ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ರೇಬಿಸ್‌ ಸಾವನ್ನು ಶೂನ್ಯಕ್ಕಿಳಿಸುವ ಸವಾಲು

ಮಾನವ, ಪ್ರಾಣಿ ಮತ್ತು ಪರಿಸರದ ಆರೋಗ್ಯಗಳನ್ನು ಒಂದಾಗಿ ಪರಿಗಣಿಸಿ ಪರಿಹಾರ ಹುಡುಕುವ ಏಕಸ್ವಾಸ್ಥ್ಯದ ಕಾರ್ಯಾಚರಣೆ ಇಂದಿನ ಅನಿವಾರ್ಯ
Last Updated 27 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

‘ಬೆಳಿಗ್ಗೆ ಯಾವ್ದೋ ನಾಯಿ ಬಂದು ನಮ್ಮನೆ ನಾಯಿಮರಿನ ಕಚ್ಚಿ ಸಾಯ್ಸಿದೆ. ಅದು ಹುಚ್ಚುನಾಯಿನಾ ಅಂತ ಅನುಮಾನ. ನಮ್ ಪಾಪು ಅಲ್ಲೆಲ್ಲಾ ಬರಿಗಾಲಲ್ಲಿ ಓಡಾಡಿದೆ. ಏನಾದ್ರೂ ಪ್ರಾಬ್ಲಂ ಆಗುತ್ತಾ ಅಂತ ತುಂಬಾ ಹೆದ್ರಿಕೆ ಆಗ್ತಿದೆ’ ತಾಯಿಯೊಬ್ಬಳ ಆತಂಕದ ವಿಚಾರಣೆ. ಆಕೆ ವೃತ್ತಿಯಲ್ಲಿ ಶಿಕ್ಷಕಿ. ಅರಿವಿನ ಕೊರತೆಯ ಕಾರಣ ರೇಬಿಸ್ ರೋಗಾಣುಗಳ ಬಗ್ಗೆ ಸುದೀರ್ಘ ವಿವರಣೆ ಕೊಡಬೇಕಾಯಿತು. ಹೌದು, ಈ ಭಯಾನಕ ಕಾಯಿಲೆಯ ಬಗ್ಗೆ ಇಂತಹ ಹತ್ತಾರು ಆತಂಕಪೂರಿತ ಪ್ರಶ್ನೆಗಳು ಆಗಾಗ್ಗೆ ಎದುರಾಗುತ್ತಿರುತ್ತವೆ. ಸಹಸ್ರಾರು ವರ್ಷಗಳಿಂದ ಜನ-ಜಾನುವಾರುಗಳ ಜೀವಕ್ಕೆ ಕಂಟಕಕಾರಿಯಾಗಿರುವ ಈ ವ್ಯಾಧಿಯ ಬಗ್ಗೆ ಇನ್ನೂ ಸರಿಯಾದ ತಿಳಿವಳಿಕೆ ಮೂಡದಿರುವುದು ದುರದೃಷ್ಟಕರ.

ರೋಗಲಕ್ಷಣ ಆರಂಭವಾಯಿತೆಂದರೆ, ರೇಬಿಸ್‍ಗೆ ಯಾವುದೇ ಮದ್ದಿಲ್ಲ. ಕಾಯಿಲೆಗೆ ಕಾರಣವಾಗುವ ಲಿಸ್ಸಾ ಎಂಬ ವೈರಾಣುಗಳು ಪ್ರಮುಖವಾಗಿ ಹರಡುವುದು ಹುಚ್ಚುನಾಯಿ ಕಡಿತದಿಂದ. ವನ್ಯಮೃಗಗಳಾದ ನರಿ, ತೋಳ ಸೇರಿದಂತೆ ನಾಯಿ, ಹೆಗ್ಗಣಗಳಲ್ಲಿ ಸೋಂಕು ಸಾಮಾನ್ಯ. ಮಾನವನಲ್ಲದೆ ದನ, ಎಮ್ಮೆ, ಕುರಿ, ಮೇಕೆ, ಬೆಕ್ಕು, ಕುದುರೆಯಂತಹ ಬಿಸಿರಕ್ತದ ಯಾವುದೇ ಪ್ರಾಣಿಯನ್ನೂ ಕಾಯಿಲೆ ಬಾಧಿಸಬಹುದು. ಕೆಲವು ಜಾತಿಯ ಬಾವಲಿಗಳು ರೋಗಾಣುಗಳ ವಾಹಕಗಳಾಗಿದ್ದು ರೋಗ ಪ್ರಸಾರದಲ್ಲಿ ಪಾತ್ರ ವಹಿಸುತ್ತವೆ.

ಲಸಿಕೆಯ ಮೂಲಕ ನೂರಕ್ಕೆ ನೂರು ತಡೆಗಟ್ಟಬಹುದಾದ ರೇಬಿಸ್ ರೋಗಕ್ಕೆ ಪ್ರತಿವರ್ಷ ವಿಶ್ವದಲ್ಲಿ ಐವತ್ತೊಂಬತ್ತು ಸಾವಿರಕ್ಕೂ ಅಧಿಕ ಮಂದಿ ಬಲಿಯಾಗುತ್ತಿರುವುದು ಆಘಾತಕಾರಿ. ಇದರಲ್ಲಿ ಶೇ 95ರಷ್ಟು ಪ್ರಕರಣಗಳು ವರದಿಯಾಗುತ್ತಿರುವುದು ಏಷ್ಯಾ, ಆಫ್ರಿಕಾದ ರಾಷ್ಟ್ರಗಳಲ್ಲಿ. ಭಾರತದಲ್ಲಿ ಸಾವಿನ ಸಂಖ್ಯೆ ವರ್ಷಕ್ಕೆ ಇಪ್ಪತ್ತು ಸಾವಿರಕ್ಕೂ ಹೆಚ್ಚು. ಇಲ್ಲಿ ಪ್ರತಿವರ್ಷ ನಾಯಿ ಕಡಿತದ ಒಂದೂ ಮುಕ್ಕಾಲು ಕೋಟಿ ಪ್ರಕರಣಗಳು ವರದಿಯಾಗುತ್ತವೆ. ದಾಖಲಾಗದ ಪ್ರಕರಣಗಳ ಸಂಖ್ಯೆಯೂ ದೊಡ್ಡದಿದೆ!

ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವ ಈ ಹೊತ್ತಿನಲ್ಲಿ ಮತ್ತೊಂದು ‘ವಿಶ್ವ ರೇಬಿಸ್ ದಿನ’ ಬಂದಿದೆ. ಸೆ. 28, ಶ್ರೇಷ್ಠ ಸೂಕ್ಷ್ಮಾಣು ಜೀವಿತಜ್ಞ ಲೂಯಿ ಪ್ಯಾಶ್ಚರ್ ನಿಧನರಾದ ದಿನ. ಹುಚ್ಚುನಾಯಿ ರೋಗಕ್ಕೆ ಲಸಿಕೆ ಕಂಡುಹಿಡಿದ ಈ ವಿಜ್ಞಾನಿಯ ಗೌರವಾರ್ಥ ಪ್ರತಿವರ್ಷ ಈ ದಿನವನ್ನು ವಿಶ್ವ ರೇಬಿಸ್ ದಿನವನ್ನಾಗಿ ಆಚರಿಸಲಾಗುತ್ತದೆ. ‘ರೇಬಿಸ್: ಒಂದು ಸ್ವಾಸ್ಥ್ಯ, ಶೂನ್ಯ ಸಾವು’ ಎಂಬುದು ಈ ವರ್ಷದ ಘೋಷವಾಕ್ಯ. ಕೋವಿಡ್ ತಂದಿತ್ತ ಆಘಾತಗಳ ನಂತರ ಒನ್ ಹೆಲ್ತ್ (ಒಂದು ಸ್ವಾಸ್ಥ್ಯ) ಪರಿಕಲ್ಪನೆಯ ಮಹತ್ವ ಅರಿವಾಗಿದೆ.

ಮಾನವ, ಪ್ರಾಣಿ ಮತ್ತು ಪರಿಸರದ ನಡುವೆ ಬೇರ್ಪಡಿಸಲಾಗದ ಸಂಬಂಧವಿದೆ, ಪರಸ್ಪರ ಅವಲಂಬನೆ ಇದೆ. ಒಂದರ ಅನಾರೋಗ್ಯ ಮತ್ತೊಂದನ್ನು ತೀವ್ರವಾಗಿ ಬಾಧಿಸಬಲ್ಲದು. ಈ ಮೂರೂ ಆರೋಗ್ಯಗಳನ್ನು ಒಂದಾಗಿ ಪರಿಗಣಿಸಿ ಪರಿಹಾರ ಹುಡುಕುವ ಏಕಸ್ವಾಸ್ಥ್ಯದ ಕಾರ್ಯಾಚರಣೆ ಇಂದಿನ ಅನಿವಾರ್ಯ ಕೂಡ. ವಿಶ್ವ ಆರೋಗ್ಯ ಸಂಸ್ಥೆಯು ನಾಯಿಗಳಿಂದ ಹರಡುವ ರೇಬಿಸ್ ರೋಗವನ್ನು 2030ರೊಳಗೆ ಸಂಪೂರ್ಣವಾಗಿ ನಿರ್ಮೂಲ ಮಾಡುವ ಗುರಿ ನಿಗದಿಪಡಿಸಿದೆ.

ರೇಬಿಸ್ ಸಾವುಗಳನ್ನು ಶೂನ್ಯಕ್ಕಿಳಿಸುವ ದಿಸೆಯಲ್ಲಿ ವೈದ್ಯಕೀಯ, ಪಶುವೈದ್ಯಕೀಯ ಮತ್ತು ಪರಿಸರ ಪರಿಣತರು, ವಿಜ್ಞಾನಿಗಳು, ಕ್ಷೇತ್ರ ಮಟ್ಟದ ಕಾರ್ಯಕರ್ತರು, ಸಾರ್ವಜನಿಕರು ಒಗ್ಗೂಡಿ ಪರಸ್ಪರ ಸಹಯೋಗ, ಸಮನ್ವಯದಿಂದ ಕಾರ್ಯತತ್ಪರರಾಗಬೇಕಿದೆ. ಭಾರತ ಸರ್ಕಾರವು ಈ ವಿಷಯದಲ್ಲಿ ಕಾರ್ಯಯೋಜನೆ ರೂಪಿಸಿದೆ. ಕರ್ನಾಟಕ ಸರ್ಕಾರವು ಸೆ. 15ರಿಂದ 30ರವರೆಗೆ ಸಾಕುನಾಯಿಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ಹಾಕುವ ಬೃಹತ್ ಆಂದೋಲನ ನಡೆಸುತ್ತಿದೆ. ಈ ಅವಧಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾಯಿಲೆ ಕುರಿತು ಜಾಗೃತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

ನಾಯಿ ಕಡಿತದ ಗಾಯಗಳ ಸಮರ್ಪಕ ನಿರ್ವಹಣೆ ಸಂಭವನೀಯ ಅಪಾಯವನ್ನು ಕನಿಷ್ಠ ಮಟ್ಟಕ್ಕಿಳಿಸು
ವಲ್ಲಿ ಪ್ರಮುಖ ಅಂಶ. ಕಡಿದ ಜಾಗವನ್ನು ಸಾಧ್ಯವಾದಷ್ಟು ಬೇಗ ಸ್ವಚ್ಛ ನೀರಿನಲ್ಲಿ ಸಾಬೂನು ಬಳಸಿ ಚೆನ್ನಾಗಿ ತಿಕ್ಕಿ ತೊಳೆಯಬೇಕು. ಹದಿನೈದು ನಿಮಿಷಗಳ ಕಾಲ ಹೀಗೆ ಮಾಡುವುದು ಅಪೇಕ್ಷಣೀಯ. ನಂತರದಲ್ಲಿ ಅಯೋಡಿನ್, ಸ್ಪಿರಿಟ್‍ನಂತಹ ನಂಜು ನಿವಾರಕ ದ್ರಾವಣ ಅಥವಾ ಮುಲಾಮು ಹಚ್ಚಿಕೊಳ್ಳಬೇಕು. ವಿಳಂಬ ಮಾಡದೆ ವೈದ್ಯಕೀಯ ನೆರವು ಪಡೆಯುವುದು ಅಗತ್ಯ. ಲಸಿಕೆಯ ಜೊತೆಗೆ ಗಾಯ ತೀವ್ರವಾಗಿದ್ದಲ್ಲಿ ಸುತ್ತಲೂ ರೇಬಿಸ್ ಇಮ್ಯುನೊಗ್ಲೋಬುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವುದು ಮುಖ್ಯ.

ಅರಿವಿನ ಕೊರತೆಯಿಂದ ಹಲವು ಮೌಢ್ಯ ಪದ್ಧತಿಗಳು ಈಗಲೂ ಆಚರಣೆಯಲ್ಲಿವೆ. ಮದ್ದಾಗಿ ನೀಲಿಪುಡಿಯ ಸೇವನೆ, ಗಾಯಕ್ಕೆ ಅರಿಸಿನ, ಮೆಣಸಿನ ಪುಡಿ, ಸುಣ್ಣ, ಸಗಣಿ, ಗಿಡಮೂಲಿಕೆಗಳ ಪೇಸ್ಟ್ ಬಳಸುವುದು, ಲಸಿಕೆಯ ಬದಲು ನಾಟಿ ಔಷಧಕ್ಕೆ ಮೊರೆಹೋಗುವುದು ಸಾವಿಗೆ ಆಹ್ವಾನ ನೀಡಿದಂತೆ!

ಶ್ವಾನಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸುವುದು ಮಾಲೀಕರ ಗುರುತರ ಜವಾಬ್ದಾರಿ. ಬೀದಿ ನಾಯಿಗಳ ನಿಯಂತ್ರಣವೇ ರೇಬಿಸ್ ನಿರ್ಮೂಲನೆಯಲ್ಲಿ ಪ್ರಮುಖ ಸವಾಲು. ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯ ಮೂಲಕ ಸಂಖ್ಯೆಯನ್ನು ನಿಯಂತ್ರಿಸುವುದರ ಜೊತೆಗೆ ಸಾಮೂಹಿಕ ಲಸಿಕಾ ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಮಾತ್ರ ಸಾವನ್ನು ಶೂನ್ಯಕ್ಕಿಳಿಸುವ ಯೋಜನೆ ಯಶಸ್ವಿಯಾಗಲು ಸಾಧ್ಯ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಸರ್ಕಾರಿ ಪಶು ಆಸ್ಪತ್ರೆ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT