ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯೀಕರಣಕ್ಕೆ ಒಳಗಾಗುವ ಶ್ರೀರಾಮ

ಭಗವಂತನನ್ನು ಪ್ರದರ್ಶನದ ಗೊಂಬೆಯನ್ನಾಗಿಸಿ ಬಂಧನದಲ್ಲಿಡುವುದು ಭಕ್ತಿಗೆ ಪೂರಕವೇ?
Last Updated 2 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಉತ್ತರಪ್ರದೇಶದ ಸರಯೂ ನದಿ ತೀರದಲ್ಲಿ ಶ್ರೀರಾಮನ 221 ಮೀಟರ್ ಎತ್ತರದ ಮೂರ್ತಿ ಸ್ಥಾಪಿಸಿ, ಆ ಜಾಗವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಉತ್ತರಪ್ರದೇಶ ಸರ್ಕಾರ ರೂಪಿಸುತ್ತಿದೆ ಎಂದು ವರದಿಯಾಗಿದೆ. ದೇಶದ ಹಲವೆಡೆ ಪೈಪೋಟಿಯಿಂದ ಒಂದಕ್ಕಿಂತ ದೊಡ್ಡದಾದ ಮತ್ತೊಂದು ಪ್ರತಿಮೆಯನ್ನು ಸ್ಥಾಪಿಸುವ ಗೀಳು ಇತ್ತೀಚೆಗೆ ವ್ಯಕ್ತವಾಗುತ್ತಾ ಇದೆ.

ಇಂಥ ಸಂದರ್ಭದಲ್ಲಿ ದೇವ– ದೇವತೆಗಳ ಮೂರ್ತಿಯ ಅಗತ್ಯದ ಕುರಿತಂತೆ ಒಂದು ಪ್ರಶ್ನೆ ಏಳುತ್ತಿದೆ. ಸಂಪ್ರದಾಯಸ್ಥ ಬ್ರಾಹ್ಮಣರ ಮನೆಗೆ ಪೂಜೆ, ಮದುವೆ, ಉಪನಯನ ಇತ್ಯಾದಿ ಕಾರ್ಯಕ್ರಮಗಳಿಗೆ ಹೋದಾಗಲೆಲ್ಲ ಅವರ ಅನನ್ಯವಾದ ಒಂದು ಸಂಪ್ರದಾಯವನ್ನು ಗಮನಿಸಿದ್ದೇನೆ. ಅಲ್ಲಿ ನಡೆಯುವ ಪೂಜೆಗಳಿಗೆ ಮೂರ್ತಿಯ ಅಗತ್ಯವೇ ಇಲ್ಲ. ಆರಂಭದಲ್ಲಿ ಪುರೋಹಿತರು ಪೂಜೆಯಾಗಬೇಕಾದ ದೇವನಿಗೋಸ್ಕರ ಶುದ್ಧೀಕರಿಸಿದ ನೆಲದಲ್ಲಿ, ಇಲ್ಲ ಸ್ವಚ್ಛ ಮಣೆಯ ಮೇಲೆ ಮಂಡಲ ಬರೆದು ಘಂಟಾನಾದ ಮತ್ತು ಮಂತ್ರಗಳ ಮೂಲಕ ಆ ದೇವರನ್ನು ಅಲ್ಲಿ ಆಹ್ವಾನಿಸಿ ಸ್ಥಾಪಿಸುತ್ತಾರೆ. ಅವನಿಗೆ ನಡೆಸಬೇಕಾದ ಸೇವೆ, ಪೂಜೆಗಳನ್ನು ಅಲ್ಲಿಯೇ ಮಾಡುತ್ತಾರೆ. ಎಲ್ಲಾ ಮುಗಿದು ಪ್ರಸಾದ ವಿತರಣೆಯಾದ ಮೇಲೆ ಮತ್ತೊಮ್ಮೆ ಮಂತ್ರಗಳ ಮೂಲಕ ಅವನಿಗೆ ತನ್ನ ಸ್ಥಾನಕ್ಕೆ ಮರಳುವಂತೆ ವಿನಂತಿಸಿಕೊಳ್ಳುವುದನ್ನು ಗಮನಿಸಿದ್ದೇನೆ. ಸಾಮಾನ್ಯವಾಗಿ ಗಣಪತಿಯನ್ನು ಈ ತರವಾಗಿ ಆರೋಪಿಸುತ್ತಾರಾದರೂ, ಶಿವಪೂಜೆ, ಸತ್ಯನಾರಾಯಣ ಪೂಜೆ, ಶಾರದಾಪೂಜೆ ಮುಂತಾದ ಸಂದರ್ಭಗಳಲ್ಲಿಯೂ ಮಂಡಲಗಳನ್ನು ರಚಿಸಿ, ಸಂಕೇತಗಳ ಮೂಲಕ ಕಲ್ಪಿಸಿ ಕಾರ್ಯಕ್ರಮವನ್ನು ನಡೆಸುತ್ತಾರೆ. ಈ ಸಂದರ್ಭಗಳಲ್ಲಿ ಭಕ್ತರು ನಿರಾಕಾರನಾದ ಭಗವಂತನನ್ನು ಆರಾಧಿಸುತ್ತಾರೆ.

ಅನೇಕ ಬ್ರಾಹ್ಮಣರ ಮನೆಗಳಲ್ಲಿ ದಿನಂಪ್ರತಿ ಪೂಜೆ ಇದೆ; ಅಲ್ಲಿಯೂ ಸಾಲಿಗ್ರಾಮ ಅಥವಾ ರುದ್ರಾಕ್ಷಿಯನ್ನು ದೇವರ ಕೋಣೆಯಲ್ಲಿಟ್ಟು ಪೂಜಿಸುವುದನ್ನು ನೋಡಿದ್ದೇನೆ. ಗಣೇಶ ಹಬ್ಬದ ಸಮಯದಲ್ಲಿ ಗಣೇಶನ ಮೂರ್ತಿಯನ್ನು ಮಾಡಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸುವ ಸಂಪ್ರದಾಯ ಮಾತ್ರ ಇತ್ತು. ಹಿಂದೂ ಧರ್ಮದ ವೈಶಿಷ್ಟ್ಯ ಅದು. ದೇವರನ್ನು ಆಕಾರ, ರೂಪ, ವೇಷ ಭೂಷಣಗಳಿಂದ ಬಂಧಿಸದೆ ಭಕ್ತರ ಕಲ್ಪನೆಗೆ ಬಿಡುವುದು ದೇವರು ನಿರಾಕಾರನೆಂಬ ನಂಬಿಕೆಯಿಂದ. ಸಣ್ಣ ಸಂಕೇತಗಳ ಮೂಲಕವೂ ದೇವರನ್ನು ಆರೋಪಿಸಿ ಪೂಜೆ ಸಲ್ಲಿಸಿ ಕೃತಾರ್ಥತೆಯನ್ನು ಪಡೆಯುವ ವಿಶಿಷ್ಟ ಸಂಪ್ರದಾಯ ಹಿಂದೂ ಧರ್ಮದ್ದು. ಆ ಪದ್ಧತಿಯಂತೆ ದೇವನ ಪೂಜೆ ಅಥವಾ ಆರಾಧನೆ ಒಂದು ಕುಟುಂಬದ ಖಾಸಗಿ ವ್ಯವಹಾರ. ದೇವರು ಅಸಂಖ್ಯಾತರಾಗಿರುವಾಗ ಪ್ರತಿಯೊಂದು ಮನೆಗೂ ಒಬ್ಬ ಮನೆ ದೇವರು ಇರುವುದು ಒಂದು ನಂಬಿಕೆ. ಆ ನಂಬಿಕೆಯೇ ಅನೇಕರ ಜೀವನಕ್ಕೆ ಆಧಾರ. ಅಲ್ಲಿ ಮೂರ್ತಿಯ ಅಗತ್ಯವೇ ಇಲ್ಲ.

ಹಿಂದೂ ಸಂಸ್ಕೃತಿಯ ಕಲ್ಪನೆಗಳ ಪ್ರಕಾರ ‘ದೇವನೊಬ್ಬ, ನಾಮ ಹಲವು’. ಅವನು ನಿರಾಕಾರ, ಸರ್ವಶಕ್ತ ಮತ್ತು ಸರ್ವಾಂತರ್ಯಾಮಿ, ಅವನ ಸೇವೆಯನ್ನು ಯಾರೂ ಹೇಗೂ ಮಾಡಬಹುದು. ಇಂದಿನ ವಾಣಿಜ್ಯೀಕರಣದ ಭರಾಟೆಯಲ್ಲಿ ಭಕ್ತಿ, ಪದ್ಧತಿ, ಸಂಪ್ರದಾಯಗಳ ಬದಲು ಜನರಿಂದ ಚಂದಾ ಎತ್ತಿ, ಸರ್ಕಾರದಿಂದ ಅನುದಾನ ಪಡೆದು ದೈತ್ಯಗಾತ್ರದ ತಮ್ಮದೇ ಕಲ್ಪನೆಯ ಆಕಾರ, ಪೋಷಾಕುಗಳನ್ನು ತೊಡಿಸಿ ಮೂರ್ತಿಯನ್ನು ಕಡೆದು (ಚೀನಾದಿಂದ ಬಂದರೂ ಪರವಾಗಿಲ್ಲ!) ವಿಜೃಂಭಣೆಯಿಂದ ಪ್ರತಿಷ್ಠಾಪಿಸುವ, ಆ ಬಳಿಕ ಪ್ರವಾಸಿ ತಾಣವಾಗಿಸುವ ಕ್ರಮದ ಉದ್ದೇಶವಾದರೂ ಏನು?

ಭಗವಂತನೆಂಬುವನನ್ನು (ಅವನ ಹೆಸರು ಏನೇ ಇರಲಿ) ಪ್ರದರ್ಶನದ ಗೊಂಬೆಯನ್ನಾಗಿ ಭದ್ರತಾ ಸಿಬ್ಬಂದಿ ಮಧ್ಯೆ ಬಂಧನದಲ್ಲಿಡುವುದು ಭಕ್ತಿಗೆ ಪೂರಕವೇ? ಅವನನ್ನು ವಾಣಿಜ್ಯದ ಸರಕಿನ ಸ್ಥಾನಕ್ಕೆ ಇಳಿಸಿದಂತಾಗಲಿಲ್ಲವೇ?

ಗ್ರೀಕರ ಪುರಾಣದಲ್ಲಿ ಬರುವ ಟ್ರೋಯ್ ನ ಹೆಲೆನ್ ಕುರಿತಂತೆ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ ಮಾತು ಈ ಸಂದರ್ಭಕ್ಕೆ ಸೂಕ್ತವಾಗುತ್ತದೆ. ‘ಹೆಲೆನ್ ಅಪ್ರತಿಮ ಸುಂದರಿ, ಅವಳ ಸೌಂದರ್ಯ ಓದುವವರ ಕಲ್ಪನೆಗೆ ಬಿಟ್ಟದ್ದು; ತಮಗೆ ಬೇಕಾದಂತೆ ಆಕೆಯ ಸೊಬಗನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವುದರಲ್ಲಿ ‘ಕ್ರಿಯೇಟಿವಿಟಿ’ ಇದೆ, ಅವಳ ಚಿತ್ರ ಬರೆದರೆ ಅಥವಾ ಸಿನಿಮಾ ಮಾಡಿದರೆ ಅವಳ ಸೌಂದರ್ಯಕ್ಕೆ ಒಂದು ಸೀಮೆ ಹಾಕಿದಂತೆ; ಕ್ರಿಯೇಟಿವಿಟಿಗೆ ಅವಕಾಶ ನೀಡಿದಾಗ ಮಾತ್ರ ಮನುಷ್ಯನ ವಿಕಾಸವಾಗುತ್ತದೆ’.

ಇಂಗ್ಲಿಷ್‌ ಕವಿ ಡಬ್ಲ್ಯು. ಬಿ. ಯೇಟ್ಸ್‌ನ ಕವಿತೆ, ‘ದಿ ಇಂಡಿಯನ್ ಅಪಾನ್ ಗಾಡ್’ನಲ್ಲಿ ದೇವನ ರೂಪ ಹೇಗಿದೆ ಎಂಬ ಪ್ರಶ್ನೆಗೆ ಕಲ್ಪಿಸುವವರ ದೃಷ್ಟಿಗನುಗುಣವಾಗಿ ಅವನು ರೂಪ ಹೊಂದಿರುತ್ತಾನೆ, ಕವಿಯ ಪ್ರಕಾರ., ಕೆಸರ್ಕೋಳಿಯ (moorfowl) ದೇವರು ದೊಡ್ಡ ಕೆಸರ್ಕೋಳಿಯಾದರೆ, ಕಮಲದ ದೇವರು ಅದರಂತೆಯೇ ಇರುವ ದೊಡ್ಡದಾದ ಕಮಲದ ಹೂವು. ಜಿಂಕೆಗೆ ಅತ್ಯಂತ ಸೌಮ್ಯಸ್ವಭಾವದ ಆದರೆ ಬಹಳ ದೊಡ್ಡದಾದ ಜಿಂಕೆಯೇ ಭಗವಂತ; ನವಿಲಿನ ದೇವರೊಬ್ಬ ಬಹು ದೊಡ್ಡ ನವಿಲು; ಹೀಗೆ ಕವಿ ದೇವರ ರೂಪದ ಬಗ್ಗೆ ಜೀವಿಯ ಕಲ್ಪನೆಯ ಸಾಧ್ಯತೆಗಳನ್ನು ತೆರೆದಿಡುತ್ತಾನೆ. ಯೋಗಿ ಆದಿತ್ಯನಾಥರ, ಸಾಧುಸಂತರ ರಾಮ ಅವರ ರಾಮ ಆಗುತ್ತಾನೆಯೇ ಹೊರತು ಜನಸಾಮಾನ್ಯರ ಕಲ್ಪನೆಯ ಭಗವಂತನಾಗುವುದಿಲ್ಲ. ಭಗವಂತನ ವಾಣಿಜ್ಯೀಕರಣವು ಅವನ ಮೇಲಿನ ನಂಬಿಕೆಯನ್ನು ದುರುಪಯೋಗಪಡಿಸಿದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT