ಬುಧವಾರ, ಏಪ್ರಿಲ್ 1, 2020
19 °C
ಪಕ್ಷನಿಷ್ಠೆ ಎಂಬ ಪದಕ್ಕೆ ಅರ್ಥ ಬರುವುದೇ ಆಯಾ ಪಕ್ಷದ ನಾಯಕರು ನಿರ್ದಿಷ್ಟ ಮೌಲ್ಯ, ಸಿದ್ಧಾಂತ ಹಾಗೂ ಮತದಾರರ ವಿಶ್ವಾಸಕ್ಕೆ ನಿಷ್ಠರಾಗಿರುವವರೆಗೆ ಮಾತ್ರ

ತತ್ವಭ್ರಷ್ಟತೆಗೆ ಪಕ್ಷಾಂತರವೇ ಮದ್ದು!

ರವೀಂದ್ರ ರೇಷ್ಮೆ Updated:

ಅಕ್ಷರ ಗಾತ್ರ : | |

Prajavani

‘ಈ ಕಮ್ಯುನಲ್- ಸೆಕ್ಯುಲರ್ ಧ್ರುವೀಕರಣದಿಂದಾಗಿ ಪಕ್ಷ ರಾಜಕಾರಣ ಎಂಬುದು ಪಕ್ಷಪಾತದ ರಾಜಕಾರಣವಾಗಿಬಿಟ್ಟಿದೆ. ಸಂಸದೀಯ ಪ್ರಜಾಪ್ರಭುತ್ವವು ತನ್ನ ಸಹಜ ಲಯವನ್ನೇ ಕಳೆದುಕೊಳ್ಳುತ್ತಾ ಮಂಕಾಗತೊಡಗಿದೆ. ಆಳುವ ಪಕ್ಷ ಹಾಗೂ ವಿರೋಧ ಪಕ್ಷಗಳನ್ನು ಪ್ರತ್ಯೇಕಿಸುವ ಆ ಸೂಕ್ಷ್ಮವಾದ ವ್ಯತ್ಯಾಸದ ಗೆರೆಯೇ ಮಸುಕಾಗುತ್ತಾ ಕ್ರಮೇಣ ಅಳಿಸಿಹೋಗಬಹುದೆಂಬ ಅನುಮಾನ ಕಾಡುತ್ತಿದೆ. ಬರಬರುತ್ತಾ ಅವಕಾಶವಾದಿ ರಾಜಕಾರಣವೇ ಎಲ್ಲೆಲ್ಲೂ ವಿಜೃಂಭಿಸಿಬಿಡುವಂತಾದರೂ ಆಶ್ಚರ್ಯಪಡಬೇಕಿಲ್ಲ’.

ವರ್ತಮಾನದ ರಾಜಕಾರಣಕ್ಕೆ ಕನ್ನಡಿ ಹಿಡಿಯುವಂತಹ ಮೇಲಿನ ಮಾತುಗಳನ್ನಾಡಿದ್ದು ಮಾಜಿ ಪ್ರಧಾನಿ ಚಂದ್ರಶೇಖರ್, ಅದೂ ಈಗ್ಗೆ 22 ವರ್ಷಗಳ ಹಿಂದೆ ಜರುಗಿದ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ. ಸಂದರ್ಭ, 1997ರ ಏಪ್ರಿಲ್‌ 13ರಂದು ಸಂಯುಕ್ತರಂಗ ನೇತೃತ್ವದ ಸರ್ಕಾರದ ಪ್ರಧಾನಿ ಹುದ್ದೆಯಿಂದ ನಮ್ಮವರೇ ಆದ ಎಚ್.ಡಿ.ದೇವೇಗೌಡರು ಕೆಳಗಿಳಿಯಬೇಕಾಗಿ ಬಂದಾಗ ಮಂಡಿಸಿದ ವಿಶ್ವಾಸಮತ ಯಾಚನೆ ನಿರ್ಣಯದ ಮೇಲಿನ ಚರ್ಚೆ.

ಚುನಾವಣಾ ಫಲಿತಾಂಶವನ್ನು ಯಥಾವತ್ತಾಗಿ ಸ್ವೀಕರಿಸದಿರುವ, ಅದರಲ್ಲೂ ಪ್ರತಿಕೂಲ ಜನಾದೇಶವನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳದಿರುವ, ತಮ್ಮ ನಾಯಕತ್ವದ ಪಕ್ಷ ಅನುಭವಿಸಬೇಕಾಗಿ ಬಂದ ಪರಾಭವದ ನೈತಿಕ ಹೊಣೆಗಾರಿಕೆ ಹೊರಲು ನಿರಾಕರಿಸುವ ಮನಃಸ್ಥಿತಿಯಿಂದಾಗಿಯೇ ಇವತ್ತಿನ ರಾಜಕೀಯ ಪಕ್ಷಗಳ ಮುಂಚೂಣಿ ನಾಯಕರು ಪಕ್ಷರಾಜಕಾರಣದ ಅಡಿಪಾಯವನ್ನೇ ಶಿಥಿಲಗೊಳಿಸಿದ್ದಾರೆ. ಪಕ್ಷರಾಜಕೀಯಕ್ಕೆ ಅಗತ್ಯವಿದ್ದ ಸೈದ್ಧಾಂತಿಕ ಬದ್ಧತೆ ಹಾಗೂ ಸಂಘಟನಾತ್ಮಕ ಶಿಸ್ತನ್ನು ಅಧಿಕಾರ ಗದ್ದುಗೆಯ ಆಸೆಗಾಗಿ ಗಾಳಿಗೆ ತೂರಿದ್ದಾರೆ.

ಪಕ್ಷನಿಷ್ಠೆ ಎಂಬ ಪದಕ್ಕೆ ಅರ್ಥ ಬರುವುದೇ ಆಯಾ ಪಕ್ಷದ ನಾಯಕರು ನಿರ್ದಿಷ್ಟ ಮೌಲ್ಯ, ಸಿದ್ಧಾಂತ ಹಾಗೂ ತಮ್ಮ ಬೆಂಬಲಿಗ ಮತದಾರರ ವಿಶ್ವಾಸಕ್ಕೆ ನಿಷ್ಠರಾಗಿರುವವರೆಗೆ ಮಾತ್ರ. ಪಕ್ಷದ ಸರ್ವೋಚ್ಚ ನಾಯಕತ್ವವೇ ಸ್ವಜನ ಪಕ್ಷಪಾತ, ಜಾತೀಯತೆ ಹಾಗೂ ಸ್ವೇಚ್ಛಾಪೂರಿತ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುತ್ತಾ ನಡೆದಾಗ ಅಂತಹ ರೋಗಗ್ರಸ್ತ ಪಕ್ಷಗಳ ತತ್ವಭ್ರಷ್ಟತೆಗೆ ಶಾಸಕರ ಪಕ್ಷಾಂತರವೇ ಅತ್ಯಂತ ಪರಿಣಾಮಕಾರಿ ಮದ್ದಾಗಬಲ್ಲದು, ಅಲ್ಲವೇ?

ಕಳೆದ ಒಂದೂವರೆ ವರ್ಷವಿಡೀ ಕರ್ನಾಟಕ ದಲ್ಲಾದ ಅಸಂಗತ ರಾಜಕೀಯ ಘಟನಾವಳಿಗಳನ್ನೇ ನೋಡುವ. 2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ನಿಚ್ಚಳ ಬಹುಮತವಿಲ್ಲದ ಅತಂತ್ರ ವಿಧಾನಸಭೆ ಸೃಷ್ಟಿಯಾಯಿತು. ಆದರೆ, ಇಲ್ಲಿ ಜನಾದೇಶದ ದೃಷ್ಟಿಯಿಂದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಅಡ್ಡಿಯಾದದ್ದು ಅದರ ಸೈದ್ಧಾಂತಿಕ ಮಡಿವಂತಿಕೆ ಮತ್ತು ತತ್ಪರಿಣಾಮವಾದ ರಾಜಕೀಯ ತಬ್ಬಲಿತನ.

ಇನ್ನು ಅಧಿಕಾರಾರೂಢ ಪಕ್ಷವಾಗಿದ್ದ ಕಾಂಗ್ರೆಸ್ಸಿನ ಸಂಖ್ಯಾಬಲ 130ರಿಂದ ಕೇವಲ 78ಕ್ಕೆ ಕುಸಿದಿದ್ದನ್ನು ತಮಗಾದ ಸೋಲು ಎಂದು ಆ ಪಕ್ಷದ ನಾಯಕರು ಭಾವಿಸಿಯೂ ಇಲ್ಲ, ತಾವು ಬಹುಪಾಲು ಜನರಿಂದ ತಿರಸ್ಕೃತರಾಗಿದ್ದೇವೆ ಎಂಬ ವಾಸ್ತವವನ್ನು ಒಪ್ಪಿಕೊಳ್ಳಲೂ ಇಲ್ಲ. ಅದರ ಬದಲು ಅತ್ಯಂತ ಕಠೋರವಾದ ಶತ್ರುಭಾವವನ್ನೇ ಪ್ರಕಟಿಸಿದ್ದ ಜಾತ್ಯತೀತ ಜನತಾದಳ ಎಂಬ- ಸೀಟು ಗಳಿಕೆಯಲ್ಲಿ 3ನೇ ಸ್ಥಾನದಲ್ಲಿದ್ದ- ಪಕ್ಷದ ಜೊತೆ ಅತ್ಯಂತ ಅವಸರದಲ್ಲಿ ಕೂಡಾವಳಿ ಮಾಡಿಕೊಂಡು ಮೈತ್ರಿ ಸರ್ಕಾರ ರಚಿಸಿಕೊಳ್ಳುವ ದುಸ್ಸಾಹಸಕ್ಕಿಳಿದರು. ಮೈತ್ರಿಕೂಟ ಎಂದಾಗ ಪಾಲುದಾರ ಪಕ್ಷಗಳ ನಡುವೆ ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಸ್ನೇಹಭಾವ ಗಳಿರಬೇಕಿತ್ತು ಅಲ್ಲವೇ? ಆದರೆ ಇಲ್ಲಿ ಎರಡೂ ಪಕ್ಷಗಳ ನಾಯಕರ ನಡುವೆ ಮನೆ ಮಾಡಿದ್ದು ಬರೀ ಅಪನಂಬಿಕೆ, ಅವಿಶ್ವಾಸ, ಅನುಮಾನದಂತಹ ತ್ರಿವಳಿ ಅನಿಷ್ಟಗಳೇ.

ಹೀಗಾಗಿ ಮೈತ್ರಿ ಸರ್ಕಾರ ಎಂಬ ಕಪಟನಾಟಕವನ್ನಾಡುತ್ತಾ, ಅಂತಹ ಒಂದು ಅಸಹಜ, ಅಸಮಂಜಸ ರಾಜಕೀಯ ಮಾದರಿಯನ್ನು ರಾಜ್ಯದ ಜನರ ಮೇಲೆ ಹೇರಿದ್ದವು ಕಾಂಗ್ರೆಸ್–ಜೆಡಿಎಸ್. ಸರ್ಕಾರದ ಪತನ ಖಚಿತಗೊಳ್ಳುತ್ತಿದ್ದಂತೆಯೇ ಏಕಾಏಕಿ, ಪ್ರಜಾತಂತ್ರದ ರಕ್ಷಣೆ ಹಾಗೂ ಪಕ್ಷಗಳ ಪಾವಿತ್ರ್ಯದ ಹುಯಿಲೆಬ್ಬಿಸಿ ವಿಶ್ವಾಸಮತ ಯಾಚನೆಯ ಕಲಾಪದ ಮೂಲಕ ಕಾಲಹರಣ ಮಾಡಿದ್ದು ಒಂದು ದೊಡ್ಡ ಪ್ರಹಸನವೇ ಆಗಿತ್ತು. ಅಲ್ಲಿಗೂ ‘ಕೋಮುವಾದಿಗಳನ್ನು ಹೊರಗಿಡಬೇಕು’ ಎಂಬ ಸೂತ್ರ ಪಾಲಿಸುತ್ತಾ ಬಂದ ಸೆಕ್ಯುಲರ್ ಪಾರ್ಟಿಗಳು ಸಾಧಿಸಿದ್ದಾದರೂ ಏನು?

ಕಡೆಗೂ ನೋಡಿ, ಮಹಾರಾಷ್ಟ್ರದಲ್ಲಿ ಸಂಭವಿಸಿರುವುದು ಇಲ್ಲಿನದಕ್ಕೆ ವ್ಯತಿರಿಕ್ತವಾದ ವಿದ್ಯಮಾನ. ಚುನಾವಣಾಪೂರ್ವ ಮೈತ್ರಿಯನ್ನು ಧಿಕ್ಕರಿಸಿ ಹೊರಬಂದ ಶಿವಸೇನಾ ಜೊತೆಗೆ ಕೈಮಿಲಾಯಿಸಿದರೆ ಎಲ್ಲಿ ತಮ್ಮ ಇದುವರೆಗಿನ ಸೆಕ್ಯುಲರ್ ಇಮೇಜಿಗೆ ಕಳಂಕ ತಗುಲಿಕೊಂಡೀತೋ ಎಂಬ ತೊಳಲಾಟದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕಾಲಹರಣ ಮಾಡುತ್ತಾ ಸಾಗಿದರು. ಅಷ್ಟರಲ್ಲಿ ಎನ್‌ಸಿಪಿ ಮುಖಂಡ ಅಜಿತ್‌ ಪವಾರ್‌ ಅವರ ವ್ಯಾವಹಾರಿಕ ಬುದ್ಧಿ ಮತ್ತು ಚಾಣಾಕ್ಷತನ ಚುರುಕಾಗಿಬಿಟ್ಟಿತು. ಅಜಿತ್‌ ನಡೆಯ ಹಿಂದೆ ಏನೆಲ್ಲ ಲೆಕ್ಕಾಚಾರಗಳಿವೆಯೋ, ಯಾರ್‍ಯಾರು ಇದ್ದಾರೋ ಎಂಬುದು ಈ ಕ್ಷಣಕ್ಕೆ ಖಚಿತವಾಗಿ ಹೊರ ಬಿದ್ದಿಲ್ಲ. ಆದರೆ, ಬಿಜೆಪಿಯ ‘ಕೋಮುವಾದ’ ಮತ್ತು ಎನ್‍ಸಿಪಿಯ ‘ರಾಷ್ಟ್ರೀಯತಾವಾದ’ಗಳು ಸಂಗಮಿಸಿ, ಅವೆರಡೂ ಪಕ್ಷಗಳ ಸರ್ಕಾರ ರಚನೆ ಆಗಿಬಿಟ್ಟಿದೆ ಎಂಬುದಂತೂ ದಿಟ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)