ತಮ್ಮ ಶಿಲುಬೆಯನ್ನು ತಾವೇ ಹೊರುವವರು

7
ಜನರ ನಂಬಿಕೆಗಳನ್ನು ಮೂಲೋತ್ಪಾಟನೆ ಮಾಡುವುದು ಕ್ರಾಂತಿಕಾರಿ ಕ್ರಿಯೆಯಲ್ಲ, ಅದು ನಿಧಾನಗತಿಯ ವಿಕಾಸಾತ್ಮಕ ಕ್ರಿಯೆಯಾಗಬೇಕು

ತಮ್ಮ ಶಿಲುಬೆಯನ್ನು ತಾವೇ ಹೊರುವವರು

Published:
Updated:
Deccan Herald

ಇಪ್ಪತ್ತು ಶತಮಾನಗಳ ಹಿಂದೆ ಜೀಸಸ್ ಕ್ರೈಸ್ತ್ ತಾನು ಏರಿ ಸಾವನ್ನಪ್ಪಲಿರುವ ಶಿಲುಬೆಯನ್ನು ತಾನೇ ಹೊತ್ತುಕೊಂಡು ಗುಡ್ಡದ ಮೇಲೆ ಹತ್ತುವುದನ್ನು ಅನಿವಾರ್ಯ ಮಾಡಿತ್ತು ಅಂದಿನ ರೋಮನ್ ಪ್ರಭುತ್ವ ಮತ್ತು ಯಹೂದಿ ಪುರೋಹಿತಶಾಹಿಯ ಜೋಡಿ. ಇದು ಒಂದುಕಾಲದ ಗುಣವಲ್ಲ, ಮನುಷ್ಯನ ಸ್ವಾರ್ಥ ರಾಜಕಾರಣದ ಲಕ್ಷಣ.

ಹೀಗಾಗಿ ಈಗಲೂ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ‘ವಾಚಕರ ವಾಣಿ’ಯಲ್ಲಿ (ನ.9) ಚನ್ನಬಸವಯ್ಯ ಅವರು ‘ಮುಟ್ಟು, ಮೈಲಿಗೆ, ಅಸ್ಪೃಶ್ಯತೆ’ ಕುರಿತು ವ್ಯಕ್ತ ಪಡಿಸಿರುವ ಆತಂಕ ಇದೇ. ಶಬರಿಮಲೆದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ನಿಷೇಧ, ಮಡೆಮಡೆ ಸ್ನಾನಕ್ಕೆ ನಿಷೇಧ ಇವುಗಳ ಜೊತೆಗೆ ಮಸ್ಲಿಂ ಮಹಿಳೆಯರಿಗೆ ಮಾರಕವಾಗಿರುವ ತ್ರಿವಳಿ ತಲಾಖ್‌ ಕೂಡ ಸೇರಿಕೊಳ್ಳುತ್ತದೆ. ಈ ಅನಿಷ್ಟ ಸಂಪ್ರದಾಯದ ಬಲಿಪಶುಗಳಾಗಬೇಕಾದ ಮಹಿಳೆಯರು ಮತ್ತು ಮಲೆಕುಡಿಯರು ತಮ್ಮ ಹಿತವನ್ನೇ ಪ್ರತಿಭಟಿಸುತ್ತಾರೆ ಎಂಬುದು ಒಂದು ವಿಪರ್ಯಾಸ. ಈ ವರ್ತನೆಯನ್ನು ಸ್ವಲ್ಪ ಕೆದಕಿ ನೋಡಿದರೆ ಇದರಡಿಯ ವಿಕೃತಿ ಗೋಚರವಾಗುತ್ತದೆ.

ಯಾವುದೇ ಸಾಮಾಜಿಕ, ಸಾಂಪ್ರದಾಯಿಕ ಅವಹೇಳನಕ್ಕೆ ಗುರಿಯಾಗಿ ತಮ್ಮನ್ನು ತಾವೇ ಅವಮಾನಿಸಿಕೊಳ್ಳುವಂಥ ಆಚರಣೆಗಳನ್ನು ಬಿಡದೇ, ಗಟ್ಟಿಯಾಗಿಮುಂದುವರಿಸಿಕೊಂಡು ಹೋಗುವ ಜನ ಇದ್ದಾರೆ. ಇವರು ಶೋಷಿತರು. ಇವರ ಎಡ ಮತ್ತು ಬಲಗಳಲ್ಲಿ ಎರಡು ತರಹದ ಜನವರ್ಗಗಳಿವೆ.

ಬಲದಲ್ಲಿ ತಮ್ಮೆಲ್ಲಾಶಾಸ್ತ್ರ, ಪುರಾಣ, ಸಾಂಪ್ರದಾಯಿಕ ವಿದ್ವತ್ತಿನ ಬೆಂಬಲವನ್ನು ಬಳಸಿ, ದೈವ ಭಯವನ್ನು ಬಿತ್ತಿ, ಬೆಳೆಸಿ ಅವರನ್ನು ಎಲ್ಲಿ ಇಡಬೇಕೋ ಅಲ್ಲಿ ಇನ್ನೂ ಹಲವು ಶತಮಾನಗಳ ಕಾಲ ಇಡಬೇಕೆನ್ನುವ ಶೋಷಕರು. ಎಡದಲ್ಲಿರುವವರು ಶೋಷಿತರ ಸ್ಥಿತಿಯನ್ನು, ಮುಗ್ಧತನವನ್ನು ಕಂಡು ಮರುಗುವವರು, ಅವರ ಮೇಲಿನ ಅನುಕಂಪದಿಂದ ಮಾತಾಡುವವರು, ಬರೆಯುವವರು, ಇದು ಸಾಮಾಜಿಕ ಅನ್ಯಾಯ, ಮೌಢ್ಯ ಎಂದೆಲ್ಲಾ ವಾದಿಸಿ, ಶೋಷಿತರ ಪರವಾಗಿ ಪ್ರತಿಭಟಿಸುವ ಪ್ರಗತಿಪರರು.

ಇಂಥ ಸಂಘರ್ಷ ಏರ್ಪಟ್ಟಾಗ ಶೋಷಿತರು ಎನ್ನಿಸಿಕೊಂಡವರು ನಿಲ್ಲುವುದು ಶೋಷಕರ ಜೊತೆಯಲ್ಲಿಯೇ ಎಂಬುದು ದೊಡ್ಡ ದುರಂತ. ಸಂಪ್ರದಾಯಸ್ಥ ಮಹಿಳೆಯರು, ತಾವು ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸುವುದರಿಂದ ಅದು ಅಪವಿತ್ರವಾಗುತ್ತದೆ ಎಂದೇ ವಾದಿಸಿದರು. ಕೋರ್ಟ್‌ನ ತೀರ್ಪನ್ನು ವಿರೋಧಿಸಿ ಬೀದಿಗಿಳಿದು ಸಂಘರ್ಷಿಸಿದರು. ತ್ರಿವಳಿ ತಲಾಖ್‌ ನಿಷೇಧಿಸಿ ತೀರ್ಪು ಬಂದಾಗಲೂ ಅದನ್ನು ಸ್ವಾಗತಿಸಿದ ಮುಸ್ಲಿಂ ಮಹಿಳೆಯರ ಸಂಖ್ಯೆ ಸಾವಿರಾರಾದರೆ, ಪ್ರತಿಭಟಿಸಿದವರ ಸಂಖ್ಯೆ ಲಕ್ಷಾಂತರ. ‘ಮಡೆಮಡೆ ಸ್ನಾನ ನಮ್ಮ ಜನ್ಮಸಿದ್ಧ ಹಕ್ಕು, ಅದನ್ನು ಬಿಡು ಎನ್ನಲು ನೀವು ಯಾರು’ ಎಂದದ್ದು ಸ್ವತಃ ಮಲೆಕುಡಿಯರೇ ಅಲ್ಲವೇ?

ಇಲ್ಲಿರುವ ದ್ವಂದ್ವ ಏನೆಂದರೆ, ಶೋಷಿತರಿಗೆ ಈ ಎರಡು ಗುಂಪುಗಳಲ್ಲಿ ತಮ್ಮ ಹಿತವನ್ನು ಕಾಪಾಡುತ್ತಿರುವವರು ಯಾರು ಎಂಬುದು ಮನವರಿಕೆ ಆಗದೇ ಇರುವುದು. ತಮ್ಮನ್ನು ಸದ್ಗತಿಯತ್ತ, ಸನ್ಮಾರ್ಗದಲ್ಲಿ ನಡೆಸುತ್ತಿರುವವರು, ಏನಾದರೂ ದೈವೀ ಆತಂಕ ಉಂಟಾದರೆ ಅದರಿಂದ ರಕ್ಷಿಸುವವರು ಇದೇ ನಂಬಿಕೆಗಳು, ದೇವರುಗಳ ಏಜೆಂಟರುಗಳಾದ ಪುರೋಹಿತಶಾಹಿ. ಹೀಗಾಗಿ ಅವರ ಬೆಂಬಲ ಶೋಷಿತರಿಗೆ ಹೆಚ್ಚು ಇಷ್ಟವಾಗುತ್ತದೆ.

ಪ್ರಗತಿಪರರು ವೈಚಾರಿಕವಾಗಿ ಮಾತಾಡುತ್ತಾರೆ, ಬರೆಯುತ್ತಾರೆ, ವಿವಿಧ ಮಾಧ್ಯಮಗಳ ಮೂಲಕ ಪ್ರಖರವಾದ ಚರ್ಚೆಗಳನ್ನು ನಡೆಸುತ್ತಾರೆ. ಕೆಲವು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆಯನ್ನೂ ಮಾಡುತ್ತವೆ. ಆದರೆ ಅವರ ಸಂಖ್ಯಾಬಲವಾಗಲೀ, ಆರ್ಥಿಕ, ರಾಜಕೀಯ, ಸಂಘಟನಾಬಲವಾಗಲೀ ಶೋಷಿತರ ಪಕ್ಷದ ಬಲಕ್ಕೆ ಸಮನಾಗುವುದೇ ಇಲ್ಲ. ಹೀಗಾಗಿ ಇಲ್ಲಿ ಹೆಚ್ಚಿನ ಸಲ ದಣಿದು ಸುಸ್ತಾಗುವುದು ಪ್ರಗತಿಪರರೇ. ಶೋಷಕರಿಗೆ ಶತಮಾನಗಳಿಂದ ಬಂದಿರುವ ನಂಬಿಕೆಗಳು, ಶಾಸ್ತ್ರಗಳು, ಗುಡಿಗುಂಡಾರಗಳ ಆಕರ್ಷಕ ಆಚರಣೆ, ಹಬ್ಬಗಳು, ಪುಣ್ಯ ಗಳಿಕೆಯ ಆಮಿಷಗಳು ಬೆಂಬಲಕ್ಕೆ ಒದಗುತ್ತವೆ. ಪ್ರಗತಿಪರರ ಜೊತೆಗೆ ಇರುವುದು ಅವರ ವೈಚಾರಿಕತೆ, ವ್ಯಾವಹಾರಿಕ ಬೆಂಬಲಕ್ಕೆ ಸಂವಿಧಾನ ಮತ್ತು ಅದರಡಿಯಲ್ಲಿ ಬರುವ ಕಾನೂನುಗಳು. ಇವು ಹೆಚ್ಚಿನವರಿಗೆ ಅಪಥ್ಯ.

ಶೋಷಿತರು ಸ್ವತಃ ತಮ್ಮ ಶೋಷಣೆಯ ವಿರುದ್ಧ ಹೋರಾಡುವುದಿಲ್ಲವೇಕೆ? ಪ್ರಗತಿಪರರ ಜೊತೆ ಕೈಜೋಡಿಸುವುದಿಲ್ಲವೇಕೆ? ಏಕೆಂದರೆ, ಪ್ರಗತಿಪರರು ಅವರ ನಂಬಿಕೆ, ಆಚರಣೆಗಳಿಗೆ, ಮೌಢ್ಯದ ಹೆಸರನ್ನು ಕೊಡುತ್ತಾರೆ. ಅವರ ವಿವೇಚನೆಯನ್ನು ಪ್ರಶ್ನಿಸುತ್ತಾರೆ. ಸಾಂಪ್ರದಾಯಿಕ ಆಚರಣೆಗಳನ್ನು ಸಮರ್ಥಿಸಿಕೊಳ್ಳುವ ಶೋಷಿತರನ್ನು ದೂಷಿಸುತ್ತಾರೆ. ಈ ಮೂಲಕ ಅವರಲ್ಲಿ ದೈವಿಕ ವಿರೋಧಿ ಭಯವನ್ನು ಹುಟ್ಟಿಸುತ್ತಾರೆ.

‘ಈ ಬಗ್ಗೆ ಜನಜಾಗೃತಿ ಮೂಡುವುದು ಯಾವಾಗ?’ ಎಂಬ ಆತಂಕ ಸಮಾಜದಲ್ಲಿದೆ. ಯಾವುದೇ ಪ್ರಗತಿಪರ ವಿಚಾರದ ಬಗ್ಗೆ ಜನಜಾಗೃತಿ ತಾನಾಗಿಯೇ ಮೂಡುವುದಿಲ್ಲ. ಮೂಲಭೂತವಾಗಿ ನಾವು ಮೂಢನಂಬಿಕೆಗಳನ್ನು, ಮತ್ತು ಮೂಢನಂಬಿಕೆ ಉಳ್ಳವರನ್ನು ಪ್ರೀತಿಸಬೇಕು. ಅವರ ಆಚರಣೆಗಳಿಗೆ ಗೌರವವನ್ನು ಕೊಡಬೇಕು, ಅವರನ್ನು ಒಲಿಸಿಕೊಂಡು ವಿಶ್ವಾಸ ಗಳಿಸಿಕೊಳ್ಳಬೇಕು. ಜನರಲ್ಲಿರುವ ಅವೈಚಾರಿಕತೆಯನ್ನು ಹೋಗಲಾಡಿಸಿ, ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವುದನ್ನು ದೈನಂದಿನ ಹೊಣೆಗಾರಿಕೆ ಎಂಬಂತೆ ನಿರಂತರವಾಗಿ ಕೆಲಸ ಮಾಡಬೇಕು.

ಜನರ ನಂಬಿಕೆ ಆಚರಣೆಗಳನ್ನು ಮೂಲೋತ್ಪಾಟನೆ ಮಾಡುವುದು ಕ್ರಾಂತಿಕಾರಿ ಕ್ರಿಯೆಯಲ್ಲ, ಅದು ನಿಧಾನಗತಿಯ ವಿಕಾಸಾತ್ಮಕ ಕ್ರಿಯೆ ಎಂಬುದನ್ನು ಅರಿತು ವ್ಯಕ್ತಿಗಳು, ಸಂಘಸಂಸ್ಥೆಗಳು ಹಗಲು ರಾತ್ರಿ ದುಡಿಯಬೇಕು. ಇದರಲ್ಲಿ ಒಳಗೊಂಡಿರುವುದು ಜೀವಂತ ಜನ ಎನ್ನುವುದನ್ನು ನೆನಪಿಡಬೇಕು.

Tags: 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !