ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕನ್ನಡ ಕಲಿಸುವುದು ಸುಲಭ, ಆದರೆ...

ಕನ್ನಡ ಕಲಿಸುವುದು ಎಂದರೆ, ಭಾಷೆಯನ್ನು ಕಲಿಸುವುದೋ ಓದು ಬರಹವನ್ನು ಕಲಿಸುವುದೋ ಎಂಬುದನ್ನು ಮೊದಲು ತೀರ್ಮಾನಿಸಿಕೊಳ್ಳಬೇಕು.
Last Updated 28 ಫೆಬ್ರುವರಿ 2022, 22:30 IST
ಅಕ್ಷರ ಗಾತ್ರ

ಕನ್ನಡ ಕಲಿಸುವುದರ ಕುರಿತು ನಮ್ಮಲ್ಲಿ ಹೆಚ್ಚಿನವರ ಮನಃಸ್ಥಿತಿ ಪೂರ್ವಗ್ರಹಪೀಡಿತವಾಗಿದೆ. ಈ ಕುರಿತು ಇದೇ ಅಂಕಣದಲ್ಲಿ ಪ್ರಕಟವಾದ ಎರಡು ಬರಹಗಳನ್ನು (ಸಂಗತ, ಫೆ. 22, 25) ನೋಡಿ ಇದನ್ನು ಬರೆಯಬೇಕು ಎನ್ನಿಸಿತು. ಕನ್ನಡ ಕಲಿಸುವುದು ಎಂದರೆ, ಭಾಷೆಯನ್ನು ಕಲಿಸುವುದೋ ಓದು ಬರಹವನ್ನು ಕಲಿಸುವುದೋ ಎಂಬುದನ್ನು ಮೊದಲು ತೀರ್ಮಾನಿಸಿಕೊಳ್ಳಬೇಕು. ಈ ಪ್ರಜ್ಞೆ ಬಹಳ ಮೂಲಭೂತ.

ಐದು ವರ್ಷದ ಒಳಗೆ ಒಂದು ಸಾಧಾರಣ ಮಗು ತನ್ನ ಮನೆಯ ಭಾಷೆಯ ಸುಮಾರು ಶೇ 90ರಷ್ಟನ್ನು ಕಲಿತಿರುತ್ತದೆ ಎಂದು ಭಾಷಾ ವಿಜ್ಞಾನಿಗಳು ಹೇಳುತ್ತಾರೆ. ಅದಕ್ಕೇ ಅದನ್ನು ಭಾಷಿಕವಾಗಿ ‘ಹೆಚ್ಚುಕಡಿಮೆ ವಯಸ್ಕ’ ಎಂದೂ ಭಾವಿಸಲಾಗುತ್ತದೆ. ಇನ್ನು ನಮ್ಮ ನಾಡಿನಲ್ಲಿ ಕನ್ನಡೇತರ ಮನೆಮಾತಾಗಿರುವ ಹೆಚ್ಚಿನ ಮಕ್ಕಳೂ ಕನ್ನಡವನ್ನು ಬಹಳಷ್ಟು ಚೆನ್ನಾಗಿ ಕಲಿತಿರುತ್ತಾರೆ. ಈಗಾಗಲೇ ಆಲಿಸುವ ಮತ್ತು ಮಾತನಾಡುವ ಕೌಶಲಗಳನ್ನು ಕಲಿತಿರುವವರಿಗೆ ಕನ್ನಡ ಓದು ಬರಹವನ್ನು ಕಲಿಸುವುದು ಹೆಚ್ಚು ಸುಲಭ. ಆದರೆ, ಮಾತಾಡುವ ಕನ್ನಡದ ಕೌಶಲವನ್ನು ಇದಕ್ಕಾಗಿ ಪರಿಣಾಮಕಾರಿಯಾಗಿ ದುಡಿಸಿಕೊಳ್ಳಬೇಕು ಎಂಬ ಮಾತು ಬಹಳ ಮಹತ್ವದ್ದು.

ಇತರ ಭಾರತೀಯ ಭಾಷೆಗಳ ಲಿಪಿಯ ಹಾಗೆ ಕನ್ನಡ ಲಿಪಿಯು ಬಹಳ ತರ್ಕಬದ್ಧವಾದ, ಧ್ವನಿಯಾಧಾರಿತ ಲಿಪಿ. ಆದರೆ, ಆಲಿಸುವುದು ಮತ್ತು ಮಾತನಾಡುವುದನ್ನು ಕಲಿಯುವುದಕ್ಕೆ ಸಿಗುವ ಸಹಜ ವಾತಾವರಣವಾಗಲೀ ಎರಡು- ಮೂರು ವರ್ಷ ಸಮಯವಾಗಲೀ ಓದು ಬರಹ ಕಲಿಸುವಾಗ ಸಿಗುವುದಿಲ್ಲ ಎಂಬುದು ಒಂದು ವಾಸ್ತವ. ವಾಸ್ತವ ಅಷ್ಟೆ, ಸಮಸ್ಯೆಯಲ್ಲ.

ಮಾತಾಡುವುದನ್ನು ಕಲಿಯುವ ಮುಂದೆ ಮಗು ಒಂದು- ಒಂದೂವರೆ ವರ್ಷ ಬರೀ ಆಲಿಸಿ ಅರ್ಥೈಸುವುದನ್ನು ಕಲಿಯಲು ಕಳೆದಿರುತ್ತದೆ. ಅದರ ಹೂರಣದಿಂದಲೇ ಕರಗತಗೊಳಿಸಿಕೊಂಡು ಅದು ನಿಧಾನವಾಗಿ ಮಾತನಾಡತೊಡಗುತ್ತದೆ. ಇದು ನೈಜ ವಿಧಾನ.

ಅದೇ ರೀತಿ ಅಕ್ಷರಾಭ್ಯಾಸ ಮಾಡುವಾಗ ಓದುವುದನ್ನು ಮೊದಲು ಕಲಿಸಿ ಎಲ್ಲ ಅಕ್ಷರ, ಕಾಗುಣಿತ, ಒತ್ತಕ್ಷರಗಳನ್ನು ಓದುವ ಕೌಶಲವನ್ನು ಸುಗಮಗೊಳಿಸಿಕೊಂಡ ನಂತರ ಬರೆಯುವುದನ್ನು ಕಲಿಸಿದರೆ ಅದು ಹೆಚ್ಚು ತರ್ಕಬದ್ಧ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇದಕ್ಕೆ ತದ್ವಿರುದ್ಧ ನಡೆಯುತ್ತದೆ. ಬರಹದಿಂದಲೇ ಆರಂಭಿಸಲಾಗುತ್ತದೆ.

ಓದು ಬರಹ ಕಲಿಸುವಾಗಲೂ ಅ ಆ ಇ ಈ ರೀತಿಯ ಅಕ್ಷರಮಾಲಾ ಪದ್ಧತಿ ಅತ್ಯಂತ ಕೃತ್ರಿಮ. ಅದರ ಬದಲಿಗೆ, ಕೆಲವು ದಶಕಗಳ ಹಿಂದೆ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಕನ್ನಡ ಓದು ಬರಹ ಕಲಿಸಲು ರೂಪಸಾಮ್ಯ ಪದ್ಧತಿಯನ್ನು ಅಳವಡಿಸಿ
ಕೊಳ್ಳಲಾಯಿತು. ಓದುವುದು ಎಂದರೆ ಮೂಲಭೂತವಾಗಿ ಅಕ್ಷರದ ಆಕಾರವನ್ನು ಗುರುತಿಸುವುದು ಮತ್ತು ಅದರಲ್ಲಿ ಅಡಗಿರುವ ಧ್ವನಿಯನ್ನು ಹೊಮ್ಮಿಸುವುದು. 10 ಗುಂಪುಗಳಲ್ಲಿ ಅಕ್ಷರಗಳನ್ನು ವಿಂಗಡಿಸಿಕೊಂಡಿರುವ ರೂಪಸಾಮ್ಯ ಪದ್ಧತಿಯ ಒಂದು ವೈಶಿಷ್ಟ್ಯವೆಂದರೆ, ಒಂದೆರಡು ಗುಂಪಿನ ಅಕ್ಷರಗಳನ್ನು ಕಲಿಯುತ್ತಿರುವ ಹಾಗೆಯೆ ಅದೇ ಮೂಲಾಕ್ಷರಗಳನ್ನು ಬಳಸಿ ಅರ್ಥಪೂರ್ಣ ಪದಗಳನ್ನೂ ಓದಬಹುದು ಎಂಬುದು. ಒಂದೆರಡು ಗುಂಪುಗಳ ಕಲಿಕೆ ಮುಗಿಯುತ್ತಿದ್ದಂತೆ ಈಗಾಗಲೇ ಕಲಿತಿರುವ ಸ್ವರಗಳ ಕಾಗುಣಿತವನ್ನು ಪರಿಚಯಿಸಲಾಗುತ್ತದೆ. ಆಗ ಓದಲು ಸಾಧ್ಯವಾಗುವ ಪದಗಳ ಸಂಖ್ಯೆ ಬಹುವಾಗಿ ವೃದ್ಧಿಗೊಳ್ಳುತ್ತದೆ.

ಕಾಗುಣಿತವನ್ನೂ ‘ಅ’ದಿಂದ ‘ಅಃ’ದವರೆಗೆ ಎಲ್ಲ ವ್ಯಂಜನಗಳ ಜೊತೆ ಕಲಿಸಲಾಗುತ್ತದೆ. ಬದಲಿಗೆ ಇಲ್ಲಿರುವ ತರ್ಕವನ್ನು ಬಳಸಿಕೊಂಡು, ಮಕ್ಕಳ ಸೃಜನಶೀಲತೆಗೆ ಅವಕಾಶ ಕೊಡಬಹುದು. ಹಾಗೆಯೇ ವ್ಯಂಜನಗಳ ಒತ್ತಕ್ಷರಗಳನ್ನು ಕಲಿಸುವಾಗಲೂ ಅವುಗಳ ಹಿಂದೆ ಅಡಗಿರುವ ತರ್ಕವನ್ನು ಬಳಸಿಕೊಂಡು ಅಭ್ಯಾಸ ಮಾಡಿಸಬಹುದು.

ಯಾವುದೇ ರೀತಿಯಲ್ಲಿ ಓದು ಬರಹವನ್ನು ಕಲಿಸುವ ಮುಂಚೆ, ಕಲಿಯುವವರನ್ನು ಬದುಕಿನ ನೈಜ ಸನ್ನಿವೇಶಗಳಲ್ಲಿ ಹಲವಾರು ಕಡೆ ಈಗಾಗಲೇ ಬಳಕೆಯಲ್ಲಿರುವ ಬರಹಗಳಿಗೆ ಒಡ್ಡುವುದೂ ವ್ಯವಸ್ಥಿತ ಕಲಿಕೆಗೆ ಬುನಾದಿಯನ್ನು ಒದಗಿಸುತ್ತದೆ ಎನ್ನುವ ಮಾತನ್ನೂ ನೆನಪಿನಲ್ಲಿಡಬೇಕು. ವಿಧಾನ ಯಾವುದೇ ಆಗಿರಲಿ, ಓದುವುದನ್ನು ಬಹಳಷ್ಟು ಕಲಿತ ನಂತರವೇ ಬರಹವನ್ನು ಆರಂಭಿಸಬೇಕು.

ನಿಜ, ಮೇಲಿನ ಇಬ್ಬರು ಲೇಖಕರು ಹೇಳಿರುವ ಹಾಗೆ, ಹತ್ತನೇ ತರಗತಿಯವರೆಗಿನ ಕನ್ನಡ ಪಠ್ಯಪುಸ್ತಕಗಳಲ್ಲಿ ಎಲ್ಲರಿಗೂ ಸಮಾನವಾಗಿ ಜೀವನೋಪಯೋಗಿ ಆಗಬಲ್ಲಂಥ ಕನ್ನಡ ಭಾಷಾ ಕೌಶಲಗಳನ್ನು ಹೇಳಿಕೊಡದೆ, ವಿವಿಧ ಹಂತಗಳ ಕನ್ನಡ ಸಾಹಿತ್ಯ, ವ್ಯಾಕರಣ, ಅಲಂಕಾರ, ಛಂದಸ್ಸು ಇತ್ಯಾದಿ ವಿಶಿಷ್ಟ ವಿಷಯಗಳನ್ನು ಬೋಧಿಸಲಾಗುತ್ತದೆ. ಹೀಗಾಗಿ, ಸುಮಾರು ಎರಡು ಸಾವಿರ ಗಂಟೆಗಳಷ್ಟು ಕಾಲ ಕನ್ನಡ ಬೋಧನೆಯಲ್ಲಿ ಕಳೆದರೂ ಹತ್ತನೇ ತರಗತಿ ಮುಗಿಸಿ ಹೊರಬರುವ ಯುವಜನರಿಗೆ ಕನ್ನಡ ಕಾಗುಣಿತ, ಒತ್ತಕ್ಷರವೂ ಸರಿಯಾಗಿ ಬರುವುದಿಲ್ಲ. ಲಕ್ಷಣವಾಗಿ ಮಾತನಾಡಲೂ ಬರುವುದಿಲ್ಲ. ಅದನ್ನೆಲ್ಲ ಬೆಳೆಸಿಕೊಳ್ಳುವ ಆಸಕ್ತಿಯೂ ಇರುವುದಿಲ್ಲ.

ಶಿಕ್ಷಣ ವ್ಯವಸ್ಥೆ ಇದನ್ನು ತಾನು ನಾಚಿಕೆ ಪಟ್ಟುಕೊಳ್ಳುವ ವಿಚಾರವಾಗಿ ಪರಿಭಾವಿಸಿ ತಕ್ಕ ಪರಿಹಾರವನ್ನು ರೂಪಿಸಿಕೊಳ್ಳಬೇಕು.

ಲೇಖಕ: ಭಾಷಾ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT