಯ. ಈ ದೇಶದಲ್ಲಿ ಬಡತನವಿತ್ತು ನಿಜ. ಆದರೆ ನಿಸರ್ಗದ ಆರಾಧನೆಯೂ ಇತ್ತು. ಅದೆಲ್ಲದರ ಅರಿವೋ ಎಂಬಂತೆ ಸಿಕ್ಕಿಂ ರಾಜ್ಯವೀಗ ದೇಶಕ್ಕೆ ನೀತಿ ಹೇಳುತ್ತಿರುವ ರಾಜ್ಯ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು, ಪ್ರಾಣಿಪಕ್ಷಿಗಳು, ಗಿಡಮರಗಳೆಲ್ಲವೂ ಸಂಗಾತಿಗಳು. ಕಳ್ಳುಬಳ್ಳಿ ಸಂಬಂಧಿಗಳು. ಈ ಸೂಕ್ಷ್ಮವನ್ನು ಅಲ್ಲಿನ ಮುಖ್ಯಮಂತ್ರಿ ಚಾಮ್ಲಿಂಗ್ ಅರಿತಿರುವ ಕಾರಣ ಸಿಕ್ಕಿಂ ಪ್ಲಾಸ್ಟಿಕ್‌ಮುಕ್ತ ರಾಜ್ಯವಷ್ಟೇ ಅಲ್ಲ, ನಿಸರ್ಗ ಪರಿಸರಾಧನೆಯ ತಾಣ. ಅದು ಇಡೀ ದೇಶಕ್ಕೆ ಹರಡಬೇಕಾಗಿದೆ. ಇದು ರಾಜಕೀಯ ಇಚ್ಛಾಶಕ್ತಿಯಿಂದ, ಸಾಮಾಜಿಕ ಎಚ್ಚರದಿಂದ ಸಾಧ್ಯ.

ಪರಿಸರವನ್ನು ಹಾಳು ಮಾಡಿಕೊಳ್ಳುತ್ತಿರುವಲ್ಲಿ ಯಾವ ದೇಶವೂ ಹಿಂದೆ ಬಿದ್ದಿಲ್ಲ. ನೈಲ್‌ನದಿ ಅಲ್ಲಿ ಹಾಳಾಗುತ್ತಿದ್ದರೆ, ಇಂಡೊನೇಷ್ಯಾದಲ್ಲಿ ಸಿತಾರಮ್ ನದಿ ಜಗತ್ತಿನಲ್ಲಿ ಪ್ರಥಮ ಮಲಿನ ಸ್ಥಾನದಲ್ಲಿದೆ. ಯಮುನೆ ನಮ್ಮ ದೇಶದಲ್ಲಿ ಅವುಗಳ ಬಾಲವಾಗಿದೆ. ಮುಂಬೈ ನಗರದಲ್ಲಿ ಕೊಳೆಗೇರಿಗಳು ಪ್ಲಾಸ್ಟಿಕ್ ಮಲಿನದಲ್ಲಿ ಮುಚ್ಚಿ ಹೋಗುತ್ತಿರುವ ಸುದ್ಧಿಯಿದೆಯಷ್ಟೆ ಅಲ್ಲ. ಮುಂದೇನು ಎಂಬ ಪ್ರಶ್ನೆಯಲ್ಲಿದೆ.

ಅಮೆರಿಕ ಸೇರಿದಂತೆ ಯಾವ ದೇಶವೂ ಇದಕ್ಕೆ ಹೊರತಾಗಿಲ್ಲ. ನಾವು ಅರಿತಂತೆ ಈಗ್ಗೆ ಕೇವಲ ಐವತ್ತು ವರ್ಷಗಳ ಹಿಂದೆ ಹಣಕ್ಕೆ ಹಿಮ್ಮುಖವಿತ್ತು. ಆದರೆ ಬದುಕು ತಣ್ಣಗಿತ್ತು. ಕಸವು ಕರಗದ ತಿಪ್ಪೆಯಾಗಿರಲಿಲ್ಲ. ಕೆರೆಗಳಿಗೆ ಬೆಂಕಿ ಬೀಳುತ್ತದೆಂಬ ಕನಸೂ ಇರಲಿಲ್ಲ. ನಾವು ಮೊದಲು ಪ್ಲಾಸ್ಟಿಕ್ ಕಂಡದ್ದೆ ಹಳ್ಳಿಗಳಿಗೆ ರಸಗೊಬ್ಬರವು ಚೀಲದೊಳಗೆ ಬಂದು ನಿಂತಾಗ.

ಆಗ ನಮ್ಮ ಅಜ್ಜ–ಅಮ್ಮದಿರು ಸಂತೆ ಕುಕ್ಕೆವೊಳಗೆ ಅರುಬೆ ಗಂಟೂಡಿ ಸಂತೆ ಸಾಮಾನು ತರುತ್ತಿದ್ದರು. ಕಣಿಕಣಿ ಎನ್ನುವ ಸೀಸೆಗಳಲ್ಲಿ ಸೀಮೆಎಣ್ಣೆ, ಒಳ್ಳೊಣ್ಣೆ, ಹರಣೆಳ್ಳೆ ಇರುತ್ತಿದ್ದವು. ಈಗ ನೋಡಿದರೆ ಕುಡಿಯುವ ನೀರಿನಿಂದ ಹಿಡಿದು ಉಗಿಯುವ ಬಟ್ಟಲವರೆಗೂ ಪ್ಲಾಸ್ಟಿಕ್ಕು. ದಿನಾ ಅಂಗಡಿ ಕಡೆ ಹೋಗುವಾಗ ಕೈಲೊಂದು ಬಟ್ಟೆ ಕೈ ಚೀಲ ಹಿಡಿದರೆ ನೂರಾರು ಪ್ಲಾಸ್ಟಿಕ್ ಚೀಲಗಳನ್ನು ಇಲ್ಲವಾಗಿಸಬಹುದು.

ಮದುವೆ ಮನೆಯಿಂದ, ಸಾವಿನ ಮನೆವರೆಗೂ ತುಸು ಪ್ಲಾಸ್ಟಿಕ್ ನಿಯಂತ್ರಿಸಿದರೆ ನಿಸರ್ಗಕ್ಕೆ ಮರುಜೀವ ನೀಡಬಹುದು. ನಾಗರಿಕತೆ ಎಂಬುದೊಂದು ಅಮಲು. ಅದೊಂದು ಸೋಮಾರಿತನದ ಹಾಸಿಗೆ. ಅಮಲು ಅಮುಕಿ ಸರಳತೆಯನ್ನು ಹಾಸಿ ಹೊದ್ದರೆ ಅದೇ ಬುದ್ಧ–ಗಾಂಧಿಯರ ಸಾವಯವ ಬದುಕು. ಪ್ಲಾಸ್ಟಿಕ್ ರೀತಿಯ ಕರಗದ ಕರಲನ್ನು ದೂರನೂಕಿ ಕಸವನ್ನಷ್ಟೇ ರಸವಾಗಿಸುವ ಸ್ಥಿತಿ.

ಮನುಷ್ಯ ನಿಸರ್ಗದ ಶಿಶು. ಈ ನಡುವೆ ಬಂದಿರುವ ಪ್ಲಾಸ್ಟಿಕ್‌, ಪಾಲಿಮಾರ್ ವೇಷ ತೊಟ್ಟಿರುವ, ತೈಲ ಬಾವಿಗಳ ಸಾಂಗತ್ಯವಿರುವ ಬ್ರಹ್ಮರಾಕ್ಷಸ. ಅದೊಂದು ಮಾಯಾವಿ ಸ್ವರೂಪ. ಹತ್ತಿಯಷ್ಟು ಹಗುರವಾಗಬಲ್ಲ, ಉಕ್ಕಿನಷ್ಟು ಗಟ್ಟಿಯಾಗಬಲ್ಲ ಯಂತ್ರ ಚಕ್ರವರ್ತಿ. ನೆಲ–ಜಲದ ನಂಟನ್ನು ಕತ್ತರಿಸಿ ಮನುಷ್ಯನನ್ನು ತನ್ನ ಕಡೆ ಮುಖ ಮಾಡಿಸಿಕೊಂಡ ಮಾಂತ್ರಿಕ ಪ್ಲಾಸ್ಟಿಕ್ ಪ್ರಪಂಚವು ಸೆಣಬಿನ ಚೀಲಗಳನ್ನು, ಹತ್ತಿಯ ಕೈಚೀಲಗಳನ್ನು, ತಲೆ ಮೇಲಿನ ಕಂಬಳಿ ಕೊಪ್ಪೆಗಳನ್ನು, ಮೈಮೇಲಿನ ಅಂಗಿಚಡ್ಡಿಗಳ ಸಮೇತ ಕಿತ್ತುಕೊಂಡಾಗಿದೆ. ಹೊಲಗದ್ದೆ, ಬೇಲಿ, ಕೋಣೆ, ಕೊಟ್ಟಿಗೆ... ಕಡೆಗೆ ಎತ್ತಿನ ಮೂಗುದಾರ ಸಮೇತ ಕಿತ್ತುಕೊಂಡು ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದಾಗಿದೆ.

ಮಳೆ ಬಂದು ಜಲನೂಕಿ ಹೊಳೆಬಂದು ಸಮುದ್ರ ಸೇರಿ ನೆಲ–ಜಲದ ಮೇಲೆ ಸವಾರಿಯಾಗಿ ಇದು ಬ್ರಹ್ಮರಾಕ್ಷಸನಾಗಿ ಮೆರೆಯಲಾರಂಭಿಸಿದೆ. ಪ್ಲಾಸ್ಟಿಕ್ ಇಲ್ಲದ ಬದುಕು ಉಂಟೇ! ಎನ್ನುವ ಸ್ಥಿತಿಗೆ ಮುಟ್ಟಿರುವ ಜಗತ್ತು ಅದರ ಕೋರೆಹಲ್ಲುಗಳ ನುರಿತದಿಂದ ತಪ್ಪಿಸಿಕೊಳ್ಳುವ ಬಗೆ ಎಂತು! ಅದೇ ಈಗಿನ ಸವಾಲು. ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಅದು, ಥೇಮ್ಸ್‌ ನದಿಯನ್ನು ಶುದ್ಧೀಕರಿಸಿದ ಮಾದರಿಯಾಗಿ, ಸಿಕ್ಕಿಂ ಜಲ–ನೆಲವನ್ನು ಶುದ್ಧಿಮಾಡಿದ ಬಗೆಯಾಗಿ ಹರಡಲಿ ಎಂಬುದೇ ಎಲ್ಲರ ಹಾರೈಕೆ.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !