ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನದ ಕನ್ನಡಿಯಲ್ಲಿ ಕನಕದಾಸ

Last Updated 26 ನವೆಂಬರ್ 2018, 4:04 IST
ಅಕ್ಷರ ಗಾತ್ರ

ಜಾಗತೀಕರಣದ ಅಬ್ಬರದಲ್ಲಿ ನಮ್ಮತನವನ್ನು ಉಳಿಸಿಕೊಳ್ಳುವುದು ಈ ಹೊತ್ತಿನ ಸವಾಲು. ಕನಕ ಅದಕ್ಕೆ ಒಂದು ಹಂತದಲ್ಲಿ ಉತ್ತರವಾಗಿ ಗೋಚರಿಸುತ್ತಾನೆ. ಚರಿತ್ರಕಾರರು ಆತನನ್ನು ವೈಷ್ಣವ ದಾಸಪಂಥದ ಉಕ್ತಿಗೆ ಒಗ್ಗಿಸಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧಿತವಾಗಿಲ್ಲ. ಕಾರಣ ಆತ ಸ್ವಸಂಪೂರ್ಣವಾಗಿ ಭಾಗವತ ಪಂಥಕ್ಕೆ ದಾಸನಾಗಿಲ್ಲ. ಇತ್ತ ಸ್ಥಳೀಯ ಚಹರೆಗಳಿಂದ ಬಿಡಿಸಿಕೊಳ್ಳಲೂ ಸಾಧ್ಯವಾಗಿಲ್ಲ.

ಅವನ ಬಾಹ್ಯ ವೇಷ ಹಾಗೂ ತನ್ನ ಆಲೋಚನೆಯ ಅಭಿವ್ಯಕ್ತಿಗಾಗಿ ಬಳಸುವ ಭಾಷೆ– ಎರಡೂ ಈ ನೊಂದ ಬೆವರಿನ ಸಂಸ್ಕೃತಿಯನ್ನೇ ಪ್ರತಿಬಿಂಬಿಸುತ್ತವೆ. ಹೊರಗೆ ವಿಶ್ವಾತ್ಮೀಯ ವಿಚಾರ ಸಾರಿದ ಚಿಂತಕ ಹರಿದಾಸ, ಒಳಗೆ ಕಂಬಳಿ ಹೊದ್ದ ಕರಿಯಯ್ಯ. ಆಧುನಿಕ ಚಿಂತನೆಯ ಜೊತೆಗೆ ಪೂರ್ವಾಶ್ರಮದ ಬದುಕಿನ ಕ್ರಮ. ಇದರ ಬೆಸುಗೆಯೇ ವರ್ತಮಾನಕ್ಕೆ ತುರ್ತಾಗಿ ಬೇಕಾಗಿರುವ ಮಾದರಿ. ತಾನು ಹುಟ್ಟಿದ ಕುರುಬಕುಲ ಮತ್ತು ಮುಟ್ಟಿದ ಭಾಗವತ ನೆಲೆ– ಇವೆರಡರ ನಡುವೆ ಆತ ಅಡಗಿಸಿ ತೋರುತ್ತಿರುವ ಸತ್ಯದ ದಾರಿಯನ್ನು ಅರಿತು ಸಾಗಬೇಕಿದೆ.

‘ಹೇಳಿದಂತೆ ಕೇಳಿಕೊಂಡು ಬಿದ್ದಿರುವುದು ಧರ್ಮ. ದ್ವೇಷಮಾತ್ರವೇ ದೇಶಪ್ರೇಮ’ ಅನ್ನುವ ದುರ್ಬಿಕ್ಷ ಕಾಲದ ಮೂಕಸಾಕ್ಷಿಗಳು ನಾವು. ಈ ಸ್ಥಿತಿ ಇಂದು ನಿನ್ನೆಯದಲ್ಲ. ಕನ್ನಡ ಪರಂಪರೆಯಲ್ಲಿ ಇದಕ್ಕೆ ಉದ್ದದ ಚರಿತ್ರೆ ಇದೆ. ಅಂಥ ನೋವಿನ ಚರಿತ್ರೆಯಲ್ಲಿ ನಮ್ಮನ್ನು ಎದುರು
ಗೊಳ್ಳುವ ಅಸಹನೆಯ ನೇರಾತಿನೇರ ಬಲಿಪಶು ಕನಕ.

ನೋವುಂಡ ಕಾರಣಕ್ಕೆ ನೋವುಣಿಸಿದವರನ್ನು ಗಾಯಗೊಳಿಸುವ ಗುಣ ಅವನದಲ್ಲ. ಎಲ್ಲವನ್ನೂ ತಾಳ್ಮೆಯಿಂದ ಸಹಿಸುವ, ಸಹನೆಯ ಮೂಲಕವೇ ಸಮುದಾಯದೊಳಗೆ ಚಿಂತನೆ ಬೆಳೆಸುವ, ಭಾಷೆಯನ್ನು ಬೆಂಕಿಯಾಗಿಸದೆ ಬೆಳಕಾಗಿ ಬಳಸುವ ಮುತ್ಸದ್ದಿತನ ತೋರುತ್ತಾನೆ.

ಜೀವಮುಕ್ತಿಯ ಅಪೇಕ್ಷೆ ಲೌಕಿಕದ ಮೂಲಕವೇ ಆಗಬೇಕೆಂಬ ತತ್ವವನ್ನು ಪ್ರತಿಪಾದಿಸಿದವರಲ್ಲಿ ಕನಕನೂ ಒಬ್ಬ. ಆದರೆ ಲೌಕಿಕತೆಯ ಆಕಾಂಕ್ಷೆಗಳನ್ನು ಮಿತಿಮೀರದಂತೆ ಬಳಸುವ ಮತಿಯೇ ಇಲ್ಲದೇ ಹೋದರೆ? ಇಂಥದೇ ಸಂದರ್ಭದಲ್ಲಿ ಜಗದ ಜಂಜಾಟಗಳನ್ನು ನೋಡಿ, ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ– ಗೇಣುಬಟ್ಟೆಗಾಗಿ’ ಎಂದು ಗಹನ ಸತ್ಯವನ್ನು ಸರಳವಾಗಿ ಸಾರಿದ. ಹೇಳಿ ಸುಮ್ಮನಾಗದೆ ತಾನೇ ಬದುಕಿ ತೋರಿದ.

ಆದರೆ ಸಿರಿಗರ ಬಡಿದಂತೆ ಒಡೆದು ಕಾಣುವ ಸಂಪತ್ತಿನ ವೈಭವೀಕರಣ ಅನೈತಿಕವಾದುದು. ಬಡವ– ಬಲ್ಲಿದರ ನಡುವಣ ಅಂತರವಂತೂ ಪ್ರತ್ಯೇಕ ಲೋಕವನ್ನೇ ನಿರ್ಮಿಸುತ್ತಿದೆ. ಇದರ ನಾಗಾಲೋಟ ಮಿತಿಮೀರಿ ಸಾಗಿದೆ. ಈ ಪರಿಯ ಕರಣ ಗಣಗಳ ರಿಂಗಣವನ್ನು ತಡೆಯಲು ಕನಕ ನಿಮಿತ್ತನಾಗಬಲ್ಲನು. ಕತ್ತಿ ಹಿಡಿದ ಕೈಯಲ್ಲಿ ತಂಬೂರಿ, ಗುರಾಣಿ ಹಿಡಿದ ಕೈಯಲ್ಲಿ ಬೋನಾಸಿ, ಯುದ್ಧದಾಹಿ ಪ್ರಭುತ್ವವನ್ನು, ಸಂಪತ್ತು, ಕೋಶ, ಅಧಿಕಾರಗಳ ಅರಮನೆಯನ್ನು ತೊರೆಯದೆ ಕನಕ ತಾ ಹೇಗೆ ದಾಸನಾದಾನು?

ಕಳೆದ ಎರಡು ಶತಮಾನಗಳಿಂದ ಸಮನ್ವಯಕ್ಕಾಗಿ ನಡೆದ ತ್ಯಾಗದ ಹೋರಾಟ ಈಗ ತನ್ನ ಮೌಲ್ಯವನ್ನು ನಾಶಗೊಳಿಸುತ್ತಿದೆ. ಎಲ್ಲಿ ನೋಡಿದರಲ್ಲಿ ವಿಚ್ಛಿದ್ರಕಾರಕ ಶಕ್ತಿಗಳೇ ವಿಜೃಂಭಿಸುತ್ತಿರುವಂತೆ ಕಾಣುತ್ತಿದೆ. ಸಮಾಜಜೀವಿ ಆಗಬೇಕಿದ್ದ ಮನುಷ್ಯರು ದ್ವೀಪಗಳನ್ನು ನಿರ್ಮಿಸಿಕೊಂಡು ಕುಬ್ಜರಾಗುತ್ತಿದ್ದಾರೆ. ಇಂತಹ ವಿಪರೀತದ ಕಾಲಕ್ಕೆ ಸಾಮರಸ್ಯ ಅತ್ಯವಶ್ಯವಾದ ಜೀವನಮೀಮಾಂಸೆ ಆಗಬೇಕಿದೆ.

ಇದಕ್ಕೆ ಕನಕ ಕಾವ್ಯದಲ್ಲಿ ದಂಡಿಯಾಗಿ ನಿದರ್ಶನಗಳಿವೆ. ಸಂವಾದ, ವಾದ, ವಾಗ್ವಾದವನ್ನು ದಾಟಿ ದೇಗುಲ ನಾಶದವರೆಗೆ ಹೋಗಿದ್ದ ಶೈವ–ವೈಷ್ಣವರ ಕಲಹವನ್ನು ಉಪಶಮನ ಮಾಡುವ ಕಾಳಜಿಯಲ್ಲಿ ಬರೆದ ಕೃತಿ ‘ಮೋಹನ ತರಂಗಿಣಿ’. ಹರಿಹರ ಸಾಮರಸ್ಯದ ಉದ್ದೇಶದಿಂದ ಅದು ಹೊರಡುತ್ತದೆ. ಅದರಲ್ಲಿ ಅಲ್ಪಸಂಖ್ಯಾತರ ಹಕ್ಕನ್ನು ಕಾಪಾಡುವ, ಬಹುಸಂಖ್ಯಾತರ ಹೊಣೆಯನ್ನು ಎಚ್ಚರಿಸುವ ಸಾಕ್ಷಿಪದಗಳಿವೆ. ಏನೇ ಬಂದರೂ ಸಮನ್ವಯದ ಸಹಬಾಳುವೆಗೆ ಕುಂದು ತರದಂತೆ ಮುನ್ನಡೆವ ಸಂದೇಶಕ್ಕೆ ಕಣ್ತೆರೆಯಬೇಕಿದೆ.

ಮನೆಯೂಟವನ್ನು ಬೀದಿಯಲ್ಲಿ ತೆಗೆದು ಪರೀಕ್ಷಿಸುವ ಪರಿಪಾಟ ಹೊಸಕಾಲದ ಬೆಳಸು. ತಿನ್ನುವ ಅನ್ನಕ್ಕೆ ಬಣ್ಣಹಚ್ಚಿ, ಮನುಷ್ಯ ಕುಲವನ್ನು ಸಾತ್ವಿಕ– ತಾಮಸ ಎಂಬಂತೆ ವಿಭಜಿಸುತ್ತಿರುವುದು ಹೃದಯವಿದ್ರಾವಕ, ರಾಗಿ ಹೆಚ್ಚೋ ಭತ್ತ ಹೆಚ್ಚೋ ಅನ್ನುತ್ತಾ ಬೆಳೆಸುವ ‘ರಾಮಧಾನ್ಯ ಚರಿತ್ರೆ’ ಈ ಪ್ರಶ್ನೆಯನ್ನು ತಾರ್ಕಿಕವಾಗಿ ಎದುರಾಗುತ್ತದೆ.

ನಮ್ಮ ಸಮಾಜ ಕುಟುಂಬದ ನೆಲೆಗಟ್ಟಿನ ಮೇಲೆ ಕಟ್ಟಿದಂಥದ್ದು. ಅದೊಂದು ಜೀವನಮೌಲ್ಯವಾಗಿ ದಾಂಪತ್ಯ ಸಂಬಂಧವನ್ನು ಕಾಲದಿಂದಲೂ ಗಟ್ಟಿ ಮಾಡುತ್ತಾ ಬಂದಿದೆ. ದಾಂಪತ್ಯ ಹಸನಾಗಿದ್ದರೆ ಸ್ವಸ್ಥ ಕುಟುಂಬ. ಕುಟುಂಬ ಹಸನಾಗಿದ್ದರೆ ಸ್ವಸ್ಥ ಸಮಾಜ. ಆದರೆ ಜಾಗತಿಕ ವಲಯಗಳಿಂದ ತೂರಿ ಬರುತ್ತಿರುವ ಅತ್ಯಾಧುನಿಕತೆಯು ಕುಟುಂಬ ಸಂಬಂಧಗಳನ್ನು ಕೆಡಿಸುತ್ತಿದೆ. ಸುತ್ತಮುತ್ತ ರೋಗಗಳನ್ನು ಹಬ್ಬಿಸುತ್ತಿದೆ.

ಕನಕನ ‘ನಳ ಚರಿತ್ರೆ’ ದಾಂಪತ್ಯ ಸಂಬಂಧಗಳನ್ನು ಬೆಸೆವ ಕಾವ್ಯ. ನಿಸ್ವಾರ್ಥ ಮೂಲವಾದ ಪ್ರೇಮ, ಪರಿಶುದ್ಧ ಅಂತಃಕರಣ– ಲೋಕದ ಎಂಥದೇ ದುಷ್ಟಶಕ್ತಿಗಳನ್ನು ಗೆಲ್ಲಬಲ್ಲದು. ಇಂದಿಗೆ ಸಾಂಪ್ರದಾಯಿಕ ಎನಿಸುವ ಕುಟುಂಬ ರಕ್ಷಣೆಯಲ್ಲಿ ಹೆಣ್ಣಿನ ತ್ಯಾಗ ಎಂಥದ್ದು, ಅದಕ್ಕೆ ಪುರುಷಲೋಕವು ಕೊಡಬೇಕಾದ ಗೌರವ ಎಂಥದ್ದು ಎಂಬುದನ್ನು ಅದ್ಭುತ ಕಥೆಯಾಗಿಸಿ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT