ಮಂಗಳವಾರ, ಅಕ್ಟೋಬರ್ 22, 2019
23 °C
ರಿಸರ್ವ್ ಬ್ಯಾಂಕಿನ ಬಡ್ಡಿ ದರ ಕಡಿತದ ನೀತಿ ಮುಂದುವರಿದಿರುವಾಗಲೇ ಮಂದಗತಿಯು ಆರ್ಥಿಕ ಹಿಂಜರಿತವಾಗಿ ಬದಲಾಗುವ ಭೀತಿ ವ್ಯಾಪಕವಾಗಿದೆ

ಆರ್ಥಿಕ ಮಂದಗತಿ: ಹಿಂಜರಿತದ ಭೀತಿ?

Published:
Updated:
Prajavani

ರೆಪೊ ದರವನ್ನು ರಿಸರ್ವ್ ಬ್ಯಾಂಕು ಇತ್ತೀಚೆಗೆ ಶೇ 0.35ರಷ್ಟು ಕಡಿತಗೊಳಿಸಿತು. ಅದು, ಈ ವರ್ಷದ ಫೆಬ್ರುವರಿಯಿಂದ ಈಚೆಗೆ ಸತತ ನಾಲ್ಕನೇ ಬಾರಿಗೆ ಈ ದರವನ್ನು ಕಡಿತಗೊಳಿಸಿದೆ. ಅಲ್ಲದೆ, 9 ವರ್ಷಗಳ ಹಿಂದಿನ ಮಟ್ಟವಾದ ಶೇ 5.40ಕ್ಕೆ ನಿಗದಿಗೊಳಿಸಿದೆ. ಭಾರತದ ಆರ್ಥಿಕತೆ ಮೇಲೆ 2007-08ರಲ್ಲಾದ ಜಾಗತಿಕ ಮಹಾ ಆರ್ಥಿಕ ಹಿಂಜರಿತದ ಪ್ರಭಾವದ ತೀವ್ರತೆಗೆ ಶೇ 5.40ರ ರೆಪೊ ದರ ಸಾಕ್ಷಿಯಾಗಿತ್ತು. ಈಗ ಇದೇ ದರ, ದೇಶದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಹುಟ್ಟಿಕೊಂಡು, ನಂತರ ದಿನಕಳೆದಂತೆ ಸ್ಪಷ್ಟ ರೂಪ ತಳೆದ ಆರ್ಥಿಕ ಮಂದಗತಿಯ ತೀವ್ರತೆಗೆ ಸಾಕ್ಷಿಯಾಗಿದೆ.

ಹಿಂದಿನ ಮೂರು ಬಡ್ಡಿ ದರ ಕಡಿತಗಳಿಂದ ಹಿತಾನುಭವ ಆಗಿಲ್ಲವಾದರೂ ನಾಲ್ಕನೇ ಕಡಿತ ಅನುಕೂಲಕರವಾಗಲಿದೆ ಎಂಬ ಭರವಸೆಯನ್ನು ರಿಸರ್ವ್ ಬ್ಯಾಂಕಿನ ಗವರ್ನರ್ ಶಕ್ತಿಕಾಂತ್ ದಾಸ್ ವ್ಯಕ್ತಪಡಿಸಿದ್ದಾರೆ. ಸ್ವಂತ ಗೃಹ ನಿರ್ಮಾಣದಲ್ಲಿ ಆಸಕ್ತಿಯುಳ್ಳವರಿಗೆ, ವಾಹನ ಖರೀದಿಸುವವರಿಗೆ, ವೈಯಕ್ತಿಕ ಸಾಲ ಪಡೆಯುವವರಿಗೆ ಅನುಕೂಲಕರವಾಗಲಿದೆ ಎಂಬ ಆಶಾವಾದವನ್ನು ಪ್ರದರ್ಶಿಸಿದ್ದಾರೆ. ಆರ್ಥಿಕ ಮಂದಗತಿಗೆ ಈಗಿರುವ ರೆಪೊ ದರ ಪರಿಹಾರವಾಗುವುದು ನಿಶ್ಚಿತವಲ್ಲ.

ವಾಜಪೇಯಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾ, ಆರ್ಥಿಕತೆ ಮಂದಗತಿಯತ್ತ ಸಾಗುತ್ತಿದ್ದುದನ್ನು 2017ರ ಸೆಪ್ಟೆಂಬರ್‌ನಲ್ಲಿ ಬರೆದ ಲೇಖನದಲ್ಲಿ ತಿಳಿಸಿದ್ದರು. ಖಾಸಗಿ ಹೂಡಿಕೆಯಲ್ಲಿ ಇಳಿಕೆ, ತಯಾರಿಕಾ ರಂಗದ ಹಿನ್ನಡೆ, ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ನಿರ್ಮಾಣ ವಲಯವನ್ನು ಆವರಿಸಿದ ಸ್ಥಗಿತತೆ, ಕುಸಿಯುತ್ತಿರುವ ರಫ್ತು ವ್ಯಾಪಾರ, ವಿಪತ್ತಿಗೆ ಒಳಗಾದ ಕೃಷಿ, ವೇಗದ ಮಟ್ಟ ಕಾಯ್ದುಕೊಳ್ಳಲಾಗದ ಸೇವಾ ವಲಯಗಳು ನೋಟು ರದ್ದತಿಯಿಂದಾದ ಹೊಡೆತಗಳ ಸೂಚಿಗಳೆಂದು ಸರ್ಕಾರವನ್ನು ಎಚ್ಚರಿಸಿದ್ದೆ ಎಂದು ಸಿನ್ಹಾ, ಟಿ.ವಿ ಚಾನೆಲ್ಲೊಂದಕ್ಕೆ ಇತ್ತೀಚೆಗೆ ನೀಡಿದ ಕಟುವಾದ ದೀರ್ಘ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಾವು ಆಗ ಹೇಳಿದ್ದು ಈಗ ಅಕ್ಷರಶಃ ಸತ್ಯವಾಗಿದೆ ಎಂದು ಗುಡುಗಿದ್ದಾರೆ.

ಸಿನ್ಹಾ ಅವರ ಹೇಳಿಕೆಯಲ್ಲಿ ಪೂರ್ವಗ್ರಹ ಇದೆಯೆಂಬ ಭಾವನೆ ಬರಬಹುದು. ಆದರೂ ಮಂದಗತಿ ಇಷ್ಟೊಂದು ದೀರ್ಘಕಾಲಿಕವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಾಗಿತ್ತು. 2019-20ರ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ದರ ಶೇ 7ಕ್ಕಿಂತ ಕಡಿಮೆಯಾಗುವ ಸಾಧ್ಯತೆಯನ್ನು ರಿಸರ್ವ್‌ ಬ್ಯಾಂಕು ಈಗ ವರದಿ ಮಾಡಿ, ಹಿಂದಿನ ಅಧಿಕ ಅಂದಾಜಿಗೆ ವಿದಾಯ ಹೇಳಿದೆ. ವಿದೇಶಿ ನೇರ ಹೂಡಿಕೆದಾರರು ಭಾರತದಲ್ಲಿರುವ ಉದ್ಯಮಗಳಿಂದ ಬಂಡವಾಳ ವಾಪಸ್ ಪಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ವ್ಯವಹಾರಗಳ ಲಾಭದಾಯಕತೆ ಗಣನೀಯವಾಗಿ ಕುಗ್ಗಿ ಹೋಗಿರುವುದರಿಂದ ಬ್ಯಾಂಕ್ ಸಾಲ ದುಬಾರಿಯೆಂದೇ ತಯಾರಿಕಾ ರಂಗದ ಅನೇಕ ಕಂಪನಿಗಳು ದೂರುವಂತಾಗಿದೆ. ರಿಸರ್ವ್ ಬ್ಯಾಂಕಿನ ಬಡ್ಡಿ ದರ ಕಡಿತದ ನೀತಿ ಮುಂದುವರೆದಿರುವಾಗಲೇ ಮಂದಗತಿಯು ಆರ್ಥಿಕ ಹಿಂಜರಿತವಾಗಿ ಬದಲಾಗುವ ಭೀತಿ ವ್ಯಾಪಕವಾಗಿದೆ. ಸರ್ಕಾರ ತಡಮಾಡದೆ ವಿತ್ತೀಯ ಕ್ರಮಗಳನ್ನು (ತೆರಿಗೆ ಕಡಿತ, ರಿಯಾಯಿತಿಗಳು, ವಿನಾಯಿತಿಗಳು ಇತ್ಯಾದಿ) ಘೋಷಿಸದಿದ್ದರೆ ಏಷ್ಯಾದ ಇತರ ರಾಷ್ಟ್ರಗಳಿಗೂ ಬಿಸಿ ತಟ್ಟಲಿದೆ.

ದೇಶದಾದ್ಯಂತ ವಾಹನ ಮಾರಾಟ ಕುಸಿತ ಕಂಡಿದ್ದರಿಂದ, ಕಳೆದ ಏಪ್ರಿಲ್‌ನಿಂದೀಚೆಗೆ 3.5 ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ. ಉಕ್ಕು ತಯಾರಿಕೆಯ ಉದ್ಯಮಗಳಿಗೂ ಹೊಡೆತ ಬಿತ್ತು. ಹೀಗೆ ಒಂದು ವಲಯದಿಂದ ಇನ್ನೊಂದು ವಲಯಕ್ಕೆ ಮಂದಗತಿಯ ಪರಿಣಾಮ ಪಸರಿಸಿದರೆ ಆರ್ಥಿಕ ಹಿಂಜರಿತದ ಭೀತಿ ಜಾಸ್ತಿಯಾಗುತ್ತದೆ. ಸಮಸ್ಯೆಗಳು ಹೊಸ ಸಮಸ್ಯೆಗಳನ್ನು ಹುಟ್ಟಿಸುತ್ತಾ ಹೋದಂತೆ, ಸರ್ಕಾರಿ ವಲಯ ಏನೇನೋ ಕಾರಣಗಳನ್ನು ಕೊಡುತ್ತಾ ಹೋದರೆ ಆರ್‌ಬಿಐನ ಈಗಿನ ದರ ಕಡಿತ ಯಾವ ಧನಾತ್ಮಕ ಪರಿಣಾಮವನ್ನೂ ಸೃಜಿಸದಿರಬಹುದು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಪ್ರಥಮ ಬಜೆಟ್‌ನಲ್ಲಿ, ಆರ್ಥಿಕ ಚೇತರಿಕೆಗೆ ಬೇಕಾದ ಕ್ರಮಗಳನ್ನು ಘೋಷಿಸಿದ್ದರೆ ಎಷ್ಟೋ ಉಪಕಾರವಾಗುತ್ತಿತ್ತು. ತಡವಾಗಿ ಎಚ್ಚೆತ್ತುಕೊಂಡು ಅವರು ಉದ್ಯಮಪತಿಗಳು, ವಾಣಿಜ್ಯಪತಿಗಳು ಮತ್ತು ಬ್ಯಾಂಕಿಂಗ್ ವಲಯದ ಪ್ರಮುಖರ ಸಲಹೆ ಪಡೆದಿದ್ದಾರೆ. ಸರ್ಕಾರ ಮೂಲ ಸೌಕರ್ಯಗಳ ಸೃಷ್ಟಿಗೆ ಧಾರಾಳವಾಗಿ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸಿ, ಮಾರುಕಟ್ಟೆಯಲ್ಲಿ ಸರಕು-ಸೇವೆಗಳಿಗಿರುವ ಬೇಡಿಕೆ ಹಿಗ್ಗಿಸಬೇಕಾದ ತುರ್ತು ತಲೆದೋರಿದೆ.

ನಾಲ್ಕನೇ ಬಾರಿ ರೆಪೊ ದರ ಇಳಿಕೆಯನ್ನು ಘೋಷಿಸುವಾಗ ರಿಸರ್ವ್ ಬ್ಯಾಂಕಿನ ಅಸಹಾಯಕತೆಯನ್ನು ದಾಸ್‌ ತೋಡಿಕೊಂಡರು. ಕಳೆದ ಆರು ತಿಂಗಳ ಅವಧಿಯಲ್ಲಿ ರೆಪೊ ದರವನ್ನು ಶೇ 0.75ರಷ್ಟು ಕಡಿಮೆ ಮಾಡಿದರೂ ವಾಣಿಜ್ಯ ಬ್ಯಾಂಕುಗಳು ಗ್ರಾಹಕರಿಗೆ ಇಳಿಸಿರುವ ಪ್ರಮಾಣ ಕೇವಲ ಶೇ 0.29ರಷ್ಟು! ಕೆಲವು ಬ್ಯಾಂಕುಗಳು ಬಡ್ಡಿ ದರ ಇಳಿಸಲೇ ಇಲ್ಲ. ರಿಸರ್ವ್ ಬ್ಯಾಂಕು ರೆಪೊ ದರ ಇಳಿಸಿದ ಬೆನ್ನಲ್ಲೇ ಸರ್ಕಾರ ಚೇತರಿಕೆಗೆ ಬೇಕಾದ ವಿತ್ತೀಯ ಕ್ರಮಗಳ ಭರವಸೆ ನೀಡಿದ ನಂತರವೇ ಕೆಲವು ಸರ್ಕಾರಿ ಬ್ಯಾಂಕುಗಳು ಸ್ವಲ್ಪ ಸ್ವಲ್ಪ ಬಡ್ಡಿ ದರ ಇಳಿಸಿವೆ. ಅಂದರೆ ಸರ್ಕಾರದ ಹಿಡಿತದಲ್ಲಿರುವ ರಿಸರ್ವ್ ಬ್ಯಾಂಕು, ಆರ್ಥಿಕ ಮಂದಗತಿಯ ಸಮಯದಲ್ಲೂ ಹಿಂಬಾಲಕರಿಗಾಗಿ ಪರದಾಡುತ್ತಿರುವ ಮುಂದಾಳು!

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)