ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಯಕರ್ತ ತುದಿಗಾಲಲ್ಲಿ ನಿಂತಿದ್ದಾನೆ!

Last Updated 24 ಏಪ್ರಿಲ್ 2019, 20:27 IST
ಅಕ್ಷರ ಗಾತ್ರ

ವಿಶ್ವದಲ್ಲೇ ಅತಿಹೆಚ್ಚು ಮಲಿನಗೊಂಡಿರುವ 15 ನಗರಗಳ ಬಗೆಗಿನ ವರದಿಯಲ್ಲಿ (ಪ್ರ.ವಾ., ಏ.11), ಕೇಂದ್ರ ಗೃಹ ಸಚಿವರು ಪ್ರತಿನಿಧಿಸುವ ಕಾನ್ಪುರ ಮೊದಲ ಸ್ಥಾನದಲ್ಲಿದೆ. ಪ್ರಧಾನಿ ಪ್ರತಿನಿಧಿಸುವ ವಾರಾಣಸಿಯು ಮೂರನೇ ಸ್ಥಾನದಲ್ಲಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿವೆ. ಈಗಿನ ಸರ್ಕಾರವು ಗಂಗಾ ಶುದ್ಧೀಕರಣಕ್ಕೆ ಸಚಿವಾಲಯವೊಂದನ್ನು ಪ್ರಾರಂಭಿಸಿದೆ. ಫಲಿತಾಂಶ ಮಾತ್ರ ಸೊನ್ನೆ. ಇದು ಜಗದ ಕಾಯಿಲೆ ಎನ್ನಬಹುದು. ಭಾರತದ ರಾಷ್ಟ್ರೀಯ ಪಕ್ಷಗಳು ಎಚ್ಚೆತ್ತು, ಕಣ್ಣೊರೆಸಲೋ ಎಂಬಂತೆ ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಿರಲೂಬಹುದು. ಇದಾವುದೂ ಪರಿಹಾರವಲ್ಲ. ವಾಯುಮಾಲಿನ್ಯದಿಂದ ಭಾರತದಲ್ಲಿ ಅಪಾರ ಸಂಖ್ಯೆಯ ಸಾವುನೋವು ಸಂಭವಿಸಿರುವ ದಾಖಲೆಯೂ ಕಣ್ಣ ಮುಂದಿದೆ. ಈ ದೇಶದಲ್ಲಿ ತ್ವರಿತವಾಗಿ ನೀರು ಖಾಲಿಯಾಗುತ್ತಿರುವುದನ್ನು ವಿಶ್ವಬ್ಯಾಂಕ್ ವರದಿ ತಿಳಿಸಿದೆ. ಇದು, ಸ್ವಾತಂತ್ರ್ಯ ಬಂದ ನಂತರ ಶೇ 400ರಷ್ಟು ನೀರು ಖೋತಾ ಆಗಿರುವ ವಿಚಾರವಾಗಿದೆ.

ದೇಶವು ಚುನಾವಣೆ ಎದುರಿಸುವಾಗ ಪರಿಸರವಾದವನ್ನು ಮರೆತಿದ್ದೇವೆ. ಜನರ ಮೂಗಿಗೆ ಭರವಸೆಗಳ ತುಪ್ಪ ಸವರುವ ಕೆಲಸ ನಡೆದಿದೆ. ಬೆಂಗಳೂರನ್ನೇ ತೆಗೆದುಕೊಂಡರೆ ಅದು, ಕೇಪ್‌ಟೌನ್‌ನಲ್ಲಿ ನೀರನ್ನು ಅಳೆದುಕೊಡುತ್ತಿರುವ ರೀತಿಗೆ ಹತ್ತಿರದಲ್ಲಿದೆ. ಅಭಿವೃದ್ಧಿ ಎಂದರೆ ಏನು? ರಸ್ತೆಗಳೇ? ತಾರಸಿಮನೆಗಳೇ? ಕೋಟ್ಯಂತರ ವಾಹನಗಳೇ? ಅರೆಬರೆ ವಿದ್ಯೆಯೇ? ಈ ರೀತಿ ಬೆಳವಣಿಗೆ ಬೇಕೇ?

ಅಂದು ಕೈಗಾರಿಕಾ ಕ್ರಾಂತಿಯಾದ ಸಮಯ. ಪಶ್ಚಿಮದ ಜಗತ್ತು ಅದರೊಡನೆಯೇ ತಲ್ಲಣಕ್ಕೊಳಗಾಗಿತ್ತು. ಸ್ಟುಯರ್ಟ್‌ ಚೇಸ್ ಎಂಬ ಚಿಂತಕ ಹೇಳುವಂತೆ ‘ನಾವು ವಾಸ್ತವವಾಗಿ ಪ್ರಗತಿಯಿಂದ ಅಸ್ತವ್ಯಸ್ತ ರಾಶಿಯಾಗಿ ಪರಿಣಮಿಸಿದ್ದೇವೆ’. ಈ ಸಂಬಂಧ ನೆಹರೂ ಹಾಗೂ ಗಾಂಧೀಜಿ ನಡುವೆ ಚರ್ಚೆಗಳು ಪ್ರಾರಂಭವಾಗುತ್ತವೆ. ‘ನಗರ ಸಂಸ್ಕೃತಿಯ ಮಟ್ಟಕ್ಕೇರುವಂತೆ ಹಳ್ಳಿಗಳಿಗೆ ಪ್ರೋತ್ಸಾಹವೀಯಬೇಕು’ ಎಂಬುದು ನೆಹರೂ ವಾದ. ‘ಆಹಾರ, ಬಟ್ಟೆ, ವಾಸಗೃಹ, ದೀಪ, ನೀರು, ಜೀವಸ್ಥಿತಿ ಮಟ್ಟದಲ್ಲಿ ನಗರವಾಸಿಗಳು ಹಾಗೂ ಗ್ರಾಮಜನರ ನಡುವೆ ಸಮಾನತೆ ಇರಬೇಕು. ಆದರೆ ಇವುಗಳನ್ನು ಜನರೇ ಉತ್ಪಾದಿಸಲು ಸಮರ್ಥರಾಗಬೇಕು’ ಎಂಬುದು ಗಾಂಧೀಜಿ ತರ್ಕ. ಆ ಅಜ್ಜನ ಮಾತನ್ನು ನೆಹರೂ ಕೇಳಲಿಲ್ಲ. ಅವರ ಅನುಯಾಯಿಗಳೂ ಕೇಳಲಿಲ್ಲ. ಈಗಿನ ಎಲ್ಲಾ ಸರ್ಕಾರಗಳೂ ನೆಹರೂ ವಾದದ ತರ್ಕದ ಜಾಡಿನಲ್ಲಿಯೇ ಇವೆ.

ನೀರು, ಗಾಳಿ, ಆಹಾರಗಳೆಲ್ಲವೂ ವೈದ್ಯಕೀಯ. ಇವು ಧನಿಕರ ವೈದ್ಯ ದಂಧೆಯೊಂದಿಗೆ ಗೆಳೆತನ ಬಯಸಿವೆ. ಭಾರತವಿಂದು ಮಧುಮೇಹದ ರಾಜಧಾನಿ. ಜಗತ್ತು ಕಾಯಿಲೆಯ ಗೂಡು. ಆ ಗೂಡುಗಳಿಗೆ ಬಗೆಬಗೆಯ ಬ್ರಹ್ಮರಾಕ್ಷಸರ ತತ್ತಿಗಳು. ಪ್ರಜಾಪ್ರಭುತ್ವ ಇಂದು ಜಗತ್ತಿನಲ್ಲಿ ಎಲ್ಲಾ ರಾಜಕೀಯ ‘ಇಸಂ’ಗಳನ್ನು ತುಳಿದು, ಅದೇ ಬ್ರಹ್ಮರಾಕ್ಷಸರ ಸಖ್ಯ ಬೆಳೆಸಿದೆ. ಹಾಗಾದರೆ ಈ ಜಗತ್ತಿಗೆ ಭವಿಷ್ಯವಿಲ್ಲವೇ? ‘ಇಲ್ಲ’ ಎನ್ನುತ್ತಿದೆ ಇವೆಲ್ಲವನ್ನೂ ಸಾಕಿ ಬೆಳೆಸಿದ ವಿಜ್ಞಾನ. ‘ಯಾಕೆ ಭವಿಷ್ಯವಿಲ್ಲ, ಈ ದೇಶವೂ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಬೇಕು’ ಎನ್ನುತ್ತದೆ ನಮ್ಮ ಆಳುವ ಸರ್ಕಾರ. ‘ಬರೀ ಸುಳ್ಳು ಹೇಳಿ ಕಾಲ ಕಳೆದಿರಿ, ಪುನಃ ನಮ್ಮ ಕೈಗೆ ಅಧಿಕಾರ ಕೊಡಿ, ಆ ಕಾಲದ ಅಭಿವೃದ್ಧಿಯನ್ನು ಮುಂದುವರಿಸುತ್ತೇವೆ’ ಎನ್ನುತ್ತದೆ ಎದುರು ಪಕ್ಷ. ‘ನಮ್ಮ ಕೈಗೆ ಅಧಿಕಾರ ಕೊಡಿ, ಈ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ಪಂಚವರ್ಗಗಳನ್ನು ಸಮಾನತೆಗೊಡ್ಡುತ್ತೇವೆ’ ಎನ್ನುತ್ತಿವೆ ಪ್ರಾದೇಶಿಕ ಪಕ್ಷಗಳು. ಇವೆಲ್ಲವೂ ಆಟ, ರಣಮೋಡಿಯಾಟ. ವಿಚಾರ ಬೇರೆಯೇ ಇದೆ. ಜಗತ್ತು ಇರುವವರೆಗೂ ನಾವು ಬದುಕಿರುತ್ತೇವೆಂಬ ಭ್ರಮೆಯಲ್ಲಿ ಕಳ್ಳರು, ಸುಳ್ಳರು, ದರೋಡೆಕೋರರು, ಕ್ರಿಮಿನಲ್‌ಗಳು ಅತ್ತ ಸರ್ಕಾರದಿಂದ, ಇತ್ತ ಸಾರ್ವಜನಿಕರಿಂದ ಸುಲಿಗೆ ಮಾಡುತ್ತಾ ಆಕಾಶರಾಯನೇ ಬೆಚ್ಚಿಬೀಳುವಂತೆ, ಭೂಮಂಡಲವೇ ಅಚ್ಚರಿಪಡುವಂತೆ, ಜಲದೇವತೆಯೇ ನಡುಗಿ ಹೋಗುವಂತೆ ಯಮಪಾಶವನ್ನು ಕಿತ್ತೆಸೆಯುವ ಹುಚ್ಚು ಸಾಹಸದಲ್ಲಿದ್ದಾರೆ.

ಯಮರಾಯನೇನಾದರೂ ಈ ರಾಕ್ಷಸರು ಒಡ್ಡುವ ಕೋಟಿ ಕೋಟಿ ಆಮಿಷಕ್ಕೆ ಸಿಗುವುದಾದರೆ ತಮ್ಮ ಆಯಸ್ಸನ್ನು ವಿಸ್ತರಿಸಿಕೊಳ್ಳುತ್ತಿದ್ದರು. ಏನು ಮಾಡುವುದು!? ತ್ರಿಮೂರ್ತಿಗಳನ್ನು ಪೂಜಿಸುವಂತೆ ಊದುಗಡ್ಡಿ ಹಚ್ಚಲು ಆತ ಬಿಡುವುದಿಲ್ಲ. ಆತ ನಿಷ್ಠುರ ನಿರ್ವಾಹಕ. ಗಂಗಾಮಾತೆಯ ಶುದ್ಧೀಕರಣಕ್ಕೆ ಉಪವಾಸ ಕುಳಿತು ಕಣ್ಮುಚ್ಚಿದ ಪರಿಸರ ವಿಜ್ಞಾನಿ ಅನಿಲ್ ಅಗರ್‌ವಾಲಾರಂತಹವರ ಆಲಿಕೆ ಅವನ ಕಿವಿಯಲ್ಲಿದೆ. ಗಂಗಾಮಾತೆಯ, ಆಕಾಶರಾಯನ, ಸಮುದ್ರರಾಜನ ಕ್ಷೀಣ ದನಿಗೆ ಕನಿಕರವಿದೆ. ಹಾಗಾದರೆ ಇದಕ್ಕೆಲ್ಲ ಪರಿಹಾರವೇನು ಎನ್ನಬಹುದು. ಪರಿಹಾರವಿದೆ. ಒಂದು ಮರ ಸಾಯುವಾಗ, ಅಡವಿ ಬರಿದಾಗುವಾಗ, ಮಣ್ಣು ಸವಕಳಿಯಾಗುವಾಗ, ಸಾರಜನಕ ಚಕ್ರ ಕ್ಷೀಣವಾದಾಗ, ಪಂಚಭೂತಗಳು ಮಲಿನವಾಗುತ್ತಿರುವಾಗ, ಹಾಳುಮಾಡಿಕೊಂಡಿರುವ ಈ ನರಮನುಷ್ಯರೇ ಪರಿಹಾರ ಸೂಚಿಸಬೇಕು. ನರಮಕ್ಕಳಿಗೆ ಬುದ್ಧಿ ಬಂದರೆ ಭೂತಾಯಿ ಕ್ಷಮಿಸಬಲ್ಲಳು. ಕುವೆಂಪು ಕಾಲದಲ್ಲಿ ಅಡವಿತಾಯಿ ಆಸರೆ ನೀಡಿದ್ದಳು. ಅವರ ಮಗನ ಕಾಲಕ್ಕೆ ಅಡವಿ ತೆರೆದ ಖಜಾನೆಯಾಗಿತ್ತು. ಈಗ ಎಲ್ಲವೂ ಬರಿದು. ಈ ತಾಯ್ ಮೊರೆ ಖಾಲಿತನವನ್ನು ತುಂಬಿಕೊಳ್ಳುವ, ಪುನಃ ಶಕ್ತಿಯನ್ನು ಪಡೆದುಕೊಳ್ಳುವ ಕಾರ್ಯವು ಶುದ್ಧೀಕರಣ ಹಾಗೂ ಅರಣ್ಯೀಕರಣದಲ್ಲಿ ಇನ್ನಾದರೂ ಆಗದಿದ್ದರೆ ಲಯಕರ್ತ ತುದಿಗಾಲಿನಲ್ಲಿ ನಿಂತಿದ್ದಾನೆ ಜೋಕೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT