ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ರಸ್ತೆ ಸುರಕ್ಷೆ: ನಿರ್ಲಕ್ಷ್ಯ ಸಲ್ಲದು

ರಸ್ತೆ ಅಪಘಾತ ತಪ್ಪಿಸಲು ಮೂಲ ಸೌಕರ್ಯ ಹೇಗೆ ಮುಖ್ಯವೋ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದೂ ಅಷ್ಟೇ ಮುಖ್ಯ
Last Updated 17 ಜನವರಿ 2023, 19:33 IST
ಅಕ್ಷರ ಗಾತ್ರ

ಬೆಳಗಾವಿ ಬಳಿ ರಸ್ತೆ ಅಪಘಾತದಲ್ಲಿ ಮೂವರು ತರುಣರ ಮರಣ, ತುಮಕೂರಿನಿಂದ ತಿಪಟೂರಿಗೆ ಹೋಗುವ ಹೆಗ್ಗೆರೆ ವಲಯದಲ್ಲಿ ಭೀಕರ ಅಪಘಾತ ದಲ್ಲಿ ಮಡಿದ ಬೈಕ್ ಸವಾರರು... ಹೀಗೆ ಪತ್ರಿಕೆಗಳಲ್ಲಿ ನಿತ್ಯವೂ ಇಂತಹ ಒಂದಲ್ಲ ಒಂದು ಸುದ್ದಿ ಇರುವುದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ ವಿಶ್ವದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ಸಂಭವಿಸುವ ದೇಶಗಳಲ್ಲಿ ಭಾರತವೂ ಒಂದು. ಅದರಲ್ಲೂ 2021ರ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ನಮ್ಮ ಕರ್ನಾಟಕಕ್ಕೆ ಮೂರನೇ ಸ್ಥಾನ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವ ಹತ್ತು ಜನರಲ್ಲಿ ಒಬ್ಬರಾದರೂ ಭಾರತೀಯರಾಗಿರುತ್ತಾರೆ. ಈ ಅಪಘಾತಗಳಲ್ಲಿ ಸಾವಿಗೀಡಾದ ಹೆಚ್ಚಿನವರು ಹದಿನೆಂಟರಿಂದ ನಲವತ್ತು ವರ್ಷ ವಯಸ್ಸಿನವರು ಮತ್ತು ದ್ವಿಚಕ್ರ ವಾಹನ ಸವಾರರು ಎನ್ನುವುದೂ ಗಮನಾರ್ಹ! ಇದರ ತೀವ್ರತೆಯನ್ನು ಮನಗಂಡು ದೇಶದಾದ್ಯಂತ ರಸ್ತೆ ಸುರಕ್ಷತಾ ಕಾರ್ಯಕ್ರಮಗಳು ನಡೆಯುತ್ತವೆ. ಇದೇ ತಿಂಗಳ 11ರಿಂದ 17ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗಿದೆ. ಹೀಗಿದ್ದರೂ ಅ‍ಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣಗಳು ನೂರಾರಿದ್ದರೂ ಪ್ರಮುಖ ಕಾರಣ ಅತಿವೇಗ!

ಯುವಜನರಿಗೆ ದ್ವಿಚಕ್ರ ವಾಹನಗಳು ಅಗತ್ಯದ ಜತೆಗೆ ಪ್ರತಿಷ್ಠೆಯೂ ಆಗಿವೆ. ಹರೆಯದ ಹುಮ್ಮಸ್ಸು, ಶಕ್ತಿ ತೋರುವ ಸಾಧನವೂ ಆಗಿವೆ. ಹೀಗಾಗಿ ಅತಿ ವೇಗವಾಗಿ ಗಾಡಿ ಚಲಾಯಿಸಿ ಇತರರ ಕಣ್ಣಲ್ಲಿ ದೊಡ್ಡವ ರಾಗುವ ಹಂಬಲ ಕೆಲವರಲ್ಲಿ ಇರುತ್ತದೆ. ಇದರ ಫಲವಾಗಿ ಹೆದ್ದಾರಿಗಳಲ್ಲಿ ವಿವಿಧ ರೀತಿಯ ಸ್ಟಂಟ್ ಮಾಡುತ್ತಾ, ಅದನ್ನು ಇತರರಿಂದ ಮೊಬೈಲ್ ಮೂಲಕ ದಾಖಲಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದರೆ ಥ್ರಿಲ್, ಲೈಕ್ ಪಡೆಯುವ ಭರದಲ್ಲಿ ರಸ್ತೆ ನಿಯಮ, ಸುರಕ್ಷಾ ಕ್ರಮಗಳನ್ನು ಗಾಳಿಗೆ ತೂರಿ ತಮ್ಮ ಬದುಕಿನ ಜತೆ ಇತರರ ಬಾಳಿನ ಜತೆಯೂ ಚೆಲ್ಲಾಟ ಆಡುತ್ತಿರುವುದು ದುಃಖಕರ.

ಇದರೊಂದಿಗೆ ನಗರಗಳಲ್ಲಿ ಕಂಡುಬರುವ ದ್ವಿಚಕ್ರ ವಾಹನ ಸವಾರರ ಅಪಾಯಕಾರಿ ವರ್ತನೆಯೆಂದರೆ ಲೇನ್ ಬದಲಾವಣೆ. ಎರಡು– ಮೂರು ಲೇನ್‍ಗಳಿರುವ ಪ್ರಮುಖ ರಸ್ತೆಗಳಲ್ಲಿ ಗಾಡಿ ಸಾಗುತ್ತಿರುತ್ತದೆ. ಹಿಂದೆ ಮುಂದೆ ನೋಡದೆ ಇನ್ನೊಂದು ಲೇನಿಗೆ ವಾಹನ ನುಗ್ಗಿಸುತ್ತಾರೆ. ಇದನ್ನು ಒಂದು ರೀತಿಯಲ್ಲಿ ಲೇನ್‍ ಹಾರುವಿಕೆ ಎನ್ನುವುದು ಸರಿ! ಹೀಗೆ ಮಾಡುವಾಗ ಇತರ ವಾಹನಗಳ ಗತಿ ಏನು?

ಇವೆಲ್ಲದರ ಪರಿಣಾಮ ಅಪಘಾತಗಳು. ಇತ್ತೀಚೆಗೆ ಹೆಚ್ಚುತ್ತಿರುವ ಮತ್ತೊಂದು ಪ್ರವೃತ್ತಿ ಆಂಬುಲೆನ್ಸ್‌ ಹಿಂಬಾಲಿಸುವುದು. ರಸ್ತೆ ನಿಯಮಗಳ ಪ್ರಕಾರ, ದೀಪಗಳನ್ನು ಬೆಳಗಿಸುತ್ತಾ, ಸೈರನ್ ಮೊಳಗಿಸುತ್ತಾ ಆಂಬುಲೆನ್ಸ್ ದಾರಿಯಲ್ಲಿ ಬಂದರೆ ಅದು ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಸೂಚಿಸುತ್ತದೆ. ಹೀಗಾಗಿ ರಸ್ತೆಯಲ್ಲಿರುವ ಇತರ ವಾಹನಗಳು ಪಕ್ಕಕ್ಕೆ ಸರಿದುನಿಂತು ಆ ವಾಹನದ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಸಾಮಾನ್ಯವಾಗಿ ಬಹುಪಾಲು ಮಂದಿ ಇದನ್ನು ಮಾಡುತ್ತಾರೆ. ಏಕೆಂದರೆ ಅದು ಜೀವನ್ಮರಣದ ಪ್ರಶ್ನೆ. ದ್ವಿಚಕ್ರ ವಾಹನ ಸವಾರರೂ ಇದಕ್ಕೆ ಹೊರತಲ್ಲ. ಆದರೆ ಅದು ದಾಟಿ ಹೋಗುತ್ತಿದ್ದಂತೆ ಅದರ ಹಿಂದೆಯೇ ತಾವೂ ಹೋಗುವ ಸಕಲ ಪ್ರಯತ್ನಗಳನ್ನೂ ಕೆಲವರು ಮಾಡುತ್ತಾರೆ. ಕಾರಣ ಇಷ್ಟೇ, ಹೇಗೂ ಇತರರು ಜಾಗ ಬಿಟ್ಟಿದ್ದಾರಲ್ಲ, ತಾವೂ ಬೇಗ ತಲುಪಬಹುದು! ಆದರೆ ಎದುರಿನಿಂದ ಬರುವ, ಹಿಂದೆ ಇರುವ ವಾಹನಗಳು ಇದನ್ನು ನಿರೀಕ್ಷಿಸದೇ ಅನೇಕ ಬಾರಿ ಅಪಘಾತಗಳು ನಡೆಯುತ್ತಿವೆ. ಆಂಬುಲೆನ್ಸ್ ಅನ್ನು ಹಿಂಬಾಲಿಸುತ್ತಾ ಅದರೊಳಗೆ ಮಲಗುವ ಪರಿಸ್ಥಿತಿ ಎದುರಾಗಬಹುದು ಎನ್ನುವ ಎಚ್ಚರ ಮುಖ್ಯ.

ರಸ್ತೆ ಅಪಘಾತಗಳಲ್ಲಿ ತಲೆಗೆ ಪೆಟ್ಟು ಬೀಳುವ ಸಾಧ್ಯತೆ ಅತಿ ಹೆಚ್ಚು. ಹೀಗಾಗಿಯೇ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಕೂದಲು ಹಾಳಾಗುತ್ತದೆ, ತಲೆಗೆ ಭಾರ, ಲುಕ್ ಇರುವುದಿಲ್ಲ ಎಂಬಂಥ ಕಾರಣ ನೀಡಿ, ಒಳ್ಳೆಯ ಗುಣಮಟ್ಟದ ಹೆಲ್ಮೆಟ್ ಬಿಟ್ಟು ಕೇವಲ ಆಲಂಕಾರಿಕ ವಸ್ತುವಿನಂತೆ ಹೆಲ್ಮೆಟ್ ಬಳಕೆ, ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವವರಲ್ಲಿ ಯುವಜನರೇ ಹೆಚ್ಚಿನವರು. ಇದರ ಜತೆಗೆ ವಾಹನ ಚಲಾಯಿಸುವಾಗ ಮೊಬೈಲ್‍ಗಳ ಬಳಕೆಯಂತೂ ಇದ್ದದ್ದೇ. ಅಕಸ್ಮಾತ್ ಸಂಚಾರ ಪೊಲೀಸರು ಕಣ್ಣಿಗೆ ಬಿದ್ದರೆ ಅವರಿಂದ ಹೇಗಾದರೂ ತಪ್ಪಿಸಿಕೊಳ್ಳಲು ಮತ್ತಷ್ಟು ವೇಗವರ್ಧನೆ, ಹಠಾತ್ತಾಗಿ ನಿಲ್ಲಿಸುವಿಕೆ ಇವೆಲ್ಲವೂ ಅಪಘಾತಕ್ಕೆ ಕಾರಣಗಳೇ!

ಅಸಮರ್ಪಕ ರಸ್ತೆಗಳು, ಅವೈಜ್ಞಾನಿಕ ರಸ್ತೆ ಉಬ್ಬುಗಳು, ಹೆಚ್ಚಿದ ಟ್ರಾಫಿಕ್, ಕಾಣದ ಟ್ರಾಫಿಕ್ ಚಿಹ್ನೆ, ಕಠಿಣವಾಗಿರದ ಕಾನೂನು ಇವೆಲ್ಲವೂ ರಸ್ತೆ ಅಪಘಾತಕ್ಕೆ ಕಾರಣ. ಹಾಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎನ್ನುವುದು ನ್ಯಾಯಯುತ ಬೇಡಿಕೆ. ಆದರೆ ವಾಹನ ಚಲಾಯಿಸುವವರೂ ತಮ್ಮ ಮತ್ತು ಇತರರ ಹಿತದೃಷ್ಟಿಯಿಂದ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ರಸ್ತೆಯಲ್ಲಂತೂ ನಿಧಾನವೇ ಪ್ರಧಾನ ಎಂಬುದನ್ನು ಯುವಜನ ಅರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT