ಎಡಪಂಥ- ಬಲಪಂಥ ಎಂಬ ವ್ಯಾಖ್ಯೆ

7

ಎಡಪಂಥ- ಬಲಪಂಥ ಎಂಬ ವ್ಯಾಖ್ಯೆ

Published:
Updated:

‘ಜಾತ್ಯತೀತ’ ಮತ್ತು ‘ಧರ್ಮನಿರಪೇಕ್ಷ’ ಎಂಬ ಪದಗಳು ಇಂಗ್ಲಿಷ್‌ನ ‘ಸೆಕ್ಯುಲರ್’ ಪದಕ್ಕೆ ಸಂವಾದಿಯಾಗಿವೆ. ಈ ಎರಡು ಪದಗಳ ಪೈಕಿ ಒಂದರಲ್ಲಿ ಜಾತಿ, ಇನ್ನೊಂದರಲ್ಲಿ ಧರ್ಮ ಪ್ರಧಾನವಾಗಿದೆ. ಜಾತಿಪ್ರಧಾನವಾದ ‘ಜಾತ್ಯತೀತ’ವನ್ನೇ ಈ ಲೇಖನದಲ್ಲಿ ಬಳಸಲಾಗುತ್ತಿದೆ.

ಜಾತ್ಯತೀತ ಎಂಬುದು ನಮ್ಮ ದೇಶದಲ್ಲಿ ಹೆಚ್ಚೆಚ್ಚು ಬಳಕೆಗೆ ಬಂದಿರುವುದು, ‘ಹಿಂದೂರಾಷ್ಟ್ರ’ ಕಲ್ಪನೆಯ ಭಾರತೀಯ ಜನತಾ ಪಕ್ಷ ಪ್ರವರ್ಧಮಾನಕ್ಕೆ ಬರತೊಡಗಿದ ಮೇಲೆ ಎಂಬುದು ಸರ್ವವಿದಿತ.

1975ರ ಜೂನ್ 12ರಂದು ಅಲಹಾಬಾದ್ ಹೈಕೋರ್ಟ್, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ಅನೂರ್ಜಿತಗೊಳಿಸಿತು. ಇದಾಗುತ್ತಿದ್ದಂತೆ ಪ್ರತಿಪಕ್ಷಗಳು ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ ಅವರ ಮುಂದಾಳತ್ವದಲ್ಲಿ ಇಂದಿರಾ ಅವರ ರಾಜೀನಾಮೆಗಾಗಿ ದೇಶದಾದ್ಯಂತ ಚಳವಳಿ ನಡೆಸಿದವು. ಇದರಿಂದ ಕಂಗಾಲಾದ ಇಂದಿರಾ, ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಜೂನ್ 25ರ ಮಧ್ಯರಾತ್ರಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಅದೊಂದು ಕರಾಳ ಪರ್ವ.

1977ರಲ್ಲಿ ತುರ್ತುಪರಿಸ್ಥಿತಿ ಕೊನೆಗೊಂಡು, ಸಾರ್ವತ್ರಿಕ ಚುನಾವಣೆಗೆ ದೇಶ ಅಣಿಯಾಯಿತು. ಜನಸಂಘವೂ ಸೇರಿದಂತೆ ಪ್ರಜಾಪ್ರಭುತ್ವ ಪರವಾದ ಎಲ್ಲಾ ಪ್ರತಿಪಕ್ಷಗಳು ಜಯಪ್ರಕಾಶರ ‘ಸಂಪೂರ್ಣ ಕ್ರಾಂತಿ’ ಘೋಷಣೆಯ ಭಾಗವಾಗಿ ‘ಜನತಾ ಪಕ್ಷ’ ಎಂಬ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದವು. ಆನಂತರ ನಡೆದ ಚುನಾವಣೆಯಲ್ಲಿ ‘ಜನತಾ ಪಕ್ಷ’ ಜಯಗಳಿಸಿತು. ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿ ಮೊರಾರ್ಜಿ ದೇಸಾಯಿ ಆಯ್ಕೆಯಾದರು. ಆದರೆ ಆ ಪಕ್ಷ ಹೆಚ್ಚುಕಾಲ ಅಧಿಕಾರದಲ್ಲಿ ಉಳಿಯಲಿಲ್ಲ. 1980ರ ಹೊತ್ತಿಗೆ ಪಕ್ಷ ಒಡೆದು ಮತ್ತೆ ಚುನಾವಣೆ ನಡೆದು, ಇಂದಿರಾ ಪುನಃ ಅಧಿಕಾರ ಹಿಡಿದರು. ಆಗ ಜನಸಂಘವು ಜನತಾ ಪಕ್ಷದಿಂದ ಹೊರಬಂದು ತನ್ನ ಅಸ್ತಿತ್ವವನ್ನು ಬೇರೊಂದು ರೂಪದಲ್ಲಿ ಸ್ಥಾಪಿಸಿಕೊಂಡಿತು.

1980ರಲ್ಲಿ ಮುಂಬೈಯ ಮರೀನ್‍ಡ್ರೈವ್ ತೀರದಲ್ಲಿ ಜನಸಂಘದ ಬೃಹತ್‌ ಸಭೆ ನಡೆಯಿತು. ಅಲ್ಲಿ ‘ಭಾರತೀಯ ಜನತಾ ಪಕ್ಷ’ ಎಂಬ ಹೊಸ ಹೆಸರಿನೊಂದಿಗೆ ಪಕ್ಷ ಅಸ್ತಿತ್ವಕ್ಕೆ ಬಂದಿತು. ಅದೊಂದು ಐತಿಹಾಸಿಕ ಘಟ್ಟ. ಜನಸಂಘದಂತೆ, ಭಾರತೀಯ ಜನತಾ ಪಕ್ಷವೂ ಹಿಂದೂರಾಷ್ಟ್ರ ಮರುಸ್ಥಾಪನೆಗೆ ಬದ್ಧವಾಗಿದ್ದರಿಂದ ಅದು ಬಲಪಂಥೀಯ ಪಕ್ಷವೆಂಬ ಹೆಸರಿಗೆ ಪಕ್ಕಾಯಿತು. ಆ ಕಾರಣದಿಂದ ಬಿಜೆಪಿಯನ್ನು ‘ಮೂಲಭೂತವಾದಿ ಪಕ್ಷ’ವೆಂದು ಉಳಿದ ಪಕ್ಷಗಳು ಜರೆದವು.

ಶಿಸ್ತು, ಸಂಯಮ, ಮುಂದಾಲೋಚನೆ ಮತ್ತು ಪೂರಕ ಕಾರ್ಯಕ್ರಮಗಳನ್ನು ಬಿಜೆಪಿ ವ್ಯವಸ್ಥಿತವಾಗಿ ಮಾಡಿಕೊಂಡು ಬಂದರೆ, ಉಳಿದ ಪಕ್ಷಗಳು (ಕಮ್ಯುನಿಸ್ಟ್ ಬಣಗಳನ್ನು ಹೊರತುಪಡಿಸಿ) ಸಾಂದರ್ಭಿಕವಾಗಿ ಏಳುಬೀಳುಗಳನ್ನು ಕಂಡುಕೊಳ್ಳುತ್ತಿವೆ. ಶಿಸ್ತು, ಸಂಯಮ ಹಾಗೂ ಪೂರಕ ಕಾರ್ಯಕ್ರಮಗಳು ಅವುಗಳಲ್ಲಿ ಅಪರೂಪ ಎಂದೇ ಹೇಳಬಹುದು. ಹೀಗಾಗಿ, ಸಣ್ಣ ಗಿಡವಾಗಿದ್ದ ಬಿಜೆಪಿ ಇಂದು ಹೆಮ್ಮರವಾಗಿ ಬೆಳೆದಿದೆ. ಧರ್ಮಾಧರಿತ ಬಿಜೆಪಿಯು ಬಲಪಂಥೀಯ ಪಕ್ಷವೆಂದೂ ಉಳಿದವು ಜಾತ್ಯತೀತ ಪಕ್ಷಗಳು ಅಥವಾ ಎಡ ಪಕ್ಷಗಳೆಂದೂ ಹೆಸರಾಗಿವೆ. ಆದರೆ ಸತ್ಯ ಇದರಾಚೆಗೂ ಇದೆ.

ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ. ಆ ಕುರಿತು ಹೆಮ್ಮೆಪಡುವವರೂ ಇದ್ದಾರೆ. ಆದರೆ ಕವಿ ಕುವೆಂಪು, ನಮ್ಮ ಪ್ರಜಾಪ್ರಭುತ್ವವನ್ನು ವಿಶ್ಲೇಷಿಸುತ್ತ ‘ಇಟ್ ಈಸ್ ಮಾಕರಿ ಆಫ್ ಡೆಮಾಕ್ರಸಿ’ (ಇದು ಪ್ರಜಾಪ್ರಭುತ್ವದ ಅಣಕ) ಎಂದಿದ್ದರು.

ಹಾಗಿದ್ದರೆ ನಮ್ಮಲ್ಲಿ ಇರುವ ಪ್ರಜಾಪ್ರಭುತ್ವ ಯಾವ ರೀತಿಯದ್ದು? ಸೂಕ್ಷ್ಮವಾಗಿ ಮತ್ತು ತಾರ್ಕಿಕವಾಗಿ ಚಿಂತಿಸಿದರೆ ಭಾರತದಲ್ಲಿರುವುದು ‘ಬೂರ್ಜ್ವಾ ಅಥವಾ ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗಗಳ ಹಿತ ಕಾಯ್ದುಕೊಳ್ಳಲು ಇರುವಂಥ ಪ್ರಜಾಪ್ರಭುತ್ವ’ ಎಂಬುದು ಮನದಟ್ಟಾಗುತ್ತದೆ.

ಬಂಡವಾಳಗಾರರಿಗೆ, ವ್ಯಾಪಾರಿಗಳಿಗೆ, ಜಮೀನುದಾರರಿಗೆ ಅನುಕೂಲವಾಗುವಂಥ ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರಿಗೆ ತಲೆ ಎತ್ತಲಾಗದು. ಕೆಳವರ್ಗದವರಿಗೆ ಈ ಪ್ರಜಾಪ್ರಭುತ್ವ ಬಿಸಿಲ್ಗುದುರೆ ಮಾತ್ರ. ಬಲಪಂಥೀಯ ಬಿಜೆಪಿಯಾಗಲಿ, ಎಡ ಚಿಂತನೆಗಳಾಗಲಿ ಈ ಕುರಿತು ನಿಖರ ಅಭಿಪ್ರಾಯ ಹೊಂದಿರುವವೇನು? 1991-92ರಿಂದ ಜಾರಿಗೆ ಬಂದಿರುವ ಹೊಸ ಆರ್ಥಿಕ ನೀತಿಯ ಕಾರಣದಿಂದ ದೇಶದ ಬಹುಪಾಲು ಆಸ್ತಿಯು ಬಂಡವಾಳಗಾರರ ಪಾಲಾಗುತ್ತಿರುವುದನ್ನು ಈ ಪಕ್ಷಗಳು ಗಮನಿಸುತ್ತಿಲ್ಲವೇ? ಆ ಬಗ್ಗೆ ಚಕಾರವೆತ್ತದ ಈ ಎರಡೂ ಗುಂಪುಗಳು ಪರೋಕ್ಷವಾಗಿ ಬಲಪಂಥೀಯವೇ ಆಗುತ್ತವಲ್ಲವೇ?

ಒಂದು ಪಕ್ಷವು ‘ಎಡ ಪಂಥೀಯ’ವೆಂದು ಘೋಷಿಸಿಕೊಂಡ ಮಾತ್ರಕ್ಕೆ ಅದಾಗಲಾರದು. ಧರ್ಮವೇ ಬಂಡವಾಳವಾಗಿರುವ ಬಿಜೆಪಿಯು ಬಂಡವಾಳಶಾಹಿ ವ್ಯವಸ್ಥೆಯ ಪೋಷಕ ಮತ್ತು ಅದರ ವಕ್ತಾರನಾಗಿದೆ. ಆದರೆ ಉಳಿದ ಪಕ್ಷಗಳು ಸಹ ಧರ್ಮವನ್ನು ಹೊರತುಪಡಿಸಿದ (ಅಂದರೆ ಜಾತ್ಯತೀತ ಹೆಸರಿನ) ಬಂಡವಾಳಶಾಹಿ ವ್ಯವಸ್ಥೆಯ ಪೋಷಕವೇ ಆಗಿವೆ. ಇವೆರಡರ ನಡುವೆ ಇರುವ ವ್ಯತ್ಯಾಸ ‘ಧರ್ಮ’ ಮಾತ್ರ. ಹಿಂದೂರಾಷ್ಟ್ರದ ಕಲ್ಪನೆಯಿಂದ ಎಲ್ಲಿ ತಮ್ಮ ಧರ್ಮಕ್ಕೆ ಧಕ್ಕೆ ಬರುತ್ತದೋ ಎಂದು ಇತರ ಧರ್ಮೀಯರು ಬಲಪಂಥೀಯ ಪಕ್ಷದ ವಿರುದ್ಧ ಧ್ವನಿ ಎತ್ತುತ್ತಾರೆ. ಆದರೆ, ಆರ್ಥಿಕ ವಿಷಯಕ್ಕೆ ಬಂದಾಗ ಎಲ್ಲರೂ ಬಂಡವಾಳಶಾಹಿ ಪಕ್ಷಗಳ ಪರವೇ ಆಗುತ್ತಾರೆ. ಈ ದೃಷ್ಟಿಯಿಂದ ಬಲಪಂಥೀಯ ಮತ್ತು ಎಡಪಂಥೀಯ ಪಕ್ಷಗಳ ವ್ಯಾಖ್ಯಾನ ನೀಡುವಾಗ ಎಚ್ಚರ ವಹಿಸುವುದು ಅಗತ್ಯ.

ಒಂದಲ್ಲಾ ಒಂದು ರೀತಿಯಲ್ಲಿ ಧರ್ಮ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳನ್ನು ಪೋಷಿಸುತ್ತಲೇ ಬಂದ ಗಾಂಧಿ ಮತ್ತು ಅವರಂಥ ನಾಯಕರ ಕಾರಣದಿಂದ ಜನಸಾಮಾನ್ಯರಲ್ಲಿ ಇನ್ನಿಲ್ಲದ ಗೊಂದಲ ಸೃಷ್ಟಿಯಾಗಿದೆ. ಈ ಎಲ್ಲ ಕಾರಣಗಳಿಂದ ಈಗ ನಮ್ಮ ದೇಶದಲ್ಲಿರುವ ಪ್ರಜಾಪ್ರಭುತ್ವವು ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಪರವಾಗಿದೆಯೇ ಹೊರತು ಬಡವರ ಪರ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು.

‘ಎಡಪಂಥ’ವೆಂದರೆ ಆಸ್ತಿ ಅಥವಾ ಸ್ವತ್ತಿನ ಸಾಮಾಜೀಕರಣ, ‘ಬಲಪಂಥ’ವೆಂದರೆ ಅವುಗಳ ಖಾಸಗಿತನ ಎಂಬುದು ಸರಳ ವ್ಯಾಖ್ಯಾನ. ಈ ಹಿನ್ನೆಲೆಯಲ್ಲಿ ಜಾತ್ಯತೀತ ಮತ್ತು ಬಂಡವಾಳಶಾಹಿ ಪದಗಳ ಅರ್ಥವ್ಯಾಖ್ಯೆ ಮತ್ತು ವ್ಯವಸ್ಥೆಯನ್ನು ಅರಿತುಕೊಂಡಾಗ ಆ ಕುರಿತ ಭಾವುಕತೆ ಕರಗುತ್ತದೆ ಮತ್ತು ನೈಜ ಮಾನವೀಯತೆ ಅರಳುತ್ತದೆ. ಆಗ ದೇಶ, ಭಾಷೆ, ಜನಜೀವನ, ಸಾಹಿತ್ಯ- ಸಂಸ್ಕೃತಿ... ಎಲ್ಲಕ್ಕೂ ಸಹಜ ಮೌಲ್ಯ ಬರುತ್ತದೆ. ಆ ದಾರಿಯತ್ತಲೇ ತಾನೆ ನಾವು ಕ್ರಮಿಸಬೇಕಾದುದು?

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !