ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮ್ಮುಖ ಚಲನೆಯ ರಾಜಕೀಯ

ಜಾತಿ ಅಥವಾ ಲಿಂಗದ ಆಧಾರದಲ್ಲಿ ದೇವಸ್ಥಾನಕ್ಕೆ ಪ್ರವೇಶ ಕೊಡುವುದಾಗಲೀ ದೇವಸ್ಥಾನದಿಂದ ಹೊರದೂಡುವುದಾಗಲೀ ಸ್ವೀಕಾರಾರ್ಹ ಮೌಲ್ಯವೇ?
Last Updated 29 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ಒಂದೆಡೆ ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ, ಬುಲೆಟ್ ಟ್ರೈನು ಓಡಿಸುವ, ಡಿಜಿಟಲ್ ಇಂಡಿಯಾ ರೂಪಿಸುವ ‘ತಂತ್ರಜ್ಞಾನ ಮೋಹಿ’ ಮನಸ್ಥಿತಿಯನ್ನು ಪ್ರದರ್ಶನಕ್ಕಿಡುವ ನಾಯಕರು, ಮತ್ತೊಂದೆಡೆ ತಾವೇ ಪ್ರತಿಪಾದಿಸುವ ‘ಹಿಂದೂ ನಾವೆಲ್ಲರೂ ಒಂದು’ ಎಂಬ ಧೋರಣೆಗೆ ವಿರುದ್ಧವಾಗಿರುವ ಆಚರಣೆ, ನಂಬಿಕೆಗಳ ಉಳಿವು ಮತ್ತು ಪೋಷಣೆಗಾಗಿ ಇನ್ನಿಲ್ಲದ ಕಾಳಜಿ ಪ್ರದರ್ಶಿಸುವುದು ವಿರೋಧಾಭಾಸವಾಗಿ ತೋರುವುದಿಲ್ಲವೇ?

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲವಯೋಮಾನದ ಮಹಿಳೆಯರಿಗೂ ಪ್ರವೇಶ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಕೇರಳದಲ್ಲಿ ಬಿಜೆಪಿಯು ತಳೆದಿರುವ ನಿಲುವು ಮತ್ತು ವರ್ತಿಸುತ್ತಿರುವ ರೀತಿ ಎಲ್ಲರನ್ನೂ ಒಳಗೊಳ್ಳದ ಧರ್ಮದ
ಉಳಿವಿಗಾಗಿ ನಡೆಸುತ್ತಿರುವ ಪ್ರಹಸನದಂತೆ ಭಾಸವಾಗುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಕೂಡ ಭಿನ್ನವಾಗೇನೂ ವರ್ತಿಸದಿರುವುದು ಮತ್ತೊಂದು ವಿಪರ್ಯಾಸ.

ತಾನು ಪ್ರತಿಪಾದಿಸುವ ಧರ್ಮವನ್ನು ರಕ್ಷಿಸುವುದೆಂದರೆ, ಅದರ ಸುತ್ತ ನಿಲ್ಲಿಸಿರುವ ತಡೆಗೋಡೆಗಳ ಎತ್ತರವನ್ನು ಮನುಷ್ಯ ಘನತೆಗೆ ಕುಂದು ತರುವ ಮೌಲ್ಯಗಳು ಹಾಗೂ ಮೂಢನಂಬಿಕೆಗಳ ಮೂಲಕ ಮತ್ತಷ್ಟು ಏರಿಸುವುದೆಂದೇ ಕೆಲವರು ಭಾವಿಸಿರುವಂತಿದೆ.

ದೇವರನ್ನು ನಂಬುವುದು ನಂಬದಿರುವುದು, ದೇವಸ್ಥಾನಕ್ಕೆ ಹೋಗುವುದು ಹೋಗದಿರುವುದು ಅವರವರ ಇಚ್ಛೆಗೆ ಸಂಬಂಧಿಸಿದ್ದು. ಆದರೆ, ಜಾತಿ ಅಥವಾ ಲಿಂಗದ ಆಧಾರದಲ್ಲಿ ದೇವಸ್ಥಾನಕ್ಕೆ ಹೋಗಲೇಬೇಕೆಂದು ದೂಡುವುದಾಗಲೀ ಅಥವಾ ದೇವಸ್ಥಾನ ಪ್ರವೇಶಿಸುವಂತಿಲ್ಲವೆಂದು ಹೊರದೂಡುವುದಾಗಲೀ ಮಾಡುವುದು ಸ್ವೀಕರಿಸಲು ಅರ್ಹವಾದ ಮೌಲ್ಯವೇ? ಸಮಾಜ ಅದನ್ನು ಒಪ್ಪಿಕೊಳ್ಳಬಹುದೇ?

ತಾನು ಅಪ್ಪಿಕೊಂಡು, ರಕ್ಷಿಸುವ ಗುತ್ತಿಗೆ ಪಡೆದಿರುವ(?) ಧರ್ಮದೆಡೆಗೆ ಹೆಚ್ಚು ಜನರನ್ನು ಸೆಳೆಯುವ ಸಲುವಾಗಿ, ದೇವರುಗಳ ಮಹಿಮೆ ಸಾರುವ ಉಮೇದಿನಲ್ಲಿ ತೀರಾ ಅತಾರ್ಕಿಕವಾದ ಕ್ಷುಲ್ಲಕ ವಿಚಾರಗಳನ್ನು ಪವಾಡದ ರೂಪದಲ್ಲಿ ಹರಡುವುದು ಹಾಗೂ ಹಾಗೆ ಹರಡಲ್ಪಟ್ಟ ವಿಚಾರಗಳೇ ಜನರ ಮನಸ್ಸಿನಲ್ಲಿ ಧಾರ್ಮಿಕ ನಂಬಿಕೆಗಳಾಗಿ ಬೇರೂರುವಂತೆ ನೋಡಿಕೊಳ್ಳುವುದು, ಸಮಾಜವೊಂದು ತನ್ನ ವಿಕಸನದ ಹಾದಿಯಲ್ಲಿ ದಕ್ಕಿಸಿಕೊಳ್ಳಬಹುದಾದ ಪ್ರಜ್ಞಾವಂತಿಕೆಯ ಬೇರನ್ನು ಚಿವುಟುವ ಕೆಲಸವಲ್ಲದೆ ಮತ್ತಿನ್ನೇನು? ಮಾಧ್ಯಮಗಳು ಹಾಗೂ ಬಾಯಿ ಮಾತಿನ ಮೂಲಕ ಪ್ರಚಲಿತಕ್ಕೆ ಬಂದಿರುವ ಅದೆಷ್ಟೋ ಪವಾಡದ ಕಥೆಗಳು ವಾಸ್ತವದ ರೂಪದಲ್ಲಿ ತಮ್ಮೆದುರು ಬಿತ್ತರವಾಗುವಾಗ ಅದನ್ನು ಗಮನಿಸುವ ಮಕ್ಕಳ ಮನಸ್ಸುಗಳಲ್ಲಿ ಎಂತಹ ನಂಬಿಕೆಗಳು ಬೇರೂರಬಹುದು? ತಾವು ಶಾಲೆಯ ವಿಜ್ಞಾನ ಪಠ್ಯದಲ್ಲಿ ಓದುವ ಸಂಗತಿಗಳೆಲ್ಲವೂ ಹಾಗಾದರೆ ಸುಳ್ಳೆ? ವಿಜ್ಞಾನವೆಂಬುದು ದೇವರ ಎದುರು ಅಸ್ತಿತ್ವದಲ್ಲಿರುವುದಿಲ್ಲವೇಎಂದು ಮಕ್ಕಳು ಪ್ರಶ್ನಿಸಿದರೆ ಉತ್ತರಿಸುವುದು ಹೇಗೆ?

ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳನ್ನು ಪ್ರಶ್ನಿಸುವವರನ್ನು ಕಿಡಿಗೇಡಿಗಳಂತೆ ಬಿಂಬಿಸಲು ಹೊರಡುವುದು ಹಿಂದಿನಿಂದಲೂ ನಡೆದುಕೊಂಡೇ ಬಂದಿದೆ. ಯಾವುದನ್ನೇ ಆಗಲಿ ನಂಬುವುದು ಬಿಡುವುದು ಅವರವರ ವೈಯಕ್ತಿಕ ಆಯ್ಕೆ. ಆದರೆ, ದೇವರ ಅಸ್ತಿತ್ವ, ಪವಾಡಗಳಿಗೆ ಸಂಬಂಧಿಸಿದಂತೆ ನಂಬುವವರ ವಾದಕ್ಕೆ ಸಿಗುತ್ತಿರುವಷ್ಟು ಪ್ರಚಾರ, ತರ್ಕಗಳ ಆಧಾರದಲ್ಲಿ ಅವುಗಳನ್ನು ನಿರಾಕರಿಸಲು ಹೊರಡುವವರ ವಿವರಣೆಗಳಿಗೆ ಸಿಗುತ್ತಿದೆಯೇ? ಎಲ್ಲೋ ಕೆಲವರು ಈ ಕುರಿತು ಮುಕ್ತವಾಗಿ ಮಾತನಾಡಲು ಮುಂದಾದರೆ ಅವರನ್ನು ಧರ್ಮ ವಿರೋಧಿಗಳೆಂದು ಜರಿಯುತ್ತಾ ಸಮಾಜಘಾತುಕರೆಂಬಂತೆ ಬಿಂಬಿಸುವ ಪ್ರವೃತ್ತಿ ಇಂದು ಮತ್ತಷ್ಟು ಉಗ್ರ ರೂಪ ತಾಳುತ್ತಿದೆ. ಆ ಮೂಲಕವೇ ಅಸ್ತಿತ್ವ ಉಳಿಸಿಕೊಂಡು ಮತ್ತಷ್ಟು ಬಲವರ್ಧನೆ ಕಾಣಬಹುದೆಂಬ ನಿಲುವಿಗೆ ರಾಜಕೀಯ ಪಕ್ಷಗಳು ಜೋತು ಬಿದ್ದಿರುವುದು ಎದ್ದು ಕಾಣುತ್ತಿದೆ.

ಸಮಾಜವೊಂದು ಏಕಕಾಲಕ್ಕೆ ತಂತ್ರಜ್ಞಾನ ಮೋಹಿಯಾಗಿಯೂ, ತಾರ್ಕಿಕ ಪ್ರಜ್ಞೆಯ ಕಡುವಿರೋಧಿಯಾಗಿಯೂ ರೂಪುಗೊಳ್ಳುವಂತೆ ನಿಗಾ ವಹಿಸಿ, ಅದರ ಪ್ರತಿನಿಧಿಯಾಗಿ ಪ್ರತಿಷ್ಠಾಪನೆಗೊಳ್ಳುವ ಉಮೇದು ರಾಜಕೀಯ ಪಕ್ಷಗಳನ್ನು ಆವರಿಸಿಕೊಂಡರೆ, ಸಮಾಜದ ಚಲನೆ ಹಿಮ್ಮುಖವಾಗಲಾರದೇ?

–ಎಚ್.ಕೆ. ಶರತ್, ಹಾಸನ

ಮೌಢ್ಯದ ಪೊರೆ ಕಳಚಿ

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು ಎಂಬ ಸುಪ್ರೀಂ ಕೋರ್ಟ್‌ನ ಆದೇಶವನ್ನು, ‘ಶತಮಾನಗಳಿಂದ ನಡೆದು ಬಂದ ಸಂಪ್ರದಾಯ, ಪರಂಪರೆ...’ ಎಂದೆಲ್ಲ ವಾದಿಸುತ್ತ, ವಿರೋಧಿಸುತ್ತಿರುವವರನ್ನು ಮತ್ತು ಅವರ ಹೋರಾಟವನ್ನು ನೋಡಿದರೆ ಹಾಸ್ಯಾಸ್ಪದ ಎನಿಸುತ್ತದೆ.

ಸುಪ್ರೀಂ ಕೋರ್ಟ್ ತೀರ್ಮಾನಕ್ಕಿಂತ ಸಂಪ್ರದಾಯವಾದಿಗಳ ಮಾತೇ ಮೇಲು ಎನ್ನುವ ಧೋರಣೆಯೇ ಈಚೆಗೆ ಬಲಗೊಳ್ಳುತ್ತಿರುವುದು, ‘ಮನಷ್ಯ ಕುಲಂ ತಾನೊಂದೇ ವಲಂ’ ಎನ್ನುವ ಆದಿಕವಿ ಪಂಪನ ವಾಣಿಯನ್ನು ಅಣಕಿಸುವಂತಿದೆ. ಸುಪ್ರೀಂ ಕೊರ್ಟ್ ತೀರ್ಪನ್ನೂ ಪ್ರತಿಭಟನೆಗಳಿಂದ ದಮನ ಮಾಡಲು ಹೊರಟಿರುವ ನಡೆಯನ್ನು ನೋಡಿದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆಯೋ ಅಥವಾ ನಿರಂಕುಶ ಧರ್ಮದರ್ಶಿತ್ವದಡಿಯಲ್ಲಿ ಇದ್ದೇವೆಯೋ ಎನ್ನುವ ಅನುಮಾನ ಕಾಡುತ್ತಿದೆ.

ದೇಶದುದ್ದಗಲಕ್ಕೂ ಇರುವ ಸಹಸ್ರಾರು ದೇವಾಲಯಗಳಲ್ಲಿ ಮಹಿಳೆಯರಿಗೆ ಪ್ರವೇಶವಿದೆ. ಅಲ್ಲಿ ಕಂಡುಬರದ ಮೈಲಿಗೆ ಅಥವಾ ಪಾವಿತ್ರ್ಯದ ಸಮಸ್ಯೆ ಶಬರಿಮಲೆಯಲ್ಲಿ ಮಾತ್ರ ಹೇಗೆ ಕಾಣಿಸಿಕೊಳ್ಳುತ್ತದೆ? ಗರ್ಭಗುಡಿಯಿಂದ ಐದಾರು ಮಾರುಗಳ ಅಂತರದಿಂದ ದೇವರನ್ನು ನೋಡಿ, ಕೈ ಮುಗಿದ ಮಾತ್ರಕ್ಕೆ ದೇವರು ಮೈಲಿಗೆಯಾಗುತ್ತಾನೆ ಎಂಬ ವಾದ ಅಸಂಬದ್ಧವಾದುದು. ಪ್ರಕೃತಿ ಸಹಜವಾದ ಸ್ತ್ರೀತ್ವವನ್ನು ಮೈಲಿಗೆಯ ಹೆಸರಿನಲ್ಲಿ ಶೋಷಿಸುವುದು ಮಹಿಳಾ ಕುಲಕ್ಕೆ ಮಾಡುವ ಅಪಮಾನ.

ದೇವಾಲಯಗಳನ್ನು ಕಟ್ಟುವಾಗ, ಮೂರ್ತಿಗಳನ್ನು ಕೆತ್ತುವಾಗ, ಹೂ ಕಟ್ಟುವಾಗ, ನೀರು ತಂದು ಕೊಡುವಾಗ ಲಿಂಗತಾರತಮ್ಯ ಇಲ್ಲ. ದೇವಾಲಯ ಪ್ರವೇಶಿಸುವಾಗ, ಪೂಜಿಸುವಾಗ, ಪ್ರಾರ್ಥಿಸುವಾಗ ಮಾತ್ರ ಭೇದವೆಣಿಸುವುದು ಅದರಲ್ಲೂ ಶಾಸ್ತ್ರಬಲ್ಲ, ಪಂಡಿತರೆನಿಸಿಕೊಂಡ, ಸಮಾಜದ ಮುಖ್ಯವಾಹಿನಿಯಲ್ಲಿ ಮೆರೆಯುತ್ತಿರುವ ಜನರೇ ಇಂತಹ ಅನೀತಿ ಮೆರೆಯುತ್ತಿರುವುದು ಸೋಜಿಗದ ಸಂಗತಿ.

–ಕೊತ್ತೀಪುರ ಜಿ. ಶಿವಣ್ಣ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT