ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಿಷ್ಕಾರ ನೀತಿಗಾಗಿ ಕಾಯುತಿದೆ ರಾಜ್ಯ

Last Updated 4 ಡಿಸೆಂಬರ್ 2018, 20:07 IST
ಅಕ್ಷರ ಗಾತ್ರ

ಆಧುನಿಕ ಆರ್ಥಿಕಾಭಿವೃದ್ಧಿ ಸಿದ್ಧಾಂತಗಳು ಆವಿಷ್ಕಾರಗಳ ಮಹತ್ವ ಮತ್ತು ಅಗತ್ಯವನ್ನು ಸಾರಿ ಹೇಳುತ್ತಿವೆ. ಆವಿಷ್ಕಾರಗಳಾಗದೆ ಕೇವಲ ಹಣ ಹೂಡಿಕೆ ಮಾಡಿದರೆ ನಿರೀಕ್ಷಿತ ಪ್ರತಿಫಲ ಬರುವುದು ಸಾಧ್ಯವಿಲ್ಲವೆಂಬ ಸತ್ಯ ಸಾಬೀತಾಗಿರುವುದರಿಂದ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ರತ್ಯೇಕ ಆವಿಷ್ಕಾರ ನೀತಿ ಕಾಲ ಕಾಲಕ್ಕೆ ಬೇಕಾದ ಸುಧಾರಣೆಗಳೊಂದಿಗೆ ಜಾರಿಯಲ್ಲಿರುತ್ತದೆ. ಅಭಿವೃದ್ಧಿ ಪ್ರಕ್ರಿಯೆಗೆ ಆವಿಷ್ಕಾರಗಳು ವೇಗವರ್ಧಕವೆನ್ನುವುದು ಅಭಿವೃದ್ಧೀಶೀಲ ರಾಷ್ಟ್ರಗಳಾದ ಚೀನಾ, ಭಾರತದ ಇತ್ತೀಚಿನ ಅನುಭವವೂ ಹೌದು.

ಅಭಿವೃದ್ಧಿ ದರವನ್ನು ಗಮನಿಸಿದರೆ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿರುವ ರಾಜ್ಯಗಳಲ್ಲೊಂದು. ಗಮನಾರ್ಹ ಔದ್ಯಮಿಕ ಪ್ರಗತಿಯನ್ನು ಸಾಧಿಸಿದ ರಾಜ್ಯಗಳ ಸಾಲಿನಲ್ಲೂ ಕರ್ನಾಟಕ ನಿಂತಿದೆ. 2017-18ರಲ್ಲಿ ‘ನೋಟು ರದ್ದತಿ’ ಕಾರಣದಿಂದಾಗಿ ಭಾರತವು ಕೇವಲ ಶೇ 6.5ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದ್ದರೆ, ಕರ್ನಾಟಕವು ಶೇ 8.5ರಷ್ಟು ಬೆಳವಣಿಗೆಯನ್ನು ಸಾಧಿಸಿತ್ತು. 2014-15 ಮತ್ತು 2015-16ನೇ ಸಾಲಿನಲ್ಲಿ ಕೈಗಾರಿಕೆ, ಸೇವಾ ವಲಯಗಳ ಬೆಳವಣಿಗೆ ಕುಂಠಿತಗೊಂಡಿದ್ದರಿಂದ ರಾಜ್ಯದ ಬೆಳವಣಿಗೆ ದರವು ರಾಷ್ಟ್ರದ ಬೆಳವಣಿಗೆ ದರಕ್ಕಿಂತ ಕಡಿಮೆಯಾಗಿತ್ತು ಎಂಬುದೂ ಸತ್ಯ.

2016ರ ಫೆ. 3ರಂದು ಬೆಂಗಳೂರಿನಲ್ಲಿ ವಿಶ್ವ ಹೂಡಿಕೆದಾರರ ಸಮ್ಮೇಳನ ನಡೆದಿತ್ತು. ಅಲ್ಲಿ ಕೇಂದ್ರದ ಅರ್ಥ ಸಚಿವ ಅರುಣ್‌ ಜೇಟ್ಲಿ ಅವರು ಕರ್ನಾಟಕದಲ್ಲಿರುವ ಅಭಿವೃದ್ಧಿ ಸಾಧ್ಯತೆಯ ಅಗಾಧತೆಯನ್ನು ಶ್ಲಾಘಿಸಿದ್ದರು. ಸಾಧ್ಯತೆಯು ಸಾಧನೆಯ ರೂಪ ತಾಳಬೇಕಾದರೆ ಹೆಚ್ಚು– ಕಡಿಮೆ ಎಲ್ಲಾ ವಲಯಗಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯಬೇಕು, ಆವಿಷ್ಕಾರಗಳಾಗಬೇಕು.

ಆಡಳಿತ ಸುಧಾರಣೆ, ಕೃಷಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಆರೋಗ್ಯ, ಸೌರ ಶಕ್ತಿ... ಹೀಗೆ ಪ್ರಮುಖ ವಲಯಗಳಲ್ಲಿ ಸರ್ಕಾರಿ ವೆಚ್ಚಗಳಿಂದಾಗಿ ಮೈದಳೆದ ಯೋಜನೆಗಳ ಫಲಶ್ರುತಿಯನ್ನು ತೋರಿಸುವ, ಮುಂದಿನ ಕ್ರಿಯಾ ಯೋಜನೆಗಳಿಗೆ ಮಾರ್ಗದರ್ಶಿಯಾಗಬಲ್ಲ ವರದಿಯನ್ನು (2018) ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌
ನಲ್ಲಿರುವ ಸಾರ್ವಜನಿಕ ನೀತಿ ಅಧ್ಯಯನ ಕೇಂದ್ರ ಹೊರ ತಂದಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳಲ್ಲೂ ಆವಿಷ್ಕಾರಗಳಿಗೆ ವಿಪುಲ ಅವಕಾಶಗಳಿವೆ ಎನ್ನುವುದನ್ನು ಈ ವರದಿ ತೋರಿಸಿದೆ.

ರಾಷ್ಟ್ರಮಟ್ಟದ ಸಮೀಕ್ಷೆಗಳು ಸಹ ಕರ್ನಾಟಕದ ತಯಾರಿಕಾ ರಂಗದಲ್ಲಿ ಖಾಸಗಿ ಹೂಡಿಕೆಗಳಿಗಿರುವ ಸಾಧ್ಯತೆಗಳನ್ನು ಗುರುತಿಸಿವೆ. ಸಹಜವಾಗಿ ಈ ರಂಗದಲ್ಲಿ ಆವಿಷ್ಕಾರಗಳ ಅಗತ್ಯವೂ ಇದೆ. ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ಸುಸಜ್ಜಿತ ಪ್ರಯೋಗಾಲಯಗಳು ಕರ್ನಾಟಕದಲ್ಲಿವೆ. ಅವುಗಳ ಬಳಕೆಗೆ ಬೇಕಾದ, ಉತ್ಪಾದಕತೆಗೆ ಪೂರಕವಾದ ಸಮಗ್ರ ಆವಿಷ್ಕಾರ ನೀತಿಗಾಗಿ ರಾಜ್ಯ ಕಾಯುತ್ತಿದೆ.

2018ರ ಫೆ. 16ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2018-19ನೇ ಸಾಲಿನ ಬಜೆಟ್‌ನಲ್ಲಿ ಆವಿಷ್ಕಾರ ನೀತಿಯ ಅಗತ್ಯವನ್ನು ಗುರುತಿಸಿದ್ದರು. ರಾಜ್ಯದ ಒಟ್ಟು ಆಂತರಿಕ ಆದಾಯದಲ್ಲಿ ಕೃಷಿ ರಂಗದ ಪಾಲನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತ್ಯೇಕ ಆವಿಷ್ಕಾರ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾಪ ಬಜೆಟ್‌ನಲ್ಲಿತ್ತು. ತಯಾರಿಕಾ ರಂಗದಲ್ಲಿ ನವೋದ್ಯಮಿಗಳನ್ನು (ಸ್ಟಾರ್ಟ್ ಅಪ್ಸ್) ಪ್ರೋತ್ಸಾಹಿಸಲಿಕ್ಕಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಭರವಸೆಯನ್ನು ನೀಡಿದ್ದಲ್ಲದೆ, ಮುಖ್ಯಮಂತ್ರಿ ಕಚೇರಿಯ ನೇರ ಸುಪರ್ದಿಯಲ್ಲಿ ಕಾರ್ಯವೆಸಗಲಿರುವ ‘ಕರ್ನಾಟಕ ಆವಿಷ್ಕಾರಪ್ರಾಧಿಕಾರ’ವನ್ನು ರಚಿಸುವುದಾಗಿಯೂ ಘೋಷಿಸಿದ್ದರು. ಅದೆಲ್ಲಾ ಈಗ ಹಳೆಯ ಸಂಗತಿಗಳು.

ಇದಾದ ನಂತರ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ 2018–19ನೇ ಸಾಲಿನ ಬಜೆಟ್‌ಲ್ಲಿ ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ‘ಭಾಗ್ಯ’ಗಳ ಗುಣಗಾನವಿತ್ತಾದರೂ, ಆವಿಷ್ಕಾರ ನೀತಿಯ ಪ್ರಸ್ತಾಪವಿರಲಿಲ್ಲ. ‘ರಾಜ್ಯದಲ್ಲಿ ಸಂಶೋಧನೆಗೆ ಒತ್ತುಕೊಡಲು ಇನೊವೇಷನ್
ಪ್ರಾಧಿಕಾರ ಆರಂಭಿಸಲು ಪ್ರತ್ಯೇಕ ಮಸೂದೆ ತರಲಾಗುವುದು’ ಎಂದು ಆಗಸ್ಟ್‌ 3ರಂದು ಮುಖ್ಯಮಂತ್ರಿ ಹೇಳಿದ್ದರು. ಅದರ ಸ್ವರೂಪ ಹೇಗಿರಬಹುದು ಎಂಬ ಕುತೂಹಲ ಉಳಿದುಕೊಂಡಿದೆ. ಈ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಅದು ಮಂಡನೆಯಾಗಬಹುದೇ?

1993ರ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯು (ಐಸೆಕ್) ಕರ್ನಾಟಕ ರಾಜ್ಯದಲ್ಲಾದ ಭೂಸುಧಾರಣೆಗಳ ಪರಿಣಾಮ ಮತ್ತು ಸಮಸ್ಯೆಗಳನ್ನು ಚರ್ಚಿಸಲು ರಾಷ್ಟ್ರೀಯ ಕಾರ್ಯಾಗಾರವನ್ನು ಸಂಘಟಿಸಿತ್ತು. ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ, ಭೂ ಸುಧಾರಣಾ ಯೋಜನೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಪಿ.ಎಸ್. ಅಪ್ಪು ಅವರು ಗೋಷ್ಠಿಯೊಂದರ ನಿರ್ವಾಹಕರಾಗಿದ್ದರು (ನಾನು ಅದೇ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದ್ದೆ). ತಮ್ಮ ಮುಕ್ತಾಯ ಭಾಷಣದಲ್ಲಿ ಅಪ್ಪು ಅವರು ಆಗಲೇ ಅವಸಾನದ ಹಾದಿ ಹಿಡಿದಿದ್ದ ಭತ್ತದ ಕೃಷಿಯತ್ತ ಗಮನ ಸೆಳೆದು, ‘ಇಷ್ಟು ದೊಡ್ಡ ದೇಶದಲ್ಲಿ ಭತ್ತದ ಕೃಷಿಯನ್ನು ನಾವು ಹೀಗೆ ಅಲಕ್ಷಿಸಿದರೆ ಮುಂದೊಂದು ದಿನ ಭಾರಿ ಬೆಲೆ ತೆರಬೇಕಾಗುತ್ತದೆ. ಇದರಲ್ಲಿ ಹೊಸ ಹೊಸ ಪ್ರಯೋಗಗಳಾಗಲೇಬೇಕು, ಆವಿಷ್ಕಾರಗಳು ನಡೆಯಲೇಬೇಕು’ ಎಂದು ಆಗ್ರಹಪೂರ್ವಕ ಎಚ್ಚರಿಕೆ ನೀಡಿದ್ದರು. ಆಳುವ ಸರ್ಕಾರ ಇದರ ಅಗತ್ಯವನ್ನು ಮನಗಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT