ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮರುಪರೀಕ್ಷೆ ಎಂಬ ಅಗ್ನಿದಿವ್ಯ

ಅಕ್ರಮ ಎಸಗಿದವರಿಗೆ ಶಿಕ್ಷೆ ಕೊಡಲಿ, ಆದರೆ ಪರೀಕ್ಷೆ ಬರೆದ ಪ್ರಾಮಾಣಿಕರಿಗೂ ಅನ್ಯಾಯವಾಗುವುದು ಎಷ್ಟರಮಟ್ಟಿಗೆ ಸರಿ?
Last Updated 12 ಮೇ 2022, 22:00 IST
ಅಕ್ಷರ ಗಾತ್ರ

ತೊಂಬತ್ತರ ದಶಕದಲ್ಲಿ ರಾಜ್ಯದ ಬರಪೀಡಿತ ಪ್ರದೇಶದ ಕೆಲ ಭಾಗಗಳು ಮೆಟ್ರಿಕ್ ಮತ್ತು ಪಿಯು ಪರೀಕ್ಷೆಗಳಲ್ಲಿ ಅಚ್ಚರಿ ಎಂಬಂತೆ ಶೇಕಡಾವಾರು ಫಲಿತಾಂಶದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದವು. ಈ ಹೆಚ್ಚುವರಿ ಫಲಿತಾಂಶ ಕೆಲವೇ ಪರೀಕ್ಷಾ ಕೇಂದ್ರಗಳಿಂದ ಬರುತ್ತಿ
ದ್ದುದು ಅನುಮಾನಕ್ಕೆ ಎಡೆಮಾಡಿತ್ತು. ತನಿಖೆ ನಡೆಸಿದಾಗ, ಈ ಕೇಂದ್ರಗಳಲ್ಲಿ ಸಾಮೂಹಿಕ ನಕಲು ಮಾಡಿದ್ದುದು ಬಯಲಾಗಿತ್ತು. ಇಂತಹ ಕೇಂದ್ರಗಳ ಕುಖ್ಯಾತಿ ಸುದ್ದಿಯಾಗಿ, ದೂರದೂರಿನ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಈ ಶಾಲಾ ಕಾಲೇಜುಗಳಿಗೆ ಮುಗಿ
ಬೀಳುತ್ತಿದ್ದರು!

ಈ ವಿಷಯ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದ್ದರೂ ಏನೂ ಮಾಡುತ್ತಿರಲಿಲ್ಲ ಅಥವಾ ಜಾಣ ಕುರುಡುತನ ಪ್ರದರ್ಶಿಸುತ್ತಿತ್ತೋ ಕಾಣೆ. ಏಕೆಂದರೆ, ಶೂನ್ಯ ಫಲಿತಾಂಶ ಬಂದ ಶಾಲಾ ಕಾಲೇಜುಗಳು ಮುಚ್ಚುವ ಭೀತಿಯಲ್ಲಿದ್ದವು. ಶೈಕ್ಷಣಿಕ ವರ್ಷದ ಪ್ರಗತಿಗೆ ಹಲವಾರು ಅಡ್ಡಿ ಆತಂಕಗಳಿದ್ದವು. ಸತತ ಬರಗಾಲದಿಂದ ಮಕ್ಕಳು ಅರ್ಧದಲ್ಲೇ ಶಾಲೆ ಬಿಡುವುದು ಅಥವಾ ಪೋಷಕರು ಕೂಲಿಗೆಂದು ನಗರಗಳಿಗೆ ಗುಳೆ ಹೋಗುವುದು ಸಾಮಾನ್ಯವಾಗಿತ್ತು. ಹಳ್ಳಿಗೆ ವರ್ಗವಾಗಿ ಬರಲು ಮೇಷ್ಟ್ರುಗಳು ಹಿಂದೇಟು ಹಾಕುತ್ತಿದ್ದರಿಂದ ಮೇಷ್ಟ್ರುಗಳ ಕೊರತೆಯಾಗಿ, ಇದ್ದ ಸಿಬ್ಬಂದಿಯೇ ಎಲ್ಲ ತರಗತಿಗಳ ಪಾಠ ಮಾಡಿ ಮುಗಿಸಬೇಕಿತ್ತು. ಬಹುಶಃ ಈ ಎಲ್ಲ ಅಂಶಗಳು ಇಲ್ಲಿಯ ಅಕ್ರಮಕ್ಕೆ ಇಂಬು
ಕೊಡುತ್ತಿದ್ದವೇನೊ.

ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ಕೇಂದ್ರವೂ ಇಂತಹ ನಕಲಿಗೆ ಕುಖ್ಯಾತಿಯಾಗಿತ್ತು. ಗಮನಾರ್ಹವೆಂದರೆ, ಪ್ರತಿವರ್ಷ ಕನಿಷ್ಠ ಶೇ 15– 20ರಷ್ಟು ಹುಡುಗರು ತುಂಬ ಪ್ರಾಮಾಣಿಕತೆಯಿಂದ ಪರೀಕ್ಷೆ ಎದುರಿಸುತ್ತಿದ್ದರು. ಅದಕ್ಕೆ ಪ್ರೇರಣೆ ಅವರ ಸಹಜ ಜಾಣ್ಮೆ, ಕುಶಲತೆ ಒಂದು ಕಡೆಯಾದರೆ, ಅಂತಹವರ ನೈತಿಕ ಬೆಂಬಲಕ್ಕೆ ಸ್ವತಃ ಶಿಕ್ಷಕರು ಇರುತ್ತಿದ್ದರು. ಏಕೆಂದರೆ ಇಂತಹವರೇ ಮುಂದೆ ಏನಾದರೂ ಸಾಧಿಸಬಲ್ಲ ಅಸಲಿ ಬಂಗಾರಗಳು, ಉಳಿದ ಶೇ 80 ರಷ್ಟು ಮಕ್ಕಳು ಕೇವಲ ಸರ್ಟಿಫಿಕೇಟ್‌ಗಾಗಿ ಬರೆಯುವವರೆಂದು ಶಿಕ್ಷಕರೇ ತೀರ್ಮಾನಿಸಿದಂತಿತ್ತು.

ಈ ಕೇಂದ್ರಗಳಿಗೆ ಸ್ಕ್ವ್ಯಾಡ್‌ ಅಧಿಕಾರಿಗಳು ಭೇಟಿ ಇತ್ತಾಗ, ಅವರ ಕಾರು ಶಾಲೆಯ ಗೇಟು ಪ್ರವೇಶಿಸುತ್ತಿದ್ದಂತೆಯೇ ಹೊರಗೆ ಕಾಪಿ ಚೀಟಿ ಪೂರೈಸಲೆಂದೇ ಕುಳಿತುಕೊಂಡಿದ್ದ ತಂಡಗಳು ಸಿಳ್ಳೆ ಹೊಡೆದು ಬೊಬ್ಬೆ ಹಾಕಿ ಒಳಗಿನವರನ್ನು ಎಚ್ಚರಿಸುತ್ತಿದ್ದವು. ಆಗ ಒಳಗಿರು
ವವರು ತಮ್ಮ ಬಳಿ ಇಟ್ಟುಕೊಂಡಿರುತ್ತಿದ್ದ ಕಾಪಿ ಚೀಟಿ, ಗೈಡ್, ಪುಸ್ತಕ ಎಲ್ಲವನ್ನೂ ಸಾರಾಸಗಟಾಗಿ ಕಿಟಕಿಯಿಂದ ಹೊರಕ್ಕೆ ಎಸೆಯುತ್ತಿದ್ದರು. ಆಗ ಯಾರ ಯಾರದೋ ಚೀಟಿಗಳು ಇನ್ಯಾರದೋ ಬಳಿ ಬಂದು ಬೀಳುತ್ತಿದ್ದವು. ಕೆಲವೊಮ್ಮೆ ಇಂತಹ ಚೀಟಿ ಪ್ರಾಮಾಣಿಕರ ಬಳಿ ಬಿದ್ದು, ಅಂತಹವರೂ ಡಿಬಾರ್ ಆಗುತ್ತಿದ್ದರು.

ಇಂತಹುದೇ ಒಬ್ಬ ಪ್ರಾಮಾಣಿಕ ಹುಡುಗ ರಾಮು ಹೀಗೇ ಬಲಿಪಶುವಾಗಿ ಡಿಬಾರ್ ಆದಾಗ ಊರಿಗೆ ಊರೇ ಸೂತಕದ ಛಾಯೆಯಲ್ಲಿತ್ತು. ಭವಿಷ್ಯದ ಬಗ್ಗೆ ಎಷ್ಟೊಂದು ಭವ್ಯ ಕನಸು ಕಂಡಿದ್ದ ಬಡ ರೈತನ ಮಗ, ಸೂಕ್ಷ್ಮಮತಿಯ ರಾಮು ಹಾಗೂ ಅವನ ಪೋಷಕರಿಗೆ ಈ ಅನಿರೀಕ್ಷಿತ ಆಘಾತವನ್ನು ಎದುರಿಸುವುದು ದೊಡ್ಡ ಸವಾಲೇ ಆಗಿತ್ತು. ಒಂದು ವರ್ಷವೆಂಬ ಒಂದು ಯುಗವನ್ನು ಕಳೆದು ಮತ್ತೊಮ್ಮೆ ಪರೀಕ್ಷೆಯೆಂಬ ಅಗ್ನಿದಿವ್ಯವನ್ನು ಹಾಯ್ದು ಇಡೀ ಶಾಲೆಗೆ ಮೊದಲಿಗನಾಗಿದ್ದ. ಆದರೆ ಅವನಿಗಾದ ಅನ್ಯಾಯವನ್ನು ಯಾವ ನ್ಯಾಯಾಲಯದಲ್ಲಿ ಪ್ರಶ್ನಿಸುವುದು? ಮರುಪರೀಕ್ಷೆ ಬರೆಯುವಷ್ಟು ಧೈರ್ಯ, ಮನೆಯವರು, ಶಾಲಾ ಶಿಕ್ಷಕರ ಪ್ರೋತ್ಸಾಹ ಎಲ್ಲರಿಗೂ ಸಿಗುವುದಿಲ್ಲವಲ್ಲ!

ಪ್ರಸ್ತುತ ಪಿಎಸ್ಐ ಹಾಗೂ ಇನ್ನಿತರ ಪರೀಕ್ಷಾ ಅಕ್ರಮಗಳನ್ನು ಗಮನಿಸುವಾಗ, ಹೀಗೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸು ಮಾಡಿಕೊಂಡವರ ಬಗ್ಗೆ ಯೋಚನೆಯಾಗುತ್ತದೆ. ಸರ್ಕಾರಿ ನೌಕರಿ ಅದರಲ್ಲೂ ಪಿಎಸ್ಐಯಂತಹ ಹುದ್ದೆಯ ಕನಸು ಹೊತ್ತು ಪ್ರತಿವರ್ಷ ಸಾವಿರಾರು ಆಕಾಂಕ್ಷಿಗಳು ಹಳ್ಳಿ ತೊರೆದು, ಲಕ್ಷಾಂತರ ರೂಪಾಯಿ ಫೀಸು ತೆತ್ತು ಖಾಸಗಿ ತರಬೇತಿ ಕೇಂದ್ರಗಳಲ್ಲಿ ಅಧ್ಯಯನ ಮಾಡುತ್ತಿರುತ್ತಾರೆ. ಇವರಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಬಡ, ಮಧ್ಯಮ ವರ್ಗದವರೇ ಹೆಚ್ಚು. ಶ್ರಮಸಂಸ್ಕೃತಿ ಹಿನ್ನೆಲೆಯ ಇವರ ದೇಹ ಕೂಡ ಈ ಕೆಲಸಕ್ಕೆ ಹುರಿಗೊಳಿಸಿದಂತೆ ಇರುತ್ತದೆ. ಸಹಜವಾಗಿ ಇವರಿಗೆ ಸುಲಭವಾಗಿ ಕೈಗೆಟುಕುವುದೆಂದರೆ ಮಿಲಿಟರಿ, ಪೊಲೀಸ್‌ನಂತಹ ರಕ್ಷಣಾ ಸಂಸ್ಥೆಗಳಲ್ಲಿನ ಹುದ್ದೆಗಳು. ಓದಿನಲ್ಲಿ ಚುರುಕಿದ್ದವರು ಪಿಎಸ್ಐ, ಎಸ್ಐನಂತಹ ಹುದ್ದೆಗಳ ಆಕಾಂಕ್ಷಿಗಳಾಗಿರುತ್ತಾರೆ.

ಸದ್ಯದ ಪಿಎಸ್ಐ ಪರೀಕ್ಷೆಯಲ್ಲಿ ಇಂತಹ ಪ್ರಾಮಾಣಿಕ ಆಕಾಂಕ್ಷಿಗಳಿಗೆ ಮರುಪರೀಕ್ಷೆ ಎಂಬುದು ದೊಡ್ಡ ಆಘಾತವೇ ಸರಿ. ಈಗ ಅವರು ಮರುಪರೀಕ್ಷೆಎಂಬ ಅಗ್ನಿದಿವ್ಯವನ್ನು ಮತ್ತೆ ಶೂನ್ಯದಿಂದ ಆರಂಭಿಸಬೇಕು. ಕೊರೊನೋತ್ತರದ ಈ ದುರಿತ ಕಾಲದಲ್ಲಿ ಬಹುತೇಕರಿಗೆ ಪರೀಕ್ಷಾ ಶುಲ್ಕ ಕಟ್ಟುವುದು, ಮಹಾನಗರದಲ್ಲಿ ಮತ್ತೆ ಬಾಡಿಗೆ ಮನೆ ಹಿಡಿದು ಪರೀಕ್ಷೆ ಬರೆಯುವುದು ದುಬಾರಿಯ ಸಂಗತಿ. ಅನೇಕ ಆಕಾಂಕ್ಷಿಗಳು ವಯೋಮಿತಿ ಮೀರುವ ಹಂತದಲ್ಲಿ ಇರುತ್ತಾರೆ.

ಅಕ್ರಮ ಎಸಗಿದವರಿಗೆ ಶಿಕ್ಷೆ ಕೊಡಲಿ, ಆದರೆ ಪರೀಕ್ಷೆ ಬರೆದ ಪ್ರಾಮಾಣಿಕರಿಗೂ ಅನ್ಯಾಯವಾಗುವುದು ಎಷ್ಟರಮಟ್ಟಿಗೆ ಸರಿ? ಇಲ್ಲಿ ಪಿಎಸ್ಐ ನೇಮಕಾತಿ ಎಂಬುದು ಒಂದು ಉದಾಹರಣೆ ಮಾತ್ರ. ಈಗ ಬಯಲಾಗುತ್ತಿರುವ ಸಾಲು ಸಾಲು ಅಕ್ರಮಗಳಿಗೂ ಈ ನೀತಿ ಅನ್ವಯವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT