ಕೆನಡಾದ ಮ್ಯಾಕ್ಮಾಸ್ಟರ್ ವಿಶ್ವವಿದ್ಯಾಲಯದ ಸಿಗಿಂದಾ ಒಬಿ ಎನ್ನುವ ನರವಿಜ್ಞಾನಿ ಒಂದು ಕುತೂಹಲಕರ ಪ್ರಯೋಗ ನಡೆಸಿದರು. ವಿದ್ಯಾರ್ಥಿಗಳ ಗುಂಪೊಂದನ್ನು ಎಂಆರ್ಐ ಯಂತ್ರದಲ್ಲಿ ಮಲಗಿಸಿದರು. ಅವರಿಗೆ ತಾವು ಸಂಪೂರ್ಣ ಅಧಿಕಾರ ಮತ್ತು ಹಿಡಿತ ಹೊಂದಿದ್ದ ಸಂದರ್ಭವನ್ನು ಕಲ್ಪಿಸಿ ಕೊಳ್ಳುವಂತೆ ಹೇಳಿ, ಅವರ ಮಿದುಳಿನ ಚಟುವಟಿಕೆಗಳನ್ನು ದಾಖಲಿಸಿದರು. ಫಲಿತಾಂಶ ಆಶ್ಚರ್ಯಕರವಾಗಿತ್ತು. ಮಿದುಳಿನ ಯಾವ ಭಾಗ ಕರುಣೆ, ಸಹಾನುಭೂತಿ, ಪ್ರತಿ ಸ್ಪಂದನಗಳನ್ನು ಪ್ರಚೋದಿಸಬೇಕಾಗಿತ್ತೋ ಆ ಭಾಗ ಅಧಿಕಾರದ ಕಲ್ಪನೆಯ ಸಂದರ್ಭದಲ್ಲಿ ಚಟುವಟಕೆಗಳಿಲ್ಲದೆ ಸಂಪೂರ್ಣ ನಿಷ್ಕ್ರಿಯವಾಗಿತ್ತು. ಬರೀ ಅಧಿಕಾರದ ಕಲ್ಪನೆಯೇ ನಮ್ಮ ಸಹಾನುಭೂತಿಯನ್ನು ಕುರುಡಾಗಿಸುವುದಾದರೆ, ಇನ್ನು ನಿಜವಾದ ನಿರಂತರ ಅಧಿಕಾರ ಮಾನವರ ಮಿದುಳನ್ನು ಹೇಗೆ ಬದಲಾಯಿಸಬಹುದು?

ಇದೇ ರೀತಿಯ ಪ್ರಯೋಗಗಳನ್ನು ಹಲವು ವಿಜ್ಞಾನಿಗಳು ಭಿನ್ನ ಭಿನ್ನ ದೃಷ್ಟಿಕೋನದಿಂದ ಮತ್ತೆ ಮತ್ತೆ ಮಾಡುತ್ತಲೇ ಬಂದಿದ್ದಾರೆ. ಅಮೆರಿಕದ ಪಾಲ್ ಪೀಫ್ ಎನ್ನುವ ವಿಜ್ಞಾನಿ ಸರಣಿ ಪ್ರಯೋಗಗಳನ್ನು ನಡೆಸಿದ್ದಾರೆ. ಒಂದು ಪ್ರಯೋಗದಲ್ಲಿ ಅವರು, ಹಲವರನ್ನು ಒಟ್ಟಿಗೆ ಸೇರಿಸಿಕೊಂಡು ಜೂಜಿನ ಪಂದ್ಯ ಏರ್ಪಡಿಸಿದರು. ದಾಳವನ್ನು ಉರುಳಿಸಿ ಬರುವ ಸಂಖ್ಯೆಗಳನ್ನು ಊಹಿಸಿ, ಹಣವನ್ನು ಬೆಟ್ಟಿಂಗ್ ಮಾಡುವ ಜೂಜು ಅದು. ಅಂತಹ ಗುಂಪಿನಲ್ಲಿ ಕೆಲವರಿಗೆ ಇತರರಿಗಿಂತ ದುಪ್ಪಟ್ಟು ಹಣವನ್ನು ನೀಡಿದ್ದಲ್ಲದೆ, ಅವರಿಗೆ ಪ್ರತಿಸಾರಿ ಎರಡು ಬಾರಿ ದಾಳ ಉರುಳಿಸುವ ಆಯ್ಕೆಯನ್ನೂ ಕೊಡಲಾಯಿತು. ಸಹಜವಾಗಿ ದುಪ್ಪಟ್ಟು ಹಣ ಮತ್ತು ಎರಡು ಬಾರಿ ದಾಳ ಉರುಳಿಸುವ ಅವಕಾಶ ಹೊಂದಿದವರೇ ಗೆಲ್ಲುತ್ತಿದ್ದರು. ಆಟವಾಡುವ ಸಮಯದಲ್ಲಿ ಅಂತಹವರ ನಡವಳಿಕೆಯಲ್ಲಿ ಅಹಂಕಾರ ಮತ್ತು ದರ್ಪ ಎದ್ದುಕಾಣುತ್ತಿತ್ತು. ಆಟದ ನಂತರ ಜೂಜಿನಲ್ಲಿ ಗೆದ್ದವ ರೊಂದಿಗೆ ನಡೆಸಿದ ಸಂದರ್ಶನದಲ್ಲಿ ಅವರು ತಮ್ಮ ಬುದ್ಧಿವಂತಿಕೆ, ಕೌಶಲದಿಂದ ಗೆದ್ದೆವು ಎಂದು ಬೀಗಿದರೇ ಹೊರತು, ಆಟದ ಆರಂಭದಲ್ಲಿಯೇ ತಮಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿತ್ತು ಎಂದು ಒಪ್ಪಿಕೊಳ್ಳಲಿಲ್ಲ. ಅಧಿಕಾರ, ಯಶಸ್ಸು ಗಳು ಕಾನೂನುಬಾಹಿರವಾಗಿ ಮತ್ತು ಅನೈತಿಕವಾಗಿ ಬಂದಾ ಗಲೂ ನಮ್ಮ ಮಿದುಳಿಗೆ ವಾಸ್ತವವನ್ನು ಗ್ರಹಿಸಲಾಗದಷ್ಟು ನಶೆ ಆವರಿಸಿಕೊಳ್ಳುತ್ತದೆ.

ಈಗ ನರವಿಜ್ಞಾನಿಗಳು ಸಾರ್ವತ್ರಿಕವಾಗಿ ಒಪ್ಪಿಕೊಂಡಿ ರುವ ಸಂಗತಿ: ರಾಜಕೀಯ, ಸಾಮಾಜಿಕ, ಧಾರ್ಮಿಕ, ವಿದ್ಯೆ, ದೇಹದ ಬಣ್ಣ ಸೇರಿದಂತೆ ಯಾವುದೇ ರೀತಿಯಿಂದ ಅಧಿಕಾರ ಬಂದಿದ್ದರೂ ಅದು ನಮ್ಮೊಳಗಿನ ಮಾನವೀಯತೆಯನ್ನು, ಸಹಸ್ಪಂದನವನ್ನು ನಾಶ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ನಿರುದ್ಯೋಗಿ ಯುವಜನರನ್ನು ಜಿರಲೆಗಳೆಂದು ಯಾರಾದರೂ ಹೇಳಿದಲ್ಲಿ, ಆ ಮಾತುಗಳ ಬಗ್ಗೆ ಅಚ್ಚರಿಪಡುವಂತಹದ್ದೇನೂ ಇಲ್ಲ. ಇಂಥ ಮಾತುಗಳನ್ನು ಯಾರು ಆಡಿದರು ಎನ್ನುವುದಕ್ಕಿಂತಲೂ, ಇಂತಹ ಮಾತುಗಳನ್ನು ಬೇರೆ ಬೇರೆ ಕ್ಷೇತ್ರಗಳ ಮುಖಂಡರುಗಳಿಂದ ಕೇಳುತ್ತಲೇ ಬಂದಿದ್ದೇವೆ ಎನ್ನುವುದು ಮುಖ್ಯ.

ಕಾಂಗ್ರೆಸ್ನ ರಶೀದ್ ಮಸೂದ್ ಅವರು 2013ರ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾಗ, ದೆಹಲಿಯಲ್ಲಿ ಬರೀ ಐದು ರೂಪಾಯಿಯಲ್ಲಿ ಹೊಟ್ಟೆ ತುಂಬಾ ಉಣ್ಣಬಹುದು ಎಂದು ಹೇಳಿದ್ದರು. ಮತ್ತೊಬ್ಬ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಮುಂಬೈನಲ್ಲಿ ಇದಕ್ಕೆ ₹12 ಸಾಕಾಗುತ್ತದೆ ಎಂದು ಹೇಳಿದ್ದರು. ಕಳೆದ ವರ್ಷ ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ನಮ್ಮ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಉಪದೇಶಾಮೃತವನ್ನು ನೀಡಿದ್ದರು. ವಾರದ ಕೆಲಸದ ಸಮಯವನ್ನು 90 ಗಂಟೆಗೆ ಏರಿಸಬೇಕು ಎಂದು ‘ಎಲ್ ಅಂಡ್ ಟಿ’ಯ ಮುಖ್ಯಸ್ಥ ಸುಬ್ರಮಣ್ಯನ್ ಹೇಳಿದ್ದಲ್ಲದೆ, ಮನೆಯಲ್ಲಿ ಗಂಡ, ಹೆಂಡತಿ ಎಷ್ಟು ಹೊತ್ತು ಪರಸ್ಪರ ಮುಖ ನೋಡುತ್ತಾ ಕುಳಿತಿರಲು ಸಾಧ್ಯ ಎನ್ನುವ ಮಾತುಗಳನ್ನಾಡಿದ್ದರು. ನಮ್ಮ ಪ್ರಧಾನ ಮಂತ್ರಿಯವರು ನೋಟುಗಳ ಅಮಾನ್ಯೀಕರಣವಾದ ನಂತರ ಜನರು ಎಟಿಎಂಗಳ ಮುಂದೆ ಸಾಲುಗಟ್ಟಿದ್ದರ ಕುರಿತು ವ್ಯಂಗ್ಯದ ನಗೆಬೀರಿದ್ದರು. ಧಾರ್ಮಿಕ ನಾಯಕರ ಅನೈತಿಕ ಅವತಾರಗಳು ಕೂಡ ಅಧಿಕಾರದಿಂದ ಎಲ್ಲ ಕುಕೃತ್ಯಗಳನ್ನೂ ಮೀರಿ ನಿಲ್ಲಬಹುದೆಂಬ ಅಹಂಕಾರ ದಿಂದಲೇ ಕೂಡಿರುತ್ತವೆ. ಜೆಫ್ರಿ ಎಫ್ಸ್ಟೈನ್ ಜೊತೆ ಸಖ್ಯ ಬೆಳೆಸಿದವರ ಪಟ್ಟಿಯನ್ನು ನೋಡಿದರೆ ಅಧಿಕಾರದ ನಶೆ ವಿವೇಕವನ್ನು ಕುರುಡಾಗಿಸುವ ಪ್ರಕ್ರಿಯೆಗೆ ಯಾವುದೇ ಕ್ಷೇತ್ರದ ಜನರು ಕೂಡ ಹೊರತಲ್ಲ ಎನ್ನುವುದು ಸಾಬೀತಾಗುತ್ತದೆ.

ಅಧಿಕಾರವನ್ನು ಅನುಭವಿಸುತ್ತಿರುವಾಗಲೂ ವಿವೇಕ ವನ್ನು ಕಳೆದುಕೊಳ್ಳದೆ ಸಹಸ್ಪಂದನವನ್ನು ಉಳಿಸಿಕೊಳ್ಳಲು ಅಗಾಧವಾದ ಪ್ರಬುದ್ಧತೆ ಬೇಕಾಗುತ್ತದೆ. ಇತಿಹಾಸದಲ್ಲಿಯೇ ಇಂತಹ ನಾಯಕರುಗಳ ಸಂಖ್ಯೆ ಬೆರಳೆಣಿಕೆಯಷ್ಟು ಇರ ಬಹುದು. ಕಳೆದ 50–60 ವರ್ಷಗಳಲ್ಲಿ ವಿಶ್ವದ ಯಾವುದೇ ದೇಶದಲ್ಲಿಯೂ ಇಂತಹ ನಾಯಕರು ಬಂದಿಲ್ಲ.

ದೇಶವನ್ನು ನಡೆಸಲು ಯಾರಿಗಾದರೂ ಅಧಿಕಾರ ನೀಡು ವುದು ಅನಿವಾರ್ಯ ಎಂದಮೇಲೆ, ಅಂತಹ ಅಧಿಕಾರವನ್ನು ನಶೆಯಾಗಲು ಬಿಡದಂತಹ ಪ್ರತಿರೋಧವನ್ನು ಹುಟ್ಟುಹಾಕು ವುದು ಮಾತ್ರ ಜನಸಾಮಾನ್ಯರಿಗೆ ಇರುವ ದಾರಿ. ಪ್ರತಿರೋಧ ಎಂದರೆ ಬಂದ್ಗಳು, ಮೆರವಣಿಗೆ, ಸತ್ಯಾಗ್ರಹಗಳೇ ಆಗ ಬೇಕೆಂದಿಲ್ಲ. ನಿರಂತರವಾಗಿ ಎಲ್ಲಾ ನಾಯಕರುಗಳಿಗೆ ಪ್ರಶ್ನೆ ಗಳನ್ನು ಕೇಳುತ್ತಲೇ ಇರಬೇಕಾಗುತ್ತದೆ. ಅಧಿಕಾರದ ಅಮಲು ಪ್ರಶ್ನೆಗಳನ್ನು, ಪ್ರಶ್ನಿಸುವವರನ್ನು ಹತ್ತಿಕ್ಕುವ ದಾರಿಗಳನ್ನು ಹುಡುಕುತ್ತಲೇ ಇರುತ್ತದೆ. ಪ್ರಶ್ನೆ ಕೇಳುವುದನ್ನು ನಿಲ್ಲಿಸಿದರೆ ಅಧಿಕಾರದ ನಶೆ ಸಂಪೂರ್ಣ ಸ್ಪಂದನವನ್ನು ಕಳೆದುಕೊಂಡು ಕ್ರೌರ್ಯವಾಗಿ ಬದಲಾಗುತ್ತದೆ.

ಕಾಕ್ರೋಚ್ ಜನತಾ ಪಾರ್ಟಿ ಕೂಡ ನಮ್ಮ ಯುವಜನರು ಪ್ರಶ್ನೆಗಳನ್ನು ಎತ್ತಲು ಹುಡುಕಿಕೊಂಡ ಮಾರ್ಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.