ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹೊತ್ತಿಗೆ ಪ್ರಕಟಣೆಯ ಈ ಹೊತ್ತು

ಹೆಚ್ಚುತ್ತಿರುವ ಪ್ರಕಾಶಕರಿಂದ ಲೇಖಕರ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತಿದೆಯೇ ಎನ್ನುವುದು ಈ ಸ
Last Updated 6 ಡಿಸೆಂಬರ್ 2022, 19:18 IST
ಅಕ್ಷರ ಗಾತ್ರ

ಕನ್ನಡದಲ್ಲಿ ಪ್ರತಿವರ್ಷ ಅಸಂಖ್ಯಾತ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಇದಕ್ಕೆ ಪ್ರಕಾಶಕರ ಸಂಖ್ಯೆ ಹೆಚ್ಚುತ್ತಿರುವುದೇ ಮೂಲ ಕಾರಣವಾಗಿದೆ. ಪ್ರತಿವರ್ಷ ಹೊಸಬರು ಪ್ರಕಾಶನ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಪುಸ್ತಕಗಳ ಪ್ರಕಟಣೆಯಲ್ಲಿ ಆಶಾದಾಯಕ ಬೆಳವಣಿಗೆ ಗೋಚರಿಸುತ್ತಿರುವ ಈ ಹೊತ್ತಿನಲ್ಲಿ, ಲೇಖಕರ ಸಮಸ್ಯೆ
ಗಳತ್ತಲೂ ಗಮನಹರಿಸಬೇಕಾಗಿದೆ. ಪ್ರಕಾಶಕರಿಂದ ಲೇಖಕರ ಬೆಳವಣಿಗೆಗೆ ಪೂರಕವಾದ ವಾತಾವರಣ
ಸೃಷ್ಟಿಯಾಗುತ್ತಿದೆಯೇ ಎನ್ನುವುದೇ ಈ ಸಂದರ್ಭದ ಮೂಲಭೂತ ಪ್ರಶ್ನೆಯಾಗಿದೆ.

ಹೊಸ ಲೇಖಕನಾಗಿ ಸಾಹಿತ್ಯಲೋಕಕ್ಕೆ ಕಾಲಿಟ್ಟಿರುವ ಮಿತ್ರ ಇತ್ತೀಚೆಗೆ ನನ್ನನ್ನು ಪುಸ್ತಕ ಮಳಿಗೆಗೆ ಕರೆದೊಯ್ದಿದ್ದ. ಕೆಲವು ತಿಂಗಳುಗಳ ಹಿಂದೆ ಮಿತ್ರನ ಪುಸ್ತಕವನ್ನು ಪ್ರಕಟಿಸಿ ಬಿಡುಗಡೆಗೊಳಿಸಿದ್ದ ಪ್ರಕಾಶಕರ ಪುಸ್ತಕದಂಗಡಿ ಅದಾಗಿತ್ತು. ಆ ಅಂಗಡಿಯಲ್ಲಿ ತನ್ನ ಪ್ರಕಟಿತ ಪುಸ್ತಕವನ್ನು ನನಗೆ ತೋರಿಸಬೇಕೆಂಬ ಉಮೇದಿಯಿಂದ ಕರೆದೊಯ್ದ ಮಿತ್ರನಿಗೆ ಅಲ್ಲಿ ಅವನ ಪುಸ್ತಕ ಕಾಣಿಸದೆ ನಿರಾಸೆಯಾಯಿತು. ಕೆಲಸಗಾರರನ್ನು ಪ್ರಶ್ನಿಸಿದಾಗ ಅವರು ಮಾಲೀಕರ ಕಡೆ ಕೈತೋರಿಸಿದರು. ಮಾಲೀಕರು ಸಾರ್ವಜನಿಕ ಗ್ರಂಥಾಲಯಗಳಿಗೆ ಮತ್ತು ಕಾಲೇಜು ಗ್ರಂಥಾಲಯಗಳಿಗೆ ಪೂರೈಸಲೆಂದು ಪುಸ್ತಕ ಪ್ರಕಟಿಸಿದ್ದೆ ವಿನಾ ಮಳಿಗೆಯಲ್ಲಿಟ್ಟು ಮಾರಾಟ ಮಾಡಲಿಕ್ಕಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ತಾನು ಪ್ರಕಟಿಸಿದ ಪುಸ್ತಕಕ್ಕೆ ತನ್ನದೇ ಪುಸ್ತಕ ಮಳಿಗೆಯಲ್ಲಿ ಜಾಗ ಕೊಡದ ಪ್ರಕಾಶಕ ಅದು ಹೇಗೆ ನನ್ನ ಪುಸ್ತಕವನ್ನು ಅನೇಕ ಓದುಗರಿಗೆ ಮುಟ್ಟಿಸುತ್ತಾನೆ ಎನ್ನುವುದು ಬರಹಗಾರ ಮಿತ್ರನ ಪ್ರಶ್ನೆಯಾಗಿತ್ತು.

ಪ್ರಕಾಶಕರ ಗೊಡವೆಯೇ ಬೇಡವೆಂದು ನನ್ನ ಇನ್ನೊಬ್ಬ ಮಿತ್ರರು ಸ್ವತಃ ಪ್ರಕಾಶಕರಾಗಿ ಪುಸ್ತಕ
ಪ್ರಕಟಿಸಿದ್ದಾರೆ. ನಲವತ್ತು ಸಾವಿರ ರೂಪಾಯಿಗಳನ್ನು ಮುದ್ರಕರಿಗೆ ಪಾವತಿಸಿ ಒಂದು ಸಾವಿರ ಪ್ರತಿಗಳನ್ನು ಪ್ರಕಟಿಸಿದರು. ಹತ್ತು ಸಾವಿರ ರೂಪಾಯಿ ಖರ್ಚು ಮಾಡಿ ಆಯೋಜಿಸಿದ್ದ ಪುಸ್ತಕ ಬಿಡುಗಡೆಯ ದಿನ ನೂರು ಪ್ರತಿಗಳು ಗೌರವಪ್ರತಿಯ ರೂಪದಲ್ಲಿ ಉಚಿತವಾಗಿ ವಿತರಣೆಯಾದವು. ಪರಿಚಯದ ಪುಸ್ತಕ ಮಾರಾಟ ಗಾರರನ್ನು ಸಂಪರ್ಕಿಸಿದಾಗ 200 ಪ್ರತಿಗಳು ಶೇ 20ರ ರಿಯಾಯಿತಿ ದರದಲ್ಲಿ ಮಾರಾಟವಾದವು. 300 ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಮಾರಾಟ ಮಾಡಿದರೂ ಆ ಹಣ ಇನ್ನೂ ಅವರ ಕೈಸೇರಿಲ್ಲ. ಈಗ ಸುಮಾರು 400 ಪ್ರತಿಗಳು ಮಾರಾಟವಾಗದೆ ಅವರ ಬಳಿ ಉಳಿದುಕೊಂಡಿವೆ. ಒಂದು ಅಂದಾಜಿನ ಪ್ರಕಾರ, ಈ ಪುಸ್ತಕ ಪ್ರಕಟಣೆಯಿಂದ ಅವರಿಗೆ ₹ 20,000 ನಷ್ಟವಾಗಿದೆ. ಒಂದಿಷ್ಟು ಉತ್ತೇಜನ ದೊರೆತಿದ್ದರೆ ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ ಎದುರಾದ ನಿರುತ್ಸಾಹ ಅವರನ್ನು ಶಾಶ್ವತವಾಗಿ ಪುಸ್ತಕ ಪ್ರಕಾಶನದಿಂದ ದೂರಾಗುವಂತೆ ಮಾಡಿತು.

ಕನ್ನಡದ ಕೆಲವು ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಹೆಸರಾಂತ ಲೇಖಕರಿಗೆ ಮಣೆ ಹಾಕುತ್ತಿವೆಯೇ ವಿನಾ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಮುಂದಾಗುತ್ತಿಲ್ಲ. ಹಾಗೆ ಮಾಡಿ ಆರ್ಥಿಕವಾಗಿ ಕೈ
ಸುಟ್ಟುಕೊಳ್ಳುವುದೇಕೆ ಎನ್ನುವ ಮನೋಭಾವ
ಅವರದಾಗಿರಬಹುದು. ಕೆಲವು ಪ್ರಕಾಶಕರು ಅದಾಗಲೇ ಪತ್ರಿಕೆಗಳಲ್ಲಿ ಪ್ರಕಟವಾದ ಬರಹವಾಗಿದ್ದರೆ ಪುಸ್ತಕ ಪ್ರಕಟಿಸಲು ಆಸಕ್ತಿ ತೋರಿಸುವುದಿಲ್ಲ. ಇನ್ನು ಕೆಲವು ಪ್ರಕಾಶಕರು ಪ್ರತಿವರ್ಷ ತಾವು ಆಯೋಜಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾಗುವ ಹಸ್ತಪ್ರತಿ ಗಳನ್ನು ಮಾತ್ರ ಪ್ರಕಟಿಸುವ ಯೋಜನೆ ಹಾಕಿ
ಕೊಂಡಿರುತ್ತಾರೆ. ಮೂರ್ನಾಲ್ಕು ವರ್ಷಗಳಿಗಾಗುವಷ್ಟು ಕೆಲಸವಿದೆಯೆಂದು ಹೊಸ ಲೇಖಕರತ್ತ ಕಣ್ಣೆತ್ತಿಯೂ ನೋಡದ ಪ್ರಕಾಶಕರೂ ಇದ್ದಾರೆ.

ಇನ್ನು ಕೊಟ್ಟಿದ್ದನ್ನೆಲ್ಲ ಪ್ರಕಟಿಸುವ ಪ್ರಕಾಶಕರ ಸಂಖ್ಯೆಯೂ ಬಹಳಷ್ಟಿದೆ. ಇಂಥವರ ದೃಷ್ಟಿಯಲ್ಲಿ ಪುಸ್ತಕ ಪ್ರಕಟಣೆ ಎನ್ನುವುದು ಸಂಖ್ಯಾತ್ಮಕ ಪ್ರಗತಿಯೇ ವಿನಾ ಗುಣಾತ್ಮಕ ಬೆಳವಣಿಗೆಯಲ್ಲ.
ಒಂದೇ ದಿನ ಒಂದೇ ವೇದಿಕೆಯಲ್ಲಿ 100ರಿಂದ 200 ಶೀರ್ಷಿಕೆಗಳ ಪುಸ್ತಕಗಳು ಬಿಡುಗಡೆ
ಯಾಗುತ್ತವೆ. ಅದೆಷ್ಟೋ ಸಂದರ್ಭಗಳಲ್ಲಿ, ಅತಿಥಿ
ಗಳಾಗಿರುವ ವಿದ್ವಾಂಸರು ಸಂಖ್ಯೆಗಲ್ಲ ಗುಣಾತ್ಮಕತೆಗೆ ಆದ್ಯತೆ ನೀಡಿ ಎಂದು ವೇದಿಕೆಯಲ್ಲೇ ಕಿವಿಮಾತು ಹೇಳಿದ್ದುಂಟು. ಇಂಥ ಪ್ರಕಾಶಕರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಗಳೇ ಕೃಪಾಪೋಷಿತ ಮಂಡಳಿಗಳಾಗಿವೆ. ಒಬ್ಬರೇ ಪ್ರಕಾಶಕರು ಬೇರೆ ಬೇರೆ ಪ್ರಕಾಶನ ಸಂಸ್ಥೆಗಳ ಹೆಸರುಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಮಾರಾಟ ಮಾಡಿ ಧನ್ಯ
ರಾಗುತ್ತಾರೆ. ಇಲ್ಲಿ ನಿಜವಾದ ನಷ್ಟವಾಗುವುದು ಗುಣಾತ್ಮಕ ಪುಸ್ತಕಗಳ ಲೇಖಕರಿಗೆ.

ಇಂಗ್ಲಿಷ್ ಭಾಷೆಯ ಪುಸ್ತಕಗಳ ಮಾರಾಟದಲ್ಲಿನ ರಿಯಾಯಿತಿಯ ಧಾರಾಳತನವೇ ಕನ್ನಡ ಪುಸ್ತಕಗಳ ಮಾರಾಟಕ್ಕೆ ಉರುಳಾಗಿ ಪರಿಣಮಿಸಿದೆ. ಇಂಗ್ಲಿಷ್ ಭಾಷೆಯ ಪುಸ್ತಕಗಳನ್ನು ಖರೀದಿಸುವಾಗ ಸಿಗುತ್ತಿರುವ ಹೆಚ್ಚಿನ ರಿಯಾಯಿತಿಯನ್ನು ಓದುಗರು ಕನ್ನಡ ಪುಸ್ತಕ ಗಳನ್ನು ಖರೀದಿಸುವಾಗಲೂ ನಿರೀಕ್ಷಿಸುತ್ತಿದ್ದಾರೆ.

ಇಂಥ ಸನ್ನಿವೇಶದಲ್ಲಿ ಓದುಗರು ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಮರ್ಶೆಗಳನ್ನು ಓದಿ ಹೊಸ ಲೇಖಕರ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ. ಪ್ರತಿವರ್ಷಪ್ರಕಟವಾಗುತ್ತಿರುವ ಎಲ್ಲ ಪುಸ್ತಕಗಳ ವಿಮರ್ಶೆ ಯಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಕೆಲವೇ ಪುಸ್ತಕಗಳ ವಿಮರ್ಶೆಯು ಇಡೀ ಸಾಹಿತ್ಯ ಲೋಕದ ವಿಮರ್ಶೆಯಾಗಲಾರದು ಎನ್ನುವ ಹಿರಿಯ ಸಾಹಿತಿ ಕೆ.ವಿ.ತಿರುಮಲೇಶ ಅವರ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಪರಿಸ್ಥಿತಿ ಹೀಗಿರುವಾಗ, ಹೊಸ ಲೇಖಕರು ಬರವಣಿಗೆಯ ಕ್ಷೇತ್ರದಲ್ಲಿ ಕಾಲೂರಿ ನಿಲ್ಲಲು ಅಗತ್ಯವಾದ ಆಶಾದಾಯಕ ವಾತಾವರಣ ಕಾಣಿಸುತ್ತಿಲ್ಲ ಎನ್ನುವ ಮಾತನ್ನು ಬೇಸರದಿಂದ ಹೇಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT