ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹಿರಿಯರ ಬಗ್ಗೆ ‘ಹಿರಿ’ ಮನಸ್ಸಿರಲಿ

ವೃದ್ಧರಿಗೆ ಕೈಲಾದಷ್ಟು ನೆರವಾಗುವ ಜೀವನಮೌಲ್ಯ ಬೆಳೆಸಿಕೊಳ್ಳೋಣ
Last Updated 3 ಅಕ್ಟೋಬರ್ 2021, 19:45 IST
ಅಕ್ಷರ ಗಾತ್ರ

ನಿಮ್ಮ ಬಡಾವಣೆಯಲ್ಲಿರುವ ಮನೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಒಂದೆರಡು ಮನೆಗಳಲ್ಲಾದರೂ ಒಬ್ಬಂಟಿಗ ರಾಗಿ ಅಥವಾ ಗಂಡ-ಹೆಂಡತಿ ಮಾತ್ರವೇ ಇರುವ ಹಿರಿಯರು ಕಂಡು ಬರಬಹುದು. ಮಕ್ಕಳು ದೂರದ ಬೆಂಗಳೂರಿನಲ್ಲೋ ಮುಂಬೈನಲ್ಲೋ ನೆಲೆಸಿರುತ್ತಾರೆ. ಇಲ್ಲವೇ ಕಡಲಾಚೆಯ ನಗರಗಳಲ್ಲೋ ನೆಲೆ ನಿಂತಿರು ತ್ತಾರೆ. ಇಲ್ಲಿ ಈ ಹಿರಿ ಜೀವಗಳು ತಮ್ಮ ಬಾಳ ಸಂಜೆಯ ದಿನಗಳನ್ನು ಕುಂಟುತ್ತಾ ಸಾಗಿಸಬೇಕಾಗಿರುತ್ತದೆ.

ಒಂದೊಂದು ಮನೆಯದ್ದು ಒಂದೊಂದು ಬವಣೆ. ಕೆಲವು ಮನೆಗಳಲ್ಲಿ ಹಣಕಾಸಿಗೆ ತೊಂದರೆ ಇರುವುದಿಲ್ಲ. ಪ್ರತೀ ತಿಂಗಳೂ ಇವರದ್ದೇ ಪಿಂಚಣಿ ಬರುತ್ತಿರುತ್ತದೆ ಅಥವಾ ಮಕ್ಕಳು ತಪ್ಪದೇ ಹಣ ಕಳುಹಿಸುತ್ತಿರುತ್ತಾರೆ. ಇನ್ನೂ ಮುಂದುವರಿದು ಮಕ್ಕಳು ಆನ್‌ಲೈನ್ ಮೂಲಕ ಅಗತ್ಯ ವಸ್ತುಗಳೇ ಇಲ್ಲಿನ ಮನೆಯನ್ನು ತಲುಪುವ ವ್ಯವಸ್ಥೆಯನ್ನು ಮಾಡಿರುತ್ತಾರೆ. ಇನ್ನು ಕೆಲವು ಮನೆಗಳಲ್ಲಿ ವೃದ್ಧಾಪ್ಯದ ಇತರ ಕಷ್ಟಕೋಟಲೆಗಳ ಜೊತೆಯಲ್ಲಿ ಹಣಕಾಸಿನ ತೊಂದರೆ ಕೂಡ ಇರುತ್ತದೆ. ಪಿಂಚಣಿ ಸೌಲಭ್ಯ ಇಲ್ಲದ ಕೆಲಸದಿಂದ ನಿವೃತ್ತರಾಗಿದ್ದರೆ ಅಥವಾ ಉಳಿತಾಯ ಮಾಡಿಟ್ಟ ಹಣವಿಲ್ಲದಿದ್ದರೆ ಇವರ ಜೀವನ ನಿರ್ವಹಣೆ ನಿಜಕ್ಕೂ ದುಸ್ತರ. ಮಕ್ಕಳು ಇವರ ಖರ್ಚನ್ನು ಅರಿತು ಹಣ ಕಳುಹಿಸಿದರೇನೊ ಸರಿ, ಇಲ್ಲದಿದ್ದಲ್ಲಿ ಇವರ ಕಷ್ಟ ಹೇಳತೀರದು.

ಇದು ಹಣಕಾಸಿಗೆ ಸಂಬಂಧಿಸಿದ ವಿಚಾರವಾದರೆ, ಇನ್ನು ಆ ಇಳಿ ವಯಸ್ಸಿನ ಜೀವಗಳ ವಯೋಸಹಜ ತುಮುಲಗಳು ಒಂದೇ ಎರಡೇ? ಮಗ-ಮಗಳು ಅಥವಾ ಮೊಮ್ಮಕ್ಕಳನ್ನು ನೋಡಬೇಕು, ಅವರೊಂದಿಗೆ ಸಮಯ ಕಳೆಯಬೇಕು, ಮಾತನಾಡಬೇಕು ಎಂಬ ಉತ್ಕಟ ಬಯಕೆಯನ್ನು ಅದುಮಿಟ್ಟುಕೊಂಡು ಬದುಕು ಸಾಗಿಸುವ ಎಷ್ಟು ಹಿರಿಯರು ನಮ್ಮೊಂದಿಗಿಲ್ಲ?

ಈ ಕೊರೊನಾ ಕಾಲದಲ್ಲಂತೂ ಹಿರಿಯರು ಅನುಭವಿಸಿದ ಕಷ್ಟಕಾರ್ಪಣ್ಯಗಳು ಒಂದೆರಡಲ್ಲ. ಲಾಕ್‍ಡೌನ್ ದಿನಗಳಲ್ಲಿ ದಿನನಿತ್ಯದ ಅಗತ್ಯಗಳಿಗೂ ಪೇಚಾಡಿದ ಹಿರಿಯರನ್ನು ನಾವು ನೋಡಿದ್ದೇವೆ. ಅನಾರೋಗ್ಯಕ್ಕೆ ತುತ್ತಾದಾಗ ಆಸ್ಪತ್ರೆಯ ಭೇಟಿಯೂ ಸುಲಭದ್ದಾಗಿರಲಿಲ್ಲ. ಇನ್ನು ಕೋವಿಡ್ ಲಸಿಕಾ ಅಭಿಯಾನ ಆರಂಭವಾದಾಗಲೂ ಸರತಿಯಲ್ಲಿ ನಿಂತು ಚುಚ್ಚುಮದ್ದನ್ನು ಹಾಕಿಸಿಕೊಳ್ಳಲು ಹರಸಾಹಸ ಮಾಡಿದ ಹಿರಿಯರು ಒಬ್ಬಿಬ್ಬರಲ್ಲ. ಲಸಿಕೆ ಹಾಕಿಸಿಕೊಳ್ಳಲು ಆನ್‍ಲೈನ್‍ನಲ್ಲಿ ನೋಂದಣಿ ಮಾಡುವ ಪ್ರಕ್ರಿಯೆಯೂ ಹಿರಿಯರಿಗೆ ತ್ರಾಸದಾಯಕವೇ ಆಗಿತ್ತು. ಮೊಬೈಲ್ ಆ್ಯಪ್ ಅಥವಾ ಇತರ ತಂತ್ರಜ್ಞಾನ ಬಳಸಿಯೇ ಮಾಡಬೇಕಾದ ಯಾವುದೇ ವ್ಯವಹಾರದ ಬಗ್ಗೆ ಅಷ್ಟಾಗಿ ಅರಿವಿರದ ನಮ್ಮ ಹಿರಿಯರಿಗೆ ಅದು ತುಸು ಕಷ್ಟವೇ ಸರಿ.

ಪಿಂಚಣಿ ಪಡೆಯುವ ಹಿರಿಯ ನಾಗರಿಕರು ಪ್ರತಿವರ್ಷವೂ ಬ್ಯಾಂಕ್‍ಗೆ ತೆರಳಿ ಜೀವನ ಪ್ರಮಾಣ ಪತ್ರವನ್ನು ಪಡೆಯುವ, ಅಂದರೆ ತಾವು ಜೀವಂತ ಇರುವುದನ್ನು ದೃಢೀಕರಿಸುವ ನಿಯಮ ಇರುತ್ತದೆ. ಅಲ್ಲಿಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತಹ ಕಾಯಕವೆಲ್ಲವನ್ನೂ ತಾವೊಬ್ಬರೇ ಹೋಗಿ ಮಾಡಿಸಿಕೊಳ್ಳುವುದು ಕಷ್ಟವೇ ಸರಿ.

ವೃದ್ಧಾಪ್ಯದಲ್ಲಿ ಕಾಡುವ ಆರೋಗ್ಯ ಸಮಸ್ಯೆ ಗಳಂತೂ ಅವರನ್ನು ಇನ್ನೂ ಹಣ್ಣಾಗಿಸುತ್ತವೆ. ಆಸ್ಪತ್ರೆಗೆ ತೆರಳಿ ವೈದ್ಯರನ್ನು ಭೇಟಿ ಮಾಡಿ, ಅವರು ಸೂಚಿಸಿದ ತಪಾಸಣೆ- ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಕೂಡ ಹಿರಿಯರಿಗೆ ಬಹಳಷ್ಟು ಪರಿಶ್ರಮವನ್ನು ಕೊಡುತ್ತವೆ. ಎಷ್ಟೋ ಬಾರಿ ಅಗತ್ಯಕ್ಕಿಂತ ಹೆಚ್ಚು ಮಾತ್ರೆಗಳನ್ನು ಸೇವಿಸಿ ಅಥವಾ ಯಾವುದೋ ಸಮಸ್ಯೆಗೆ ಇನ್ನಾವುದೋ ಮಾತ್ರೆಗಳನ್ನು ತಿಂದು ಅಪಾಯಕ್ಕೊಳಗಾದ ಹಿರಿಯರನ್ನು ನಾವು ನೋಡಿದ್ದೇವೆ.

ಎಷ್ಟೋ ಬಾರಿ ‘ಹೇಗಿದ್ದೀರಿ’ ಎಂದು ಯಾರಾದರೂ ಪ್ರಶ್ನಿಸಿದರೆ, ‘ಭಗವಂತ ಕರೆದುಕೊಳ್ಳುವ ತನಕ ಇರ ಬೇಕಲ್ಲ’ ಎಂಬ ನೋವು ತುಂಬಿದ ಉತ್ತರ ಹಿರಿ ಜೀವ ಗಳಿಂದ ಬರುತ್ತದೆ.

ಅಂತರರಾಷ್ಟ್ರೀಯ ಹಿರಿಯರ ದಿನಾಚರಣೆ (ಅ. 1) ಈಗಷ್ಟೇ ಮುಗಿದಿದೆ. ಈ ಸಂದರ್ಭದಲ್ಲಿ ಎಲ್ಲ ಯುವಜನರು ತಮ್ಮ ಒಡನಾಟದಲ್ಲಿರುವ ಅಥವಾ ನೆರೆಹೊರೆಯಲ್ಲಿರುವ ಅಥವಾ ತಮ್ಮ ಪರಿಚಯದ ಹಿರಿಯರಿಗೆ ಒಂದಿಲ್ಲೊಂದು ರೀತಿಯಲ್ಲಿ ನೆರವಾಗುವ ಸಂಕಲ್ಪವನ್ನು ಏಕೆ ಮಾಡಬಾರದು?

ನಿಮ್ಮ ಬಡಾವಣೆಯಲ್ಲಿ ಒಂಟಿಯಾಗಿ ಇರುವ ಹಿರಿಯರನ್ನು ದಿನದಲ್ಲಿ ಒಮ್ಮೆಯಾದರೂ ಮಾತನಾಡಿಸಿ. ಮನೆಗೇ ಹೋಗಲು ಸಾಧ್ಯವಾಗದಿದ್ದಲ್ಲಿ ಕಡೇಪಕ್ಷ ಕರೆ ಮಾಡಿ ಮಾತನಾಡಿಸಿ. ಇದರಿಂದ ಅವರ ಮನಸ್ಸು ಒಂದಿಷ್ಟು ಹಗುರಾದೀತು. ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಕೊಂಡು ತರಲು ಅವರಿಗೆ ನೆರವಾಗಿ. ನಿಮ್ಮ ಮಕ್ಕಳಿಗೆ ಆ ಹಿರಿಯರ ಸಣ್ಣ ಪುಟ್ಟ ಕೆಲಸಗಳಿಗೆ ಸಹಾಯ ಮಾಡಲು ತಿಳಿ ಹೇಳಿ. ಅದರಿಂದ ಅವರಲ್ಲಿಯೂ ಮೌಲ್ಯಗಳು ಬೆಳೆಯಲು ಸಾಧ್ಯವಾಗುತ್ತದೆ. ಕಣ್ಣಿನಪೊರೆ ಶಸ್ತ್ರಚಿಕಿತ್ಸೆಯಾದ ನಂತರ ಸುಮಾರು ಒಂದು ತಿಂಗಳವರೆಗೂ ಕಣ್ಣಿಗೆ ಔಷಧಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಅಂತಹದ್ದಕ್ಕೂ ನೀವು ನೆರವಾಗಬಹುದು.

ಬ್ಯಾಂಕ್ ಅಥವಾ ಯಾವುದೇ ಕಚೇರಿಗಳಲ್ಲಿ ವೃದ್ಧರು ಸರತಿಯಲ್ಲಿ ನಿಂತಿದ್ದರೆ ಅವರಿಗೆ ಮೊದಲು ಅನುವು ಮಾಡಿಕೊಡಿ. ಅವರ ವ್ಯವಹಾರ ಶೀಘ್ರವಾಗಲು ಸಹಕರಿಸಿ. ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷ ಕೌಂಟರ್‌ಗಳನ್ನು ಮಾಡಿ, ಅವರಿಗೆ ವೈದ್ಯರ ಭೇಟಿ ಹಾಗೂ ತಪಾಸಣೆಗಳನ್ನು ಸುಲಭವಾಗಿ ಮಾಡಿಸಿಕೊಳ್ಳಲು ಒಂದಿಬ್ಬರು ಪ್ರತಿನಿಧಿಗಳನ್ನು ನೇಮಿಸಿ. ಅಲ್ಲಿ ಕೆಲಸ ಮಾಡುವವರಿಗೆ ತಾಳ್ಮೆಯಿಂದ ವರ್ತಿಸಲು ಸೂಚಿಸಿ.

ಬನ್ನಿ, ತುಸು ವಿಶಾಲ ದೃಷ್ಟಿಯುಳ್ಳವರಾಗಿ, ನಮ್ಮೊಡನಿರುವ ಹಿರಿಯರಿಗೆ ನಮ್ಮಿಂದಾಗುವ ಸಹಾಯ ಮಾಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT