ಸೋಮವಾರ, ಜೂನ್ 21, 2021
30 °C
ಬೆಂಗಳೂರಿನಲ್ಲಿ ಇತ್ತೀಚೆಗೆ ಶಾಂತಿ– ಸೌಹಾರ್ದದ ಪುನರ್‌ಸ್ಥಾಪನೆಗಾಗಿ ಎಲ್ಲ ಪಕ್ಷಗಳ ನಾಯಕರೂ ಒಂದಾಗಿ ಪ್ರಯತ್ನಿಸಬೇಕಿತ್ತು

ಸಂಗತ | ಗಲಭೆಯ ಬೆಂಕಿಗೆ ರಾಜಕೀಯದ ತುಪ್ಪ

ಪ್ರೊ.ಬಿ.ಕೆ. ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Prajavani

‘ನಾಯಕರು ನಿಷ್ಕಪಟವಾಗಿದ್ದರೆ ಗಲಭೆ ನಿಲ್ಲುತ್ತದೆ...’ ಗಾಂಧೀಜಿಯು 1947ರ ಸೆ. 2ರಂದು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರಿಗೆ ಕೋಲ್ಕತ್ತದಿಂದ ಬರೆದ ಪತ್ರದ ಸಾಲು ಇದು.

ಬೆಂಗಳೂರಿನ ಕಾವಲ್‌ ಭೈರಸಂದ್ರದಲ್ಲಿ ಮೊನ್ನೆ ನಡೆದ ಗಲಭೆಯಿಂದಾಗಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯೂ ಸೇರಿ ಭಾರಿ ಆಸ್ತಿಪಾಸ್ತಿ ಹಾನಿಗೊಳಗಾಗಿದೆ. ಈ ವಿದ್ಯಮಾನಕ್ಕೆ ಹಲವು ಸಂಕೀರ್ಣ ಆಯಾಮಗಳಿವೆ. ಇಂತಹ ವಿದ್ಯಮಾನಗಳು ನಡೆದಾಗ ತಕ್ಷಣ ನಡೆಯಬೇಕಿದ್ದುದು ಶಾಂತಿ– ಸೌಹಾರ್ದದ ಪುನರ್‌ಸ್ಥಾಪನೆ. ಅದಕ್ಕಾಗಿ ಎಲ್ಲ ಪಕ್ಷಗಳ ನಾಯಕರು ಸೀಮಿತವಾಗಿಯಾದರೂ ಒಂದಾಗಿ ಪ್ರಯತ್ನಿಸಬೇಕಿತ್ತು.

ಇದಕ್ಕಿಂತ ಭೀಕರ ಗಲಭೆಗಳು ನಡೆದಾಗಲೆಲ್ಲ ಹಿಂಸಾಚಾರ ತಡೆಯಲು ಗಾಂಧೀಜಿ ಉಪವಾಸ ಆಚರಿಸುತ್ತಿದ್ದರು. ‘ಗಲಭೆ ನಿಲ್ಲಿಸದಿದ್ದರೆ ಜೀವ ಬಿಡುತ್ತೇನೆ’ ಎಂದು ಹಟ ಹಿಡಿಯುತ್ತಿದ್ದ ಅವರಿಗೆ, ಪಶ್ಚಿಮ ಬಂಗಾಳದ ಅಂದಿನ ರಾಜ್ಯಪಾಲ ರಾಜಾಜಿ ಅವರು ‘ಗೂಂಡಾಗಳ ವಿರುದ್ಧ ಉಪವಾಸವೇ?’ ಎಂದು ಕೇಳಿದ್ದರು. ಈ ಪ್ರಶ್ನೆಗೆ ಗಾಂಧೀಜಿ ಕೊಟ್ಟ ಉತ್ತರ: ‘ಗೂಂಡಾಗಳನ್ನು ನಾವೇ ಸೃಷ್ಟಿಸುವುದು. ನಮ್ಮ ಸಹಾನುಭೂತಿ, ಮೌನ ಬೆಂಬಲವಿರದೆ ಅವರು ಈ ಹಂತಕ್ಕೆ ಬರಲು ಸಾಧ್ಯವೇ?’ ಈ ಮಾತು ಈಗಲೂ ಪ್ರಸ್ತುತ.

ನಮ್ಮ ರಾಜಕಾರಣಿಗಳ ಆಲೋಚನೆಯಾದರೂ ಏನು? ಹಿಂಸಾಚಾರ ಹಾಗೆಯೇ ಮುಂದುವರಿದರೆ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂಬ ಭಾವನೆ ಏನಾದರೂ ಇರಬಹುದೇ? ದುರಂತ ನಡೆದಾಗ ಸಿದ್ಧಾಂತವಲ್ಲ, ಮಾನವೀಯತೆ ಮುಖ್ಯ. ಅಟಲ್‌ ಬಿಹಾರಿ ವಾಜಪೇಯಿ ಅವರೂ ಈ ವಿಚಾರದಲ್ಲಿ ಮಾದರಿಯಾಗಿ ನಡೆದುಕೊಂಡ ಉದಾಹರಣೆಗಳಿವೆ.

ಕಾವಲ್‌ ಭೈರಸಂದ್ರದಲ್ಲಿ ಗಲಭೆ ಜರುಗಿದ ಮರುದಿನವೇ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರೆಲ್ಲ ಒಗ್ಗೂಡಿ ಶಾಂತಿಸಭೆ ನಡೆಸಿ, ಸೌಹಾರ್ದ ಮರುಸ್ಥಾಪಿಸುವ ಪ್ರಯತ್ನ ಮಾಡಬೇಕಿತ್ತು. ಈ ರೀತಿಯ ಆದರ್ಶ ಅವರವರ ಸಿದ್ಧಾಂತದ ಜೊತೆಗೂ ವಾಸ್ತವಿಕ ನೆಲೆಯಲ್ಲಿ ಸಾಧ್ಯವಿತ್ತು. ಅಂತಹ ನಡೆಗೆ ಹಾಗೂ ರಾಜ್ಯದ ರಾಜಕಾರಣಕ್ಕೆ ಇಡೀ ದೇಶದಲ್ಲಿ ಗೌರವ ಸಿಗುತ್ತಿತ್ತು.

‘ಈ ಘಟನೆ ಅಕ್ಷಮ್ಯ. ಇಂತಹ ಪ್ರಚೋದನೆ, ಪುಂಡಾಟಗಳನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ’ ಎಂಬ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆ ಯಾವುದೇ ಧರ್ಮ, ಪಕ್ಷದ ಪರವಾಗಲೀ ವಿರುದ್ಧವಾಗಲೀ ಇರಲಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಸಹನೆಯ ನಡೆ ಅಗತ್ಯ ಎಂಬ ಭಾವನೆ ಮತ್ತು ಬದ್ಧತೆ ಇದ್ದಿದ್ದರೆ ಈ ವಿಚಾರವಾಗಿ ಮಾತನಾಡಿದ ಸಚಿವರೂ ಆತ್ಮಸಂಯಮದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಅದಿರಲಿ, ಈ ವಿಚಾರಕ್ಕೆ ಸಂಬಂಧವೇ ಇಲ್ಲದ ಮಂತ್ರಿಗಳೆಲ್ಲ ಹೇಳಿಕೆ ನೀಡುವ ಅವಶ್ಯಕತೆ ಇತ್ತೇ? ನಾಜೂಕಿನ ವಾತಾವರಣವಿದ್ದಾಗ ಎಲ್ಲರಿಗೂ ಸೂಕ್ಷ್ಮತೆ ಬೇಕಿತ್ತಲ್ಲವೇ? 

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ ಆರೋಪ ಹೊತ್ತ ನವೀನ್ ಅವರ ತಾಯಿ, ‘ಸ್ಥಳೀಯ ಮುಸ್ಲಿಂ ಯುವಕರು ರಕ್ಷಣೆಗೆ ನಿಲ್ಲದಿದ್ದರೆ ನಾನು ಇಂದು ಬದುಕಿರುತ್ತಿರಲಿಲ್ಲ’ ಎಂದು ಹೇಳಿದ್ದಾರೆ. ಕಿಡಿಗೇಡಿಗಳ ಗುಂಪೊಂದು ಹನುಮಾನ್‌ ದೇವಾಲಯಕ್ಕೆ ನುಗ್ಗಲು ಯತ್ನಿಸಿದಾಗ, ಆಗಲೂ ಸ್ಥಳೀಯ ಮುಸ್ಲಿಂ ಯುವಕರೇ ಮಾನವ ಸರಪಣಿ ನಿರ್ಮಿಸಿ, ‘ದೇವಸ್ಥಾನದ ಒಳಗೆ ಹೋಗಲು ಬಿಡುವುದಿಲ್ಲ. ಇದನ್ನು ನಾವು ರಕ್ಷಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದರು. ಇಂತಹ ನಡವಳಿಕೆ ಬಗ್ಗೆ ಏಕೆ ಯಾವ ರಾಜಕಾರಣಿಯೂ ಮಾತನಾಡುತ್ತಿಲ್ಲ?

ಭಾರತದಲ್ಲಿ ‘ಗಲಭೆ ರಾಜಕಾರಣ’ ಬಹಳ ವರ್ಷಗಳಿಂದ ನಡೆಯುತ್ತಿದೆ. ‘ರಾಜಕಾರಣದ ಅಪರಾಧೀಕರಣ’ ಹಾಗೂ ರಾಜಕಾರಣಿಗಳು ತಮ್ಮ ಕೆಲಸ ಮಾಡಿಸಿಕೊಳ್ಳಲು, ಸ್ಥಳೀಯ ವಿವಾದಗಳನ್ನು ಬಗೆಹರಿಸಲು ಹಣಬಲ ಹಾಗೂ ಗೂಂಡಾಗಳ ತೋಳ್ಬಲ ಬಳಸುತ್ತಾರೆ ಎಂಬ ವಿಷಯವು ದೇಶ– ವಿದೇಶಗಳ ತಜ್ಞರು ನಡೆಸಿದ ಅಧ್ಯಯನಗಳಿಂದ ಹೊರಹೊಮ್ಮಿದೆ.

ರಾಜಕಾರಣಿಗಳು, ಗೂಂಡಾಗಳು ಹಾಗೂ ಪೊಲೀಸ್‌ ವ್ಯವಸ್ಥೆ ನಡುವಿನ ಸಂಬಂಧ ಬಹಳ ಹಳೆಯದು. ಈ ಘಟನೆಯಲ್ಲೂ ವೃತ್ತಿಪರ ಗೂಂಡಾಗಳ ಪಾತ್ರವಿರುವ ಸಾಧ್ಯತೆಯೇ ಹೆಚ್ಚು. ಪೊಲೀಸ್‌ ಅದಕ್ಷತೆ ಎದ್ದು ಕಾಣಿಸುತ್ತದೆ. ಗುಪ್ತಚರ ಇಲಾಖೆಯು ಇಲ್ಲಿ ಬಹುತೇಕ ವಿಫಲವಾಗಿದೆ. ಫೇಸ್‌ಬುಕ್‌ನಲ್ಲಿ ನವೀನ್‌ ಆಕ್ಷೇಪಾರ್ಹ ಪೋಸ್ಟ್‌ ಹಾಕಿದ ತಕ್ಷಣವೇ ಪೊಲೀಸರು ಕ್ರಮ ಕೈಗೊಳ್ಳಬಹುದಿತ್ತಲ್ಲವೇ?

‘ಇದು ಪೂರ್ವಯೋಜಿತ ಗಲಭೆ’ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಈ ಘಟನೆಯ ಬಗ್ಗೆ ಮ್ಯಾಜಿಸ್ಟೀರಿಯಲ್‌ ತನಿಖೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿಯೇ ಹೇಳಿರುವಾಗ ಇಂತಹ ಹೇಳಿಕೆ ಅಗತ್ಯವಿರಲಿಲ್ಲ. ಮುಕ್ತವಾಗಿ ಕಾರ್ಯನಿರ್ವಹಿಸಬಲ್ಲ ಅಧಿಕಾರಿಗಳಿದ್ದರೂ ಪ್ರಸ್ತುತ ರಾಜಕೀಯ ವ್ಯವಸ್ಥೆಯೊಳಗೆ ಸಚಿವರ ನಿರಂತರ ಹೇಳಿಕೆಗಳು ಬೇರೆಯೇ ಸಂದೇಶ ನೀಡುತ್ತಿರಬಹುದಲ್ಲವೇ? ಇದು ಬರೀ ಬಿಜೆಪಿ ಅಲ್ಲ; ಕಾಂಗ್ರೆಸ್‌, ಜೆಡಿಎಸ್‌ ಯಾವುದೇ ಪಕ್ಷದ ನೇತೃತ್ವದ ಆಡಳಿತ ಇದ್ದರೂ ಇದೇ ಸ್ಥಿತಿ.

ಈ ರೀತಿಯ ಹಿಂಸಾಚಾರಗಳು ನಡೆದಾಗ ಕನಿಷ್ಠ ಎರಡು– ಮೂರು ದಿನಗಳವರೆಗೂ ಪ‍್ರಮುಖ ರಾಜಕೀಯ ನಾಯಕರು, ತೀರ್ಪು ಕೊಡುವ ಶೈಲಿಯ ಅಭಿಪ್ರಾಯಗಳನ್ನು ಮಂಡಿಸದೇ ಇರುವುದು ಸೂಕ್ತ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು