ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬೇಕಾಗಿದೆ ಶಾಸನಸಭೆಯಲ್ಲಿ ಮೀಸಲಾತಿ

ಹಿಂದುಳಿದ ವರ್ಗಗಳ ಪರವಾಗಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕಿದೆ
ಅಕ್ಷರ ಗಾತ್ರ

ರಾಜ್ಯದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ಈಗ ಮೀಸಲು ಪರಿಷ್ಕರಣೆಗೆ ಸಂಬಂಧಿಸಿದಂತೆ ಬಲವಾದ ಕೂಗು ಕೇಳಿಬರುತ್ತಿದೆ. ಕೆಲ ರಾಜ್ಯಗಳಲ್ಲಿ ಈ ಹೋರಾಟದ ಬಿಸಿಯು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸ್ಥಿತಿ ತಂದಿಟ್ಟಿದ್ದನ್ನು ನೋಡಿದ್ದೇವೆ. ಎಷ್ಟೋ ವರ್ಷಗಳಿಂದ ಅವಕಾಶವಂಚಿತವಾಗಿರುವ ಸಮುದಾಯಗಳು ತಮ್ಮ ಬೇಡಿಕೆ ಈಡೇರದ ಸಂದರ್ಭದಲ್ಲಿ ಇಂಥ ಹೋರಾಟಕ್ಕೆ ಇಳಿದರೆ, ಇನ್ನು ಕೆಲವೊಮ್ಮೆ ಬಲಾಢ್ಯ ಸಮುದಾಯಗಳೂ ಮೀಸಲು ಹೆಚ್ಚಳಕ್ಕೆ ಆಗ್ರಹಿಸಿ ಅದಕ್ಕಾಗಿ ವಿಭಿನ್ನ ದಾರಿಗಳನ್ನು ಹಿಡಿದ ಉದಾಹರಣೆಗಳಿವೆ. ರಾಜ್ಯದಲ್ಲಿ ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಿರುವ ಹೋರಾಟಗಳು, ಬಹಿರಂಗ ಸಭೆಗಳು, ಬಿನ್ನವತ್ತಳೆಗಳು, ರಾಜಕೀಯ ಒತ್ತಡಗಳು ಎರಡನೇ ರೀತಿಯವು.

ಈ ಹಂತದಲ್ಲಿ ನಿಷ್ಕರ್ಷೆ ಆಗಬೇಕಿರುವುದು ಅವಕಾಶವಂಚಿತ ತಳ ಸಮುದಾಯ ಹಾಗೂ ಹಿಂದುಳಿದ ಜಾತಿಗಳ ಮೀಸಲು ಪ್ರಮಾಣ ವಿಸ್ತರಣೆಯೇ ಹೊರತು ಉಳ್ಳವರ ಅವಕಾಶ ವಿಸ್ತರಣೆ ದಾರಿಗಳಲ್ಲ. ಹಿಂದುಳಿದ ವರ್ಗಗಳಿಗೆ ಲೋಕಸಭೆ, ವಿಧಾನಸಭೆ, ರಾಜ್ಯಸಭೆ, ವಿಧಾನ ಪರಿಷತ್ತಿನಲ್ಲಿ ರಾಜಕೀಯ ಮೀಸಲು ನಿಗದಿಯಾಗಬೇಕೆಂಬ ಬೇಡಿಕೆ ಇತ್ತೀಚಿನದ್ದಲ್ಲ. 1991ರಲ್ಲಿ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಇಂತಹದ್ದೊಂದು ವಾದ ಮುನ್ನೆಲೆಗೆ ಬಂದಿತ್ತು. ಆದರೆ ಅದು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ–ಉಪಾಧ್ಯಕ್ಷ, ಮೇಯರ್-ಉಪಮೇಯರ್ ಹುದ್ದೆಗಳಿಗೆ ಸಂಬಂಧಿಸಿದ್ದಾಗಿತ್ತು. ಇಂತಹದ್ದೊಂದು ರಾಜಕೀಯ ಮೀಸಲು ಅವಕಾಶ ಸಿಕ್ಕಿದ್ದು ಜನತಾದಳ ನೇತೃತ್ವದ ಸರ್ಕಾರದ ಅವಧಿಯಲ್ಲಿ.

ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡರು ಹಿಂದುಳಿದ ವರ್ಗಗಳ ಬಹುಕಾಲದ ಬೇಡಿಕೆ ಈಡೇರಿಸುವುದಕ್ಕಾಗಿ ಹಿರಿಯ ಸಚಿವರಾಗಿದ್ದ ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್, ಪಿ.ಜಿ.ಆರ್‌.ಸಿಂಧ್ಯ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಿದ್ದರು. ಈ ಸಮಿತಿಯು ಪಂಚಾಯತ್ ರಾಜ್‌ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳ ಸಮುದಾಯದವರಿಗೆ ಮೀಸಲು, ಆಯ್ಕೆಯಾದ ಸದಸ್ಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೀಡುವಾಗ ಶೇ 27ರಷ್ಟು ಮೀಸಲು ನೀಡುವಂತೆ ವರದಿ ನೀಡಿತ್ತು. ಆದರೆ ಸಂಪುಟ ಸಭೆಯಲ್ಲಿ ಉಪಸಮಿತಿ ವರದಿ ಮಂಡನೆಯಾಗುವುದಕ್ಕೆ ಭಾರಿ ವಿರೋಧ ವ್ಯಕ್ತವಾಯಿತು. ಹೀಗಾಗಿ ಈ ವಿಚಾರದಲ್ಲಿ ದೇವೇಗೌಡರು ಸ್ವಲ್ಪ ಹಿಂದೇಟು ಹಾಕಿದರು.

ಆದರೆ ಸಿದ್ದರಾಮಯ್ಯ ಹಾಗೂ ಎಂ.ಪಿ.ಪ್ರಕಾಶ್ ಈ ವರದಿ ಮಂಡನೆ ಪ್ರಯತ್ನದಿಂದ ಹಿಂದೆ ಸರಿಯಲಿಲ್ಲ. ಈ ವಿಚಾರಕ್ಕೆ ಅಂದಿನ ಉಪಮುಖ್ಯಮಂತ್ರಿ ಜೆ.ಎಚ್.ಪಟೇಲರು ಬಲವಾದ ಒತ್ತು ನೀಡಿದರು. ವಿರೋಧದ ಧ್ವನಿ ಸಂಪುಟ ಸಭೆಯಲ್ಲಿ ಕ್ಷೀಣವಾಗುವಂತೆ ನೋಡಿಕೊಂಡರು ಎಂಬ ಮಾತು ರಾಜಕೀಯ ವಲಯದಲ್ಲಿದೆ. ಈ ಮೂಲಕ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಲ್ಲಿ ಶೇ 27ರಷ್ಟು ಸ್ಥಾನ ಹಿಂದುಳಿದ ವರ್ಗಗಳಿಗೆ ಲಭ್ಯವಾಗುವಂತಾಯಿತು. ಶಾಸನಸಭೆಯಲ್ಲೂ ಇದೇ ಬಗೆಯಲ್ಲಿ ರಾಜಕೀಯ ಪ್ರಾತಿನಿಧ್ಯ ಬೇಕಲ್ಲವೇ?

ರಾಜ್ಯ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯದವರಿಗೆ ಮಾತ್ರ ಮೀಸಲು ಕ್ಷೇತ್ರಗಳಿವೆ. ಯಾವುದೇ ಮೀಸಲು ಕ್ಷೇತ್ರಗಳು ಇಲ್ಲವಾದರೂ ಜಾತಿ ಸಮೀಕರಣ ಹಾಗೂ ಇನ್ನಿತರ ಕಾರಣಗಳಿಂದ ವಿಧಾನಸಭೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಕುರುಬ ಸಮುದಾಯದ 10ರಿಂದ 12 ಸದಸ್ಯರು ಆಯ್ಕೆಯಾಗುತ್ತಿದ್ದಾರೆ. ಈಡಿಗ ಸಮುದಾಯದ ಕೆಲ ಶಾಸಕರನ್ನು ಬಿಟ್ಟರೆ ಹಿಂದುಳಿದ ವರ್ಗದ ಸಂಖ್ಯಾಬಲ ಬೆರಳೆಣಿಕೆಯಷ್ಟು ಮಾತ್ರವಿದೆ. ಒಂದೇ ಒಂದು ಲೋಕಸಭಾ ಕ್ಷೇತ್ರವೂ ಹಿಂದುಳಿದ ವರ್ಗಕ್ಕೆ ಮೀಸಲಾಗಿಲ್ಲ. ಈಗಿರುವ ಚುನಾವಣಾ ವ್ಯವಸ್ಥೆಯಲ್ಲಿ ಈ ವರ್ಗದ ಜನರು ಶಾಸಕರು, ಸಂಸದರಾಗುವುದು ತೀರಾ ಕಷ್ಟ. ಮೇಲ್ಮನೆಯೂ ಬಲಾಢ್ಯ ಜಾತಿ, ಉದ್ಯಮಿಗಳು, ವಿವಿಧ ರಂಗದ ಲಾಬಿಗಳ ಪಾಲಾಗುತ್ತಿರುವಾಗ ಈ ತಳ ಸಮುದಾಯಕ್ಕೆ ದಕ್ಕಲು ಸಾಧ್ಯವೇ?

ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕಿಂತಲೂ ಕೇಂದ್ರ ಸರ್ಕಾರದ ಪಾಲು ಮಹತ್ವದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಹಿಂದುಳಿದ ವರ್ಗಕ್ಕೆ ಸೇರಿದವರು. ಸ್ವಯಂಬಲದಿಂದ ದೇಶದ ಅತ್ಯುನ್ನತ ಪದವಿಗೆ ಏರಿರುವ ಅವರು ತಳಸಮುದಾಯದ ತಳಮಳಗಳನ್ನು ಕಂಡವರೇ ಅಲ್ಲವೇ? ಹೀಗಾಗಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲೇಬೇಕಿದೆ.

ಅಂದಹಾಗೆ ರಾಜ್ಯದಲ್ಲಿ ಈಗ ಎಸ್‍ಟಿ ಮೀಸಲಿಗಾಗಿ ಆಗ್ರಹಿಸಿ ಕುರುಬರ ಹೋರಾಟ ನಡೆಯುತ್ತಿದೆ. ಈ ಹೋರಾಟದ ಹಿನ್ನೆಲೆಯನ್ನು ಕೆದಕುವ ಸಾಹಸಕ್ಕೆ ಕೈ ಹಾಕುವುದು ಈ ಸಂದರ್ಭದಲ್ಲಿ ಪ್ರಸ್ತುತವೆನಿಸಲಾರದು. ಹೋರಾಟದ ಉದ್ದೇಶ ಶುದ್ಧವಾಗಿದ್ದರೆ ಸಾಕು. ಪ್ರವರ್ಗ 2ಎಯಲ್ಲಿ 105 ಜಾತಿಗಳಿವೆ. ಅವರೆಲ್ಲರೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯ ಅಧಿಕಾರದ ದೃಷ್ಟಿಯಿಂದ ಯಾವ ಸ್ಥಿತಿಯಲ್ಲಿದ್ದಾರೆ ಎಂದು ಹೊಸದಾಗಿ ಸಂಶೋಧನೆ ನಡೆಸಬೇಕಿಲ್ಲ. ನಮ್ಮ ಈ ಕ್ಷಣದ ಹೋರಾಟ, ಹಾರಾಟ ಆ ಎಲ್ಲ ವರ್ಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಡೆಯಬೇಕು.

ಹಿಂದುಳಿದ ವರ್ಗದವರಿಗೆ ರಾಜಕೀಯ ಮೀಸಲು ಸೌಲಭ್ಯದ ಕನಸು ನನಸಾಗಬೇಕಿದ್ದರೆ ಸಂವಿಧಾನಕ್ಕೆ ತಿದ್ದುಪಡಿಯಾಗಲೇಬೇಕು. ಅದು ಈಗಲ್ಲದೆ ಇನ್ನು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT