ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬೇಕಿದೆ ಎಲ್ಲರ ಗ್ರಂಥಾಲಯ

ಸಾರ್ವಜನಿಕ ಗ್ರಂಥಾಲಯವನ್ನು ‘ಸರ್ಕಾರಿ’ ಎಂಬ ಗ್ರಹಿಕೆಯಿಂದ ದೂರ ಮಾಡಬೇಕಾಗಿದೆ
Last Updated 14 ನವೆಂಬರ್ 2021, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಇದೇ 14ರಿಂದ 20ರವರೆಗೆ ನಡೆಯುತ್ತಿದೆ. ಕೋವಿಡ್ ನಂತರದ ದಿನಗಳಲ್ಲಿ, ಮಕ್ಕಳು ಮತ್ತು ಹಿರಿಯರಲ್ಲಿ ‘ಓದುವ ಅಭ್ಯಾಸ’ಕ್ಕಾಗಿ ಗ್ರಂಥಾಲಯಗಳನ್ನು ಬಳಸುವುದರ ಕುರಿತು ಅಧ್ಯಯನಗಳು ಆರಂಭವಾಗುತ್ತಿವೆ.

ಚಿಂತಕ ಡಾ. ಹಾ.ಮಾ.ನಾಯಕ ಅವರು ಒಂದೆಡೆ ಹೇಳಿದ ಮಾತುಗಳು ಹೀಗಿವೆ: ‘ದುಃಖ, ನೋವುಗಳನ್ನು ಮಾಯಿಸಲು ಪುಸ್ತಕ ಒಂದು ದಿವ್ಯೌಷಧ. ದಿಗಂತದ ಆಚೆಯ ಬೆಳಕಿಗೆ ಕೈಮರಗಳು ಪುಸ್ತಕಗಳು. ಸುತ್ತಲೂ ಬಗೆಬಗೆಯ ಪುಸ್ತಕಗಳ ರಾಶಿ, ನಡುವೆ ಪುಸ್ತಕ ಹಿಡಿದ ನಾನು, ಇದು ನಾನು ಸತತವಾಗಿ ಇಷ್ಟಪಡುವ ಸನ್ನಿವೇಶ. ಇಂಥ ಸನ್ನಿವೇಶ ದಲ್ಲಿ ನನ್ನಂಥ ಸುಖಿ ಲೋಕದಲ್ಲಿ ಬೇರೊಬ್ಬರಿಲ್ಲವೇನೋ ಎನಿಸುತ್ತದೆ’. ಆದರೆ ಇಂದಿನ ಯುವಜನರಿಗೆ ಈ ಸುಖವಿಂದು ದೊರೆಯುತ್ತಿರುವುದು ಅಂಗೈನ ‘ತೆರೆ’ಯಲ್ಲಿಯೇ. ಪುಸ್ತಕಗಳ ರಾಶಿ, ‘ಇ-ಬುಕ್’ಗಳುಕಿಂಡಲ್ ಬುಕ್‍ಗಳು ಈ ಸಣ್ಣ ತೆರೆಯಲ್ಲಿಯೇ ಲಭ್ಯವಿವೆ. ಆದರೆ ಅವುಗಳನ್ನು ಪೂರ್ತಿಯಾಗಿ ಓದುವವರೆಷ್ಟು ಮಂದಿ? ಹೇಳಲು ಸಾಧ್ಯವಿಲ್ಲ.

ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳಿಗೆ ಜನ ಮುಗಿಬಿದ್ದು ಹೋಗುವ ಪ್ರವೃತ್ತಿ ಮೊದಲಿನಿಂದ ಕಡಿಮೆಯೇ. ಖಾಸಗಿ ಗ್ರಂಥಾಲಯಗಳಿಗೆ ದುಡ್ಡು ಕೊಟ್ಟು, ಮಧ್ಯಮ-ಮೇಲ್ವರ್ಗದ ಜನ ಓದಲು ಮುಂದಾಗುವಷ್ಟು, ‘ಉಚಿತ’ ಎಂದರೂ ಸಾರ್ವಜನಿಕ ಗ್ರಂಥಾಲಯಗಳಿಗೆ ‘ಜನಸಂದಣಿ’ ಉಂಟಾಗುವಂತೆ ಜನ ಹೋಗುವುದು ನಾನು ಕಾಣದ ಸಂಗತಿ. ದಿನಪತ್ರಿಕೆ ಓದಲು, ಉದ್ಯೋಗ ಪ್ರಕಟಣೆ ಹುಡುಕಲು, ಅಧ್ಯಯನದ ಯಾವುದೋ ಒಂದು ಪುಸ್ತಕ ಹುಡುಕಲು ಜನರು ಸಾರ್ವಜನಿಕ ಗ್ರಂಥಾಲಯ ಗಳಿಗೆ ಹೋಗುತ್ತಾರೆಯೇ ಹೊರತು, ಪುಸ್ತಕಗಳನ್ನು ಜ್ಞಾನಾರ್ಜನೆಗೆ, ವ್ಯಕ್ತಿತ್ವ ಬೆಳವಣಿಗೆಗೆ, ಮನರಂಜನೆಗೆ ಓದುವವರ ಸಂಖ್ಯೆ ಗೌಣ.

ಹಾಗೆಂದು ಭಾರತದ ಸಾರ್ವಜನಿಕ ಗ್ರಂಥಾಲಯಗಳ ಇತಿಹಾಸ ಸಾಕಷ್ಟು ದೀರ್ಘವಾದದ್ದೇ. 1948ರಲ್ಲಿಯೇ ಮೊದಲ ಸಾರ್ವಜನಿಕ ಗ್ರಂಥಾ ಲಯಗಳ ಕಾನೂನು- ಮದ್ರಾಸ್ ಪಬ್ಲಿಕ್ ಲೈಬ್ರರಿ ಆ್ಯಕ್ಟ್ ಜಾರಿಗೆ ಬಂತು. ಭಾರತದ ಸಾರ್ವಜನಿಕ ಗ್ರಂಥಾಲಯ ಚಳವಳಿ 19ನೇ ಶತಮಾನದಲ್ಲಿಯೇ ಮಹಾರಾಜ ಸಯ್ಯಾಜಿರಾವ್ ಗಾಯಕ್‍ವಾಡ್, ಅಮೆರಿಕೆಯ ಗ್ರಂಥಾಲಯ ಅಧಿಕಾರಿ ವಿಲಿಯಮ್ ಬಾರ್ಡೆನ್, ಗಣಿತಜ್ಞ ಎಸ್.ಆರ್.ರಂಗನಾಥನ್ ಮೊದಲಾದವರಿಂದ ಆರಂಭವಾಯಿತು. ಸಾಕ್ಷರತೆಯ ಪ್ರಗತಿಗಾಗಿ, ಸ್ವಾತಂತ್ರ್ಯ ಹೋರಾಟದ ಸಾಮಾಜಿಕ ಚಳವಳಿಗಳ ಭಾಗವಾಗಿ ಇದು ಕೆಲಸ ಮಾಡಿತು. ಆಂಧ್ರ-ಕೇರಳ-ಮದ್ರಾಸ್ ಪ್ರಾಂತಗಳಲ್ಲಿ ದೋಣಿಗಳ ಮೇಲೆ, ಎತ್ತಿನ ಗಾಡಿಗಳ ಮೇಲೆ ಪುಸ್ತಕಗಳು ಸಾರ್ವಜನಿಕರನ್ನು ಆಕರ್ಷಿಸಿದವು. ಸ್ವಾತಂತ್ರ್ಯಾ ನಂತರ ‘ಸಾರ್ವಜನಿಕ ಗ್ರಂಥಾಲಯಗಳ ರಾಷ್ಟ್ರೀಯ ಆಯೋಗ’ ಶಾಲಾ ಗ್ರಂಥಾಲಯಗಳ ಸೌಲಭ್ಯಗಳನ್ನು ವೃದ್ಧಿಪಡಿಸುವ, ಹಳ್ಳಿಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುವ 5 ವರ್ಷಗಳ ಯೋಜನೆಯೊಂದಿಗೆ ಕಾರ್ಯಾರಂಭ ಮಾಡಿತು.

ಅದಾದ ನಂತರ ಗ್ರಂಥಾಲಯಗಳ ಬೆಳವಣಿಗೆಯಾಗಲೀ ಆಡಳಿತ ಪದ್ಧತಿಯಾಗಲೀ ದೇಶದ ಎಲ್ಲೆಡೆ, ಒಂದೇ ಸಮನಾಗಿ ನಡೆದೇ ಇಲ್ಲ. ಪ್ರತೀ ರಾಜ್ಯದಲ್ಲಿ ಯಾವ ಇಲಾಖೆ ಸಾರ್ವಜನಿಕ ಗ್ರಂಥಾಲಯದ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ ಎಂಬುದನ್ನು ನೋಡಿದರೆ ಗೊಂದಲವಾಗುತ್ತದೆ. ಕೆಲವೆಡೆ ಸಂಸ್ಕೃತಿ ಇಲಾಖೆ, ಕೆಲವೆಡೆ ಶಿಕ್ಷಣ ಇಲಾಖೆ ಮತ್ತೆ ಬೇರೆಡೆ ಗ್ರಂಥಾಲಯ ಇಲಾಖೆ ಹೀಗೆ ವಿವಿಧ ಇಲಾಖೆಗಳಡಿ ಗ್ರಂಥಾಲಯಗಳು ನಿಲ್ಲುತ್ತವೆ. ಇವುಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳಬೇಕಾದ್ದು ಏಕೆ?

‘ಸಾಕ್ಷರತೆ’ ಎನ್ನುವ ಕೌಶಲಕ್ಕೂ ಒಂದು ಸಮಾಜವು ಕಲೆ-ಸಂಸ್ಕೃತಿ-ಗ್ರಂಥಾಲಯಗಳಿಗೆ ಎಷ್ಟು ತನು-ಮನ ಧನಗಳ ಬಂಡವಾಳ ಹೂಡುತ್ತದೆ ಎನ್ನುವುದಕ್ಕೂ ನಿಕಟ ಸಂಬಂಧವಿದೆ. ಅದರಲ್ಲಿಯೂ ಇಂದಿನ ನಮ್ಮ ಸಾಕ್ಷರತೆ ಕೇವಲ ‘ಪಠ್ಯಪುಸ್ತಕ ಸಾಕ್ಷರತೆ’ಯಾಗುವ ಅಪಾಯ ಕಾಡುತ್ತಿದೆ. ಕೇರಳ-ದೆಹಲಿಯಂತಹ ಒಂದೆರಡು ರಾಜ್ಯ ಮತ್ತು ಕೆಲವು ಮಹಾನಗರಗಳ ಸಾರ್ವಜನಿಕ ಗ್ರಂಥಾಲಯಗಳನ್ನು ಹೊರತುಪಡಿಸಿ, ಉಳಿದೆಡೆ ಸಾರ್ವಜನಿಕ ಗ್ರಂಥಾಲಯಗಳು ಮಂದ ಬೆಳಕು, ಹರಿದು ಹೋದ ಹಾಳೆಗಳು- ದೂಳು ತಿಂದು ಮಸುಕಾದ ಪುಸ್ತಕಗಳು, ಜೊತೆಗೊಬ್ಬ ಹತಾಶೆಯ ಗ್ರಂಥಾಲಯಾಧಿಕಾರಿ ಇವಿಷ್ಟೇ ನಮ್ಮ ‘ಲೈಬ್ರರಿ ಚಿತ್ರಣ’ವಾಗಿ ನಿಲ್ಲುತ್ತವೆ. ಯುವಜನರು, ಮಕ್ಕಳನ್ನು ಗ್ರಂಥಾಲಯದತ್ತ ಸೆಳೆಯುವ ಸೃಜನಶೀಲ ಪ್ರಯತ್ನಗಳು ಅತ್ಯವಶ್ಯ. ನಮಗಿಂತ ಜನಸಂಖ್ಯೆ ಹೆಚ್ಚಿರುವ ಚೀನಾದೆಲ್ಲೆಡೆ ‘ಇಟ್ಟಿಗೆ- ಗಾರೆ’ಯ ಪುಸ್ತಕದಂಗಡಿ
ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಗುತ್ತಿಗೆಗೆ ನೀಡಲಾಗಿದೆ. ಇಲ್ಲಿ ಉಚಿತ ಓದುವಿಕೆ, ರಸಪ್ರಶ್ನೆಗಳು, ಮಾತುಕತೆ, ಉಪನ್ಯಾಸಗಳು ನಡೆಯುತ್ತವೆ.

ಭಾರತದಲ್ಲಿ ಬ್ರಿಟಿಷ್ ಕೌನ್ಸಿಲ್ ಮಾಡುತ್ತಿರುವ ವಿವಿಧ ಕಾರ್ಯಕ್ರಮಗಳು, ‘Read for life’- ‘ಜೀವಮಾನಪೂರ್ತಿ ಓದು’ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುವುದು ಭಾರತದ- ಕರ್ನಾ ಟಕದ ಆಡಳಿತ ವ್ಯವಸ್ಥೆಗಳು ಮನಸ್ಸು ಮಾಡಿದರೆ ಕಷ್ಟವೇನಲ್ಲ. ‘ತೆರೆಯೇ ಹೊಸ ಕಾಗದ’ ಎಂಬ ಅರಿವು ಸಾರ್ವಜನಿಕ ಗ್ರಂಥಾಲಯಗಳಿಗೂ ಅನ್ವಯಿ ಸುತ್ತದೆ. ಇಂದಿನ ಮಕ್ಕಳು ಗ್ರಂಥಾಲಯಗಳಿಗೆ ಮುಗಿಬೀಳುವಂತೆ ಮಾಡಬೇಕೆಂದರೆ, ಪೋಷಕರು ಮಕ್ಕಳಲ್ಲಿ ‘ಪುಸ್ತಕದೊಳಕ್ಕೆ ಹುದುಗುವ’ ಸಂಸ್ಕೃತಿ ಬೆಳೆಸಬೇಕು. ಮಕ್ಕಳಿಗಾಗಿ ಗ್ರಂಥಾಲಯಗಳನ್ನು ಮನ ರಂಜನೆಯ ತಾಣಗಳೊಂದಿಗೆ ಬೆಸೆಯುವುದೂ ಬಹು ಉಪಯುಕ್ತ. ‘ಸಾರ್ವಜನಿಕ ಗ್ರಂಥಾಲಯ’ವನ್ನು ‘ಸರ್ಕಾರಿ’ ಎಂಬ ಗ್ರಹಿಕೆಯಿಂದ ದೂರ ಮಾಡೋಣ. ‘ಎಲ್ಲ ಜನರ’ ಗ್ರಂಥಾಲಯ ಎಂಬ ಗ್ರಹಿಕೆಯನ್ನು ಬೆಳೆಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT