ಗುರುವಾರ , ಡಿಸೆಂಬರ್ 12, 2019
24 °C
ರಫೇಲ್‌ ಖರೀದಿ ಕುರಿತು ಸುದ್ದಿ ಪ್ರಕಟಿಸದಂತೆ ನಿರ್ದೇಶಿಸುವಂತೆ ಕೋರಿ ನ್ಯಾಯಾಲಯದ ಮೊರೆಹೋಗಿರುವುದು ಏನನ್ನು ಸೂಚಿಸುತ್ತದೆ?

ಕಿರುಕುಳದ ಸಾಧನವಾಗಿ ಕಾನೂನು!

Published:
Updated:

ಪ್ರಜಾಪ್ರಭುತ್ವದಲ್ಲಿ ಆಡಳಿತ ನಡೆಸುವವರು ಮತ್ತು ಬಲಾಢ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯದವರನ್ನು, ತಮ್ಮ ಕಾರ್ಯಸೂಚಿಗೆ ಪರ್ಯಾಯವಾಗಿ ಚಿಂತನೆ ನಡೆಸುವವರನ್ನು ಮತ್ತು ಕಾರ್ಪೊರೇಟ್ ವಲಯದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಪ್ರಶ್ನಿಸಬಲ್ಲ ವರನ್ನು ಹಣಿಯಲು ಆಯ್ದುಕೊಂಡಿರುವ ಸುಲಭದ ಸಾಧನವೆಂದರೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ವಿರುದ್ಧದ ಯೋಜಿತ ಕಾನೂನು ಸಮರ.

ಈ ಬಗೆಯ ಪ್ರಕರಣಗಳನ್ನು Strategic Law Action Suit against Public Participation (SLAPP) ಎಂದು ಮೊದಲ ಬಾರಿಗೆ ವ್ಯಾಖ್ಯಾನಿಸಿದವರು ಡೆನ್ವರ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳಾಗಿದ್ದ ಫೆನೆಲೋಪ್ ಕ್ಯಾನನ್ ಮತ್ತು ಜಾರ್ಜ್ ಡಬ್ಲ್ಯು. ಪ್ರಿಂಗ್. ರಾಜಕೀಯ ಮತ್ತು ಕಾರ್ಪೊರೇಟ್ ರಂಗದಲ್ಲಿನ ಅಕ್ರಮಗಳನ್ನು ಬಯಲಿಗೆಳೆಯುವ ಪತ್ರಕರ್ತರು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರನ್ನು ಗುರಿಯಾಗಿಸಿ ಕೊಂಡು ಹೂಡುವ ಮಾನನಷ್ಟ ದಾವೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳ ವಿರುದ್ಧದ ಬ್ರಹ್ಮಾಸ್ತ್ರವೆಂದು ಅಭಿಪ್ರಾಯಪಡಲಾಗಿದೆ. ಕಾರ್ಪೊರೇಟ್ ಕುಳಗಳಿಗೆ ಈ ದಾವೆಗಳನ್ನು ಗೆಲ್ಲಲೇಬೇಕೆಂಬ ಅನಿವಾರ್ಯ ಇರುವುದಿಲ್ಲ. ಭಿನ್ನ ದನಿಯನ್ನು ಅಡಗಿಸಿದರಾಯಿತು ಅಷ್ಟೇ.

ಹೋರಾಟದ ಮುಂಚೂಣಿಯಲ್ಲಿರುವವರು ಎದೆಗುಂದಿ, ಹಿಂದೆ ಸರಿದರೆ ಇಡೀ ಹೋರಾಟ ನಿಂತು ಹೋಗಬಹುದು. ಇಂತಹ ಪ್ರಕರಣಗಳಲ್ಲಿ ಹೋರಾಟಗಾರರನ್ನು ಸಿಲುಕಿಸಿ, ಕಾನೂನು ಹೋರಾಟದ ವಿಪರೀತ ಖರ್ಚು–ವೆಚ್ಚಗಳನ್ನು ಭರಿಸಲಾಗದ ಮತ್ತು ದೀರ್ಘ ಕಾಲದ ಕಾನೂನು ಸಮರದಲ್ಲಿ ಕಾಲಹರಣ ಮಾಡಬೇಕಾದ ಸ್ಥಿತಿ ನಿರ್ಮಿಸಿದರೆ ಸಾಕು!

ಅಮೆರಿಕದ ಸಂವಿಧಾನದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಹಕ್ಕುಗಳನ್ನು ಉಲ್ಲೇಖಿಸಿರುವಷ್ಟು ಸ್ಪಷ್ಟವಾಗಿ ಭಾರತದ ಸಂವಿಧಾನದಲ್ಲಿ ಅವುಗಳನ್ನು ಉಲ್ಲೇಖಿಸಿಲ್ಲ. ಆದರೆ ಸಂವಿಧಾನದ ವಿಧಿ 19(1) (ಎ)ದಲ್ಲಿಯೇ ಅದು ಅಡಕವಾಗಿದೆ ಎಂಬುದನ್ನು ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಗಳಲ್ಲಿ ಮತ್ತು ಉನ್ನತ ಕೋರ್ಟ್‌ಗಳ ಹಲವಾರು ತೀರ್ಪುಗಳಲ್ಲಿ ವ್ಯಾಖ್ಯಾನಿಸಲಾಗಿದೆ.

ಭಾರತದ ಸಂವಿಧಾನದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯವು ಸ್ವೇಚ್ಛೆಯ ಹಕ್ಕಾಗಿರದೆ, ಹಲವು ನಿರ್ಬಂಧಗಳಿಗೆ ಒಳಪಟ್ಟಿದೆ. ‘ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಬೇರೊಬ್ಬರ ಹಕ್ಕುಗಳಿಗೆ ಧಕ್ಕೆಯಾಗದಂತೆ ಬಳಸಬೇಕು’ ಎಂಬ ಅಂಶವನ್ನು, ಐಪಿಸಿ ಕಲಂ 499 ಮತ್ತು 500ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲಾಗಿದ್ದ ಸುಬ್ರಮಣಿಯನ್‌ ಸ್ವಾಮಿ ಮತ್ತು ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಮೊಟಕುಗೊಳಿಸಬೇಕೆಂಬ ದುರುದ್ದೇಶದಿಂದ ಸಲ್ಲಿಸಲಾಗುವ ದಾವೆಗಳನ್ನು ಹತ್ತಿಕ್ಕಲೆಂದೇ ಅಮೆರಿಕದ ಸುಮಾರು 23 ರಾಜ್ಯಗಳು ANTI-SLAPP ಶಾಸನಗಳನ್ನು ಜಾರಿಗೆ ತಂದಿವೆ. ಆದರೆ, ಭಾರತದಲ್ಲಿ ಇಂತಹ ಶಾಸನ ಇಲ್ಲದಿರುವುದರಿಂದ ರಾಜಕೀಯ, ಸಾಮಾಜಿಕ, ಆರ್ಥಿಕ ವಿಶ್ಲೇಷಣೆಗಳಲ್ಲಿ ಪಾಲ್ಗೊಳ್ಳುವ ಬರಹಗಾರರು, ವಿದ್ವಾಂಸರು, ಇತಿಹಾಸಕಾರರು, ವ್ಯಂಗ್ಯಚಿತ್ರಕಾರರು, ವಿಡಂಬನಕಾರರು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲಾಗದೆ, ಕಾರ್ಪೊರೇಟ್ ಕುಳಗಳ ಹಣದ ಥೈಲಿಯ ಮುಂದೆ ಶರಣಾಗುತ್ತಾರೆ. ಆದರೆ ಕೆಲವು ಪ್ರಕರಣಗಳಲ್ಲಿ ಹೈಕೋರ್ಟ್‌ಗಳ ತೀರ್ಪುಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಎತ್ತಿ ಹಿಡಿದು ಮಹತ್ತರವಾದ ಸಂದೇಶವನ್ನು ಸಾರಿವೆ.

ರಾಜಸ್ಥಾನ ಹಾಗೂ ಇತರ ಕೆಲವು ರಾಜ್ಯಗಳಲ್ಲಿ ಕೃಷಿಯಲ್ಲಿ ಯಥೇಚ್ಛವಾಗಿ ಕೀಟನಾಶಕಗಳನ್ನು ಬಳಸಿದ್ದರಿಂದ ಜನರು ಮತ್ತು ಪರಿಸರದ ಮೇಲಾಗಿರುವ ದುಷ್ಪರಿಣಾಮಗಳ ಕುರಿತಾಗಿ ‘ರಾಜಸ್ಥಾನ್ ಪತ್ರಿಕಾ’ ಹಲವು ಕಂತುಗಳಲ್ಲಿ ಪ್ರಕಟಿಸಿದ ಲೇಖನಗಳು ಗಮನ ಸೆಳೆದಿದ್ದವು. ಈ ವರದಿಗಳು ಕೀಟನಾಶಕ ಉತ್ಪಾದನಾ ಕಂಪನಿಯ ವಹಿವಾಟಿನ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಗ್ರಹಿಸಿದ ‘ಕ್ರಾಪ್ ಕೇರ್ ಫೆಡರೇಶನ್’ ಸಂಸ್ಥೆಯವರು, ಸರಣಿ ವರದಿ ಪ್ರಕಟಿಸುವುದಕ್ಕೆ ತಡೆಯಾಜ್ಞೆ ನೀಡಬೇಕೆಂದು ದೆಹಲಿ ಹೈಕೋರ್ಟ್ ಮೊರೆಹೋಗಿ
ದ್ದರು. ಆದರೆ, ‘ಜನರ ಹಿತದ ದೃಷ್ಟಿಯಿಂದ ಪ್ರಕಟಿಸಲಾಗುವ ಸುದ್ದಿಗಳಿಗೆ ತಡೆಯಾಜ್ಞೆ ನೀಡುವುದು ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿ ಮಾಡಿದಂತೆ. ಅಷ್ಟೇ ಅಲ್ಲ, ಮಾಧ್ಯಮಗಳ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಾದದ್ದು ತನ್ನ ಕರ್ತವ್ಯವೂ
ಹೌದು’ ಎಂದು ನ್ಯಾಯಾಲಯ ತೀರ್ಪು ನೀಡಿತು.

ಸತ್ಯಂ, ‘2ಜಿ’ಯಂಥ ಬಹುಕೋಟಿ ವಂಚನೆ, ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ವ್ಯಾಪಕ ಚರ್ಚೆಯಾಗದೆ ಹೋಗಿದ್ದರೆ ಏನಾಗುತ್ತಿತ್ತು? ರಫೇಲ್‌ ಖರೀದಿಯಲ್ಲಿ ಗೋಪ್ಯತೆ ಕುರಿತ ವಿಚಾರವು ಸಾರ್ವತ್ರಿಕ ಚರ್ಚೆಯ ವಿಷಯವೇ ಆಗಿದೆ. ಇಂಥ ವಿಷಯಗಳ ಕುರಿತು ಸುದ್ದಿ ಪ್ರಕಟಿಸದಂತೆ ಒತ್ತಾಯಿಸಿ ಮತ್ತು ₹10 ಸಾವಿರ ಕೋಟಿ ನಷ್ಟ ಭರಿಸಬೇಕೆಂದು ಆಗ್ರಹಿಸಿ ನ್ಯಾಯಾಲಯದ ಮೊರೆಹೋಗಿರುವುದು ಏನನ್ನು ಸೂಚಿಸುತ್ತದೆ?

‘Suing the Messenger’ ಪುಸ್ತಕದಲ್ಲಿ ಪತ್ರಕರ್ತ ಸುಬೀರ್ ಘೋಷ್ ಮತ್ತು ಪರಂಜೊಯ್ ಗುಹಾ ಥಾಕುರ್ತ ಅವರು ದೇಶದಾದ್ಯಂತ ಪತ್ರಕರ್ತರು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಹತ್ತಾರು ನಕಲಿ ಮಾನನಷ್ಟ ಪ್ರಕರಣಗಳ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಆಡಳಿತಗಾರರು ಮತ್ತು ಬಲಾಢ್ಯರ ಮೈತ್ರಿಯು ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ಸಂಪೂರ್ಣ ಹಾಳುಗೆಡವುವ ಮುನ್ನ ಜನರು ಎಚ್ಚೆತ್ತು ಕೊಳ್ಳದಿದ್ದರೆ ಸಾಮಾಜಿಕ ಅಭ್ಯುದಯದ ಸಾಧನವೆಂದು ಭಾವಿಸಲಾಗಿರುವ ಕಾನೂನು, ಕಿರುಕುಳದ ಸಾಧನವಾದೀತು.

ಲೇಖಕ: ಹೈಕೋರ್ಟ್‌ ವಕೀಲ

ಪ್ರತಿಕ್ರಿಯಿಸಿ (+)