ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಶೇ 10 ಮೀಸಲಾತಿ, ಶೇ 90 ಪೂರ್ವಗ್ರಹ!

ಈ ಹೊಸ ಮೀಸಲಾತಿಯ ಬಗೆಗಿನ ವಸ್ತುಸ್ಥಿತಿ ಬೇರೆಯೇ ಇದೆ
Last Updated 12 ಜುಲೈ 2022, 19:31 IST
ಅಕ್ಷರ ಗಾತ್ರ

‘ಆರ್‌ಎಸ್ಎಸ್‌ ಆಳ ಮತ್ತು ಅಗಲ’ ಎಂಬ ಪುಸ್ತಕದಲ್ಲಿ ದೇವನೂರ ಮಹಾದೇವ ಅವರು ಕೇಂದ್ರ ಸರ್ಕಾರವು 2019ರಲ್ಲಿ ಜಾರಿಗೆ ತಂದ ಶೇಕಡ 10ರ ಹೊಸ ಮೀಸಲಾತಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಮೀಸಲಾತಿಯು ‘ಸಂವಿಧಾನವನ್ನು ಸಂಹಾರ ಮಾಡುತ್ತದೆ, ಮನುಧರ್ಮವನ್ನು ಪ್ರತಿಷ್ಠಾಪಿಸುತ್ತದೆ.

ಇದರಿಂದಾಗಿ ಮೀಸಲಾತಿಯ ಕಲ್ಪನೆಯಲ್ಲಿ ಇದ್ದ ನ್ಯಾಯ ನೆಗೆದುಬಿದ್ದಿದೆ. ಇದು ಸಂವಿಧಾನಕ್ಕೆ ಕೊಟ್ಟ ಒಳೇಟು. ಮನುಧರ್ಮಶಾಸ್ತ್ರದ ಆಶಯದಂತೆ ಇದನ್ನು ರೂಪಿಸಲಾಗಿದೆ’ ಎಂಬುದು ಲೇಖಕರ ಆರೋಪ. ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಸೇರಿದಂತೆ ಅನೇಕರು ಈ ಮೇಲ್ವರ್ಗದ ಮೀಸಲಾತಿಯ ಬಗ್ಗೆ ಪದೇ ಪದೇ ತಕರಾರು ಎತ್ತುತ್ತಿದ್ದಾರೆ.

ಶೇಕಡ 2ರಷ್ಟೋ 3ರಷ್ಟೋ ಇರುವ ಬ್ರಾಹ್ಮಣ ಮತ್ತಿತರ ಜಾತಿಗಳಿಗ್ಯಾಕೆ ಶೇ 10ರಷ್ಟು ಮೀಸಲಾತಿ? ಯಾವ ಹೋರಾಟವೂ ಇಲ್ಲದೆ, ಅಧ್ಯಯನ ವರದಿಯೇ ಇಲ್ಲದೆ ಮೀಸಲಾತಿಯನ್ನು ಹೇಗೆ ನಿಗದಿಪಡಿಸಲಾಯಿತು
ಎಂಬಂಥ ಪ್ರಶ್ನೆಗಳನ್ನು ಹಲವರು ಕೇಳುವುದಿದೆ. ಈ ಮೀಸಲಾತಿಯ ವಸ್ತುಸ್ಥಿತಿಯ ಅರಿವಿಲ್ಲದವರಿಗೆ ಇದು ಆರ್‌ಎಸ್‌ಎಸ್‌ ಕಲ್ಪನೆಯ ಕೂಸು ಎಂಬ ತಪ್ಪು ತಿಳಿವಳಿಕೆ ಇದೆ ಅಥವಾ ನಿಜದ ಅರಿವಿದ್ದೂ ದಿಕ್ಕು ತಪ್ಪಿಸಲು ಹೇಳುತ್ತಿರಬಹುದು. ಅದಕ್ಕಿಂತ ಹೆಚ್ಚಾಗಿ ಪೂರ್ವಗ್ರಹವೂ ತುಂಬಿಕೊಂಡಿದೆ.

ಎಸ್‌ಸಿ, ಎಸ್‌ಟಿ, ಒಬಿಸಿ ವ್ಯಾಪ್ತಿಗೆ ಬಾರದ ಜಾತಿ, ಸಮುದಾಯಗಳ ಬಡವರಿಗೆ ಈ ಮೀಸಲಾತಿ ಅನ್ವಯ
ವಾಗುತ್ತದೆ. ಕರ್ನಾಟಕದಲ್ಲಿ ಇರುವಂತೆ ಒಬಿಸಿ ಪಟ್ಟಿಯಲ್ಲಿ ರೈತಾಪಿ ಸಮುದಾಯಗಳು, ಭೂಹಿಡುವಳಿ ಇರುವ ಜಾತಿಗಳು ದೇಶದ ಉಳಿದೆಡೆ ಇಲ್ಲ. ಮಂಡಲ್ ಆಯೋಗವೂ ರೈತಾಪಿ ಸಮುದಾಯಗಳನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸಲು ಒಪ್ಪಿರಲಿಲ್ಲ. ಆಯೋಗದ ಸದಸ್ಯರಾಗಿದ್ದ ಕರ್ನಾಟಕದ ಎಲ್.ಆರ್.ನಾಯಕ್, ರೈತಾಪಿ ಸಮುದಾಯಗಳನ್ನು ಸೇರಿಸುವಂತೆ ವಾದಿಸಿದ್ದರೂ ಆಯೋಗ ಒಪ್ಪಿರಲಿಲ್ಲ. ಕರ್ನಾಟಕದಲ್ಲಿ ರೈತಾಪಿ ಸಮುದಾಯಗಳು ಒಬಿಸಿ ಪಟ್ಟಿಯಲ್ಲಿ ಸೇರಿರುವುದು ರಾಜಕೀಯ ಒತ್ತಡದಿಂದ. ವೆಂಕಟಸ್ವಾಮಿ ಆಯೋಗವಾಗಲೀ ಚಿನ್ನಪ್ಪ ರೆಡ್ಡಿ ಆಯೋಗವಾಗಲೀ ಇದಕ್ಕೆ ಸಮ್ಮತಿಸಿರಲಿಲ್ಲ. ಹೀಗಾಗಿ ಹೊಸ ಮೀಸಲಾತಿಗೆ ಕರ್ನಾಟಕದಲ್ಲಿಸಣ್ಣ ಜಾತಿಗಳೆನಿಸಿದ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಬಿಟ್ಟರೆ ಬೇರೆ ಯಾರೂ ಇಲ್ಲದಂತಾಗಿದೆ. ಆದರೆ ಇದೇ ಪರಿಸ್ಥಿತಿ ದೇಶದ ಉಳಿದೆಡೆ ಇಲ್ಲ.

ಈ ಎರಡು ದಶಕಗಳಲ್ಲಿ ಗುಜರಾತ್, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ಅಲ್ಲಲ್ಲಿನ ರೈತಾಪಿ ಸಮುದಾಯಗಳು ಒಬಿಸಿ ಮೀಸಲಾತಿಗಾಗಿ ದೊಡ್ಡ ಹೋರಾಟವನ್ನು ಮಾಡುತ್ತಿದ್ದವು. 2019ರಲ್ಲಿ ಕೇಂದ್ರ ಸರ್ಕಾರವು ಶೇ 10ರ ಮೀಸಲಾತಿ ಜಾರಿಗೆ ತಂದ ತರುವಾಯ ಈ ಹೋರಾಟಗಳು ತಣ್ಣಗಾಗಿರುವುದನ್ನು ಗಮನಿಸಬಹುದು.

ಹಾಗೆ ನೋಡಿದರೆ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರತ್ಯೇಕ ಮೀಸಲಾತಿ ಕೊಡುವುದು ಕಾಂಗ್ರೆಸ್‌ನ ಕಾರ್ಯಸೂಚಿ. ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಮಂಡಲ್ ಆಯೋಗದ ಶಿಫಾರಸನ್ನು ಜಾರಿಗೆ ತಂದಾಗ, ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ರಾಜೀವ್‌ ಗಾಂಧಿ ಈ ವಿಷಯ ಪ್ರಸ್ತಾಪಿಸಿದ್ದರು. 1991ರಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಪ್ರಧಾನಿಯಾಗಿದ್ದ ನರಸಿಂಹ ರಾವ್, ಆರ್ಥಿಕವಾಗಿ ಹಿಂದುಳಿದವರಿಗೆ ಪ್ರತ್ಯೇಕ ಮೀಸಲಾತಿ ಕೊಡುವ ಕಾಯ್ದೆಯನ್ನು ಜಾರಿಗೆ ತಂದರು. ಆದರೆ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತಾರದೆ ಕಾಯ್ದೆ ಜಾರಿ ಮಾಡಿದ್ದರಿಂದ ನ್ಯಾಯಾಲಯದಲ್ಲಿ ಬಿದ್ದು ಹೋಯಿತು. 2006ರಲ್ಲಿ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ರೂಪಿಸಲು ಮೇಜರ್ ಜನರಲ್ ಎಸ್.ಆರ್.ಸಿನ್ಹೊ ನೇತೃತ್ವದಲ್ಲಿ ತ್ರಿಸದಸ್ಯ ಆಯೋಗ ರಚಿಸಿದರು. ಈ ಆಯೋಗ ದೇಶದಾದ್ಯಂತ ಅಧ್ಯಯನ ನಡೆಸಿ 2010ರಲ್ಲಿ ಸಲ್ಲಿಸಿದ ವರದಿಯಲ್ಲಿ, ಆರ್ಥಿಕವಾಗಿ ಹಿಂದುಳಿದವರಿಗೆ ಶೇ 15ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿತ್ತು. 2014ರ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ, ಅಧಿಕಾರಕ್ಕೆ ಬಂದರೆ ಸಿನ್ಹೊ ಶಿಫಾರಸನ್ನು ಜಾರಿಗೊಳಿಸುವ ಭರವಸೆ ಕೊಟ್ಟಿತ್ತು. ಈ ಪ್ರಣಾಳಿಕಾ ಸಮಿತಿಯ ನೇತೃತ್ವ ವಹಿಸಿದ್ದವರು ಕರ್ನಾಟಕದವರೇ ಆದ ವೀರಪ್ಪ ಮೊಯಿಲಿ.

2019ರ ಜನವರಿಯಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಬಹುಮತದಿಂದ ಸಂವಿಧಾನದ 15 (6), 16 (6)ನೇ ವಿಧಿಗೆ ತಿದ್ದುಪಡಿ ತರುವ ಮೂಲಕ, ಹೊಸ ಮೀಸಲಾತಿ ತರಲಾಯಿತು. ಬಿಜೆಪಿಯವರು ಮಂಡಿಸಿದ ಈ ಪ್ರಸ್ತಾಪವನ್ನು ಸಂಸತ್ತಿನಲ್ಲಿ ಕಾಂಗ್ರೆಸ್ ಮಾತ್ರವಲ್ಲ, ಎಡಪಕ್ಷಗಳು, ದಲಿತರ ಧ್ವನಿಯೆಂದೇ ಪರಿಗಣಿಸಲಾಗುವ ಬಿಎಸ್‌ಪಿ ಸೇರಿದಂತೆ ಬಹುತೇಕ ಎಲ್ಲರೂ ಬೆಂಬಲಿಸಿದರು. ವಿರೋಧಿಸಿದ್ದು ಡಿಎಂಕೆ, ಅಸದುದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷ ಮಾತ್ರ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ, ಎಡಪಕ್ಷಗಳ ಆಡಳಿತವಿರುವ ಕೇರಳ, ತೃಣಮೂಲ ಕಾಂಗ್ರೆಸ್‌ ಆಡಳಿತವಿರುವ ಪಶ್ಚಿಮ ಬಂಗಾಳ ಸೇರಿದಂತೆ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳು ಹೊಸ ಮೀಸಲಾತಿಯನ್ನು ಜಾರಿ ಮಾಡಿವೆ. ಇದು ವಸ್ತುಸ್ಥಿತಿ.

ಕರ್ನಾಟಕದಲ್ಲಿ ರೈತಾಪಿ ಸಮುದಾಯಗಳಿಗೆ ಒಬಿಸಿ ಮೀಸಲಾತಿಯನ್ನು ಕತ್ತರಿಸಿ ಕೊಡಲಾಗಿದೆ. ಆದರೆ ಕೇಂದ್ರ ಸರ್ಕಾರವು ಒಬಿಸಿ ಬುಟ್ಟಿಗೆ ಕೈಹಾಕದೆ ರೈತಾಪಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಒದಗಿಸಿದೆ. ಇವೆರಡರಲ್ಲಿ ಯಾವುದು ಸಂವಿಧಾನದಆಶಯವನ್ನು ಎತ್ತಿ ಹಿಡಿಯುತ್ತದೆ ಎಂಬುದು ನಮಗೆ ನಾವೇ ಹಾಕಿಕೊಳ್ಳಬೇಕಾದ ಪ್ರಶ್ನೆ.

ಲೇಖಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT