ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಕ್ಕೆ ಒದಗುತ್ತಿರುವ ವಿಸ್ಮೃತಿ

ಶೈಕ್ಷಣಿಕ ವೆಚ್ಚ ಕಡಿತಕ್ಕೆ ಯಾರೇ ಒತ್ತಡ ತಂದರೂ ಅದಕ್ಕೆ ಬೆಂಬಲವಾಗಿ ನಿಲ್ಲುವುದರಲ್ಲಿ ಸಮಾಜದ ಹಿತ ಅಡಗಿದೆ ಎಂದು ಭಾವಿಸಲು ಸಕಾರಣಗಳಿವೆ
Last Updated 19 ಜನವರಿ 2020, 19:45 IST
ಅಕ್ಷರ ಗಾತ್ರ

ಐದೂವರೆ ವರ್ಷಗಳ ಹಿಂದೆ ಕಾಲೇಜು ಶುಲ್ಕ ಹಾಗೂ ಇತರ ಶೈಕ್ಷಣಿಕ ವೆಚ್ಚ ಭರಿಸಲು ತನ್ನಿಂದ ಸಾಧ್ಯವಿಲ್ಲ ಎಂಬ ಕಾರಣದಿಂದ, ನಾನು ಕಾರ್ಯನಿರ್ವಹಿಸುತ್ತಿದ್ದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಮೂರನೇ ಸೆಮಿಸ್ಟರ್‌ಗೆ ಪದವಿ ಓದು ತೊರೆಯಲು ನಿರ್ಧರಿಸಿದ್ದ. ವಿಷಯ ತಿಳಿದ ಕೆಲ ಅಧ್ಯಾಪಕರು ಅವನ ಶೈಕ್ಷಣಿಕ ವೆಚ್ಚವನ್ನು ಭರಿಸಲು ನೆರವಾಗುವುದಾಗಿ ತಿಳಿಸಿದ ನಂತರ ಓದು ಮುಂದುವರಿಸಿ, ಎರಡೂವರೆ ವರ್ಷಗಳ ಹಿಂದೆ ಪದವಿ ಪೂರೈಸಿದ. ಇದೀಗ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಅವನ ಪೂರ್ವಾಪರಗಳೆಲ್ಲ ನೆನಪಾಗಲು ಕಾರಣವಾಗಿದ್ದು, ಇತ್ತೀಚೆಗೆ ಅವನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು.

ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಕುಟುಂಬದ ಹಿನ್ನೆಲೆ ಹೊಂದಿರುವ ಅವನು, ಜೆಎನ್‍ಯು ವಿದ್ಯಾರ್ಥಿಗಳ ಕುರಿತು ಅಪಪ್ರಚಾರ ಮಾಡುವ ಸಲುವಾಗಿ ಹರಿಬಿಡಲಾಗುತ್ತಿರುವ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲು ಇನ್ನಿಲ್ಲದ ಉತ್ಸಾಹ ತೋರುತ್ತಿದ್ದಾನೆ. ಶುಲ್ಕ ಹೆಚ್ಚಳ ವಿರೋಧಿಸಿ ಜೆಎನ್‍ಯುನಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದನ್ನು ಹೀಗಳೆಯುವ ಮತ್ತು ಅಲ್ಲಿನ ವಿದ್ಯಾರ್ಥಿಗಳು ಶ್ರೀಮಂತ ಹಿನ್ನೆಲೆ ಹೊಂದಿರುವವರು, ಐಷಾರಾಮಿ ಜೀವನಶೈಲಿ ರೂಢಿಸಿಕೊಂಡಿದ್ದಾರೆ ಎಂಬುದನ್ನು ಸಾರಲು ಯತ್ನಿಸುವ ತಿರುಚಲ್ಪಟ್ಟ ಫೋಟೊ ಹಾಗೂ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾನೆ. ಇದೇ ಕೆಲಸದಲ್ಲಿ ಹಲವರು ನಿರತರಾಗಿದ್ದಾರಾದರೂ ಈ ಹುಡುಗನಲ್ಲಿ ಬೇರೂರಲಾರಂಭಿಸಿರುವ ಜೆಎನ್‍ಯು ವಿದ್ಯಾರ್ಥಿಗಳ ಕುರಿತಾದ ಅಸಹನೆ ಗಮನಸೆಳೆಯಲು ಕಾರಣವಾದದ್ದು, ಆತನ ಹಿನ್ನೆಲೆ ಮತ್ತು ಪದವಿ ಓದುವ ವೇಳೆ ಸ್ವತಃ ಅವನೇ ಅನುಭವಿಸಿದ್ದ ಆರ್ಥಿಕ ಸಂಕಷ್ಟ.

ವಾರ್ಷಿಕ ಶುಲ್ಕ ₹ 18 ಸಾವಿರ ಹಾಗೂ ಇತರ ಖರ್ಚುವೆಚ್ಚ ನಿಭಾಯಿಸುವುದು ತನ್ನೊಂದಿಗೆ ಓದುತ್ತಿದ್ದ ಹಲವರಿಗೆ ಅಂತಹ ಸಮಸ್ಯೆಯಾಗದೆ ತನ್ನ ಪಾಲಿಗೆ ಮಾತ್ರ ಹೊರೆಯಾಗಿ ಪರಿಣಮಿಸಿದ್ದು ಏಕೆ ಎಂಬ ಕುರಿತು ಆತ್ಮಾವಲೋಕನ ಮಾಡಿಕೊಂಡಿದ್ದರೆ, ತಮ್ಮ ರಾಜಕೀಯ ಹಿತ ಕಾಯ್ದುಕೊಳ್ಳುವ ಕಾರ್ಯತಂತ್ರದ ಭಾಗವಾಗಿ ಆಳುವವರು ಬಿತ್ತುತ್ತಿರುವ ಹಸಿಸುಳ್ಳುಗಳನ್ನೇ ಸತ್ಯವೆಂದು ಎತ್ತಿ ಹಿಡಿಯುವ ಕೆಲಸಕ್ಕೆ ಈತ ಕೈ ಹಾಕುತ್ತಿರಲಿಲ್ಲವೇನೊ.

ಶಿಕ್ಷಣವನ್ನು ಸರಕಾಗಿ ನೋಡದೆ ಎಲ್ಲರಿಗೂ ಕೈಗೆಟುಕುವ ಹಾಗೆ ನೋಡಿಕೊಳ್ಳುವ ಹೊಣೆಗಾರಿಕೆ ಯಿಂದ ಸರ್ಕಾರಗಳು ನುಣುಚಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ಶೈಕ್ಷಣಿಕ ವೆಚ್ಚ ಕಡಿತಗೊಳಿಸುವಂತೆ ಯಾರೇ ಒತ್ತಡ ತಂದರೂ ಅದಕ್ಕೆ ಬೆಂಬಲವಾಗಿ ನಿಲ್ಲುವುದರಲ್ಲಿ ಸಮಾಜದ ಹಿತ ಅಡಗಿದೆ ಎಂದು ಭಾವಿಸಲು ಸಕಾರಣಗಳಿವೆ. ಶಿಕ್ಷಣ ಕ್ಷೇತ್ರದ ಖಾಸಗೀಕರಣ ಮಿತಿಮೀರಿ, ಖಾಸಗಿ ವಿಶ್ವವಿದ್ಯಾಲಯಗಳು ನಾಯಿಕೊಡೆಗಳಂತೆ ಎದ್ದು ನಿಲ್ಲುತ್ತಿರುವ ಸಂದರ್ಭದಲ್ಲೂ, ಶುಲ್ಕ ಹೆಚ್ಚಳ ವಿರೋಧಿಸಿ ಬೀದಿಗಿಳಿಯುವ ವಿದ್ಯಾರ್ಥಿ ಸಮೂಹವನ್ನೇ ತುಚ್ಛವಾಗಿ ಕಾಣುವುದು ದುರಂತವೇ ಸರಿ. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಹೂಡಿಕೆ ಕಡಿಮೆಯಾಗಿ ಖಾಸಗಿ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆಲ್ಲ, ಶೈಕ್ಷಣಿಕ ವೆಚ್ಚ ಭರಿಸಲಾಗದೆ ಇಚ್ಛೆಗೆ ತಕ್ಕಷ್ಟು ಓದುವ ಅವಕಾಶದಿಂದ ವಂಚಿತರಾಗುವ ಬಡ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಲಿದೆ.

ತನ್ನದೇ ಶಿಕ್ಷಣ ಸಂಸ್ಥೆಗಳ ಬಗ್ಗೆ ಸರ್ಕಾರಕ್ಕೆ ಅದ್ಯಾವ ಪರಿ ನಿರ್ಲಕ್ಷ್ಯ ಧೋರಣೆ ಇದೆ ಎಂಬುದನ್ನು ಅರಿಯಲು, ಮೂಲ ಸೌಕರ್ಯಗಳಿಲ್ಲದೆ ಬಳಲುತ್ತಿರುವ ರಾಜ್ಯದ ಕೆಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಗಮನಿಸಿದರೂ ಸಾಕು. ಪ್ರಾರಂಭವಾಗಿ 13 ವರ್ಷಗಳೇ ಕಳೆದರೂ ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಗಳಿಗೆ ಸಮೀಪದ ಇತರ ಎಂಜಿನಿಯರಿಂಗ್ ಕಾಲೇಜುಗಳನ್ನು ಆಶ್ರಯಿಸಬೇಕಾಗಿದೆ. ರಾಜ್ಯಕ್ಕೆ ಐಐಟಿ ಮಂಜೂರಾದ ವೇಳೆಯಲ್ಲಿ ತಮ್ಮ ಜಿಲ್ಲೆಯಲ್ಲೇ ಅದು ಸ್ಥಾಪನೆಯಾಗಬೇಕೆಂದು ಬೀದಿಗಿಳಿದವರು ಕೂಡ ಸರ್ಕಾರಿ ಕಾಲೇಜುಗಳ ಪರಿಸ್ಥಿತಿ ಸುಧಾರಣೆಗೆ ಒತ್ತಡ ಹೇರಲು ಅಂತಹ ಉತ್ಸಾಹವನ್ನೇನೂ ತೋರುತ್ತಿಲ್ಲ.

ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯುವ ಉತ್ಸಾಹ, ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಬಹುಪಾಲು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಇಲ್ಲದಿರುವುದು ಢಾಳಾಗಿಯೇ ಗೋಚರಿಸುತ್ತಿದೆ. ಓದಿನಲ್ಲಿ ಆಸಕ್ತಿ ಇರದ ವಿದ್ಯಾರ್ಥಿಗೂ ನಿಗದಿತ ಅವಧಿಯಲ್ಲಿ ಪದವಿ ದಯಪಾಲಿಸುವ ಭರವಸೆ ನೀಡಿ, ಅಂತಹ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹೆಚ್ಚುವರಿ ಹಣ ಪಡೆಯುವ ಖಾಸಗಿ ತಾಂತ್ರಿಕ ವಿಶ್ವವಿದ್ಯಾಲಯಗಳು ಬೆಂಗಳೂರಿನಲ್ಲೇ ಇವೆ. ಹೀಗೆ, ಓದದಿದ್ದರೂ ನಾಲ್ಕು ವರ್ಷಗಳಲ್ಲಿ ಎಂಜಿನಿಯರಿಂಗ್ ಪದವಿ ನೀಡಲೇ ಬೇಕಿರುವ ವಿದ್ಯಾರ್ಥಿಗಳನ್ನು ‘ಗ್ಲೋಬಲ್ ಸ್ಟೂಡೆಂಟ್ಸ್’ ಎಂದು ಗುರುತಿಸುವ ಪರಿಪಾಟವೂ ಚಾಲ್ತಿಯಲ್ಲಿದೆ. ಇವರು ಫೇಲ್ ಆಗದಿರುವಂತೆ (ಮಾಡದಿರುವಂತೆ) ವಿಶೇಷ ನಿಗಾ ವಹಿಸಲಾಗುತ್ತಿದೆ.

ಶಿಕ್ಷಣ ಕ್ಷೇತ್ರದ ಖಾಸಗೀಕರಣ ಸೃಷ್ಟಿಸುತ್ತಿರುವ ಅಪಸವ್ಯದ ಕುರಿತು ಕಳವಳಗೊಳ್ಳಬೇಕಿದ್ದವರೇ, ಗುಣಮಟ್ಟ ಕಾಯ್ದುಕೊಂಡಿರುವ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ತೇಜೋವಧೆಗೆ ಇಳಿದಿರುವುದು ದುರಂತವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT