ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ತಲ್ಲಣಗಳಿಗೆ ತಲೆಮಾರಿನ ನಂಟು

ವರ್ತಮಾನದ ಸಮಸ್ಯೆಗಳಿಗೆ ಕುವೆಂಪು ಅವರ ಸೃಷ್ಟಿಶೀಲ ಸಾಹಿತ್ಯದಲ್ಲಿ ಉತ್ತರ ಅಡಗಿದೆ
Last Updated 29 ಡಿಸೆಂಬರ್ 2020, 9:09 IST
ಅಕ್ಷರ ಗಾತ್ರ

ಇಂದು (ಡಿ. 29) ಕುವೆಂಪು ಜನ್ಮದಿನ. ಯಾವ ಕವಿ ತನ್ನ ಜೀವಿತಾವಧಿಯ ನಂತರವೂ ಪ್ರಸ್ತುತ ಎನ್ನಿಸಿಕೊಳ್ಳುವ ತಿಳಿವಳಿಕೆಗಳ ತೀವ್ರತೆಯನ್ನು ಸೃಷ್ಟಿಸುತ್ತಾನೋ ಆತ ಆ ನಾಡಿನ ಜ್ಞಾನ ಸಂಪತ್ತಾಗುತ್ತಾನೆ. ಚಿರಸ್ಥಾಯಿಯಾದ ಚಿಂತಕನಾಗಿ ಉಳಿಯುತ್ತಾನೆ. ಈ ದಿಸೆಯಲ್ಲಿ ಕುವೆಂಪು ಕನ್ನಡದ ಮಾನ, ಕನ್ನಡದ ಪ್ರಾಣವೆಂಬಂತೆ ಬರೆದವರು.

ಒಮ್ಮೆ ಲೇಖಕರೊಬ್ಬರು ಕುವೆಂಪು ಅವರನ್ನು ಸಂದರ್ಶಿಸುತ್ತಾರೆ. ಆಗ ಕುವೆಂಪು ಹೀಗೆ ಹೇಳುತ್ತಾರೆ: ‘ಈ ಕುವೆಂಪು ಬದುಕಿರುವಾಗ ಕುವೆಂಪು ಸಾಹಿತ್ಯ ಮತ್ತು ವ್ಯಕ್ತಿತ್ವ ಕುರಿತ ಚರ್ಚೆಗಳು ಸಾಕಷ್ಟು ನಡೆಯು ತ್ತವೆ, ನಡೆಯಲಿ. ಆದರೆ ನನ್ನ ಕಾಲಾನಂತರದಲ್ಲಿ ಬರುವ ಮುಂದಿನ ತಲೆಮಾರು ನನ್ನನ್ನು ಕುರಿತಂತೆ ಚರ್ಚಿಸಿ, ಆವತ್ತಿನ ಪ್ರಸ್ತುತತೆಗೆ ಈ ಕುವೆಂಪು ಅನಿವಾರ್ಯವೋ ಆಪ್ಯಾಯಮಾನವೋ ಆದರೆ, ಆಗ ಮಾತ್ರ ಈ ಕುವೆಂಪು ಸರ್ವಕಾಲಕ್ಕೂ ಕನ್ನಡದ ಕವಿಯಾಗಿ ಉಳಿಯಲು ಸಾಧ್ಯ’ ಎನ್ನುತ್ತಾರೆ.

ಇಂದು ಕುವೆಂಪು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅವರ ವಿಚಾರಧಾರೆಗಳಿವೆ. ಅವು ಇವತ್ತಿನ ನಮ್ಮ ಕನ್ನಡದ ಅನೇಕ ಸಮಸ್ಯೆಗಳಿಗೆ ಉತ್ತರ ಹುಡುಕುವ, ಒರೆಗೆ ಹಚ್ಚುವ ಕೆಲಸ ಮಾಡುತ್ತಿವೆ. ಹಾಗೆ ನೋಡಿದರೆ, ಭಾಷಾ ಮಾಧ್ಯಮದ ವಿಚಾರದಲ್ಲಿ ದೊಡ್ಡ ಚರ್ಚೆಗಳೇ ನಡೆಯುತ್ತಿರುವ ಕಾಲವಿದು. ಇಲ್ಲಿ ಕುವೆಂಪು ಕೂಡ ‘ಮೈಸೂರು ರಾಜ್ಯ’ ಎಂದು ಕರೆಯುತ್ತಿದ್ದ ಈ ನಾಡಿಗೆ ‘ಕರ್ನಾಟಕ’ ಎಂದು ಪುನರ್‌ ನಾಮಕರಣಕ್ಕಾಗಿ ಆಗ್ರಹಿಸಿ ನಡೆದ ಚಳವಳಿ, ಹೋರಾಟಗಳಿಗೆ ತಮ್ಮ ಬರವಣಿಗೆಯಿಂದ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ಆಗ ಕುವೆಂಪು ಅವರಿಗೆ ನೋಟಿಸ್ ಜಾರಿ ಮಾಡುತ್ತದೆ. ನೋಟಿಸಿಗೆ ಉತ್ತರವಾಗಿ ತುಸು ಹೆಚ್ಚು ಭಾವೋದ್ವೇಗದಲ್ಲೇ ಅವರು ಬರೆದದ್ದು ‘ನೃಪತುಂಗನೆ ಚಕ್ರವರ್ತಿ, ಪಂಪನಲ್ಲಿ ಮುಖ್ಯಮಂತ್ರಿ...’ ಎಂಬ ‘ಅಖಂಡ ಕರ್ನಾಟಕ’ ಎಂಬ ಕವಿತೆ. ಇಲ್ಲಿ ಕುವೆಂಪು ಎಲ್ಲೂ ಹಳಿ ತಪ್ಪಲಿಲ್ಲ. ಅಖಂಡ ಕರ್ನಾಟಕದ ಪರಿಕಲ್ಪನೆಯನ್ನು ಗೊಂದಲಗೊಳಿಸಲಿಲ್ಲ. ಅವರಿಗೊಂದು ಸ್ಪಷ್ಟತೆ ಇತ್ತು. ಅದಕ್ಕಾಗಿ ಅವರು ತಾವು ಸರ್ಕಾರಿ ಸೇವೆಯಲ್ಲಿದ್ದೂ ಕನ್ನಡದ ವಿಷಯಕ್ಕೆ ಬಂದಾಗ ಸರ್ಕಾರವನ್ನೇ ಎದುರು ಹಾಕಿಕೊಂಡು ಪ್ರತಿಕ್ರಿಯಿಸಿದರು. ಕರ್ನಾಟಕ ವಿಭಜನೆಯ ಮಾತುಗಳಿಗೆ ಮತ್ತು ಅದಕ್ಕೆ ಪ್ರತಿಕ್ರಿಯಿಸುವ ಹೋರಾಟ ಗಾರರಿಗೆ ಕುವೆಂಪು ಪ್ರಸ್ತುತವಾಗುತ್ತಾರೆ.

ಸೃಷ್ಟಿಶೀಲ ಸಾಹಿತ್ಯದ ಶಕ್ತ ಸಾಧ್ಯತೆಗಳನ್ನು ತೋರಿಸಿದ ಕುವೆಂಪು ತಮ್ಮ ‘ಶ್ರೀ ರಾಮಾಯಣ ದರ್ಶನಂ’ ಕೃತಿ ಬರೆಯುವ ವೇಳೆಗೆ ‘ಇದು ಕುವೆಂಪು ಸೃಷ್ಟಿಸಿದ ಕೃತಿ ಎಂಬುದಕ್ಕಿಂತ ಕುವೆಂಪು ಅವರನ್ನೇ ಆ ಕೃತಿ ಸೃಷ್ಟಿಸಿತು’ ಎಂಬ ಭಾವತಲ್ಲೀನತೆಯಲ್ಲಿ ಧನ್ಯರಾಗು ತ್ತಾರೆ. ಈ ಕಾರಣಕ್ಕಾಗಿಯೇ ಬಹುಶಃ ವರಕವಿ ದ.ರಾ.ಬೇಂದ್ರೆ ಅವರು ಯುಗದ ಕವಿಗೆ ಜಗದ ಕವಿಗೆ ರಾಮಾಯಣದಿಂದಲೇ ಕೈಮುಗಿದ ಕವಿಗೆ ನಮಿಸಿದ್ದು.

ಕನ್ನಡ ಸಾಹಿತ್ಯ ಚರಿತ್ರೆಯು ಪಂಪನಿಂದ ಕುವೆಂಪು ವರೆಗೆ ಎಂದು ಉಲ್ಲೇಖಿಸುತ್ತದೆ. ಈ ಉಲ್ಲೇಖ ಅಷ್ಟು ಸುಲಭದ್ದಲ್ಲ. ಪಂಪನಿಗೂ ಕುವೆಂಪುವಿಗೂ ಸಾಮ್ಯತೆ ಗಳೇನಾದರೂ ಇವೆಯೇ ಎಂದು ಹುಡುಕಿದರೆ, ಇಡೀ ವಿಶ್ವವನ್ನೇ ಕಾಡುವ ವರ್ಗಸಂಘರ್ಷಕ್ಕೆ ಈ ಇಬ್ಬರ ಮನಸ್ಸುಗಳು ಮಿಡಿದಿವೆ. ಹಾಗಾಗಿಯೇ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಪಂಪ 10ನೇ ಶತಮಾನದಲ್ಲಿ ಪ್ರತಿಕ್ರಿಯಿಸಿದರೆ, 20ನೇ ಶತಮಾನದಲ್ಲಿ ಕುವೆಂಪು ‘ಮನುಜಮತ ವಿಶ್ವಪಥ’ ವೆಂಬ ವಿಶ್ವಮಾನವ ಸಂದೇಶವನ್ನು ಸಾರಿದರು.

ವರ್ತಮಾನದ ಎಲ್ಲ ತಲ್ಲಣಗಳಿಗೆ ಕುವೆಂಪು ಸಾಹಿತ್ಯದಲ್ಲಿ ಉತ್ತರವಿದೆ. ಹಾಗಂತ ಅವರು ಬರೆದು ದೆಲ್ಲಾ ಶ್ರೇಷ್ಠ ಎಂದು ಕನ್ನಡ ವಿಮರ್ಶೆಯೇನೂ ಸುಖಾ ಸುಮ್ಮನೆ ಅವರನ್ನು ಒಪ್ಪಿಕೊಂಡಿಲ್ಲ. ಅವರ ಎಲ್ಲ ಸಾಹಿತ್ಯ ಪ್ರಕಾರಗಳನ್ನೂ ಕನ್ನಡದ ವಿಮರ್ಶಾ ವಿವೇಕ ವಿವೇಚಿಸಿದೆ, ಚರ್ಚಿಸಿದೆ. ಆನಂತರದಲ್ಲಿಯೇ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಕನ್ನಡಕ್ಕೆ ಮೊದಲ ರಾಷ್ಟ್ರಕವಿಯಾಗಿ ಒದಗಿಬಂದದ್ದು.

‘ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗು ನೀ ಕನ್ನಡವಾಗಿರು’– ಎಂದು ಕುವೆಂಪು ಬರೆದಾಗ ಇದು ಈ ನಾಡಿನ ಕನ್ನಡಿಗರಿಗೆ ಬರೆದಿದ್ದಿರಬೇಕು ಎನಿಸಿತ್ತು. ಆದರೆ ಇದು ನಮಗಷ್ಟೇ ಅಲ್ಲ ಹೊರನಾಡ ಕನ್ನಡಿಗರಿಗೂ ಕನ್ನಡದ ಉತ್ಸಾಹ ತುಂಬಿದೆ. ಇವತ್ತು ನಮ್ಮ ಕನ್ನಡದ ಹುಡುಗರು ಉದ್ಯೋಗ ಅರಸಿ ಹೋಗಿ ನೆಲೆಗೊಂಡಿರುವ ದೇಶಗಳಲ್ಲೆಲ್ಲಾ ಕನ್ನಡ ಸಂಘಗಳನ್ನು ಕಟ್ಟಿಕೊಂಡು, ಕನ್ನಡದ ತೇರನ್ನು ಎಳೆಯುತ್ತಿದ್ದಾರೆ. ಇದನ್ನು ನೋಡಿದರೆ ಕುವೆಂಪು ಅವರ ಮೇಲಿನ ಸಾಲುಗಳು ಇಂಥಾ ಸಾಗರದಾಚೆಯ ಇಂದಿನ ಕನ್ನಡದ ಸಾಂಗತ್ಯಕ್ಕೆ ಅಂದೇ ಮುನ್ನುಡಿ ಬರೆದಂತೆ ಎನಿಸುತ್ತದೆ.

‘ಪ್ರತಿಯೊಬ್ಬ ವಿದ್ಯಾರ್ಥಿಯೂ ಒಬ್ಬ ಗೌರವಾನ್ವಿತ ತಪಸ್ವಿ’ ಎಂದವರು ಕುವೆಂಪು. ಹಾಗೆಂದರೆ, ತಪಸ್ವಿಯಂತೆ ವಿದ್ಯಾರ್ಥಿ ಕೂಡ ಲೌಕಿಕ ಆಕರ್ಷಣೆಗಳಿಂದ ದೂರವಾಗಿ ಏಕಾಗ್ರತೆ ಗಳಿಸಿಕೊಂಡರೆ ಮಾತ್ರ ಯಶಸ್ಸು ಸಾಧ್ಯ ಎಂದರ್ಥ. ಇಂದಿನ ವಿದ್ಯಾರ್ಥಿ ಸಮುದಾಯದ ಯಶಸ್ಸಿಗೂ ಇವತ್ತಿನ ಅವರ ಆಕರ್ಷಣೆ ಗಳ ಸಮಸ್ಯೆಗಳಿಗೂ ಇದರಲ್ಲಿ ಉತ್ತರ ಅಡಗಿದೆ.

ಪ್ರಶಸ್ತಿಗಳಿಂದ, ಪುರಸ್ಕಾರಗಳಿಂದ ಕುವೆಂಪು ಅವರನ್ನು ಕನ್ನಡದ ಮಕ್ಕಳಿಗೆ ಪರಿಚಯಿಸುವುದಕ್ಕಿಂತ, ಅವರು ಹುಟ್ಟಿದ ನಾಡಲ್ಲಿ ನಾವೆಲ್ಲಾ ಹುಟ್ಟಿದ್ದೇವೆ, ಅವರು ಬದುಕಿದ ಊರಲ್ಲಿ ನಾವೂ ಬದುಕಿದ್ದೇವೆಂದು ಅರ್ಥೈಸುವುದು ಅತ್ಯಂತ ಅರ್ಥಪೂರ್ಣ ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT