ಗುರುವಾರ , ಆಗಸ್ಟ್ 22, 2019
27 °C
ಚುನಾವಣೆ ಬಂದಾಗ ರಾಜಕಾರಣಿಗಳ ‘ಟೆಂಪಲ್ ರನ್’ ಪ್ರವೃತ್ತಿ ಅತಿರೇಕಕ್ಕೆ ಹೋಗುತ್ತದೆ;ಸಂದಿಗೊಂದಿಯನ್ನೂ ಬಿಡದೆ ಎಲ್ಲಾ ದೇವರು, ದರ್ಗಾ, ಮಠಗಳ ದರ್ಶನ ಶುರುವಾಗುತ್ತದೆ

ಇನ್ನು ಶುರು ‘ಟೆಂಪಲ್‌ ರನ್‌’!

Published:
Updated:
Prajavani

ದುರ್ಗೆಯ ಅತ್ಯಂತ ಉಗ್ರವಾದ ಅಭಿವ್ಯಕ್ತಿ, ದೇವಿ ಚಂಡಿಕಾ. ‘ಚಂಡಿಕಾ ಹೋಮ’ ಕೆಲವು ವೈಯಕ್ತಿಕ ಇಷ್ಟಾರ್ಥ ಸಿದ್ಧಿಗಾಗಿ ಮಾಡುವ ವಿಸ್ತೃತ ಪೂಜಾಕ್ರಮ. ಈಗಂತೂ ದೇಶದ ಅನೇಕ ದೇವಸ್ಥಾನಗಳಿಗೆ ವೆಬ್‍ಸೈಟ್ ಇರುತ್ತದೆ. ಹೋಮಕ್ಕಾಗಿ ಸಮಯವನ್ನು ಆನ್‌ಲೈನ್‌ ಮೂಲಕ ಬುಕ್ ಮಾಡಬಹುದು. ನೀವು ಸ್ವತಃ ಹೋಗಲೂ ಬೇಕಾಗಿಲ್ಲ, ನಿಮ್ಮ ಹೆಸರಿನಲ್ಲಿ ಈ ವಿಶೇಷ ಹೋಮವನ್ನು ಮಾಡಲಾಗುತ್ತದೆ.

ಹಲವು ದೇವಸ್ಥಾನಗಳ ವೆಬ್‍ಸೈಟುಗಳಲ್ಲಿ, ಚಂಡಿಕಾ ಹೋಮ ಮಾಡುವುದರಿಂದ ಶೀಘ್ರವಾಗಿ ಲಭಿಸುವ ಫಲಗಳೇನು ಎಂಬುದರ ಪಟ್ಟಿಯೂ ಇದೆ. ಇವುಗಳ ಸಾರಾಂಶ: ವ್ಯಕ್ತಿಯ ಪ್ರಗತಿಯಲ್ಲಿ ಎದುರಾಗಿರುವ ಮಾನುಷ, ಅತಿಮಾನುಷ, ಕೆಟ್ಟ ದೃಷ್ಟಿಯ, ದೋಷ, ಶಾಪಗಳ ನಿವಾರಣೆ; ಕೋರ್ಟ್ ಕೇಸುಗಳಲ್ಲಿ ಶತ್ರುಗಳ ಮೇಲೆ ಗೆಲುವು, ಮಾಟಮಂತ್ರದ ನಿವಾರಣೆ. ಶತ್ರುಗಳು, ವಿರೋಧಿಗಳ (ವಿನಾಶವಲ್ಲ) ಮೇಲೆ ಜಯ. ಇಲ್ಲವೇ ಬದುಕಿನಲ್ಲಿ ಮಾಡಿರುವ ಯಾವುದೋ ಘೋರ ಅಪರಾಧಕ್ಕಾಗಿ ದೇವಿಯಲ್ಲಿ ಕ್ಷಮೆಯಾಚಿಸುವ ಸಲುವಾಗಿ ಚಂಡಿಕಾ ಹೋಮ ಮಾಡಿಸಬಹುದು. ಇದನ್ನು ಲೋಕಕಲ್ಯಾಣಕ್ಕಾಗಿ ಮಾಡಿಸಬಹುದು ಎಂದು ಯಾವುದೇ ದೇವಸ್ಥಾನದವರು ಹೇಳಿಲ್ಲ, ಹಾಗೆ ಹೇಳಿದರೆ ಗಿರಾಕಿಗಳು ಬರುವುದೂ ಕಷ್ಟ!

ಇದೀಗ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಶತಾಯಗತಾಯ ಗೆಲ್ಲಬೇಕು, ಗೆದ್ದ ನಂತರ ಜನರ ‘ನಿಸ್ವಾರ್ಥ ಸೇವೆ’ ಮಾಡಲು ಅತ್ಯಂತ ‘ಫಲದಾಯಿ’ಯಾದ ಇಲಾಖೆಯ ಮಂತ್ರಿ ಸ್ಥಾನವೇ ಸಿಗಬೇಕು ಎಂದು ರಾಜಕಾರಣಿಗಳು ಇರುವ ಎಲ್ಲ ‘ಮಾರ್ಗ’ಗಳನ್ನೂ ಅನುಸರಿಸುತ್ತಾರೆ. ಅದರಲ್ಲೊಂದು ಬಹು ಜನಪ್ರಿಯವಾದದ್ದು ‘ಚಂಡಿಕಾ ಹೋಮ’. ಇಂಥ ನಂಬಿಕೆ, ಆಚರಣೆ ಬಗೆ ಬಗೆಯಲ್ಲಿ ಪ್ರಕಟವಾಗುತ್ತದೆ. ಅವರವರ ಮತ, ಮನೋಧರ್ಮ, ಅಭೀಪ್ಸೆ, ಅರ್ಹತೆಗೆ ತಕ್ಕಂತೆ ದೇವರುಗಳಿವೆ; ದರ್ಗಾಗಳಿವೆ. ಪೂಜೆ, ಯಾಗ, ಹೋಮ, ಹರಕೆಗಳಿವೆ. ತಕ್ಕ ರೇಟುಗಳೂ ಇವೆ. ಎಲ್ಲರೂ ಇಂಥ ಯಾಗ, ಹೋಮವನ್ನು ಮಾಡಿಸುವುದು ಶತ್ರುವನ್ನು ಸದೆಬಡಿದು, ಚುನಾವಣೆಯಲ್ಲಿ ವಿಜಯ ಸಾಧಿಸಲೆಂದು.

ಈ ಇಂಗಿತವನ್ನು ಬಹಿರಂಗದಲ್ಲಿಯೂ ಒಪ್ಪಿಕೊಂಡರೆ ಅವರವರ ದೇವರು ಮೆಚ್ಚಿಯಾರು. ಆದರೆ, ಇತ್ತೀಚೆಗೆ ಪ್ರಸಿದ್ಧ ದೇವಸ್ಥಾನವೊಂದರಲ್ಲಿ ಕುಟುಂಬಸಹಿತ ಹೋಗಿ ಮಹಾಚಂಡಿಕಾ ಹೋಮ ಮಾಡಿಸಿದ ಪ್ರಮುಖ ರಾಜಕಾರಣಿಯೊಬ್ಬರು ‘ನಾನು ಇದನ್ನು ಲೋಕಕಲ್ಯಾಣಕ್ಕಾಗಿ ಮಾಡುತ್ತಿದ್ದೇನೆ, ಹಲವೆಡೆ ಬರಗಾಲವಿದೆ, ಉತ್ತಮ ಮಳೆ–ಬೆಳೆಯಾಗಲೆಂದು ತಾಯಿಯಲ್ಲಿ ಬೇಡಲು ಮಾಡುತ್ತಿದ್ದೇನೆ’ ಎಂದಿದ್ದಾರೆ. ಎಂಥ ತಮಾಷೆಯ ಮಾತು!

ರಾಜ್ಯದಲ್ಲಿ ಬರಗಾಲ ಇರುವುದು ದೇವರುಗಳಿಗೆ ಗೊತ್ತಿಲ್ಲವೇ? ಬರಗಾಲವೂ ದೇವರ ಲೀಲೆಯಲ್ಲವೇ! ಇನ್ನು ರಾಜ್ಯಕ್ಕೆ ಒಳ್ಳೆಯದು ಮಾಡಬೇಕು ಎನ್ನುವುದು ದೇವರುಗಳಿಗೆ ಸ್ವತಃ ಗೊತ್ತಾಗದಿದ್ದರೆ, ಹುಲುಮಾನವರು ಖಾಸಗಿ ಅರ್ಜಿ ಹಾಕಿ ಗೊತ್ತು ಮಾಡಿಸಬೇಕಾಗುತ್ತದೆಯೇ? ಉತ್ತಮ ಮಳೆ ಬೆಳೆ ಬರಬೇಕು ಎಂದರೆ ಸುಸ್ಥಿರವಾದ ದೀರ್ಘಾವಧಿಯ ವೈಜ್ಞಾನಿಕ ಯೋಜನೆಗಳನ್ನು ಹಾಕಿಕೊಂಡು, ಜನರ ಸಹಭಾಗಿತ್ವ, ವಿಶ್ವಾಸ ಗಳಿಸಿಕೊಂಡು ನಿರಂತರವಾಗಿ ದುಡಿಯಬೇಕೇ ವಿನಾ, ಹೋಗಿ ದೇವರುಗಳಿಗೆ ಸಾಷ್ಟಾಂಗ ಅಡ್ಡ ಬೀಳುವುದಲ್ಲ. ಮುಖ್ಯವಾಗಿ, ಚುನಾವಣೆಯ ಸಂದರ್ಭದಲ್ಲಿ ಈ ‘ಟೆಂಪಲ್ ರನ್’ ಪ್ರವೃತ್ತಿ ಅತಿರೇಕಕ್ಕೆ ಹೋಗಿಬಿಡುತ್ತದೆ. ಸಂದಿಗೊಂದಿಯಲ್ಲಿ ಇರುವುದನ್ನೂ ಬಿಡದೆ ಎಲ್ಲಾ ದೇವರುಗಳ, ದರ್ಗಾಗಳ, ಮಠಗಳ ದರ್ಶನ. ಜ್ಯೋತಿಷಿಗಳ ಪಾಂಡಿತ್ಯ ಪ್ರದರ್ಶನ.

ಚುನಾವಣೆಯಲ್ಲಿ ಗೆಲುವು ಸಾಧ್ಯವಾಗುವುದು ಮತದಾರರು ಮಾಡುವ ಆಯ್ಕೆಯಿಂದ. ಆಕಾಂಕ್ಷಿಗಳು ಗೆಲ್ಲಬೇಕಾಗಿರುವುದು ಮತದಾರ ನಾಗರಿಕರ ವಿಶ್ವಾಸವನ್ನು. ಎಂದರೆ, ಇವರುಗಳು ಪುರೋಹಿತರ ಮೂಲಕ ದೇವರುಗಳಿಗೆ ಕೊಡಬೇಕಾದ್ದನ್ನು ಕೊಟ್ಟು ಮತದಾರರ ಮನಸ್ಸಿನ ಮೇಲೆ ದೇವರು ಪ್ರಭಾವ ಬೀರುವಂತೆ ಮಾಡುತ್ತಾರೆಯೇ? ಹೀಗೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರುವ, ಮತದಾರರ ವಿವೇಚನೆಯನ್ನು ಕೆಡಿಸುವ ಯಾವುದೇ ಪ್ರಯತ್ನ ಕಾನೂನುಬಾಹಿರ. ಇನ್ನು ಶತ್ರು ಸಂಹಾರ/ಸದೆಬಡಿಯಲು ಮಾಡುವ ಯಾವುದೇ ಪೂಜೆಯು ಮಾಟಮಂತ್ರಕ್ಕೆ ಸಮನಾಗುತ್ತದೆ. ಅದು ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ನಿರ್ಮೂಲನ ಅಧಿನಿಯಮ, 2017ರ ಪ್ರಕಾರ ಅಪರಾಧವಾಗುತ್ತದೆ.

ಅಭ್ಯರ್ಥಿಗಳು ಶಾಸಕ, ಸಂಸದ ಹೀಗೆ ಯಾವುದೇ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಮತ್ತು ಆಯ್ಕೆಯಾದಾಗ ಅಥವಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ‘... ಆದ ನಾನು ... ಭಾರತ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ...’ ಎಂದು ಶಪಥ ಮಾಡುತ್ತಾರೆ. ಇವರು ಸಂವಿಧಾನವನ್ನು ಓದಿದ್ದಾರೆಯೇ? ಯಾವ ಸಂವಿಧಾನದ ಕುರಿತು ‘ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ’ ಎಂದು ಇವರು ಹೇಳುತ್ತಿದ್ದಾರೆಯೋ ಅದರ ಭಾಗ 4 (ಎ), ವಿಧಿ 51 ಎ (ಎಚ್) ಹೇಳುತ್ತದೆ: ‘ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ’ ಎಂದು. ಎಂದರೆ, ಚುನಾವಣೆ ಗೆಲ್ಲಲು ಬಗೆಬಗೆಯ ದೇವಾಲಯ, ದರ್ಗಾಗಳಿಗೆ ಸುತ್ತುವ; ಪೂಜೆ, ಹೋಮ, ಯಾಗಗಳನ್ನು ಮಾಡುವ ರಾಜಕಾರಣಿಗಳು ಈ ದೇಶದ ನಾಗರಿಕರಲ್ಲವೇ ಅಥವಾ ಇವರು ಸಂವಿಧಾನದ ಪ್ರಕಾರ ಕರ್ತವ್ಯ ಭ್ರಷ್ಟರೇ?

Post Comments (+)