ವೈಚಾರಿಕ ಜಗತ್ತಿನ ಧ್ರುವತಾರೆ

7
ಮತಾಂಧ ಶಕ್ತಿಗಳು ಚರಿತ್ರೆಯನ್ನೇ ವಿರೂಪಗೊಳಿಸಲು ಹೊರಟಿರುವಾಗ ದೇವಿಪ್ರಸಾದರಂಥವರ ಸೈದ್ಧಾಂತಿಕ ದರ್ಶನ ನಮಗೆ ಮಾರ್ಗದರ್ಶಿಯಾಗಲಿದೆ

ವೈಚಾರಿಕ ಜಗತ್ತಿನ ಧ್ರುವತಾರೆ

Published:
Updated:
Deccan Herald

ತತ್ವಶಾಸ್ತ್ರ, ಇತಿಹಾಸ, ವಿಜ್ಞಾನದ ವಿಕಾಸ, ಉತ್ಖನನಶಾಸ್ತ್ರ, ಮಾರ್ಕ್ಸ್‌ವಾದ... ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಕೊಡುಗೆಗಳನ್ನು ನೀಡಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಖ್ಯಾತಿ ಪಡೆದಿದ್ದ ಭಾರತದ ಮೇರು ತತ್ವಶಾಸ್ತ್ರಜ್ಞ ದಿವಂಗತ ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು ಹುಟ್ಟಿ ಇಂದಿಗೆ (ನವೆಂಬರ್ 19) ನೂರು ವರ್ಷಗಳಾಗುತ್ತವೆ.

ಗಣೇಶನನ್ನು ತೋರಿಸಿ, ‘ನಮ್ಮಲ್ಲಿ ಪ್ಲಾಸ್ಟಿಕ್ ಸರ್ಜರಿ ಹಿಂದೆಯೇ ಇತ್ತು’ ಎನ್ನುವ, ಪುಷ್ಪಕ ವಿಮಾನದ ಕತೆ ಹೇಳಿ ‘ನಮ್ಮಲ್ಲಿ ವಿಮಾನ ಇತ್ತು’ ಎಂದು ಭಾರತದ ಪ್ರಾಚೀನತೆಯ ಬಗ್ಗೆ ದುರಭಿಮಾನ ಪಡುವವರಿಗೆ ದೇವಿಪ್ರಸಾದ್‌ ಅವರು ವಿಜ್ಞಾನದ ಚರಿತ್ರೆ ಮತ್ತು
ಪರಂಪರೆಯನ್ನು ಕುರಿತು ನಡೆಸಿರುವ ಸಂಶೋಧನೆಗಳು ಉತ್ತರವಾಗುತ್ತವೆ. ಅವರು ರಚಿಸಿರುವ ‘ಪ್ರಾಚೀನ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದ ಚರಿತ್ರೆ’ ಎಂಬ ಪುಸ್ತಕದ ಎರಡನೆಯ ಸಂಪುಟವನ್ನು ಉಲ್ಲೇಖಿಸಿ ವಿಶ್ವವಿಖ್ಯಾತವಾದ ವಿಜ್ಞಾನ ಪತ್ರಿಕೆ ‘ನೇಚರ್’ನಲ್ಲಿ ರಾಬರ್ಟ್ ಟೆಂಪಲ್‍ ಎಂಬುವರು ಭಾರತೀಯ ವಿಜ್ಞಾನಕ್ಕೆ ದೇವಿಪ್ರಸಾದರ ಕೊಡುಗೆಯನ್ನು ಕುರಿತು ಬರೆದಿರುವ ವಿಚಾರಗಳು ಗಮನಾರ್ಹ: ‘ಇದು ವಿಜ್ಞಾನದ ಚರಿತ್ರೆಯ ಪುಸ್ತಕ ಎನ್ನುವುದಕ್ಕಿಂತ ಹೆಚ್ಚಿನದು. ಭಾರತಕ್ಕೆ ಭವಿಷ್ಯವಿದೆಯೋ ಇಲ್ಲವೋ ಎನ್ನುವುದನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ಪಾತಾಳಗರಡಿ ಹಾಕಿ ನೋಡುವ ಉದ್ದೇಶ ಇಲ್ಲಿದೆ. ಚಟ್ಟೋಪಾಧ್ಯಾಯರು ಅತ್ಯಂತ ಧೈರ್ಯಶಾಲಿಗಳು. ಮೂಲಭೂತ ಸಮಸ್ಯೆಯ ಬೇರುಗಳನ್ನು ಇದರಲ್ಲಿ ಎತ್ತಿ ತೋರಿಸಿದ್ದಾರೆ. ಹಿಂದೂ ಮತಾಂಧತೆಯು ಚರಿತ್ರೆಯುದ್ದಕ್ಕೂ ವಿಜ್ಞಾನದ ಬೆಳವಣಿಗೆಯನ್ನು ಹೇಗೆ ದಮನ ಮಾಡಿತು ಎಂಬುದನ್ನು ಮತ್ತು ಇಂದಿಗೂ ಅದರಿಂದ ಉಂಟಾಗಿರುವ ಹಾನಿ
ಯನ್ನು ಕುರಿತು ಸ್ಪಷ್ಟ ತಿಳಿವಳಿಕೆಯನ್ನು ಬಿಚ್ಚಿಟ್ಟಿದ್ದಾರೆ’.

ಸಂಸ್ಕೃತಿ ಎಂದರೆ ‘ಶಿಷ್ಟ’ರ ಆಚಾರ- ವ್ಯವಹಾರಗಳು ಮತ್ತು ಚಿಂತನೆ ಮಾತ್ರ ಎನ್ನುವ ಮಿಥ್ಯೆ ಜನಸಾಮಾನ್ಯರಲ್ಲಷ್ಟೇ ಅಲ್ಲ, ವಿದ್ವಾಂಸರಲ್ಲೂ ಇಂದಿಗೂ ಇದೆ. ಆದರೆ ಐವತ್ತರ ದಶಕದಲ್ಲೇ ಈ ಕುರಿತು ಅಧ್ಯಯನ ಮತ್ತು ಸಂಶೋಧನೆ ನಡೆಸಿ 1952ರಲ್ಲಿ ಅವರು ರಚಿಸಿರುವ ‘ಲೋಕಾಯತ’ ಎನ್ನುವ ಉದ್ಗ್ರಂಥದಲ್ಲಿ ಶಿಷ್ಟ ಸಂಪ್ರದಾಯವಲ್ಲದೆ, ನಮ್ಮ ಇತಿಹಾಸದಲ್ಲಿ ಕಂಡು ಬರುವ ಜಾನಪದ ಸಂಪ್ರದಾಯ, ಬುಡಕಟ್ಟು ವ್ಯವಸ್ಥೆ, ಕೃಷಿ ಮಾಂತ್ರಿಕತೆ, ತಂತ್ರಶಾಸ್ತ್ರ, ಮೂಲ ಸಾಂಖ್ಯ ಮುಂತಾದವುಗಳನ್ನು ಆಧರಿಸಿ ನಮ್ಮ ದೇಶದ ಬಹುತ್ವದ ನೆಲೆಗಳನ್ನು ಕಟ್ಟಿಕೊಟ್ಟಿದ್ದಾರೆ. ಮಾತೃ ಆರಾಧನೆ, ತಾಯಿ- ಹಕ್ಕು ಮುಂತಾದ ಇತಿಹಾಸದ ಪ್ರಮುಖ ಅಂಶಗಳನ್ನು ಹೆಕ್ಕಿ ಕೊಟ್ಟು ಮಹಿಳಾ ಅಧ್ಯಯನಕ್ಕೆ ದಿಕ್ಸೂಚಿಯಾಗಿದ್ದಾರೆ.

ಭಾರತೀಯ ತತ್ವಶಾಸ್ತ್ರದ ಜ್ಞಾನ ಸಂಪತ್ತನ್ನು ಭಾವನಾವಾದದ ಮೂಲಕವಷ್ಟೇ ವೈಭವಿಸಿ, ಅಮೂರ್ತವಾಗಿಸಿ ತಮ್ಮ ಸಾಂಪ್ರದಾಯಿಕ ವಿಶ್ಲೇಷಣೆಯೊಂದೇ ಘನವಾದುದೆಂದು ಬೀಗುತ್ತಿದ್ದ ವೇದಾಂತಿಗಳನ್ನು ಖಂಡಿಸಿದ ದೇವಿಪ್ರಸಾದರು, ಭಾರತೀಯ ತತ್ವ
ಶಾಸ್ತ್ರದ ಪರಂಪರೆಯ ತಿಳಿವಳಿಕೆಗೆ ಹೊಸದೊಂದು ಬೆಳಕು ತೋರಿದ ದಿಗ್ದಂತಿಯಾದರು. ಭಾರತದಲ್ಲಿ ಭೌತವಾದದ ಪರಂಪರೆ ಎಷ್ಟು ಪ್ರಾಚೀನವೆಂಬುದಕ್ಕೆ ಹರಪ್ಪ ಸಂಸ್ಕೃತಿಯ ಕಾಲದಿಂದ ಆಗಿ ಬಂದಿರುವ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ವಿವರಿಸಿ ನಮ್ಮ ಇಡೀ ಇತಿಹಾಸದ ಬಗ್ಗೆ ಹೊಸದೊಂದು ತಿಳಿವಳಿಕೆ ನೀಡಿರುವುದು ದೇವಿಪ್ರಸಾದರ ಮಹತ್ಸಾಧನೆ. ಅವರ ‘ಭಾರತೀಯ ತತ್ವಶಾಸ್ತ್ರದಲ್ಲಿ ಜೀವಂತವಾಗಿರುವುದೇನು, ಮೃತವಾಗಿರುವುದೇನು’ (1976) ಈ ದಿಕ್ಕಿನಲ್ಲಿ ಅತ್ಯಂತ ಮಹತ್ವದ ಕೃತಿಯಾಗಿದೆ.

ಪ್ರೊಫೆಸರ್ ಸುಶೋಭನ್ ಸರ್ಕಾರ್, ವಿಷ್ಣು ಡೇ, ಹಿರೇನ್ ಮುಖರ್ಜಿ, ಜಾಮಿನಿ ರಾಯ್, ನಿಹಾರ್ ರಂಜನ್‍ರಾಯ್, ಎಸ್.ಎನ್. ದಾಸ್‌ಗುಪ್ತ ಮುಂತಾದ ವಿದ್ವಾಂಸರೊಂದಿಗೆ ಒಡನಾಟ ಹೊಂದಿದ್ದ ಇವರು ಕೆಲಸ ಮಾಡದ ಕ್ಷೇತ್ರವೇ ಇಲ್ಲ. ಡಿ.ಡಿ. ಕೋಸಾಂಬಿ, ರಾಹುಲ್ ಸಾಂಕೃತ್ಯಾಯನ, ಜಾರ್ಜ್ ಥಾಮ್ಸನ್, ಜೋಸೆಫ್ ನೀಢಾಮ್, ಜೆ.ಡಿ. ಬರ್ನಾಲ್, ಗೋರ್ಡನ್ ಚೈಲ್ಡ್ ಮುಂತಾದ ಜಗತ್ತಿನ ಮಹಾ ದಾರ್ಶನಿಕರಿಗೆ ಸಮನಾಗಿ ನಿಲ್ಲಬಲ್ಲ ಪ್ರತಿಭೆ, ಸಾಮರ್ಥ್ಯ ಹಾಗೂ ವಿದ್ವತ್ತನ್ನು ಹೊಂದಿದ್ದ ಅಪೂರ್ವ ವ್ಯಕ್ತಿ ದೇವಿಪ್ರಸಾದ್.

ಕರ್ನಾಟಕದಲ್ಲಿ ದೇವಿಪ್ರಸಾದರ ಪ್ರಕಟಣೆಗಳು ಬೆಳಕು ಕಂಡುದೆಷ್ಟೊ. ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾದ ‘ಟೂ ಟ್ರೆಂಡ್ಸ್ ಇನ್ ಇಂಡಿಯನ್ ಫಿಲಾಸಫಿ’ ಮತ್ತು ‘ಟ್ಯಾಗೋರ್ ಅಂಡ್ ಇಂಡಿಯನ್ ಫಿಲಸಾಫಿಕಲ್ ಹೆರಿಟೇಜ್’ ಕೃತಿಗಳು ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ನೀಡಿದ ಉಪನ್ಯಾಸಗಳೇ ಆಗಿವೆ. ಬೆಂಗಳೂರಿನ ಮಾಲೆ ಪ್ರಕಾಶನದಿಂದ ಅವರ ‘ರಿಲಿಜನ್ ಅಂಡ್ ಸೊಸೈಟಿ’ ಪ್ರಕಟವಾಯಿತು. ನವಕರ್ನಾಟಕ ಪ್ರಕಾಶನದವರ ಮಹತ್ವಾಕಾಂಕ್ಷೆಯ ಪ್ರಕಟಣೆಯಾದ ‘ಗ್ಲೋಬಲ್ ಫಿಲಾಸಫಿ ಫಾರ್ ಕಾಮನ್ ಮ್ಯಾನ್’ ಮಾಲಿಕೆಯ (7 ಸಂಪುಟಗಳು) ಪ್ರಧಾನ ಸಂಪಾದಕರಾಗಿದ್ದುದಲ್ಲದೆ, ಅದರ ಮೂರು ಸಂಪುಟಗಳ ಕರ್ತೃವೂ ಅವರಾಗಿದ್ದರು. ದೇವಿಪ್ರಸಾದರ ಸುಮಾರು ಹದಿನೈದಕ್ಕೂ ಹೆಚ್ಚು ಕೃತಿಗಳು ಕನ್ನಡದಲ್ಲಿ ಅನುವಾದಗೊಂಡಿದ್ದು, ಅವುಗಳನ್ನು ಪ್ರಕಟಿಸಿದ ಕೀರ್ತಿ ಬೆಂಗಳೂರಿನ ನವಕರ್ನಾಟಕ ಪ್ರಕಾಶನಕ್ಕೆ ಸಲ್ಲುತ್ತದೆ.

ಮತಾಂಧತೆಯ ಭೀಕರ ಪರಿಣಾಮವನ್ನು ಇಡೀ ದೇಶ ಅನುಭವಿಸುತ್ತಿರುವಾಗ ಮತ್ತು ಈ ಮತಾಂಧ ಶಕ್ತಿಗಳು ಇಡೀ ಭಾರತದ ಚರಿತ್ರೆಯನ್ನೇ ವಿರೂಪಗೊಳಿಸಲು ಹೊರಟಿರುವಾಗ ದೇವಿಪ್ರಸಾದರಂತಹವರ ಸೈದ್ಧಾಂತಿಕ ದರ್ಶನ ಭಾರತೀಯರೆ
ಲ್ಲರಿಗೂ ಮಾರ್ಗದರ್ಶಿಯಾಗಲಿದೆ.

ಬರಹ ಇಷ್ಟವಾಯಿತೆ?

 • 21

  Happy
 • 0

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !