ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಸುಂಕ ಕಡಿತಕ್ಕೆ ಹೆಚ್ಚಿದ ಒತ್ತಾಯ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ
Last Updated 21 ಮೇ 2018, 19:10 IST
ಅಕ್ಷರ ಗಾತ್ರ

ನವದೆಹಲಿ: ತೈಲ ಬೆಲೆ ಏರಿಕೆಯಿಂದ ದೇಶದ ಆರ್ಥಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹೀಗಾಗಿ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ತಕ್ಷಣವೇ ಕಡಿತ ಮಾಡುವಂತೆ ಉದ್ಯಮವಲಯ ಸರ್ಕಾರವನ್ನು ಒತ್ತಾಯಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಂತೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಮತ್ತು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಬೇಡಿಕೆ ಸಲ್ಲಿಸಿವೆ. ಹೀಗೆ ಮಾಡುವುದರಿಂದ ಇಂಧನಗಳ ದರ ಏರಿಕೆ ಸಮಸ್ಯೆಗೆ ದೀರ್ಘಾವಧಿಯ ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ಟಿವೆ.

‘ಕಚ್ಚಾ ತೈಲ ದರ ಏರುಮುಖವಾಗಿದೆ. ಇದರಿಂದ ಹಣದುಬ್ಬರ ಏರಿಕೆ ಕಾಣಲಿದ್ದು, ವ್ಯಾಪಾರ ಕೊರತೆ ಅಂತರ ಹೆಚ್ಚಾಗಲಿದೆ. ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ವಿತ್ತೀಯ ಶಿಸ್ತು ಕಾಯ್ದುಕೊಳ್ಳುವುದು ಕಷ್ಟವಾಗಲಿದೆ’ ಎಂದು ‘ಫಿಕ್ಕಿ’ ಅಧ್ಯಕ್ಷ ರಶೇಷ್‌ ಶಾ ಹೇಳಿದ್ದಾರೆ.

‘ರೂಪಾಯಿ ಮೌಲ್ಯ ಕುಸಿತವು ಆಮದು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಆ ಮೂಲಕ ಹಣಕಾಸು ನೀತಿ ದಿಕ್ಕು ತಪ್ಪಲಿದ್ದು, ಖಾಸಗಿ ಹೂಡಿಕೆಯೂ ಕಡಿಮೆಯಾಗಲಿದೆ. ದೇಶದ ಆರ್ಥಿಕತೆ ಚೇತರಿಕೆ ಹಾದಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಕಚ್ಚಾ ತೈಲ ದರ ಏರಿಕೆ ಪ್ರಗತಿಗೆ ಅಡ್ಡಿಯಾಗುವ ಸಾಧ್ಯತೆ ವ್ಯಕ್ತವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

**

ಏರುಗತಿಯಲ್ಲಿ ಕಚ್ಚಾ ತೈಲ ದರ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಬ್ರೆಂಟ್‌ ತೈಲವು ಸೋಮವಾರ 36 ಸೆಂಟ್‌ಗಳಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್‌ಗೆ 78.87 ಡಾಲರ್‌ಗಳಷ್ಟಾಗಿದೆ.

ಅಮೆರಿಕದ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ (ಡಬ್ಲ್ಯುಟಿಐ) ಕಚ್ಚಾ ತೈಲ 40 ಸೆಂಟ್‌ಗಳಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್‌ಗೆ 71.68 ಡಾಲರ್‌ಗಳಿಗೆ ತಲುಪಿದೆ.

**

ಶೀಘ್ರವೇ ಕ್ರಮ ಪ್ರಧಾನ್‌

ನವದೆಹಲಿ: ‘ದರ ಏರಿಕೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅತಿ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಭಾರತದ ಮೂರನೇ ಸ್ಥಾನದಲ್ಲಿದೆ. ಪ್ರತಿ ವರ್ಷವೂ ಬಳಕೆಯ ಶೇ 80 ರಷ್ಟು ಕಚ್ಚಾ ತೈಲವನ್ನು ಆಮದುಮಾಡಿಕೊಳ್ಳಲಾಗುತ್ತಿದೆ.

**

ಎಕ್ಸೈಸ್ ಸುಂಕ ಕಡಿತ ತಾತ್ಕಾಲಿಕ ಪರಿಹಾರವಷ್ಟೆ. ಜಿಎಸ್‌ಟಿ ವ್ಯಾಪ್ತಿಗೆ ತರುವುದರಿಂದ ಮಾತ್ರ ದರ ಏರಿಕೆ ನಿಯಂತ್ರಣ ಸಾಧ್ಯ.

–ಡಿ.ಎಸ್‌. ರಾವತ್‌, ಅಸೋಚಾಂ ಪ್ರಧಾನ ಕಾರ್ಯದರ್ಶಿ

**

ಪರಿಸ್ಥಿತಿ ನಿಯಂತ್ರಣಕ್ಕೆ ತಕ್ಷಣದ ಕ್ರಮ ಅಗತ್ಯ. ಇಂಧನಗಳ ಮೇಲಿನ ಎಕ್ಸೈಸ್ ಸುಂಕ ತಗ್ಗಿಸುವುದು ಸರ್ಕಾರದ ಮುಂದಿರುವ ಏಕೈಕ ಮಾರ್ಗ.

–ರಶೇಷ್‌ ಶಾ, ಫಿಕ್ಕಿ ಅಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT