ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವು ಸಾಧಿಸುತ್ತಲೇ ಇದೆ ಬಡತನ

ಬಡತನ ರೇಖೆಗೆ ಸಂಬಂಧಿಸಿದಂತೆ ನಮ್ಮಲ್ಲಿನ್ನೂ ಹೊಸ ಸೂತ್ರ ರಚನೆಯಾಗಿಲ್ಲ!
Last Updated 6 ನವೆಂಬರ್ 2019, 20:30 IST
ಅಕ್ಷರ ಗಾತ್ರ

ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವ, ಸ್ವೀಡನ್‌ನ ಗುನ್ನಾರ್ ಮಿರ್ಡಾಲ್‌ ತಮ್ಮ ಬೃಹತ್ ಕೃತಿ ‘ಏಷಿಯನ್‌ ಡ್ರಾಮಾ’ ಮೂಲಕ, ಭಾರತದ ಬಡತನವನ್ನು ಪ್ರಥಮ ಬಾರಿಗೆ (1968), ಪರಿಣಾ ಮಕಾರಿಯಾದ ರೀತಿಯಲ್ಲಿ ವಿಶ್ವಕ್ಕೆ ಪರಿಚಯಿಸಿ
ದ್ದರು. ಇದಾದ ನಂತರವೇ ಭಾರತದ ಅರ್ಥಶಾಸ್ತ್ರಜ್ಞರು ಮತ್ತು ಸಂಖ್ಯಾಶಾಸ್ತ್ರಜ್ಞರಿಂದಲೂ ಬಡತನದ ಪ್ರಮಾಣವನ್ನು ನಿರ್ದಿಷ್ಟವಾದ ಮಾನದಂಡಗಳಿಂದ ಅಳೆಯುವ ಪ್ರಯತ್ನಗಳಾದವು. 70ರ ದಶಕದಲ್ಲಿ ಮಾನದಂಡಗಳಾಗಿ ಬಳಕೆಯಾದ, ಜೀವನಾಧಾರಕ್ಕೆ ಅಗತ್ಯವಾದ ತಲಾ ಉಪಭೋಗ ವೆಚ್ಚಗಳು, ಬಡವರು ಬದುಕುಳಿದರೆ ಸಾಕು ಎನ್ನುವ ತೀರಾ ಅಲ್ಪತೃಪ್ತಿಯ ಸಂದೇಶ ನೀಡಿದ್ದರಿಂದ ವಿವಾದಗಳು ತಲೆದೋರಿದ್ದವು. ಕಣ್ಣಿಗೆ ರಾಚುವಂತೆ ಪ್ರಾದೇಶಿಕ ವ್ಯತ್ಯಾಸವನ್ನು ಮೆರೆಯುತ್ತಿರುವ ಜಟಿಲ ಸಮಸ್ಯೆಯಾದ ಬಡತನವು ಸರ್ಕಾರಗಳನ್ನಷ್ಟೇ ಅಲ್ಲ, ಅದರ ಬಗ್ಗೆ ಚಿಂತನೆ ಮಾಡುತ್ತಿರುವ ಸಮಾಜ ವಿಜ್ಞಾನಿಗಳನ್ನೂ ಆಗಾಗ ಸೋಲಿಸಿದೆ!

ಕ್ಷೇಮಾಭಿವೃದ್ಧಿ ಅರ್ಥಶಾಸ್ತ್ರವನ್ನು ಶ್ರೀಮಂತ ಗೊಳಿಸಿ 1998ರ ನೊಬೆಲ್ ಪ್ರಶಸ್ತಿ ಪಡೆದ ಅಮರ್ತ್ಯ ಸೇನ್‌ರಿಗೆ, ‘ಬಡವರ ಅರ್ಥಶಾಸ್ತ್ರಜ್ಞ’ರೆಂಬ ಖ್ಯಾತಿಯೂ ಇದೆ. ಭಾರತದಲ್ಲಿ ಆದಾಯ ವಿತರಣೆಯ ಅಸಮಾನತೆ ಮತ್ತು ಬಡತನದ ಪ್ರಮಾಣದ ನಡುವೆ ಇರುವ ನೇರ ಸಂಬಂಧವನ್ನು ಸೇನ್ ತಮ್ಮ ಬಡತನ ಸೂಚ್ಯಂಕದಲ್ಲಿ ಗುರುತಿಸಿದ್ದಾರೆ. ಸಾಮಾಜಿಕ ವ್ಯವಸ್ಥೆ ಯಲ್ಲಿ ಸರಿಯಾಗಿ ಬದುಕುವ ಅವಕಾಶಗಳು ಇಲ್ಲವಾದ್ದರಿಂದ, ತಮ್ಮಲ್ಲಿ ಸಾಮರ್ಥ್ಯ ಇದ್ದರೂ ಲಾಭಗಳಿಂದ ವಂಚಿತರಾದವರು ಬಡವರಾಗುತ್ತಾರೆ ಎಂಬ ಅವರ ವಾದಕ್ಕೆ ಈಗಲೂ ಮನ್ನಣೆ ಇದೆ.

ಬಡತನ ನಿವಾರಣೆ ಗುರಿಯುಳ್ಳ ಯೋಜನೆಗಳಿಗೆ ಸಂಬಂಧಿಸಿದ ಪ್ರಯೋಗಗಳ ಕುರಿತು ಸಂಗ್ರಹಿಸಿದ ಅಪಾರ ಮಾಹಿತಿಯನ್ನು ಆಧಾರವಾಗಿಟ್ಟು ಸಂಶೋ ಧನೆ ನಡೆಸಿ, ಜಾಗತಿಕ ಮಟ್ಟದಲ್ಲಿ ಬಡತನ ವಿರುದ್ಧದ ಸಮರದ (ಬಡ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೌಲಭ್ಯ ಪೂರೈಕೆ ಮೂಲಕ) ಅಗತ್ಯವನ್ನು ತೋರಿಸಿಕೊಟ್ಟ ಮೂವರು ಅರ್ಥಶಾಸ್ತ್ರಜ್ಞರು 2019ರ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಅವರಲ್ಲಿ ಒಬ್ಬರಾದ, ವಾಸ್ತವಿಕ ದೃಷ್ಟಿಕೋನಕ್ಕೆ ಹೆಸರಾದ ಅಭಿಜಿತ್ ಬ್ಯಾನರ್ಜಿ, ಭಾರತದಲ್ಲಿರುವ ಬಡತನದ ಆಯಾಮಗಳನ್ನು ಹತ್ತಿರದಿಂದ ಬಲ್ಲವರು. ಅವರು ಮತ್ತು ಅವರೊಂದಿಗೆ ಪ್ರಶಸ್ತಿ ಹಂಚಿಕೊಂಡಿರುವ ಅವರ ಪತ್ನಿ ಎಸ್ತರ್ ಡಫ್ಲೊ 2012ರಲ್ಲಿ ಜಂಟಿಯಾಗಿ ಬರೆದ ಮೇರು ಕೃತಿ ‘ಬಡತನದ ಅರ್ಥಶಾಸ್ತ್ರ’ ವನ್ನು (Poor Economics) ಅಮರ್ತ್ಯ ಸೇನ್ ‘ಬಡತನದ ನಿಜ ಸ್ವರೂಪದ ಕುರಿತು ಅಸಾಧಾರಣ ಒಳನೋಟವುಳ್ಳ ಪುಸ್ತಕ’ ಎಂದು ಶ್ಲಾಘಿಸಿದ್ದಾರೆ.

ಹೀಗೆ ಭಾರತದ ಬಡತನವು ನೊಬೆಲ್ ಪ್ರಶಸ್ತಿ ಪುರಸ್ಕೃತರ ಆಯ್ಕೆಯಲ್ಲಿ, ವಿಶ್ವಬ್ಯಾಂಕಿನ ಇತ್ತೀಚಿನ ವರದಿಯಲ್ಲಿ, ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ತನ್ನ ಛಾಪು ಮೂಡಿಸಿದೆ. ಆದರೆ, ಇನ್ನೂ ಅದರ ಪ್ರಮಾಣದ ಮಾಪನ ಮಾಡಲು ಸಮರ್ಪಕವಾದ ವಿಧಾನ ಇಲ್ಲದಿರುವುದು ದೊಡ್ಡ ಹಿನ್ನಡೆ. ಹಿಂದೆ ಯೋಜನಾ ಆಯೋಗದ ಸದಸ್ಯರಾಗಿದ್ದ ಸುರೇಶ್ ತೆಂಡೂಲ್ಕರ್ ನೇತೃತ್ವದ ಸಮಿತಿಯು 2009ರಲ್ಲಿ ಬಡತನದ ರೇಖೆಯನ್ನು ನಿರ್ಧರಿಸಲು ಅನುಸರಿಸಿದ ವಿಧಾನವು, ಬಡವರು ಸ್ವತಂತ್ರ ಭಾರತದಲ್ಲಿ ಉಂಡುಟ್ಟು ಸುಖದಿಂದ ಇರುವುದು ಹಾಗಿರಲಿ, ಬದುಕುಳಿಯಲು ಬೇಕಾದ ದೈನಂದಿನ ಆದಾಯ ಗಳಿಸಿದರೆ ಅದೇ ಒಂದು ಸಾಧನೆ ಎನ್ನುವ ಭಾವನೆ ಹುಟ್ಟಿಸಿ ತೀವ್ರ ಟೀಕೆಗೆ ಗುರಿಯಾಗಿತ್ತು.

ಸುಪ್ರೀಂ ಕೋರ್ಟಿನಿಂದ ಖಡಕ್ ಆದೇಶ ಬಂದ ಮೇಲೆ 2012ರ ಜುಲೈನಲ್ಲಿ, ಆಗ ಅಸ್ತಿತ್ವದಲ್ಲಿದ್ದ ಯೋಜನಾ ಆಯೋಗಕ್ಕೆ ಬಡತನದ ರೇಖೆಯನ್ನು ನಿರ್ಧರಿಸುವುದು ಅನಿವಾರ್ಯವಾಯಿತು. ಬಡವರ ಹಿತಾಸಕ್ತಿಗೆ ಪೂರಕವಾಗಿರದ ತೆಂಡೂಲ್ಕರ್ ವಿಧಾನವನ್ನೇ ಯೋಜನಾ ಆಯೋಗ ಬಳಸಿಕೊಂಡುಬಿಡಬೇಕೇ. ‘ಗ್ರಾಮೀಣ ಪ್ರದೇಶದ ಜನ ದಿನಕ್ಕೆ ₹ 26, ನಗರವಾಸಿಗಳಾದರೆ ದಿನಕ್ಕೆ ₹ 36 ಗಳಿಸಿದರೆ ಸಾಕು, ಅವರು ಬಡವರಲ್ಲ ಎನ್ನುವ ವಿಚಿತ್ರ ಸೂತ್ರಕ್ಕೆ ಆಯೋಗ ಶರಣಾಗಿ, ದೇಶದಾದ್ಯಂತ ನಗೆಪಾಟಲಿಗೀಡಾಯಿತು. ಆಯೋಗದ ಸದಸ್ಯರೇ ಅದರ ವಿರುದ್ಧ ಸಿಡಿದೆದ್ದರು. ಆಗ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್ ಅವರೂ ಯೋಜನಾ ಆಯೋಗವು ದೂರದೃಷ್ಟಿಯನ್ನು ಕಳೆದುಕೊಂಡಿದೆ ಎಂದು ಹೇಳಿದ್ದರು.

ಬಡತನ ರೇಖೆಯನ್ನು ನಿರ್ಧರಿಸುವ ಜವಾಬ್ದಾರಿ ಯನ್ನು ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಸರ್ಕಾರವು 2015ರಲ್ಲಿ ಆಗಷ್ಟೇ ಅಸ್ತಿತ್ವಕ್ಕೆ ಬಂದಿದ್ದ ನೀತಿ ಆಯೋಗಕ್ಕೆ ವಹಿಸಿತು. ಇದನ್ನು ನಿರ್ವಹಿಸಲು ಆಯೋಗದ ಉಪಾಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕ ಕಾರ್ಯಪಡೆಯನ್ನೂ ರಚಿಸಲಾಯಿತು. ಉತ್ಪಾದಕತೆಯುಳ್ಳ ಉದ್ಯೋಗಾವಕಾಶಗಳ ಸೃಷ್ಟಿಯು ಬಡತನ ನಿವಾರಣೆಗೆ ಅವಶ್ಯ ಎನ್ನುವ ಮಹತ್ವದ ವಿಚಾರವನ್ನೊಳಗೊಂಡ ಚಿಂತನಾ ಪತ್ರವನ್ನು (ಡಿಸ್ಕಷನ್ ಪೇಪರ್) ಕಾರ್ಯಪಡೆಯು ರಾಜ್ಯಗಳಿಗೆ ಕಳುಹಿಸಿ ಹೆಚ್ಚೂ ಕಡಿಮೆ ನಾಲ್ಕು ವರ್ಷಗಳು ಕಳೆದುಹೋಗಿವೆ!

ಬಡತನ ರೇಖೆಗೆ ಸಂಬಂಧಿಸಿದಂತೆ ಹೊಸ ಸೂತ್ರ ರಚಿಸಲು ನೀತಿ ಆಯೋಗಕ್ಕೆ ಇನ್ನೂ ಸಾಧ್ಯವಾಗಿಲ್ಲ. ರಾಜಕೀಯ ಕಾರಣಕ್ಕೆ ರಾಜ್ಯಗಳು ಒಮ್ಮತಕ್ಕೆ ಬಾರದಿರು ವುದರಿಂದ ಹೀಗಾಗುತ್ತಿದೆ ಎಂಬುದು ಆಯೋಗದ ಮೂಲವೊಂದರಿಂದ 2017ರಲ್ಲೇ ತಿಳಿದುಬಂದ ಸಂಗತಿ. ಈಗಲೂ ಅಗತ್ಯ ಬಿದ್ದಾಗ ತೆಂಡೂಲ್ಕರ್ ವಿಧಾನವೇ ಸರ್ಕಾರಿ ವಲಯದಲ್ಲಿ ಬಳಕೆಯಾಗಿ ನೇಪಥ್ಯ ಸೇರುತ್ತಿದೆ! ಹಿಂದೆ ಯೋಜನಾ ಆಯೋಗದ ಮೇಲೆ ತನ್ನ ಪ್ರತಾಪ ತೋರಿಸಿದ ಬಡತನವು ಈಗ ನೀತಿ ಆಯೋಗಕ್ಕೆ ಸೋಲಿನ ರುಚಿ ಉಣಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT