ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಕ್ರಿಯೆ: ನೋವಿನ ಅಭಿವ್ಯಕ್ತಿ ಸಹಜೀವಿಗಳಿಗೆ ಮುಟ್ಟಲಿ

Last Updated 22 ಜನವರಿ 2022, 19:30 IST
ಅಕ್ಷರ ಗಾತ್ರ

ಭಾನುವಾರ ಪುರವಣಿಯ ಜ.16ರ ಸಂಚಿಕೆಯಲ್ಲಿ ಪ್ರಕಟವಾದ ವಸುಧೇಂದ್ರ ಅವರ ‘ನೋವದೆಂತಹುದೊ’ ಲೇಖನ ಓದಿದೆ.

ತಾತ್ವಿಕವಾಗಿ ಮತ್ತು ಅಮೂರ್ತವಾಗಿ ಅಸಂಖ್ಯಾತ ಬಗೆಯ ನೋವುಗಳಿವೆ ಎಂಬುದು ನಿಜ. ಆದರೆ, ನಿರ್ದಿಷ್ಟವಾಗಿ ಮತ್ತು ವ್ಯಕ್ತಿಗತವಾಗಿ ಪ್ರತಿಯೊಂದು ಬಗೆಯ ನೋವೂ ದೈಹಿಕ ಅಥವಾ/ಮತ್ತು ಮಾನಸಿಕವಾಗಿದ್ದು. ಭೌತಿಕ ಮತ್ತು ವಾಸ್ತವಿಕ ನೆಲೆಗಳಲ್ಲಿ, ಅದರ ಅಭಿವ್ಯಕ್ತಿಯನ್ನು ಮತ್ತು ಸಾಧ್ಯವಿದ್ದರೆ ಪರಿಹಾರವನ್ನು, ಸಹಾನುಕಂಪದೊಂದಿಗೆ ಕೇಳಿಸಿಕೊಳ್ಳಬಲ್ಲ ಕೇಳುಗರನ್ನು ಬೇಡುತ್ತದೆ. ಕೆಲವು ಬಗೆಯ ನೋವುಗಳಿಗೆ ಕೇಳುಗರು ಸಿಗುವಷ್ಟು ಸುಲಭವಾಗಿ ಉಳಿದ ಬಗೆಯ ನೋವುಗಳಿಗೆ ಸಿಗುವುದು ಕಷ್ಟ ಎಂಬ ನೋವೂ ಇಂಥ ನಿರ್ದಿಷ್ಟ ನೋವುಗಳ ಪಟ್ಟಿಯಲ್ಲಿ ಸೇರುತ್ತದೆ. ಲೇಖಕರಿಗೆ ಇಂಥ ನೋವು ಇರಬಹುದೆಂದು ಲೇಖನ ಓದುವಾಗ ಅನ್ನಿಸುತ್ತದೆ.

ಮನುಷ್ಯೇತರ ಜೀವಿಗಳ ನೋವುಗಳು ಬಹುಮಟ್ಟಿಗೆ ಹಸಿವು, ಅಸ್ತಿತ್ವ ಮತ್ತು ಸಂತಾನೋತ್ಪತ್ತಿಯ ನೈಸರ್ಗಿಕ ಒತ್ತಡಗಳಲ್ಲಿ ಕೇಂದ್ರೀಕೃತವಾಗಿ ಅಂಥ ಸಂದರ್ಭಗಳಲ್ಲಿ ಮಾತ್ರ ವ್ಯಕ್ತಗೊಳ್ಳುತ್ತವೆ ಎಂಬುದು ನನ್ನ ತಿಳಿವಳಿಕೆ. ಜೊತೆಗೆ ಅವು ಮನುಷ್ಯರಂತೆ ಪ್ರಜ್ಞಾಪೂರ್ವಕವಾಗಿ ಈ ನೋವುಗಳನ್ನು ಅನುಭವಿಸದಿರಬಹುದು.

ಮನುಷ್ಯರು ಹುಟ್ಟುವಾಗಲೇ ಒಂದು ಸಾಮಾಜಿಕ ಆವರಣದೊಳಗೆ ಬರುತ್ತಾರೆ. ಸಮಾಜದ ಕನಿಷ್ಠ ರೂಪವಾದ, ಅದಾಗಲೇ ಅಸ್ತಿತ್ವದಲ್ಲಿರುವ ಕುಟುಂಬದ ಪರಿಸರದಲ್ಲಿ ಸಾಮಾಜಿಕ ಮನುಷ್ಯರಾಗಿ ಬೆಳೆಯುತ್ತಾರೆ. ಅವರ ಈ ಸಾಮಾಜಿಕ ಅಸ್ತಿತ್ವವು, ಅವರ ಶ್ರಮಸಂಬಂಧಗಳು ಮತ್ತು ಜೀವನಾಧಾರಗಳನ್ನು ನಿಯಂತ್ರಿಸುವ ಆರ್ಥಿಕ ಮತ್ತು ರಾಜಕೀಯ ಶಕ್ತಿಗಳಿಂದಾಗಿ ಸಂಕೀರ್ಣ, ಕ್ಲಿಷ್ಟ, ಮತ್ತು ನೈತಿಕ ಸ್ವರೂಪವನ್ನು ಪಡೆದುಕೊಂಡಿರುತ್ತವೆ. ಹೀಗೆ ಸಾಮಾಜಿಕ ನೆಲೆಯಿಂದ ಹುಟ್ಟುವ ಸಾಮಾಜಿಕ ವ್ಯಕ್ತಿಗಳ ನೋವುಗಳನ್ನು ‘ಸ್ವತಂತ್ರ ವ್ಯಕ್ತಿ’ ಎಂಬಂಥ ‘ವ್ಯಕ್ತಿಗತ’ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಮತ್ತು ಬಗೆಹರಿಸಿಕೊಳ್ಳಲು ಯತ್ನಿಸಿದಾಗ ಅವು ಅಸಹಾಯಕತೆ, ಅನಾಥತೆ, ಸ್ವಾನುಕಂಪಭರಿತ ಮತ್ತು ತಾತ್ವೀಕರಿಸಿದ ನೋವುಗಳಾಗಿ ಅಭಿವ್ಯಕ್ತಗೊಳ್ಳುತ್ತವೆ. ಲೇಖನದಲ್ಲಿ ಮುನ್ನೆಲೆಗೆ ತರುವ ದಲಿತ ಮತ್ತು ಭಿನ್ನಲೈಂಗಿಕತೆಗೆ ಸಂಬಂಧಿಸಿದ ನೋವುಗಳ ಉದಾಹರಣೆಯಲ್ಲಿ ಈ ಅಂಶ ಸ್ಪಷ್ಟವಾಗಿ ಗೋಚರಿಸುತ್ತದೆ.

ಜಾತಿಮೂಲದ ಅವಮಾನ ಮತ್ತು ಮಾನವ ಘನತೆಯನ್ನು ಘಾಸಿಮಾಡುವ ನೋವುಗಳನ್ನು, ಯಾರು ತಮ್ಮನ್ನು ‘ಸಾಮಾಜಿಕ ವ್ಯಕ್ತಿಯಾಗಿ’ ನೋಡದೆ, ‘ಅಟಾನಮಸ್ ವ್ಯಕ್ತಿ’ಯಾಗಿ ಗ್ರಹಿಸಿ ಅನುಭವಿಸುತ್ತಾರೋ ಅವರಿಗೆ ಈ ನೋವುಗಳ ಬೇರುಗಳು ಮತ್ತು ಪರಿಹಾರಗಳು ಶ್ರಮಸಂಬಂಧಗಳಲ್ಲಿನ ವಿಷಮತೆ ಮತ್ತು ಅಸಮಾನತೆಗಳಲ್ಲಿ, ಅವುಗಳ ನಿವಾರಣೆಯಲ್ಲಿ ಕಾಣಿಸದೆ (ಸಾಮಾಜಿಕ ವ್ಯಕ್ತಿ ಅಲ್ಲದ ಎಂಬ ಅರ್ಥದಲ್ಲಿ) ಅಮೂರ್ತ ವ್ಯಕ್ತಿಗಳ ಪ್ರಜ್ಞೆ, ಧೋರಣೆ, ನೈತಿಕತೆ ಮತ್ತು ಸಂವೇದನೆಗಳ ಸಮಸ್ಯೆಗಳಾಗಿ ಕಾಣಿಸುತ್ತವೆ. ಭಿನ್ನಲೈಂಗಿಕತೆಯನ್ನು ನೈತಿಕ ತೀರ್ಮಾನವಿಲ್ಲದ ಜೈವಿಕ ಅಂಶವನ್ನಾಗಿ ನೋಡಿದರೆ, ಫಲವಂತಿಕೆಯ (ಪ್ರೊಡಕ್ಟಿವ್) ಲೈಂಗಿಕ ಕೂಟ ಮತ್ತು (ಅನ್‍ಪ್ರೊಡಕ್ಟಿವ್) ಫಲವಂತಿಕೆಯಲ್ಲದ ಲೈಂಗಿಕ ಕೂಟಗಳ ಬಗ್ಗೆ ಜನಸಾಮಾನ್ಯರಿಗಿರುವ ಸಾಮಾಜಿಕ ಆಯ್ಕೆ ಹಾಗೂ ನೈತಿಕತೆಯ ಚರಿತ್ರೆ ಅರ್ಥವಾಗುತ್ತದೆ.

ಸಾಮಾಜಿಕ ಮನುಷ್ಯರಾಗಿ ಮಾನವರ ಅಸ್ತಿತ್ವವು ಶ್ರಮಶಕ್ತಿಯ ಬಳಕೆಯಿಂದ, ಜೀವನಾಧಾರಗಳ ಪ್ರಜ್ಞಾಪೂರ್ವಕ ಮತ್ತು ನಿರಂತರ ಉತ್ಪತ್ತಿ- ವಿತರಣೆ, ವರ್ಗ ಮನುಷ್ಯರ ನಡುವಿನ ಶ್ರಮಸಂಬಂಧ, ಹಾಗೂ ಹೊಸ ಶ್ರಮಶಕ್ತಿಯ ಉತ್ಪಾದನೆಗಳ ಮೇಲೆ (ಅಂದರೆ, ಸಂತಾನೋತ್ಪತ್ತಿಯ ಮೇಲೆ) ನಿಂತಿದೆ. ಫಲವಂತಿಕೆಯ ಹೆಣ್ಣು-ಗಂಡುಗಳ ಲೈಂಗಿಕ ಕೂಟದಲ್ಲಿ ಸಂತಾನೋತ್ಪತ್ತಿಯ ಸಾಧ್ಯತೆ (ಹೊಸ ಶ್ರಮಶಕ್ತಿಯ ಉತ್ಪಾದನೆ) ಇರುವುದರಿಂದ ಅಂಥ ಸಂಬಂಧವು ಸಾಮಾಜಿಕವಾಗಿ ಸಮ್ಮತವಾದ ಲೈಂಗಿಕತೆಯಾಗಿ ಉತ್ತೇಜಿಸಲ್ಪಡುತ್ತದೆ. ಆ ಕಾರಣಕ್ಕಾಗಿ ನೈತಿಕವಾಗಿ ‘ಸರಿಯಾದದ್ದು’ ಮತ್ತು ‘ಸ್ವಾಭಾವಿಕ’ವಾದದ್ದು ಎಂಬ (ತಪ್ಪು) ತೀರ್ಮಾನಗಳಿಗೆ ದಾರಿಮಾಡಿಕೊಡುತ್ತದೆ. ‘ಮಕ್ಕಳಿರಲವ್ವ ಮನೆತುಂಬಾ’ ಎಂಬ ಜಾನಪದೀಯ ಹರಕೆಯಲ್ಲಿ ಪ್ರಧಾನವಾಗಿರುವ ಅಂಶ ಇದು. ಭಿನ್ನ ಲೈಂಗಿಕ ಸಂಬಂಧಗಳ ಬಗ್ಗೆ ಸಾಮಾಜಿಕವಾಗಿ ಇರುವ ಸಾಂಪ್ರದಾಯಿಕ ಅಸಮ್ಮತಿಯೂ ಮೂಲತಃ ಫಲವಂತಿಕೆಯ ಮೂಲದ್ದಾಗಿದ್ದು, ಫಲವಂತಿಕೆಯ ಅಭಾವ ಅಥವಾ ಅಸಾಧ್ಯತೆಯಿಂದಾಗಿ ‘ಸರಿಯಲ್ಲದ್ದು’ ಎಂಬಂಥ ನೈತಿಕ ಧೋರಣೆಗೆ, ‘ಅಸ್ವಾಭಾವಿಕ’ ಮತ್ತು ‘ಅನೈಸರ್ಗಿಕ’ ಎಂಬ ತಪ್ಪು ತೀರ್ಮಾನಗಳಿಗೆ ಎಡೆಮಾಡಿಕೊಟ್ಟಿದೆ.

‘ಬಂಜೆ’, ‘ನಪುಂಸಕ’, ‘ಮಂಗಳ ಮುಖಿ’, ಸಲಿಂಗ ಕಾಮಿ’ ಮುಂತಾದ ಪದಗಳ ಹಿಂದಿರುವ ಹೆದರಿಕೆ (ಫೋಬಿಯಾ), ಅಂಥ ಜೈವಿಕ ಭಿನ್ನತೆಗಳ ಬಗ್ಗೆ ಇರುವ ಸಾಮಾಜಿಕ ಹೇವರಿಕೆ, ತಿರಸ್ಕಾರ, ಅಗೌರವಗಳು ಪ್ರಧಾನವಾಗಿ ಫಲವಂತಿಕೆಯ ಮೂಲದ್ದೇ. ಈ ನೇತ್ಯಾತ್ಮಕ ಧೋರಣೆಗಳು ಚರಿತ್ರೆಯಲ್ಲಿ, ಅದರಲ್ಲೂ ಫ್ಯೂಡಲ್, ಫ್ಯಾಸಿಸ್ಟ್, ಮೂಲಭೂತವಾದೀ, ಮತೀಯವಾದೀ ಮತ್ತು ಬಂಡವಾಳವಾದೀ ಸಮಾಜಗಳ ಎಲ್ಲ ಜನಾಂಗ-ಸಂಸ್ಕೃತಿಗಳಲ್ಲೂ ಕಾಣಸಿಗುತ್ತವೆ.

ಭಿನ್ನಲೈಂಗಿಕತೆಯ ವ್ಯಕ್ತಿಗಳ ನೋವುಗಳು, ಆಪ್ತ ಸಮಾಲೋಚಕರು, ಅಂತರಂಗದ ಸಖರು ಅಥವಾ ಸಹಸ್ಥಿತಿ-ಧೋರಣೆಯ ಸದಸ್ಯರ ಗುಂಪುಗಳ (ಉಪ ಸಮಾಜಗಳ) ಜೊತೆಗಿನ ಒಡನಾಟಗಳಲ್ಲಿ, ಪರಸ್ಪರರ ಅಭಿವ್ಯಕ್ತಿಗಳಲ್ಲಿ, ಬೇರೆ ಬೇರೆ ಸ್ತರಗಳಲ್ಲಿ ತಾತ್ಕಾಲಿಕವಾಗಿಯಾದರೂ ಶಮನಗೊಳ್ಳುವುದು ಸಾಧ್ಯ. ಆದ್ದರಿಂದ ಅವು ನಿಷ್ಪ್ರಯೋಜಕವಲ್ಲ. ಆದರೆ ಅದಷ್ಟೇ ಸಾಕಾಗುವುದಿಲ್ಲ. ಜೊತೆಗೆ, ಸಮಾಜದ ಉಳಿದ ವ್ಯಕ್ತಿಗಳಂತೆಯೇ, ಭಿನ್ನಲೈಂಗಿಕತೆಯ ಧೋರಣೆ-ಪ್ರವೃತ್ತಿ-ಆಯ್ಕೆಗಳ (ಓರಿಯಂಟೇಶನ್ನಿನ) ವ್ಯಕ್ತಿಗಳೂ ತಮ್ಮನ್ನು ಸ್ವತಂತ್ರ, ವಿಶಿಷ್ಟ-ಸ್ವಯಂಭೂ ವ್ಯಕ್ತಿಗಳೆಂದು ನೋಡದೆ, ದಲಿತರು, ಶೋಷಿತರು ಹೇಗೋ ಹಾಗೆ ತಾವೂ ಸಾಮಾಜಿಕ ವ್ಯಕ್ತಿಗಳೆಂದು ಅರ್ಥಮಾಡಿಕೊಂಡಾಗ, ಅವರ ನೋವು-ನರಳಿಕೆಗಳು, ಶ್ರಮಸಂಬಂಧಗಳಲ್ಲಿ ಜೊತೆಗೂಡುವ ದಲಿತರು ಮತ್ತು ಇತರ ಶೋಷಿತರ ಬೇರೆ ಬೇರೆ ಬಗೆಯ ನೋವುಗಳ ಪರಿಹಾರದಲ್ಲೂ ಜೊತೆಯಾಗುವುದು ಸಾಧ್ಯವಾಗುತ್ತದೆ. ಹಾಗಿಲ್ಲದೆ ಇದ್ದಾಗ ಸ್ವಾನುಕಂಪ, ಅಸಹಾಯಕತೆ, ಅಪರಿಹಾರ್ಯತೆ ಮತ್ತು ನಿರರ್ಥಕತೆಗಳು ದಾಳಿಮಾಡುತ್ತವೆ.

ಲೇಖನ, ಸಾಹಿತ್ಯ (ಉದಾ. ನಿಮ್ಮದೇ ಬರಹಗಳು), ಸಿನೆಮಾ (ಉದಾ. ನೋವು-ಆತ್ಮೀಯತೆಗಳನ್ನು ಕೇಂದ್ರ ಕಾಳಜಿಯಾಗಿ ಇಟ್ಟುಕೊಂಡು ನಿರ್ಮಿಸಿರುವ ‘ಟಚ್ ಮಿ ನಾಟ್’) ಮೊದಲಾದ ಅಭಿವ್ಯಕ್ತಿ ಮಾಧ್ಯಮಗಳಲ್ಲಿ ಈ ಬಗೆಯ ನೋವುಗಳನ್ನು ದಾಖಲಿಸಿದಾಗ, ಅಭಿವ್ಯಕ್ತಿಸುವವರು ಅವುಗಳ ಮೊದಲ ಫಲಾನುಭವಿಗಳಾಗಿರುತ್ತಾರೆ. ಜೊತೆಗೆ, ಅವನ್ನು ಓದುವವರು-ನೋಡುವವರಲ್ಲೂ ಈ ಬಗ್ಗೆ ಒಂದಿಷ್ಟು ತಿಳಿವು ಮೂಡುತ್ತದೆ. ನಿಜವಾಗಿ ನೋಡಿದರೆ, ಇಂಥ ಅಭಿವ್ಯಕ್ತಿಗಳು ಹೆಚ್ಚು ಹೆಚ್ಚು ಅಗತ್ಯವಾಗಿರುವುದು ನೋವುಗಳನ್ನು ಅನುಭವಿಸುವವರಿಗಿಂತ ಅವನ್ನು ಅರ್ಥಮಾಡಿಕೊಳ್ಳಬೇಕಾದ ಸಹಜೀವಿಗಳಿಗೇ. ಇದು ನೋವುಗಳ ಸಂತ್ರಸ್ತರನ್ನು ಆಪ್ತ ಸಮಾಲೋಚನೆಗೆ ಕರೆದೊಯ್ಯುವವರ ವಿಷಯದಲ್ಲಿ ಮತ್ತೂ ನಿಜ. ಆದರೆ ಈ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಲು ಅವರ ವ್ಯಾವಹಾರಿಕ ಸಮಸ್ಯೆಗಳು ಅಡ್ಡಿಬರುತ್ತವೆ. ಹೀಗಾಗಿ ನೋವುಗಳ ಅಭಿವ್ಯಕ್ತಿಯ ಸೌಲಭ್ಯ-ಶಕ್ತಿ-ತಾಳ್ಮೆ ಮತ್ತು ವ್ಯವಧಾನ ಇರುವವರಾದರೂ ಇಂಥ ತಿಳಿವನ್ನು ಸಹಜೀವಿಗಳಿಗೆ ಮುಟ್ಟಿಸುವ ಕೆಲಸವನ್ನು ಮಾಡುತ್ತಾ ಹೋಗಬೇಕು. ಈ ದೃಷ್ಟಿಯಿಂದಲೂ ಈ ಬರಹ ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT