ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಓದು ತೊರೆವ ನಾಡು ಬೆಳೆದೀತು ಹೇಗೆ?

ನಾವು ಓದುವ ವರ್ಗವನ್ನು ಸೃಷ್ಟಿಸದೇ ಹೋದರೆ, ಓದುವಿಕೆ ತೋರಿಸುವ ಹಲವು ಜಗತ್ತುಗಳ ರುಚಿ ಮಕ್ಕಳಿಗೆ ಗೊತ್ತಾಗುವುದೇ ಇಲ್ಲ
Last Updated 4 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮೊನ್ನೆ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವೊಂದಕ್ಕೆ ಹೋಗಿದ್ದೆ. ವೇದಿಕೆ ಮೇಲಿನ ಭಾಷಣ ಕೇಳಿ ಕೇಳಿ ಆಕಳಿಕೆ ಬಂದಂತಾಗಿ‌, ಪುಸ್ತಕದ ಮಳಿಗೆಗಳ ಕಡೆ ಬಂದು ಒಂದಷ್ಟು ಪುಸ್ತಕ ಕೊಂಡೆ. ‘ಹೇಗಿದೆ ವ್ಯಾಪಾರ?’ ಪುಸ್ತಕದ ಮಳಿಗೆಯವನನ್ನು ಮಾತಿಗೆಳೆದೆ. ‘ಸರ್, ಬೆಳಗ್ಗೆಯಿಂದ ನಾಲ್ಕೇ ಬುಕ್ ಹೋಗಿರೋದು. ಐನೂರು ರೂಪಾಯಿ ಆಗಿದೆ. ಈ ವ್ಯಾಪಾರ ಯಾರಿಗೆ ಬೇಕು? ಟೀ ಅಂಗಡಿ ಹಾಕಿದ್ರೂ ಒಳ್ಳೆ ಲಾಭ ಆಗಿರೋದು’ ಅಂದ. ಅವನನ್ನು ಸಮಾಧಾನಪಡಿಸಲು ನನ್ನ ಬಳಿ ಮಾತುಗಳಿರಲಿಲ್ಲ.

ಮೂರು ವರ್ಷದ ಹಿಂದೆ ಕೋಲಾರದ ಸಮ್ಮೇಳನದಲ್ಲಿ ಪುಸ್ತಕ ವ್ಯಾಪಾರಿಯೊಬ್ಬ ತನ್ನ ಪುಸ್ತಕಗಳನ್ನು ರಸ್ತೆಗೆ ಎಸೆದುಬಿಟ್ಟ. ಎರಡು ದಿನಗಳಿಂದಲೂ ಒಂದೇ ಒಂದು ಪುಸ್ತಕ ವ್ಯಾಪಾರವಾಗಿರಲಿಲ್ಲ. ಅವನ ಸಹನೆಯ ಕಟ್ಟೆ ಒಡೆದಿತ್ತು. ಫ್ರೀಯಾಗಿ ತಗೊಂಡು ಹೋಗಿ ಎಂದು ಕೋಪದಿಂದ ಅರಚುತ್ತಿದ್ದ. ಕೆಲವರು ಪುಸ್ತಕಗಳನ್ನು ಆಯ್ದುಕೊಂಡರು. ಕೆಲವರು ಆಟದಂತೆ ನೋಡಿ‌ ಹೊರಟುಹೋದರು.

ಧಾರವಾಡದಲ್ಲಿ ಎರಡು ವರ್ಷದ ಹಿಂದೆ ಉತ್ಸಾಹದಿಂದಲೇ ಪುಸ್ತಕದ ಅಂಗಡಿ ತೆರೆದಿದ್ದ ಗೆಳೆಯರೊಬ್ಬರು ಆರೇ ತಿಂಗಳಿಗೆ ಅದನ್ನು ಪೇಡೆ ಅಂಗಡಿಯಾಗಿ ಬದಲಾಯಿಸಿದರು. ಸ್ವತಃ ಬರಹಗಾರ ಕೂಡ ಹಣ ಹಾಕಿ ತನ್ನ ಪುಸ್ತಕ ಪ್ರಕಟಿಸಲು‌ ಹಿಂದೇಟು ಹಾಕುತ್ತಿದ್ದಾನೆ. ಪ್ರಕಾಶಕರು ಗ್ರಂಥಾಲಯದ ಮೇಲೆ ಒಂದು ಆಸೆ ಇಟ್ಟುಕೊಂಡು ಖ್ಯಾತನಾಮರ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತಿದ್ದಾರೆ. ಅವರ ನಡೆ ಸರಿಯಿದೆ. ಕೊಳ್ಳುವವರ ಅಭಾವ ಇರುವಾಗ ಸಿಕ್ಕ ಸಿಕ್ಕವರ ಪುಸ್ತಕ ಪ್ರಕಟಿಸಿ ಅವರೇಕೆ ನಷ್ಟ ಮಾಡಿಕೊಂಡಾರು? ಪುಸ್ತಕದ ಮಾರಾಟ ಐಸಿಯುನಲ್ಲಿದೆ. ಇದರ ಮಧ್ಯೆ ಪುಸ್ತಕ ಕೊಂಡು ಓದುವ ಒಂದು ಸಣ್ಣ ವರ್ಗವಿದೆ.‌ ಅವರೇ ಪುಸ್ತಕ ಮಾರಾಟದ ಪಾಲಿನ ಆಮ್ಲಜನಕ.

ದುಬಾರಿ ಬೆಲೆಯ ಬಟ್ಟೆ ಕೊಳ್ಳುತ್ತೇವೆ. ಮಕ್ಕಳಿಗೆ ಲಕ್ಷ ರೂಪಾಯಿಯ ಬೈಕ್ ಕೊಡಿಸುತ್ತೇವೆ. ನೂರು ರೂಪಾಯಿಯ ಪುಸ್ತಕ ಕೊಳ್ಳುವುದಿಲ್ಲ. ಓದುವುದು ಪರೀಕ್ಷೆಗೆ ಮಾತ್ರ; ಬದುಕಿಗಲ್ಲ ಎಂದು ಒಂದು ವರ್ಗ ಭಾವಿಸಿದಂತಿದೆ. ದುಡಿದರೆ ಮನೆಯ ಆರ್ಥಿಕತೆ ಬೆಳೆಯಬಹುದು, ನಾಡಿನ ಜಿಡಿಪಿ ಏರಬಹುದು.‌ ಆದರೆ ವಿವೇಕದ ಜಿಡಿಪಿ ಏರುವುದೇ? ಪುಸ್ತಕ ತೊರೆದ ನಾಡು ಬೆಳೆದೀತು ಹೇಗೆ?

ಪುಸ್ತಕ ಓದುವವರು ಕಡಿಮೆಯಾದರೇ? ಮೊಬೈಲ್ ಬಂದು ಕೈಯಲ್ಲಿನ ಪುಸ್ತಕವನ್ನು ಕಸಿಯಿತೇ? ಜನರ ಅಭಿರುಚಿಗಳು ಬದಲಾಗಿವೆಯೇ? ಇವೆಲ್ಲಕ್ಕೂ ಉತ್ತರ ‘ಹೌದು’ ಎಂದು ಇರಬಹುದು. ಆದರೆ ಕನ್ನಡ ಸಾಹಿತ್ಯದಲ್ಲಿ ಪುಸ್ತಕ ಮಾರಾಟದ ಸುವರ್ಣ
ಯುಗವೊಂದು ಇತ್ತೆಂದು ಎಲ್ಲೂ ದಾಖಲಾಗಿಲ್ಲ. ಕವಿ ಗಳಗನಾಥರು ತಲೆಯ ಮೇಲೆ ಪುಸ್ತಕ ಹೊತ್ತುಕೊಂಡು ಊರೂರು ಅಲೆದು ಮಾರುತ್ತಿದ್ದರು. ಕಾದಂಬರಿಕಾರರಾದ ಅನಕೃ ಕೂಡ ಹಳ್ಳಿ ಸುತ್ತಿ ಪುಸ್ತಕ ಮಾರಿದರು.

ನಾವು ಓದುವ ವರ್ಗವನ್ನು ಸೃಷ್ಟಿಸುತ್ತಿಲ್ಲ ಎಂಬುದು ಸ್ಪಷ್ಟವಿದೆ. ಹೋಂವರ್ಕ್ ಮಾಡಿದರೆ ಸಾಕು ಪೋಷಕರ ಮುಖ ಅರಳುತ್ತದೆ. ಅಂಕ ಬಂದರೆ ಸಾಕು ನೌಕರಿ ದಕ್ಕುತ್ತದೆ. ಮತ್ತ್ಯಾಕೆ ಓದು? ಓದುವಿಕೆ ತೋರಿಸುವ ಹಲವು ಜಗತ್ತುಗಳ ರುಚಿ ಮಕ್ಕಳಿಗೆ ಗೊತ್ತಾಗುವುದೇ ಇಲ್ಲ. ಭವಿಷ್ಯದಲ್ಲಿ ಅವರ‍್ಹೇಗೆ ಪುಸ್ತಕ ಹಿಡಿದಾರು?

ಶಿವಮೊಗ್ಗದಲ್ಲಿ ಒಮ್ಮೆ ನಾನು ಪುಸ್ತಕ ಕೊಳ್ಳುವಾಗ ಸುಮಾರು 12-13 ವರ್ಷ ವಯಸ್ಸಿನ ಹುಡುಗನೊಬ್ಬ ಇಂಗ್ಲಿಷ್ ಕಾದಂಬರಿ ಕೇಳಿದ. ಆ ವಯಸ್ಸಿನ ಮಗು ಇಂಗ್ಲಿಷ್ ಕಾದಂಬರಿ ಓದಲು ಹೇಗೆ ಸಾಧ್ಯ ಎಂಬ ಅನುಮಾನ ಬಂದು ವಿಚಾರಿಸಿದೆ. ಆತ ದುಬೈನಿಂದ ಬಂದಿದ್ದ ಹುಡುಗ. ಅಲ್ಲಿ ‘ಅರಬ್ಬಿ ರೀಡಿಂಗ್ ಚಾಲೆಂಜ್’ ಎಂಬುದು ಇದೆಯಂತೆ. ನನಗೆ ಅನುಮಾನ ಬಂದು ಗೂಗಲಿಸಿ ನೋಡಿ ದಂಗಾದೆ. ನಮ್ಮ ಮಕ್ಕಳನ್ನು ನೆನೆದು ಖೇದವೆನಿಸಿತು.

ಇಷ್ಟೆಲ್ಲಾ ಜಂಜಾಟಗಳ ನಡುವೆಯೂ ಓದಲು ಕಾದು ಕೂತ ವರ್ಗವಿದೆ. ಅವರಿಗೆ ಪುಸ್ತಕಗಳ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಪುಸ್ತಕಗಳ ಒಂದೇ ಒಂದು ಜಾಹೀರಾತನ್ನೂ ಈ ಕಣ್ಣು ನೋಡಲಿಲ್ಲ. ಕೈಗೆ ಎಟಕುವ ಸಮೀಪದಲ್ಲಿ ಪುಸ್ತಕಗಳಿಲ್ಲ. ಗ್ರಂಥಾಲಯಗಳು ಯಾಕೋ ಮೋಡಿ‌ ಮಾಡುತ್ತಿಲ್ಲ. ಗಲ್ಲಿ ಗಲ್ಲಿಗಳಲ್ಲಿ ಸುಲಭವಾಗಿ ಪುಸ್ತಕಗಳು ಸಿಗುವಂತಾದರೆ ಪುಸ್ತಕ ಹಿಡಿದು ಕೂರುವವರಿದ್ದಾರೆ. ಆರು ಕೋಟಿ ಕನ್ನಡಿಗರು ಇರುವ ನಮ್ಮಲ್ಲಿ ಪುಸ್ತಕದ ಸಾವಿರ ಪ್ರತಿ ಖಾಲಿಯಾದರೆ ಅದೇ ಲೇಖಕನ ದೊಡ್ಡ ಯಶಸ್ಸು!

ಸಮಾಜದ ಆರೋಗ್ಯದ ಲಾಭಕ್ಕಾಗಿ ಪ್ರತೀ ತಾಲ್ಲೂಕಿನಲ್ಲಿ ಒಂದು ಸರ್ಕಾರಿ ‌ಪುಸ್ತಕದ ಮಳಿಗೆ ತೆರೆಯುವ ಅವಶ್ಯಕತೆ ಇದೆ. ಉಚಿತವಲ್ಲದೆ ಇದ್ದರೂ ಅರ್ಧಬೆಲೆಯಲ್ಲಾದರೂ ಪುಸ್ತಕಗಳು ಜನರ ಬೇಡಿಕೆಗೆ ಅನುಗುಣವಾಗಿ ಅಲ್ಲಿ ಸಿಗುವಂತಾಗಬೇಕು. ಇದರಿಂದ ಬರಹಗಾರರು, ಪ್ರಕಾಶಕರು ಮತ್ತು ಓದುಗಾರರನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ.

‘ನಾವು ಆರ್ಥಿಕವಾಗಿ ಸಬಲರಾಗಿದ್ದೇವೆ. ಆದರೆ ಜ್ಞಾನದ ಸಬಲತೆ, ತಿಳಿವಳಿಕೆಯ ಸಬಲತೆ, ವಿವೇಕದ ಸಬಲತೆ ನಮಗೆ ಬೇಕಿದೆ.‌ ಅದಕ್ಕಾಗಿ ಮಕ್ಕಳನ್ನು ಪುಸ್ತಕದ ಒಡಲಿಗೆ ಹಾಕುತ್ತಿದ್ದೇವೆ’ ಎಂದ ದುಬೈ ಅಧ್ಯಕ್ಷರ ಮಾತು, ನಿತ್ಯ ಪತ್ರಿಕೆಯಲ್ಲಿ ಅಪರಾಧದ ಸುದ್ದಿಗಳನ್ನು ಓದುವಾಗ ನೆನಪಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT